ಕಾಂಗ್ರೆಸ್ ಅಧಿಕಾರಕ್ಕೆ ಬಂದರೇ ಎಲ್ಲ ನೀರಾವರಿ ಯೋಜನೆ ಪೂರ್ಣ, ಸಿದ್ದು ಘೋಷಣೆ
* ಕಾಂಗ್ರೆಸ್ ಅಧಿಕಾರಕ್ಕೆ ಬಂದರೇ ಎಲ್ಲ ನೀರಾವರಿ ಯೋಜನೆ ಪೂರ್ಣ..!
* ಬಿಜೆಪಿ ನುಡಿದಂತೆ ನಡೆದಿದೇಯಾ ಎಂದು ಪ್ರಶ್ನಿಸಿದ ಸಿದ್ದರಾಮಯ್ಯ
* ಸಂಗಾಪೂರದದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ..!
ವರದಿ: ಷಡಕ್ಷರಿ ಕಂಪೂನರ್, ಏಷ್ಯಾನೆಟ್ ಸುವರ್ಣ ನ್ಯೂಸ್..
ವಿಜಯಪುರ (ಮೇ.2) ರಾಜ್ಯದ ಲ್ಲಿ ಕಾಂಗ್ರೆಸ್ ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ರಾಜ್ಯದ ಎಲ್ಲ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸುವುದಾಗಿ ಪ್ರತಿಪಕ್ಷ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಬಬಲೇಶ್ವರ ತಾಲೂಕಿನ ಸಂಗಾಪುರ ಎಸ್ ಎಚ್ ಗ್ರಾಮದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಶ್ರೀ ಸಿದ್ಧಲಿಂಗೇಶ್ವರ ಕಮರಿಮಠದ ಜಾತ್ರಾ ಮಹೋತ್ಸವ ಹಾಗೂ ನಿವಾಸದ ಉದ್ಘಾಟನೆ ಸಮಾರಂಭದಲ್ಲಿ ಭಾಷಣ ವೇಳೆ ಹೇಳಿದ್ದಾರೆ..
ಕಾಂಗ್ರೆಸ್ ಅವಧಿಯಲ್ಲಿ ಒಳ್ಳೆಯ ನೀರಾವರಿ ಸಚಿವ ಸಿಕ್ಕಿದ್ದರು..!
ಈ ಹಿಂದೆ ಅಧಿಕಾರಕ್ಕೆ ಬಂದಾಗ ರಾಜ್ಯದ ಎಲ್ಲ ನೀರಾವರಿ ಯೋಜನೆ ಪೂರ್ಣಗೊಳಿಸಲು 50 ಸಾವಿರ ಕೋಟಿ ರೂ.ಅನುದಾನದ ಅವಶ್ಯಕತೆ ಇರುವುದು ಗೊತ್ತಾಯಿತು. ಪ್ರತಿ ವರ್ಷ ಕ್ಕೆ 10 ಸಾವಿರ ಕೋಟಿ ರೂ.ಗಳಂತೆ ಐದು ವರ್ಷಕ್ಕೆ 50 ಸಾವಿರ ಕೋಟಿ ರೂ.ಅನುದಾನ ನೀಡಲಾಯಿತು.ಒಳ್ಳೆಯ ನೀರಾವರಿ ಮಂತ್ರಿ ಸಿಕ್ಕಿದ್ದರಿಂದ ನಮ್ಮ ಆಶಯ ಈಡೇರಿಸಲು ಸಾಧ್ಯವಾಯಿತು ಎಂದು ಎಂ.ಬಿ. ಪಾಟೀಲರನ್ನು ಕೊಂಡಾಡಿದರು.
ರೈತರ ಕನಸು ನನಸು ಮಾಡಿದ ಸಿಎಂ, ರೈತರಿಂದ ಬೊಮ್ಮಾಯಿಗೆ ಜೋಡೆತ್ತು ಗಿಫ್ಟ್
ನಾವು ಕೊಟ್ಟ ಮಾತನ್ನ ತಪ್ಪಿಲ್ಲ, ಮಾತಿಗೆ ತಪ್ಪಿನಡೆಯುವುದಿಲ್ಲ. ಬೇಕಾದರೆ ಈ ಹಿಂದಿನ ನಮ್ಮ ಪ್ರಣಾಳಿಕೆ ತೆಗೆದು ನೋಡಿ 160 ಭರವಸೆಗಳಲ್ಲಿ ಬಹುತೇಕ ಈಡೇರಿಸಿದ್ದೇವೆ ಎಂದರು. ನಾವು ಮತ್ತೆ ಅಧಿಕಾರಕ್ಕೆ ಬಂದರೆ ಐದು ವರ್ಷದಲ್ಲಿ ಎಲ್ಲ ನೀರಾವರಿ ಮುಗಿಸಿ ಜನರಿಗೆ ನೀರು ಕೊಡುತ್ತೇವೆ. ಎಷ್ಟೇ ಖರ್ಚಾಗಲಿ ಅನುದಾನ ಒದಗಿಸುತ್ತೇವೆ ಎಂದರು.
ಬಿಜೆಪಿ ನುಡಿದಂತೆ ನಡೆದಿದೇಯಾ? ಸಿದ್ದರಾಮಯ್ಯ ಪ್ರಶ್ನೆ..!
ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ರಾಜ್ಯದ ನೀರಾವರಿ ಯೋಜನೆಗೆ 1.5 ಲಕ್ಷ ಕೋಟಿ ರೂ.ಅನುದಾನ ನೀಡುವುದಾಗಿ ಪ್ರಣಾಳಿಕೆಯಲ್ಲಿ ತಿಳಿಸಿತ್ತು. ಆದರೆ ನುಡಿದಂತೆ ನಡೆದುಕೊಂಡರಾ? 1.5 ಲಕ್ಷ ಕೋಟಿ ಖರ್ಚು ಮಾಡಿದ್ದರೆ ಯುಕೆಪಿ, ಮೇಕೆದಾಟು ಸೇರಿ ರಾಜ್ಯದ ಎಲ್ಲ ನೀರಾವರಿ ಪೂರ್ಣಗೊಳಿಸಬಹುದಿತ್ತು ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು..
ಮೋದಿ ವಿರುದ್ದ ವಾಗ್ದಾಳಿ ನಡೆಸಿದ ಸಿದ್ದರಾಮಯ್ಯ..!
ಸರ್ಕಾರಗಳು ನೀರಾವರಿ ಮತ್ತು ಕೃಷಿಗೆ ಆದ್ಯತೆ ನೀಡಬೇಕು.ರೈತರ ಆದಾಯ ದ್ವಿಗುಣ ಗೊಳಿಸುವುದಾಗಿ ನರೇಂದ್ರ ಮೋದಿ ಹೇಳಿದರು. ಆದರೆ ಉಲ್ಟಾ ರೈತರು ಸಾಲ ಮಾಡುವಂತ ಸ್ಥಿತಿ ನಿರ್ಮಾಣ ಮಾಡಿದ್ದಾರೆ. ರಾಜ್ಯದಲ್ಲಿ ಶೇ.70 ರಷ್ಟು ರೈತರು ಗ್ರಾಮೀಣ ಭಾಗದಲ್ಲಿದ್ದಾರೆ. ಶೇ.30 ರಷ್ಟು ನಗರವಾಸಿಗಳಿದ್ದಾರೆ. ಈಗ ಶೇ.60 ರಷ್ಟು ಜನ ಮಾತ್ರ ಹಳ್ಳಿಯಲ್ಲಿದ್ದು 40 ರಷ್ಟು ಜನ ಪಟ್ಟಣಕ್ಕೆ ವಲಸೆ ಹೋಗಿದ್ದಾರೆ ಎಂದರು.
ಸಿದ್ದರಾಮಯ್ಯರಿಂದ ಸಾಮರಸ್ಯ ಸಂದೇಶ..!
ಹಬ್ಬ ಹರಿದಿನ, ಜಾತ್ರೆ ನೆರವೇರಿಸುವುದು ಭಾರತೀಯ ಸಂಪ್ರದಾಯ. ಅನೇಕ ವರ್ಷಗಳಿಂದ ಇದು ನಡೆದು ಬಂದಿದೆ. ನಾವೆಲ್ಲ ಹಿಂದುಗಳು. ಹಿಂದು ಸಂಪ್ರದಾಯದಂತೆ ಅನೇಕ ಜಾತ್ರೆ, ಹಬ್ಬಗಳು ನಡೆಸುತ್ತೇವೆ. ನಾವು ಸಂತೋಷದಿಂದ ಪಾಲ್ಗೊಳ್ಳುತ್ತೇವೆ. ಎಲ್ಲ ಜಾತಿ ಧರ್ಮದರು ಜಾತ್ಯಾತೀತ ವಾಗಿ ಭಾಗವಹಿಸುತ್ತಾರೆ. ಏಕೆಂದರೆ ಸಮಾಜದಲ್ಲಿ ಸಾಮರಸ್ಯ ಇರಬೇಕು. ಈ ಸಾಮರಸ್ಯ ಕಾಪಾಡಲು ಎಲ್ಲರೂ ಜಾತಿ, ಧರ್ಮ ಬಿಟ್ಟು ಇಂಥ ಜಾತ್ರೆ, ಉರುಸುಗಳಲ್ಲಿ,ಕ್ರಿಸ್ ಮಸ್ ಹಬ್ಬಗಳಲ್ಲಿ ನಾವೆಲ್ಲ ಭಾಗವಹಿಸುತ್ತೇವೆ. ಭಾರತ ಅನೇಕ ವೈವಿದ್ಯಗಳಿಂದ ಕೂಡಿದ ದೇಶ. ಎಲ್ಲ, ಕಾತಿಯ, ಧರ್ಮ, ಭಾಷಿಕರಿದ್ದಾರೆ. ಜಾತಿ, ಧರ್ಮ ಭಾಷೆ ಆಧಾರದ ಮೇಲೆ ಸಮಾಜ ವಿಂಗಡಿಸಬಾರದು. ಏಕೆಂದರೆ ಎಲ್ಲರೂ ಮೂಲತಃ ಮನುಷ್ಯರು ಎಂದರು.
ಮನುಷ್ಯರಿಗಾಗಿ ಧರ್ಮ, ಧರ್ಮಕ್ಕಾಗಿ ಮನುಷ್ಯರಲ್ಲ..!
ಮನುಷ್ಯ ಕಾಯಿಲೆ ಬಂದಾಗ ಇಂಥದ್ದೇ ಧರ್ಮ ಜಾತಿಯವರ ರಕ್ತ ತಂದು ಕೊಡಿ ಎಂದು ಹೇಳಲಾಗುತ್ತದಾ? ಆ ಸಮಯದಲ್ಲಿ ಯಾರದ್ದೇ ರಕ್ತ ಆದರೂ ಪಡೆದು ಬದುಕುತ್ತೇವೆ. ಬದುಕಿದ ಮೇಲೆ ಜಾತಿ ಧರ್ಮ ಹೇಳುವ ಪ್ರವೃತ್ತಿ ಬಿಡಬೇಕು. ಇಲ್ಲವಾದಲ್ಲಿ ನಾವು ಮನುಷ್ಯರಾಗಿ ಬಾಳಲಾಗಲ್ಲ.ಯಾವುದೇ ಧರ್ಮ ಇರಲಿ ಮನುಷ್ಯರಿಗಾಗಿ ಧರ್ಮ, ಧರ್ಮಕ್ಕಾಗಿ ಮನುಷ್ಯ ಅಲ್ಲ. ಮನುಷ್ಯರ ಕಲ್ಯಾಣಕ್ಕಾಗಿ ಧರ್ಮ ಎಂದರು.
ಬಸವ ಜಯಂತಿ, ರಂಜಾನ್ ಶುಭಾಶಯ..!
ಯಾವುದೇ ಧರ್ಮ ನಮ್ಮ ಶ್ರೇಣೀಕೃತ ಜಾತಿ ವ್ಯವಸ್ಥೆ ಬೆಂಬಲಿಸಿದರೆ ಅದು ಧರ್ಮ ಅಲ್ಲ ಎಂದರು. ಬಸವಾದಿ ಶರಣರು ಇವನಾರವ ಇವನಾರವ ಎಂದೆನಿಸದರಯ್ಯ,ಇವ ನಮ್ಮವ ಇವ ನಮ್ಮವ ಎಂದೆನಿಸಯ್ಯ ಎಂದರು. ಆ ರೀತಿ ನಡೆದುಕೊಳ್ಳಬೇಕೋ ಇಲ್ಲವೋ ಎಂದು ಪ್ರಶ್ನಿಸಿದರು.
ಬಸವಣ್ಣನ ಫೋಟೋ ಪೂಜೆ ಮಾಡಿದರೆ ಅಲ್ಲ. ಅವರ ವಿಚಾರ ಪಾಲಿಸಬೇಕು. ನಾಳೆ ಬಸವ ಜಯಂತಿ, ರಂಜಾನ್ ಕೂಡ ಎರಡೂ ಒಟ್ಟಿಗೆ ಬಂದಿವೆ. ಈ ಸಂದರ್ಭದಲ್ಲಿ ಬಸವ ಜಯಂತಿ ಹಾಗೂ ರಂಜಾನ್ ಶುಭಾಶಯ ಕೋರುವೆ ಎಂದರು.
ನಾನು ಪ್ರಮಾಣ ವಚನ ತೆಗೆದುಕೊಂಡಿದ್ದೆ ಬಸವ ಜಯಂತಿಯ ದಿನ..!
ನಾನು ಸಿಎಂ ಆದಾಗ ಪ್ರಮಾಣ ವಚನ ಸ್ವೀಕರಿಸಿದ್ದು ಬಸವ ಜಯಂತಿ ದಿನ. ಯಾಕೆಂದರೆ ನಮ್ಮ ಸಂವಿಧಾನ ಕೂಡ ಸಮಾನತೆ ಹೇಳುತ್ತದೆ. ಬಸವಾದಿ ಶರಣರು ಕೂಡ ಸಮ ಸಮಾಜದ ಕನಸು ಕಂಡಿದ್ದರು. ಹೀಗಾಗಿ ಅಂದು ಪ್ರಮಾಣ ವಚನ ಸ್ವೀಕರಿಸಿದೆ ಎಂದರು. ಅನುಭವ ಮಂಟಪ ಮಾಡಿ ಅಲ್ಲಮನನ್ನು ಅಧ್ಯಕ್ಷರನ್ನಾಗಿ ಮಾಡಿದವರು ಬಸವಣ್ಣ. ಅನುಭವ ಮಂಟಪದಲ್ಲಿ ಎಲ್ಲರೂ ಸಮಾನರಾಗಿದ್ದರು. ಯಾರೂ ಮೇಲು ಕೀಳು ಇರಲಿಲ್ಲ. ಅದೇ ರೀತಿ ಸಂಗಾಪುರ ಮಠ ಸಹ ಜಾತ್ಯತೀತವಾಗಿ ಕೆಲಸ ಮಾಡುತ್ತಿದೆ ಎಂದು ಕೇಳಿ ಸಂತೋಷವಾಯಿತು ಎಂದರು.
ಕಾಯಕ ಎಂದರೇ ಪ್ರೊಡಕ್ಷನ್, ದಾಸೋಹ ಎಂದರೇ ಡಿಸ್ಟ್ರಿಬ್ಯೂಶನ್..!
ಬಸವಾದಿ ಶರಣರು ಕಾಯಕ ಮತ್ತು ದಾಸೋಹ ತತ್ವ ಸಾರಿದರು. ಕಾಯಕ ಎಂದರೆ ಪ್ರೊಡಕ್ಷನ್, ದಾಸೋಹ ಎಂದರೆ ಡಿಸ್ಟ್ರಿಬ್ಯುಷನ್ ಎಂದು ಇಂಗ್ಲಿಷ್ ನಲ್ಲಿ ಕರೆಯುತ್ತೇವೆ. ಶರಣರ ಸಮಾಜದಲ್ಲಿ ಮೈಗಳ್ಳರು ಇರಬಾರದು. ಕಾಯಕ ಮಾಡಬೇಕು. ಅದರಿಂದ ಬಂದ ಉತ್ಪನ್ನ ಎಲ್ಲರೂ ಸಮಾನವಾಗಿ ಅನುಭವಿಸಬೇಕೆಂದು ಬಸವಾದಿ ಶರಣರು ಹೇಳಿದರು. ಉತ್ಪಾದನೆ ಮತ್ತು ವಿತರಣೆ ಸರಿಯಾಗಿತ್ತು. ಹೀಗಾಗಿ ನಾನು ಸಿಎಂ ಆದ ಬಳಿಕ ಎಲ್ಲ ಜಾತಿ ಅವರು ಎರಡು ಹೊತ್ತು ಊಟ ಮಾಡಲು ಏಳು ಕೆಜಿ ಅಕ್ಕಿ ಉಚಿತವಾಗಿ ನೀಡಿದೆ.1.25 ಕೋಟಿ ಕುಟುಂಬಗಳು ಸುಮಾರು 4.30 ಕೋಟಿ ಜನ ಎಲ್ಲ ಜಾತಿಯ ಬಡವರಿಗೆ ಉಚಿತವಾಗಿ ಪಡಿತರ ಹಂಚಿಕೆ ಮಾಡಿದೆ ಎಂದರು.
ಮಾಜಿ ಸಚಿವ ಎಂ.ಬಿ ಪಾಟೀಲ್ ಭಾಷಣ..!
ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಹಾಗೂ ಶಾಸಕ ಎಂ.ಬಿ. ಪಾಟೀಲ ಮಾತನಾಡಿ, 2013 ರಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ನ ಮುಖ್ಯಮಂತ್ರಿ ಆಗಿ ಸಿದ್ದರಾಮಯ್ಯ ನೀಡಿದ ಕೊಡುಗೆ ಅಪಾರ. ಅಂದಿನ ನೀರಾವರಿ ಯೋಜನೆಗಳ ಫಲವಾಗಿ ಒಂದೇ ಗ್ರಾಮದಲ್ಲಿ
150 ಕೋಟಿ ರೂ.ಮೌಲ್ಯದ ಕಬ್ಬು ಈ ಭಾಗದಲ್ಲಿ ಬೆಳೆಯಲಾಗಿದೆ. ಹಿಂದುಳಿದ ಜಿಲ್ಲೆ ಬಂಗಾರದ ನಾಡು ಆಗಲು ಸಿದ್ದರಾಮಯ್ಯ ಅವರೇ ಕಾರಣ. ತುಬಚಿ ಬಬಲೇಶ್ವರ, ನಾಗರಬೆಟ್ಟ ಮುಂತಾದ ಏತ ನೀರಾವರಿ ಯೋಜನೆ ಆಗಿದ್ದು ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ. ಅಂದು ನಮಗೆ ನೀರಾವರಿ ಮಂತ್ರಿ ಮಾಡುವ ಮೂಲಕ ಈ ಭಾಗ ನೀರಾವರಿ ಮಾಡಲು ಸಹಕಾರಿಯಾಯಿತು. ಮುಂಬರುವ ದಿನಗಳಲ್ಲಿ ಸಿದ್ದರಾಮಯ್ಯ ನೇತೃತ್ವದಲ್ಲಿ ಮತ್ತದೇ ಜನಪ್ರಿಯ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿ ಎಂದು ಆಶಿಸಿದರು.
ಸುಮಂಗಲೆಯರಿಂದ ಕುಂಭಮೇಳ..!
ಆರಂಭದಲ್ಲಿ ನೂರಾರು ಸುಮಂಗಲಿಯರಿಂದಬೃಹತ್ ಕುಂಭಮೇಳ ನಡೆಯಿತು. ಡೊಳ್ಳು, ಕಹಳೆ ಹಾಗೂ ಹಲಗೆ ಮೇಳದೊಂದಿಗೆ ಮೆರವಣಿಗೆ ಸಾಗಿಬಂತು. ಗೊಂಬೆ ಕುಣಿತ ಮೆರವಣಿಗೆಗೆ ಮೆರಗು ತಂದಿತು.