Karnataka Politics : ಪಿಎಂ, ಸಿಎಂ ಮಾಡಿ ಎಂದು ಗೌಡ್ರು ನಾನು ಅರ್ಜಿ ಹಾಕಿದ್ವಾ? : ಎಚ್‌ಡಿಕೆ
- ನನ್ನನ್ನು ಪ್ರಧಾನಿ ಮಾಡಿ ಎಂದು ದೇವೇಗೌಡರೇನಾದರೂ ಅರ್ಜಿ ಹಿಡಿದುಕೊಂಡು ಕಾಂಗ್ರೆಸ್ ನಾಯಕರ ಬಳಿ ಹೋಗಿದ್ದರಾ?
- ನನ್ನನ್ನು ಮುಖ್ಯಮಂತ್ರಿ ಮಾಡಿ ಎಂದು ನಾನೇನಾದರೂ ಅರ್ಜಿ ಹಿಡಿದುಕೊಂಡು ಹೋಗಿದ್ದೆನಾ
ಚನ್ನಪಟ್ಟಣ (ಡಿ.11): ನನ್ನನ್ನು ಪ್ರಧಾನಿ (Prime Minister) ಮಾಡಿ ಎಂದು ದೇವೇಗೌಡರೇನಾದರೂ (Devegowda) ಅರ್ಜಿ ಹಿಡಿದುಕೊಂಡು ಕಾಂಗ್ರೆಸ್ (Congress) ನಾಯಕರ ಬಳಿ ಹೋಗಿದ್ದರಾ? ನನ್ನನ್ನು ಮುಖ್ಯಮಂತ್ರಿ ಮಾಡಿ ಎಂದು ನಾನೇನಾದರೂ ಅರ್ಜಿ ಹಿಡಿದುಕೊಂಡು ಹೋಗಿದ್ದೆನಾ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ (HD Kumaraswamy) ಪ್ರಶ್ನಿಸಿದ್ದಾರೆ. ಪಟ್ಟಣದಲ್ಲಿ ಶುಕ್ರವಾರ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ದೇವೇಗೌಡರು (Devegowda) ದೇಶದ ಪ್ರಧಾನಿ ಆಗಿದ್ದು, ಕಾಂಗ್ರೆಸ್ ಬೆಂಬಲದೊಂದಿಗೆ ಎನ್ನುತ್ತಾರೆ. ಬೆಂಬಲ ಕೊಟ್ಟಹಾಗೆ ಮಾಡಿ ಕತ್ತು ಕುಯ್ಯುವುದೇ ಕಾಂಗ್ರೆಸ್ಸಿಗರ ಕೆಲಸವಾಗಿದೆ ಎಂದು ಕಿಡಿಕಾರಿದರು.
ಕಣ್ಣೀರು ಹಾಕಲ್ಲವೆಂದು ಶಪಥ: ಮಾಜಿ ಮುಖ್ಯಂತ್ರಿ ಎಚ್‌ಡಿ ಕುಮಾರಸ್ವಾಮಿ (HD Kumaraswamy) ಅವರು ಇನ್ಮುಂದೆ ಕಣ್ಣೀರು (Tears) ಹಾಕುವುದಿಲ್ಲ ಎಂದು ಶಪಥ ಮಾಡಿದ್ದಾರೆ. ಹೌದು...ಮಂಡ್ಯದಲ್ಲಿ (Mandya) ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ನಾನು ಇನ್ಮುಂದೆ ಕಣ್ಣೀರು ಹಾಕಬಾರದು ಎಂದು ನಿರ್ಧರಿಸಿದ್ದೇನೆ. ಹಾಗೆಂದ ಮಾತ್ರಕ್ಕೆ ನಾನು ಕಟುಕ ಹೃದಯವನ್ನು ಹೊಂದಿದವನು ಎಂದರ್ಥವಲ್ಲ. ಜನರ ಕಷ್ಟವನ್ನು ಭಾವನಾತ್ಮಕವಾಗಿ ನೋಡಿದಾಗ ನಮ್ಮ ಹೃದಯ ಮಿಡಿಯುತ್ತೆ ಎಂದರು. ನಾನು ಸಿಎಂ ಆಗಿದ್ದಾಗ ಕನಗನಮರಡಿ ಬಸ್ ದುರಂತ ನಡೆಯಿತು. ಅದನ್ನ ನೋಡಿ ನನ್ನ ಕಣ್ಣಲ್ಲಿ ನೀರು ಬಂತು. ಕೆಲವರು ಅದನ್ನೇ ಟವಲ್ನಲ್ಲಿ ಗ್ಲಿಸ್ರಿನ್ ಹಾಕ್ಕೊಂಡು ಅಳ್ತಾರೆ ಎಂದು ಹೇಳಿದ್ದರು ಎಂದು ಕುಮಾರಸ್ವಾಮಿ ಅಸಮಧಾನ ಹೊರಹಾಕಿದರು.
2018ರಲ್ಲಿ ನಾನು ಸಿಎಂ ಆಗಿದ್ದಾಗ ಮಂಡ್ಯ(Mandya) ನಗರದ ಮೂಲಭೂತ ಸೌಕರ್ಯಗಳಿಗೆ ಹಣ ಮೀಸಲಿಟ್ಟಿದ್ದೆ. ಯಾವ ದುಡ್ಡನ್ನು ಬಿಜೆಪಿ ಸರ್ಕಾರ ಹಣ ಬಿಡುಗಡೆ ಮಾಡಿಲ್ಲ. ನಮ್ಮ ಸರ್ಕಾರದ ಎಲ್ಲಾ ಕಾರ್ಯಕ್ರಮಗಳನ್ನು ನಿಲ್ಲಿಸಿದ್ದಾರೆ. ಮಂಡ್ಯದಲ್ಲಿ 4-5 ಸ್ಥಾನ ಗೆಲ್ಲುತ್ತೇವೆ ಎಂದು ಯಡಿಯೂರಪ್ಪ ಹೇಳಿದ್ದಾರೆ. ಮಂಡ್ಯಕ್ಕೆ ಏನು ಮಾಡಿದ್ದಾರೆ ಎಂದು ಇವರು ಜಿಲ್ಲೆಗೆ ಬರ್ತಾರೆ ಎಂದು ಪ್ರಶ್ನಿಸಿದರು.
ಅಪ್ಪಾಜಿಗೌಡ ಜೆಡಿಎಸ್ ನಿಷ್ಠಾವಂತ ಕಾರ್ಯಕರ್ತ. ಅಧಿಕಾರದಲ್ಲಿದ್ದಾಗ ಸಕ್ರಿಯವಾಗಿ ಕಾರ್ಯ ನಿರ್ವಹಿಸಿದ್ದಾರೆ. ಕೆಲವರು ಜಾತ್ಯತೀತವಾದಿಗಳು, ಎಲ್ಲಾ ಸಮಾಜಗಳನ್ನು ಗೌರವಿಸುತ್ತಾರೆ ಎನ್ನುತ್ತಾರೆ. ಆದ್ರೆ ಚುನಾವಣೆಯಲ್ಲಿ ಜಾತಿ ಆಧಾರದ ಮೇಲೆ ಮತ ಕೇಳುತ್ತಾರೆ. ಮಂಡ್ಯ ಜನ ಇವರಿಗೆ ತಕ್ಕ ಉತ್ತರ ಕೊಡುತ್ತಾರೆ ಎಂದರು.
ಮಗನ ಸೋಲು ನೆನಸಿಕೊಂಡ ಎಚ್‌ಡಿಕೆ
ವಿಧಾನಪರಿಷತ್ ಚುನಾವಣೆ 2023ರ ಚುನಾವಣೆಗೆ ಜೆಡಿಎಸ್‌ಗೆ ಭದ್ರ ಬುನಾದಿಯಾಗಲಿದೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ನಾವು ನೈತಿಕವಾಗಿ ಗೆದ್ದಿದ್ದೇವೆ. ಕೇವಲ ನಂಬರ್ ಗೇಮ್‌ನಲ್ಲಿ ಸೋತೆವು. ಮಂಡ್ಯ ಜಿಲ್ಲೆಯ ಜನ ನಮ್ಮನ್ನ ಆಗಲೂ ಬೆಂಬಲಿಸಿದ್ದಾರೆ. ಮಂಡ್ಯ ಜಿಲ್ಲೆಯ ಜನ ಹಾಸನಕ್ಕಿಂತೂ ಹೆಚ್ಚಾಗಿ ಜೆಡಿಎಸ್ ಉಳಿಸಿದ್ದಾರೆ. ದೇವೇಗೌಡರ ಸಂಕಷ್ಟ ಸಮಯದಲ್ಲಿ ಕೈ ಹಿಡಿದಿದ್ದಾರೆ. ಎಲ್ಲಾ ಪಕ್ಷ ಸೇರಿ ಹೆಣೆದ ಚಕ್ರವ್ಯೂಹದಲ್ಲಿ ನಿಖಿಲ್ ಸೋತರು. ಆ ಚಕ್ರವ್ಯೂಹದಿಂದ ನಾವು ಆಚೆ ಬರಲಿದ್ದೇವೆ. ಈ ಚುನಾವಣೆಯಲ್ಲಿ ಕುತಂತ್ರದ ರಾಜಕಾರಣಕ್ಕೆ ಉತ್ತರ ಸಿಗಲಿದೆ ವಿಶ್ವಾಸ ವ್ಯಕ್ತಪಡಿಸಿದರು.
2023ರ ಚುನಾವಣೆಯಲ್ಲಿ (Election) ಯಾವುದೇ ಪಕ್ಷದ ಜೊತೆ ಮೈತ್ರಿ ಇಲ್ಲ. 224 ಕ್ಷೇತ್ರಗಳಲ್ಲೂ ನಮ್ಮ ಅಭ್ಯರ್ಥಿ ಹಾಕುತ್ತೇವೆ. ಮಾಜಿ ಸಿಎಂ ಯಡಿಯೂರಪ್ಪ ನನ್ನ ಬಳಿ ವೈಯಕ್ತಿಕ ಮನವಿ ಮಾಡಿದ್ದಾರೆ. ಪಕ್ಷದ ಚೌಕಟ್ಟಿನಲ್ಲಿ ಅವರು ನನ್ನ ಸಹಕಾರ ಕೇಳಿಲ್ಲ. ನಾನು ನಾಳೆ ಪತ್ರಿಕಾಗೋಷ್ಠಿ ನಡೆಸಿ ನಿರ್ಧಾರ ಪ್ರಕಟಿಸುತ್ತೇನೆ ಎಂದು ಸ್ಪಷ್ಟಪಡಿಸಿದರು.
ಟ್ರೋಲ್ ಆಗಿದ್ದ ಎಚ್‌ಡಿಕೆ ಕಣ್ಣೀರು
ಈ ಹಿಂದೆ ನಡೆದ ಚುನಾವಣೆ ಮತ್ತು ಬೇರೆ ಬೇರೆ ಸಂದರ್ಭಗಳಲ್ಲಿ ಕುಮಾರಸ್ವಾಮಿ ಕಣ್ಣೀರು ಹಾಕಿದ್ದು, ಅವರ ರಾಜಕೀಯ ವಿರೋಧಿಗಳಿಂದ ತೀವ್ರ ಟೀಕೆಗೂ ಮತ್ತು ಜನರ ಟ್ರೋಲ್ಗೂ ಒಳಗಾಗಿತ್ತು. 2018 ರ ವಿಧಾನ ಸಭಾ ಚುನಾವಣೆಯ ಸಂದರ್ಭದಲ್ಲಿ ರಾಜರಾಜೇಶ್ವರಿ ನಗರದಲ್ಲಿ ಪ್ರಚಾರ ಮಾಡುವಾಗ, ನಾನು ಎಷ್ಟು ದಿನ ಬದುಕಿರುತ್ತೇನೋ ಗೊತ್ತಿಲ್ಲ, ಹಾಗಾಗಿ ಮತ ಹಾಕಿ, ಎಂದು ಕಣ್ಣೀರು ಹಾಕುತ್ತಾ ಕುಮಾರಸ್ವಾಮಿ ಮತ ಕೇಳಿದ್ದರು.
ಮುಂದೆ ಮುಖ್ಯಮಂತ್ರಿ (CM) ಸ್ಥಾನದಿಂದ ಇಳಿಯುವಾಗ ಕಣ್ಣೀರು ಹಾಕಿರಲಿಲ್ಲ. ಮುಂದೆ ಕೆ.ಆರ್ ಪೇಟೆ ಉಪಚುನಾವಣೆ ಸಂದರ್ಭದಲ್ಲಿ ಮತ್ತೆ ಕಣ್ಣೀರು ಹಾಕಿದ್ದ ಕುಮಾರಸ್ವಾಮಿ ಬಿಜೆಪಿಯ ಟೀಕೆಗೆ ಗುರಿಯಾಗಿದ್ದರು. ಕಣ್ಣೀರು ಹಾಕೋದನ್ನ ನಮ್ಮ ಕುಟುಂಬ ಪೇಟೆಂಟ್ ಪಡೆದಿದೆ ಎಂದು ಸದಾನಂದಗೌಡ ಟೀಕಿಸಿದ್ದರು.