ಬೆಂಗಳೂರು [ನ.17]:  ಸ್ಪರ್ಧಿಸಲು ಟಿಕೆಟ್‌ ನೀಡದ ಬಿಜೆಪಿ ಹಾಗೂ ಪಕ್ಷೇತರನಾಗಿಯಾದರೂ ಸ್ಪರ್ಧಿಸಲೇಬೇಕು ಎಂಬ ಬೆಂಬಲಿಗರ ಒತ್ತಾಯದ ನಡುವೆ ಸಿಲುಕಿರುವ ಅನರ್ಹ ಶಾಸಕ ರೋಷನ್‌ ಬೇಗ್‌ ಉಪ ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತು ಭಾನುವಾರ ತಮ್ಮ ನಿರ್ಧಾರ ಪ್ರಕಟಿಸಲಿದ್ದಾರೆ.

ಶಿವಾಜಿನಗರ ಕ್ಷೇತ್ರದ ಉಪ ಚುನಾವಣೆ ಹಿನ್ನೆಲೆಯಲ್ಲಿ ಶನಿವಾರ ನಡೆದ ಬೆಂಬಲಿಗರೊಂದಿಗಿನ ಸಭೆಯಲ್ಲಿ ಬೇಗ್‌ ಈ ವಿಷಯ ತಿಳಿಸಿದರು ಎಂದು ಮೂಲಗಳು ಹೇಳಿವೆ.

ಬಿಜೆಪಿ ಸ್ಪರ್ಧೆಗೆ ಅವಕಾಶ ನೀಡಲು ಹಿಂಜರಿದ ಹಿನ್ನೆಲೆಯಲ್ಲಿ ಶಿವಾಜಿನಗರ ಕ್ಷೇತ್ರದ ಉಪ ಚುನಾವಣೆಯಲ್ಲಿ ತಟಸ್ಥರಾಗಿ ಉಳಿಯುವ ಚಿಂತನೆಯನ್ನು ರೋಷನ್‌ ಬೇಗ್‌ ಹೊಂದಿದ್ದಾರೆ. ಎರಡು ರಾಷ್ಟ್ರೀಯ ಪಕ್ಷಗಳನ್ನು ಎದುರಿಸಿ ಪಕ್ಷೇತರನಾಗಿ ಸ್ಪರ್ಧಿಸುವುದು ಕಷ್ಟ. ಇದಕ್ಕೆ ಬೇಕಾದ ಸಿದ್ಧತೆ ಮಾಡಿಕೊಳ್ಳಲು ಸಮಯಾವಕಾಶದ ಕೊರತೆಯಿದೆ ಎಂಬ ಚಿಂತನೆಯನ್ನು ರೋಷನ್‌ಬೇಗ್‌ ಹೊಂದಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.

ಆದರೆ, ಬಿಜೆಪಿ ಟಿಕೆಟ್‌ ದೊರೆಯದ ಹಿನ್ನೆಲೆಯಲ್ಲಿ ನಿರ್ಮಾಣವಾಗಿರುವ ಪರಿಸ್ಥಿತಿ ಬಗ್ಗೆ ಚರ್ಚಿಸಲು ಶನಿವಾರ ಆಯೋಜಿಸಲಾಗಿದ್ದ ಸಭೆಯಲ್ಲಿ ಬೆಂಬಲಿಗರು ಪಕ್ಷೇತರನಾಗಿಯಾದರೂ ಸ್ಪರ್ಧಿಸಬೇಕು ಎಂದು ತೀವ್ರ ಒತ್ತಡ ನಿರ್ಮಾಣ ಮಾಡಿದರು. ಹೀಗಾಗಿ ಕುಟುಂಬದವರು ಹಾಗೂ ಆಪ್ತರೊಂದಿಗೆ ಚರ್ಚಿಸಿ ಭಾನುವಾರ ನಿರ್ಧಾರ ಪ್ರಕಟಿಸುವುದಾಗಿ ಬೇಗ್‌ ಸಭೆಗೆ ತಿಳಿಸಿದರು ಎನ್ನಲಾಗಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಸಭೆಯಲ್ಲಿ ಬೇಗ್‌ ಅವರು ಕಾಂಗ್ರೆಸ್‌ ಪಕ್ಷಕ್ಕೆ ಬೆಂಬಲ ನೀಡುವ ಮತ್ತು ಜೆಡಿಎಸ್‌ಗೆ ಸೇರುವ ಸಾಧ್ಯತೆಯಿದೆ ಎಂದು ಹಬ್ಬಿರುವ ವದಂತಿಗಳ ಬಗ್ಗೆ ಬೆಂಬಲಿಗರು ಅವರಿಂದ ಸ್ಪಷ್ಟನೆ ಕೋರಿದರು ಎನ್ನಲಾಗಿದೆ. ಇದಕ್ಕೆ ಪ್ರತಿಯಾಗಿ ಬೇಗ್‌ ಅವರು, ತಾವು ತೊರೆದು ಬಂದ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಗೆ ಬೆಂಬಲ ನೀಡುವ ಯಾವುದೇ ಉದ್ದೇಶ ತಮಗೆ ಇಲ್ಲ ಎಂದು ಕಾರ್ಯಕರ್ತರಿಗೆ ತಿಳಿಸಿದರು ಎನ್ನಲಾಗಿದೆ. ಅಲ್ಲದೆ, ಜೆಡಿಎಸ್‌ ಸೇರುವ ಬಗ್ಗೆಯೂ ಯಾವುದೇ ಪ್ರಸ್ತಾಪವಿಲ್ಲ ಎಂದು ಸ್ಪಷ್ಟಪಡಿಸಿದರು ಎನ್ನಲಾಗಿದೆ.

ಅಲ್ಲದೆ, ಈ ಬಾರಿ ಚುನಾವಣೆಯಲ್ಲಿ ತಾವು ತಟಸ್ಥರಾಗಿ ಉಳಿಯುವ ತೀರ್ಮಾನ ಕೈಗೊಂಡಿರುವುದಾಗಿ ರೋಷನ್‌ ಬೇಗ್‌ ತಮ್ಮ ಬೆಂಬಲಿಗರಿಗೆ ತಿಳಿಸಿದರು ಎನ್ನಲಾಗಿದೆ. ಆದರೆ, ಇದನ್ನು ಒಪ್ಪದ ಬೆಂಬಲಿಗರು ಪಕ್ಷೇತರರಾಗಿಯಾದರೂ ಸರಿ ಚುನಾವಣೆಗೆ ಸ್ಪರ್ಧೆ ಮಾಡಲೇಬೇಕು ಎಂದು ಒತ್ತಡ ಹಾಕಿದ್ದು, ಇದಕ್ಕೆ ಪ್ರತಿಯಾಗಿ ಬೇಗ್‌ ಭಾನುವಾರ ಸ್ಪರ್ಧೆ ಕುರಿತು ತಮ್ಮ ತೀರ್ಮಾನ ಪ್ರಕಟಿಸುವುದಾಗಿ ತಿಳಿಸಿದರು ಎಂದು ಮೂಲಗಳು ಹೇಳಿವೆ.