ಮಸ್ಕಿಯಲ್ಲಿ ಬಿಜೆಪಿಗೆ ಮುಖಭಂಗ: ಕಾಂಗ್ರೆಸ್ ಗೆಲುವಿಗೆ ಪ್ರಮುಖ ಕಾರಣವೇನು..?
ಕಾಂಗ್ರೆಸ್ ನಾಯಕರಿಂದ ಒಗ್ಗಟ್ಟಿನ ಮಂತ್ರದಿಂದ ಮಸ್ಕಿಯಲ್ಲಿ ಗೆಲುವು| ಕೊಪ್ಪಳ, ರಾಯಚೂರು ಜಿಲ್ಲೆಯ ನಾಯಕರ ಒಗ್ಗಟ್ಟಿನ ಮಂತ್ರದ ಫಲವೇ ಇಂದಿನ ಅಭೂತಪೂರ್ವ ಗೆಲುವಿಗೆ ಕಾರಣ| ಬಿ.ವಿ. ನಾಯಕ್, ಶಿವರಾಜ ತಂಗಡಗಿ, ರಾಘವೇಂದ್ರ ಹಿಟ್ನಾಳ್ ಸಂಘಟಿತ ಹೋರಾಟದ ಮೂಲಕ ಕಾಂಗ್ರೆಸ್ ಅಭ್ಯರ್ಥಿಗೆ ಭರ್ಜರಿ ಗೆಲುವು|
ರಾಯಚೂರು(ಮೇ.02): ಜಿಲ್ಲೆಯ ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ದಾಖಲಿಸಿದೆ. ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ್ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ಬಸವನಗೌಡ ತುರುವಿಹಳ್ ಅವರು 30 ಸಾವಿರ ಮತಗಳ ಅಂತರದಿಂದ ಜಯ ಸಾಧಿಸಿದ್ದಾರೆ. ಈ ಗೆಲುವಿನ ಮೂಲಕ ಬಿಜೆಪಿ ಭಾರೀ ಮುಖಭಂಗವಾಗಿದೆ.
ರಾಜ್ಯದಲ್ಲಿ ಬಿಜೆಪಿ ಆಡಳಿತವಿದ್ದರೂ ಕೂಡ ಮಸ್ಕಿ ಮತದಾರರು ಪ್ರತಾಪಗೌಡ ಪಾಟೀಲ್ ಅವರನ್ನ ಮುಲಾಜಿಲ್ಲದೆ ತಿರಸ್ಕರಿಸಿದ್ದಾರೆ. ಹೀಗಾಗಿ ಮಸ್ಕಿಯಲ್ಲಿ ಕಾಂಗ್ರೆಸ್ ಗೆಲುವಿಗೆ ಕಾರಣವೇನು..? ಎಂಬುದು ರಾಜ್ಯ ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿರುವ ಸುದ್ದಿಯಾಗಿದೆ.
ಕಾಂಗ್ರೆಸ್ ಗೆಲುವಿಗೆ ಕಾರಣವೇನು..?
ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಸವನಗೌಡ ತುರುವಿಹಳ್ ಅವರನ್ನ ಮತದಾರರು ಕೈಹಿಡಿದಿದ್ದಾರೆ. ಹಣ ಬಲ ವರ್ಸಸ್ ಜನಬಲ ಎಂದು ಕಾಂಗ್ರೆಸ್ ಬಿಂಬಿಸಿತ್ತು. ಅಭ್ಯರ್ಥಿ ಆಯ್ಕೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ತಂತ್ರಗಾರಿಕೆ ವರ್ಕ್‌ಔಟ್ ಅಗಿದೆ ಎಂದು ಹೇಳಲಾಗುತ್ತಿದೆ. ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಜೊತೆ ಮಾತುಕತೆ ನಡೆಸಿ ಈಶ್ವರ್ ಖಂಡ್ರೆ ಅವರು ಬಸವನಗೌಡ ತುರುವಿಹಳ್ ಅವರನ್ನ ಕಾಂಗ್ರೆಸ್‌ಗೆ ಕರೆತಂದಿದ್ದರು.
ಮಸ್ಕಿಯಲ್ಲಿ ಬಿಜೆಪಿಗೆ ಸೋಲು: ಉಸ್ತುವಾರಿ ವಹಿಸಿಕೊಂಡಿದ್ದ ವಿಜಯೇಂದ್ರ ಪ್ರತಿಕ್ರಿಯಿಸಿದ್ದು ಹೀಗೆ
ಬಿಜೆಪಿ ಸ್ಥಳೀಯ ಮಟ್ಟದ ನಾಯಕರು ಕಾಂಗ್ರೆಸ್‌ಗೆ ಸೇರಿದ್ದರು. ಇನ್ನು ಕಾಂಗ್ರೆಸ್ ನಾಯಕರಿಂದ ಒಗ್ಗಟ್ಟಿನ ಮಂತ್ರ ಜಪಿಸಿದ್ದರಿಂದ ಮಸ್ಕಿಯಲ್ಲಿ ಕಾಂಗ್ರೆಸ್ ಬಾವುಟ ಹಾರಾಡಲು ಸಹಕಾರಿಯಾಗಿದೆ. ಕೊಪ್ಪಳ, ರಾಯಚೂರು ಜಿಲ್ಲೆಯ ನಾಯಕರ ಒಗ್ಗಟ್ಟಿನ ಮಂತ್ರದ ಫಲವೇ ಇಂದಿನ ಅಭೂತಪೂರ್ವ ಗೆಲುವಿಗೆ ಕಾರಣವಾಗಿದೆ. ಬಿ.ವಿ. ನಾಯಕ್, ಶಿವರಾಜ ತಂಗಡಗಿ, ರಾಘವೇಂದ್ರ ಹಿಟ್ನಾಳ್ ಸಂಘಟಿತ ಹೋರಾಟದ ಮೂಲಕ ಕಾಂಗ್ರೆಸ್ ಅಭ್ಯರ್ಥಿ ಭರ್ಜರಿ ಗೆಲುವು ದಾಖಲಿಸಿದ್ದಾರೆ.
ತುರುವಿಹಳ್ ಪಕ್ಷ ಸೇರ್ಪಡೆ ತಕ್ಷಣ ಕಾಂಗ್ರೆಸ್ ಮಸ್ಕಿ ಅಭ್ಯರ್ಥಿ ಇವರೇ ಚುನಾವಣಾ ಅಭ್ಯರ್ಥಿ ಎಂದು ಘೋಷಣೆ ಮಾಡಿದ್ದು ಕೂಡ ಗೆಲುವಿಗೆ ಒಂದು ಕಾರಣ ಎಂದು ಹೇಳಲಾಗುತ್ತಿದೆ. ಕೊರೋನಾ ಸಮಯದಲ್ಲಿ ತುರುವಿಹಳ್ ಕ್ಷೇತ್ರದ ಜನರ ಜತೆ ಇದ್ದು ಸಹಾಯ ಮಾಡಿದ್ದರು. ಕ್ಷೇತ್ರದ ನೀರಾವರಿ ಯೋಜನೆಗಳನ್ನ ಪೂರ್ಣ ಮಾಡದೇ ಇರುವುದು ಮತ್ತು ನಿಮ್ಮ ಮತವನ್ನ ಹಣಕ್ಕಾಗಿ ಮಾರಿಕೊಂಡವನು ಪ್ರತಾಪ್ ಗೌಡ ಪಾಟೀಲ್ ಸ್ವಾಭಿಮಾನಕ್ಕಾಗಿ ಮತ ಚಲಾಯಿಸಿ ಎಂದು ಕಾಂಗ್ರೆಸ್ ನಾಯಕರು ಪ್ರಚಾರ ಮಾಡಿದ್ದರು. ರಾಜ್ಯ ಕಾಂಗ್ರೆಸ್ ನಾಯಕರ ಸಂಘಟಿತ ಹೋರಾಟ ತುರುವಿಹಾಳ್ ಗೆಲ್ಲಲು ಕಾರಣವಾಯಿತು. ಶಿವನಗೌಡ ನಾಯಕ್ ಮತ್ತು ಪ್ರತಾಪ್ ಗೌಡ ಪಾಟೀಲ್ ನಡುವೆ ಒಳ ಜಗಳ ಕೂಡ ಬಿಜೆಪಿ ಸೋಲಿಗೆ ಕಾರಣವಾಗಿದೆ.
ಬಿಜೆಪಿ ನಾಯಕರ ಆಂತರಿಕ ಕಚ್ಚಾಟದಿಂದ ಕಾಂಗ್ರೆಸ್‌ಗೆ ಗೆಲುವು
ಕೆಆರ್ ಪೇಟೆ ಮತ್ತು ಶಿರಾದಲ್ಲಿ ಗೆದ್ದ ಬಳಿಕ ತಮ್ಮ ವರ್ಚಸ್ಸು ಹೆಚ್ಚಿಸಿಕೊಂಡಿದ್ದ ರಾಜ್ಯ ಬಿಜೆಪಿ ಘಟಕದ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಆಟ ಮಸ್ಕಿಯಲ್ಲಿ ನಡೆದಿಲ್ಲ ಎಂದು ಹೇಳಲಾಗುತ್ತಿದೆ. ಬಿಜೆಪಿ ಅಭ್ಯರ್ಥಿ ವಿರುದ್ಧ ಅಲೆ ಜೊತೆಗೆ ಬಿಜೆಪಿ ನಾಯಕರ ಆಂತರಿಕ ಕಚ್ಚಾಟದಿಂದ ಕಾಂಗ್ರೆಸ್‌ಗೆ ಗೆಲುವು ದಕ್ಕಿದೆ.