ಕುಮಾರಸ್ವಾಮಿ ಸರ್ಕಾರದ ಮುಂದೆ ಪ್ರಸ್ತಾವನೆ ಇಟ್ಟಿದ್ದಾರೆಂಬುದನ್ನು ಹೇಳಲಿ. ನಾನೇ ಮುಂದೆ ನಿಂತು ಸಿಎಂ ಬಳಿ ಅನುಮತಿ ದೊರಕಿಸಿಕೊಡುತ್ತೇನೆ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಸವಾಲು ಹಾಕಿದರು.

ಮದ್ದೂರು (ಜೂ.09): ರಾಜ್ಯದಲ್ಲಿ ಅಥವಾ ಜಿಲ್ಲೆಯಲ್ಲಿ ಯಾವ ಕೈಗಾರಿಕೆಗಳನ್ನು ಸ್ಥಾಪನೆ ಮಾಡುವುದಕ್ಕೆ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಸರ್ಕಾರದ ಮುಂದೆ ಪ್ರಸ್ತಾವನೆ ಇಟ್ಟಿದ್ದಾರೆಂಬುದನ್ನು ಹೇಳಲಿ. ನಾನೇ ಮುಂದೆ ನಿಂತು ಸಿಎಂ ಬಳಿ ಅನುಮತಿ ದೊರಕಿಸಿಕೊಡುತ್ತೇನೆ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಸವಾಲು ಹಾಕಿದರು.

ಜನರ ಮುಂದೆ ಸುಳ್ಳು ಹೇಳುವುದೇ ಅವರ ಚಾಳಿಯಾಗಿದೆ. ನಾನು ಅವರನ್ನು ಬಹಳ ಹತ್ತಿರದಿಂದ ನೋಡಿದ್ದೇನೆ. ರಾಜಕೀಯ ಬೇರೆ. ಕೈಗಾರಿಕೆ ಸಚಿವರಾಗಿ ಇಂತಹ ಕೈಗಾರಿಕೆ, ಕಾರ್ಖಾನೆಗಳನ್ನು ತರಲು ಬಯಸಿದ್ದೇನೆ. ನಿಮ್ಮ ಸಹಕಾರ ಕೊಡಿ. ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿಕೊಡಲು ನೆರವಾಗಿ ಎಂದು ಒಂದೇ ಒಂದು ದಿನ ಮುಖ್ಯಮಂತ್ರಿಯೋ ಅಥವಾ ಉಪ ಮುಖ್ಯಮಂತ್ರಿಗಳನ್ನು ಕೇಳಿದ್ದಾರೆಯೇ. ಎರಡು ತಿಂಗಳಿಗೋ, ಮೂರು ತಿಂಗಳಿಗೋ ಇಲ್ಲಿಗೆ ಬಂದು ಸರ್ಕಾರದ ಅಸಹಕಾರ ಎಂದರೆ ಹೇಗೆ ಎಂದು ಪ್ರಶ್ನಿಸಿದರು.

ಕುಮಾರಸ್ವಾಮಿ ಗೆದ್ದು ಹೋಗಿರುವ ಮಂಡ್ಯ ಜಿಲ್ಲೆಗೆ ಯಾವ ಕಾರ್ಖಾನೆ, ಕೈಗಾರಿಕೆ ತರಲು ಬಯಸಿರುವುದಾಗಿ ಎಂದಾದರೂ ಹೇಳಿದ್ದಾರಾ. ಸರ್ಕಾರದೆದುರು ಪ್ರಸ್ತಾವನೆ ಕೊಟ್ಟಿದ್ದಾರಾ. ಬರೀ ಕಣ್ಣೊರೆಸುವ ನಾಟಕವನ್ನೇ ಆಡಿಕೊಂಡು ಬರುತ್ತಿದ್ದಾರೆ. ಡಿ.ಕೆ. ಶಿವಕುಮಾರ್ ಹೇಳುವಂತೆ ಕೊಟ್ಟ ಕುದುರೆಯನ್ನು ಏರಲಾರದವನು ವೀರನೂ ಅಲ್ಲ, ಶೂರನೂ ಅಲ್ಲ ಎಂಬಂತೆ ಎರಡು ಬಾರಿ ಮುಖ್ಯಮಂತ್ರಿಯಾಗಿದ್ದಾಗ ಜಿಲ್ಲೆಗೆ ಏನೂ ಮಾಡಲಿಲ್ಲ. ಈಗ ಕೇಂದ್ರ ಸಂಪುಟದಲ್ಲಿ ಬೃಹತ್ ಕೈಗಾರಿಕೆ ಸಚಿವರಾಗಿದ್ದರೂ ಯಾವುದೇ ಕೊಡುಗೆ ನೀಡುತ್ತಿಲ್ಲ. ಸರ್ಕಾರದ ಅಸಹಕಾರ ಅಂತ ಹೇಳಿಬಿಟ್ಟರೆ ಹೇಗೆ.

ಇವರು ಯಾವ ಕೈಗಾರಿಕೆ ಪ್ರಸ್ತಾವನೆ ಮುಂದಿಟ್ಟಿದ್ದಾರೆ ಅನ್ನೋದು ಬೇಕಲ್ಲವೇ. ಕುಮಾರಸ್ವಾಮಿ ಅವರ ಆಟ ನೋಡಿ ನಮಗೂ ಸಾಕಾಗಿದೆ ಎಂದರು. ನಾವು ಎರಡೂ ವರ್ಷದಲ್ಲಿ ಏನು ಮಾಡಿದ್ದೇವೆ, ಅವರು ಐದು ವರ್ಷದಲ್ಲಿ ಏನು ಮಾಡಿದ್ದಾರೆ ಅಂತ ಹೇಳಲಿ. ಅವರ ಸಾಧನೆ ಏನೂಂತ ಮೊದಲು ಹೇಳಲಿ. ಕಾವೇರಿ ಆರತಿಗೆ 100 ಕೋಟಿ ರು. ನಿರರ್ಥಕ ಎನ್ನುವವರು ಇವರು ಮಾಡಿದರೆ ಉಪಯೋಗ, ಬೇರೆಯವರು ಮಾಡಿದರೆ ಉಪಯೋಗವಿಲ್ಲ. ಈ ಕತೆಯೆಲ್ಲಾ ಕೇಳಿ ಕೇಳಿ ನಮಗೂ ಕಣ್ಣು - ಕಿವಿ ಕುರುಡಾಗಿದೆ ಎಂದು ಕುಟುಕಿದರು.