ನಮ್ಮ ಪಕ್ಷ ಕೂಡ ಹಲವು ದಶಕಗಳನ್ನು ದಾಟಿ ಬಂದಿದೆ. ಕೆಲ ಸಂದರ್ಭದಲ್ಲಿ ಹೀಗಾಗುತ್ತದೆ. ಕಳೆದ ಕೆಲ ತಿಂಗಳುಗಳಿಂದ ಈ ಸನ್ನಿವೇಶ ನಿರ್ಮಾಣವಾಗಿದೆ. ಅದು ಬಿಟ್ಟರೆ ಹಿಂದೆ ಯಾವತ್ತೂ ರಾಜ್ಯಾಧ್ಯಕ್ಷರ ವಿರುದ್ದ ಸಣ್ಣ ಅಸಮಾಧಾನವೂ ಹೊರಬಿದ್ದಿಲ್ಲ. ಇನ್ನು ಕೆಲವೇ ದಿನಗಳಲ್ಲಿ ಇದು ಕೂಡ ತಿಳಿಯಾಗುತ್ತದೆ: ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್ 

ಕನ್ನಡಪ್ರಭ ಸಂದರ್ಶನ
ವಿಜಯ್‌ ಮಲಗಿಹಾಳ

ಬೆಂಗಳೂರು(ಫೆ.06): ರಾಜ್ಯ ಬಿಜೆಪಿಯಲ್ಲಿನ ಭಿನ್ನಮತ ಈಗ ತಾರಕಕ್ಕೇರಿದೆ. ಹಾಲಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ನೇತೃತ್ವದಲ್ಲಿ ಹಲವರು ಬಂಡೆದ್ದಿದ್ದಾರೆ. ಅವರಿಗೆ ತೆರೆಮರೆಯಲ್ಲಿ ಪಕ್ಷದ ಹಲವು ಹಿರಿಯ ನಾಯಕರು ಬೆಂಬಲ ನೀಡುತ್ತಿರುವುದು ಗುಟ್ಟಿನ ವಿಷಯವೇನಲ್ಲ. ಯಾವುದೇ ಕಾರಣಕ್ಕೂ ವಿಜಯೇಂದ್ರ ಅವರನ್ನು ಮುಂದುವರೆಸಬಾರದು ಎಂಬ ಏಕೈಕ ಅಜೆಂಡಾ ಇಟ್ಟು ಕೊಂಡಿರುವ ಯತ್ನಾಳ್ ಬಣ ಬಲವಾದ ಪ್ರಯತ್ನ ನಡೆಸುತ್ತಿದೆ. ವಿಜಯೇಂದ್ರ ಅವರನ್ನೇ ಮುಂದುವರೆಸುವುದಾದರೆ ಚುನಾವ ಣೆಯೇ ನಡೆಯಲಿ ಎಂಬ ಪಟ್ಟನ್ನೂ ಹಿಡಿದಿದೆ. ಪಕ್ಷದಲ್ಲಿನ ಪ್ರಸಕ್ತ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಹಿರಿಯ ನಾಯಕ ಹಾಗೂ ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಅವರು 'ಕನ್ನಡಪ್ರಭ'ದೊಂದಿಗೆ 'ಮುಖಾಮುಖಿ'ಯಾಗಿದ್ದು ಹೀಗೆ.

• ರಾಜ್ಯದಲ್ಲಿ ಬಿಜೆಪಿ ಎಂದರೆ ಮನೆಯೊಂದು ಹಲವು ಬಾಗಿಲು, ಭಾರತೀಯ ಜಗಳ ಪಾರ್ಟಿ ಹೀಗೆ ಹತ್ತು ಹಲವು ಟೀಕೆಗಳಿಗೆ ಗುರಿಯಾಗಿದೆಯಲ್ಲ?

ನಮ್ಮ ಪಕ್ಷ ಕೂಡ ಹಲವು ದಶಕಗಳನ್ನು ದಾಟಿ ಬಂದಿದೆ. ಕೆಲ ಸಂದರ್ಭದಲ್ಲಿ ಹೀಗಾಗುತ್ತದೆ. ಕಳೆದ ಕೆಲ ತಿಂಗಳುಗಳಿಂದ ಈ ಸನ್ನಿವೇಶ ನಿರ್ಮಾಣವಾಗಿದೆ. ಅದು ಬಿಟ್ಟರೆ ಹಿಂದೆ ಯಾವತ್ತೂ ರಾಜ್ಯಾಧ್ಯಕ್ಷರ ವಿರುದ್ದ ಸಣ್ಣ ಅಸಮಾಧಾನವೂ ಹೊರಬಿದ್ದಿಲ್ಲ. ಇನ್ನು ಕೆಲವೇ ದಿನಗಳಲ್ಲಿ ಇದು ಕೂಡ ತಿಳಿಯಾಗುತ್ತದೆ.

• ಹಿಂದೆಯೂ ಬಿಜೆಪಿಯಲ್ಲಿ ಹಲವು ಸಂದರ್ಭದಲ್ಲಿ ಭಿನ್ನಮತ ಕಾಣಿಸಿಕೊಂಡಿತ್ತು. ಈಗ ಉದ್ಭವಿಸಿರುವ ಭಿನ್ನಮತದ ಮೂಲ ಕಾರಣ ಏನು?

ಈಗಿನ ಭಿನ್ನಮತದ ಮೂಲ ಕಾರಣವನ್ನು ನಾನು ಬಹಿರಂಗವಾಗಿ ಹೇಳುವುದಿಲ್ಲ. ಅದನ್ನು ಪಕ್ಷದ ವರಿಷ್ಠರಿಗೆ ವಿವರವಾಗಿ ಹೇಳಿದ್ದೇನೆ. ಪಕ್ಷದಶೇ.90ರಷ್ಟಿರುವಮುಖಂಡರು ಈಗಿನ ಭಿನ್ನಮತ ಸರಿಹೋಗಬೇಕು ಎಂಬ ಅಭಿಪ್ರಾಯ ಹೊಂದಿದ್ದಾರೆ. ಇದು ಈ ಮಟ್ಟಕ್ಕೆ ಬೆಳೆಯಲು ಬಿಡಬಾರದಿತ್ತು.

• ಸರಿಹೋಗಬೇಕು ಎನ್ನುವುದು ಓಕೆ. ಯಾವ ಕಡೆ ಸರಿಯಾಗಬೇಕು ಹೇಳಿ?
ಅದನ್ನು ಪಕ್ಷದ ವೇದಿಕೆಯಲ್ಲಿ ಹೇಳಿದ್ದೇನೆ. ಯಾರದ್ದು ತಪ್ಪು, ಸರಿ ಎಂಬುದನ್ನು ರಾಷ್ಟ್ರೀಯ ನಾಯಕರಿಗೆ ಮನವರಿಕೆ ಮಾಡಿಕೊಟ್ಟಿದ್ದೇನೆ. ಜತೆಗೆ ಏನು ಮಾಡಬೇಕು ಎಂಬ ಅಭಿಪ್ರಾಯವನ್ನೂ ಕೊಟ್ಟಿದ್ದೇನೆ. ಮುಂದಿನ ತೀರ್ಮಾನ ವರಿಷ್ಠರಿಗೆ ಬಿಟ್ಟಿದ್ದು.

• ಬಿಜೆಪಿ ಬಣ ರಾಜಕೀಯದ ಗುದ್ದಾಟದಲ್ಲಿ ನೀವು ಯಾವ ಬಣಕ್ಕೆ ಸೇರಿದ್ದೀರಿ?

ನಾನು ಯಾವ ಬಣಕ್ಕೂ ಸೇರಿದವನಲ್ಲ. ನಮ್ಮದು ಬಿಜೆಪಿ ಬಣ 

• ನಿಮ್ಮ ಈ ಬಿಜೆಪಿ ಬಣ ರಾಜ್ಯಾಧ್ಯಕ್ಷರ ಜತೆಗೆ ಇಲ್ಲವೇ?

ನಮ್ಮದು ಯಾವುದೇ ಗುಂಪಿನೊಂದಿಗೆ ಗುರುತಿಸಿಕೊಂಡಿಲ್ಲ. ಹಾಗೆ ಗುರುತಿಸಿಕೊಳ್ಳುವ ಅಗತ್ಯವೂ ಇಲ್ಲ. ನಾನು ಸುಮಾರು 50 ವರ್ಷಗಳಿಂದ ಪಕ್ಷದಲ್ಲಿದ್ದು, ಪಕ ಕಟ್ಟಿದ್ದೇನೆ. ನಾನೇನು ಉದ್ದವ ನಾಯಕನಲ್ಲ, ಕಾರ್ಯಕರ್ತನಾಗಿ ಹಂತ ಹಂತವಾಗಿ ಇವತ್ತು ಈ ಸ್ಥಾನಕ್ಕೆ ಬಂದಿದ್ದೇನೆ. . ಪಕ್ಷ ಕಟ್ಟಿದ ನಮ್ಮಂಥವರಿಗೆ ಈಗಿನ ಬೆಳವಣಿಗೆ ನೋವು ತಂದಿದೆ.

• ಅಂದರೆ, ನಿಮ್ಮ ಪಕ್ಷದಲ್ಲಿ ಉದ್ದವ ನಾಯಕರಿದ್ದಾರೆ ಎಂದರ್ಥವೇ?

ಹಾಗಲ್ಲ, ನಾನು ಯಾರನ್ನೋ ಉದ್ದೇಶಿಸಿ ಹೇಳಿದ್ದಲ್ಲ. ನನಗೆ ಸಂಬಂಧಿಸಿದ್ದು ಅಷ್ಟೇ.

• ಬಸನಗೌಡ ಪಾಟೀಲ ಯತ್ನಾಳ, ರಮೇಶ್ ಜಾರಕಿಹೊಳಿ ಮತ್ತಿತರರು ಬಾಯಿಗೆ ಬಂದಂತೆ ಮಾತನಾಡಿದರೂ ಇದು ತಪ್ಪು ಎಂದು ಯಾರೂ ಹಿರಿಯ ನಾಯಕರು ಹೇಳುತ್ತಿಲ್ಲವಲ್ಲ?

ಇದು ಮೊದಲೇ ಆಗಬೇಕಿತ್ತು. ಆರಂಭದಲ್ಲೇ ಚಿವುಟಿ ಹಾಕಿದ್ದರೆ ಇಷ್ಟೊಂದು ದೊಡ್ಡದಾಗುತ್ತಿರಲಿಲ್ಲ. ಒಬ್ಬರಾಗಿದ್ದರೆ ನಾವು ಹೇಳಬಹುದಿತ್ತು. ಆದರೆ, ಅನೇಕರು ಬಹಿರಂಗವಾಗಿ ಹೇಳಿಕೆ ನೀಡುತ್ತಿದ್ದಾರೆ.ಎಲ್ಲವೂ ರಾಜ್ಯಾಧ್ಯಕ್ಷಸ್ಥಾನ ಹಿನ್ನೆಲೆಯಲ್ಲಿಯೇ ನಡೆಯುತ್ತಿದೆ. ಹೀಗಾಗಿ, ರಾಷ್ಟ್ರೀಯ ನಾಯಕರು ರಾಜ್ಯಾಧ್ಯಕ್ಷ ಸ್ಥಾನದಲ್ಲಿ ಈಗಿರುವವರೇ ಮುಂದುವರೆಯುವರೋ ಅಥವಾ ಬೇರೆಯವರನ್ನು ನೇಮಿಸಲಾಗುವುದೋ ಎಂಬುದರ ಬಗ್ಗೆ ಬೇಗ ತೀರ್ಮಾನ ಮಾಡಿದರೆ ಎಲ್ಲವೂ ಬಗೆಹರಿಯುತ್ತದೆ.

* ವಿಜಯೇಂದ್ರ ಅವರನ್ನು ಮುಂದುವರೆಸಿದರೆ ಯತ್ನಾಳ ಬಣ ಸುಮ್ಮನಿರಲ್ಲ, ಬದಲಿಸಿ ಬೇರೋಬ್ಬರನ್ನು ನೇಮಿಸಿದರೆ ವಿಜಯೇಂದ್ರ ಬಣ ಸುಮ್ಮನಿರಲ್ಲ. ಹಾಗಿದ್ದ ಮೇಲೆ ಬಿಕ್ಕಟ್ಟು ಹೇಗೆ ಬಗೆಹರಿಯಲಿದೆ?

ಒಂದು ಬಾರಿ ರಾಜ್ಯಾಧ್ಯಕ್ಷ ಸ್ಥಾನ ಕುರಿತಂತೆ ಕುರಿತಂತೆ ಪಕ್ಷದಲ್ಲಿ ಕಮಾಂಡ್ ನಿರ್ಧಾರ ಕೈಗೊಂಡ ಮೇಲೆ ಮುಗಿಯುತ್ತದೆ. ಹೈಕಮಾಂಡ್‌ ನಿರ್ಧಾರವನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಹಾಗೆ ಎಲ್ಲರೂ ಒಪ್ಪಿಕೊಳ್ಳುವಂಥವರನ್ನೇ ಎಲ್ಲರನ್ನೂ ಒಟ್ಟಿಗೆ ಕೊಂಡೊಯ್ಯು ವವರನ್ನೇ ಆಯ್ಕೆ ಮಾಡಬೇಕು. ಸರ್ವಸಮತ ಆದ ಮೇಲೆ ವಿರೋಧದ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಪಕ್ಷಕ್ಕಿಂತ ಯಾರೂ ದೊಡ್ಡವರಲ್ಲ.

* ವಿಜಯೇಂದ್ರ ಅವರನ್ನೇ ಮುಂದುವರೆಸುವುದಾದರೆ ಚುನಾವಣೆ ಆಗಲಿ ಎಂದು ಯತ್ನಾಳ ಬಣದ ಮುಖಂಡರು ಪಟ್ಟು ಹಿಡಿದಿದ್ದಾರಲ್ಲ?

ಇದುವರೆಗೆ ನಡೆದುಕೊಂಡು ಬಂದಿರುವ ಪ್ರಕಾರ ರಾಜ್ಯಾಧ್ಯಕ್ಷ ಹುದ್ದೆಗೆ ನೇರ ಚುನಾವಣೆ ನಡೆದಿಲ್ಲ. ನನಗಿರುವ ಮಾಹಿತಿ ಪ್ರಕಾರ ಸಹಮತದ ಆಯ್ಕೆಯೇ ಆಗಲಿದೆ.

• ಹಿಂದೆ ಯಡಿಯೂರಪ್ಪ ಮತ್ತು ಅನಂತಕುಮಾರ್ ನಡುವೆ ಭಿನ್ನಾಭಿಪ್ರಾಯ ಬಂದಾಗ ಬಿಜೆಪಿಯ ಎಲ್ಲ ನಾಯಕರೂ ಆರ್‌ಎಸ್‌ಎಸ್ ಕೇಂದ್ರ ಕಚೇರಿಯಿರುವ ಚಾಮರಾಜಪೇಟೆಯತ್ತ ಓಡಿ ಹೋಗುತ್ತಿದ್ದಿರಿ ಅಥವಾ ನಿಮ್ಮನ್ನು ಕರೆಸಿಕೊಳ್ಳುತ್ತಿದ್ದರು. ಈಗ್ಯಾಕೆ ಇಲ್ಲ?

ಬಿಜೆಪಿಯೇ ಇದನ್ನು ಬಗೆಹರಿಸಿಕೊಳ್ಳಲಿ ಎಂಬ ಭಾವನೆ ಆರ್ ಎಎಸ್‌ನದ್ದಾಗಿರಬಹುದು. ರಾಷ್ಟ್ರೀಯ ನಾಯಕರಿಗೆ ತಮ್ಮ ಅಭಿಪ್ರಾಯವನ್ನು ತಿಳಿಸಿರಬಹುದು.

* ನಿಮ್ಮ ಪಕ್ಷದ ರಾಜ್ಯ ಉಸ್ತುವಾರಿ ರಾಧಾಮೋಹನ್ ವಾಸ್ ಅಗರವಾಲ್ ಅವರು ಏನು ಮಾಡುತ್ತಿದ್ದಾರೆ?

ನಮ್ಮ ಉಸ್ತುವಾರಿ ಏನು ಮಾಡುತ್ತಿದ್ದಾರೆ ಎನ್ನುವುದನ್ನು ದೆಹಲಿಗೆ ಹೋದವರು ಹೇಳುತ್ತಿದ್ದಾರೆ. ಅವರ ವಿರುದ್ದ ದೂರು ಎಂಬಿತ್ಯಾದಿ ವಿಷಯವನ್ನು ಮಾಧ್ಯಮಗಳ ಮೂಲಕ ತಿಳಿಯಿತು. 

• ನೀವು ಈ ಭಿನ್ನಮತೀಯರ ಬಣಕ್ಕೂ ಮೊದಲೇ ದಿಢೀರ್ ದೆಹಲಿಗೆ ಹೋಗಿ ವರಿಷ್ಠರನ್ನು ಭೇಟಿ ಮಾಡಿದ್ದು ಯಾಕೆ?

ನಡ್ಡಾ ಮತ್ತು ಅಮಿತ್ ಶಾ ಅವರನ್ನು ಭೇಟಿ ಮಾಡಿ ಬಂದೆ. ನನಗೆ ಅರ್ಧ ಗಂಟೆ ಸಮಯ ನೀಡಿದ್ದರು. ನಾನು ಏನು ಹೇಳಬೇಕೋ ಅದನ್ನು ಅವರಿಗೆ ವಿವರವಾಗಿ ಹೇಳಿ ಬಂದಿದ್ದೇನೆ. ನನ್ನ ಭಾವನೆ ಹೇಳಿದ್ದೇನೆ. ನಾನು ಯಾರ ವಿರುದ್ದ ದೂರು ನೀಡಿಲ್ಲ. ಹೊಗಳಿಕೆಯನ್ನೂ ಮಾಡಿಲ್ಲ.

• ಅಶೋಕ್, ಬೊಮ್ಮಾಯಿ ಅವರು ನಮ್ಮ ಬೆಂಬಲಕ್ಕಿದ್ದಾರೆ ಎಂಬ ಮಾತನ್ನು ಯತ್ನಾಳ್ ಹೇಳುತ್ತಾರಲ್ಲ?

ನಾನು ಬಿಜೆಪಿಗೆ ಒಳ್ಳೆಯದಾಗಬೇಕು ಎಂಬ ಉದ್ದೇಶ ಹೊಂದಿದವನು, ಬಿಜೆಪಿಗೆ ಒಳ್ಳೆಯದಾಗುವ ಬಗ್ಗೆ ಯಾವ ಬಣ ಹೇಳಿದರೂ ಅವರ ಬೆಂಬಲಕ್ಕೆ ನಾನು ಇರುತ್ತೇನೆ.

• ನಿಮ್ಮ ಮತ್ತು ವಿಜಯೇಂದ್ರ ನಡುವೆ ಶೀತಲ ಸಮರ ನಡೆಯುತ್ತಿದೆ ಎಂಬ ಮಾತು ಬಿಜೆಪಿ ಪಾಳೆಯದಿಂದಲೇ ಕೇಳಿಬರುತ್ತಿದೆ?

ಆ ರೀತಿ ಏನೂ ಇಲ್ಲ. ನನ್ನ ಮತ್ತು ಅವರ ಜವಾಬ್ದಾರಿ ಬೇರೆ ಇದೆ. ನಾನು ಪ್ರತಿಪಕ್ಷದ ನಾಯಕನಾಗಿ ಸಂವಿಧಾನಾತ್ಮಕ ಕೆಲಸ ಮಾಡುತ್ತೇನೆ. ವಿಜಯೇಂದ್ರ ಅವರು ರಾಜ್ಯಾಧ್ಯಕ್ಷರಾಗಿ ಪಕ್ಷದ ಕೆಲಸ ಮಾಡುತ್ತಾರೆ. ಇಬ್ಬರ ನಡುವೆ ತಿಕ್ಕಾಟ ಬರುವ ಸಂದರ್ಭವೇ ಇಲ್ಲ.

• ಬೆಂಗಳೂರು ಮಹಾನಗರದ ವ್ಯಾಪ್ತಿಯ ಮೂರು ಜಿಲ್ಲಾ ಘಟಕಗಳ ಅಧ್ಯಕ್ಷರ ನೇಮಕಕ್ಕೆ ಸಂಬಂಧಿಸಿ ನಿಮಗೆ ಅಸಮಾಧಾನ ಉಂಟಾಗಿದೆಯಂತೆ?

ಮುಂದಿನ ಬಿಬಿಎಂಪಿ ಚುನಾವಣೆ ದೃಷ್ಟಿಯಿಂದ ಯಾರು ಅಧ್ಯಕ್ಷರಾಗಬೇಕು ಎಂಬ ಹೆಸರುಗಳನ್ನು ಕೊಟ್ಟಿದ್ದೇನೆ. ಅವುಗಳನ್ನು ಪರಿಗಣಿಸುವುದು ಅಥವಾ ಬಿಡುವುದು ವರಿಷ್ಠರಿಗೆ ಬಿಟ್ಟಿದ್ದು. 

• ಈಗಾಗಲೇ ನೇಮಕ ಆಗಿದೆಯಲ್ಲ?

ನೋಡೋಣ ಮುಂದೆ ಏನಾಗುತ್ತದೆ ಅಂತ. ಪಕ್ಷದ ನಿರ್ಧಾರಕ್ಕೆ ವಿರುದ್ಧವಾಗಿ ನಾನು ಹೋಗುವುದಿಲ್ಲ.

• ಪಕ್ಷ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಿಮ್ಮ ಹೆಸರೂ ಪ್ರಸ್ತಾಪವಾಗುತ್ತಿದೆ?

ಈ ಕುರಿತ ಚರ್ಚೆಯನ್ನು ನಾನೂ ಗಮನಿಸಿದೆ. ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಾನಂತು ಅರ್ಜಿ ಹಾಕಿಲ್ಲ. ನನಗೆ ನೀಡಿರುವ ವಿರೋಧ ಪಕ್ಷದ ನಾಯಕನ ಸ್ಥಾನವನ್ನು ಬಳಸಿಕೊಂಡು ಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧ ಹೋರಾಟ ಮಾಡುತ್ತಿದ್ದೇನೆ. ಸಮರ್ಥವಾಗಿ ನಿಭಾಯಿಸುತ್ತಿದ್ದೇನೆ.

• ಈಗ ರಾಜ್ಯಾಧ್ಯಕ್ಷರಾಗುವವರ ನೇತೃತ್ವದಲ್ಲೇ ಮುಂದಿನ ಸಾರ್ವತ್ರಿಕ ಚುನಾವಣೆ ನಡೆಯಲಿದೆ. ಹೀಗಾಗಿ ಮುಂದಿನ ಮುಖ್ಯಮಂತ್ರಿ ಸ್ಥಾನಕ್ಕಾಗಿ ಈ ತಿಕ್ಕಾಟ ಆರಂಭವಾಗಿದೆಯಂತೆ?

ನಮ್ಮ ಪಕ್ಷದಲ್ಲಿ ರಾಜ್ಯಾಧ್ಯಕ್ಷರಾಗಿರುವವರನ್ನೇ ಮುಖ್ಯಮಂತ್ರಿಯನ್ನಾಗಿ ಮಾಡುತ್ತಾರೆ ಎಂಬುದು ಸುಳ್ಳು. ಇದು ಹಲವು ರಾಜ್ಯಗಳ ಚುನಾವಣೆ ಬಳಿಕ ಸಾಬೀತಾಗಿದೆ. ಈ ರೀತಿಯ ಆಸೆ ಇಟ್ಟುಕೊಂಡೇ ಸಮಸ್ಯೆಯಾಗುತ್ತಿದೆ. ಕಾಂಗ್ರೆಸ್ ರೀತಿ ಬಿಜೆಪಿಯಲ್ಲಿ ಮುಖ್ಯಮಂತ್ರಿ ಸ್ಥಾನಕ್ಕಾಗಿ ಈಗಲೇ ಟವೆಲ್ ಹಾಕಿಕೊಂಡು ಕುಳಿತರೆ ನಿರಾಸೆಯಾಗುವುದು ಖಂಡಿತ.

• ಚುನಾವಣಾ ರಾಜಕಾರಣದಿಂದ ದೂರ ಸರಿದಿರುವ ಯಡಿಯೂರಪ್ಪ ವಿರುದ್ದ ಕೆಲವರು ವಾಗ್ದಾಳಿ ನಡೆಸುತ್ತಿದ್ದರೂ ನಿಮ್ಮನ್ನೂ ಸೇರಿ ಹಲವು ನಾಯಕರು ಸುಮ್ಮನಿದ್ದಾರಲ್ಲ?

ಯಡಿಯೂರಪ್ಪ ಅವರ ಬಗ್ಗೆ ಮಾತನಾಡುವುದು ಸರಿಯಲ್ಲ. ನಾನು ಆ ರೀತಿ ಮಾತನಾಡಿದವರಿಗೂ ಹೇಳಿದ್ದೇನೆ. ಪಕ್ಷದ ವರಿಷ್ಠರ ಗಮನಕ್ಕೂ ತಂದಿದ್ದೇನೆ.

• ಜಿಲ್ಲಾಧ್ಯಕ್ಷರ ನೇಮಕ ಸಂಬಂಧ ನಿಮ್ಮ ಆಪ್ತ ಮಿತ್ರ, ಸಂಸದ ಡಾ.ಕೆ.ಸುಧಾಕರ್ ಅವರು ವಿಜಯೇಂದ್ರ ವಿರುದ್ಧ ಬಹಿರಂಗವಾಗಿಯೇ ಆಕ್ರೋಶ ಹೊರಹಾಕಿದ್ದಾರಲ್ಲ?

ವಿಜಯೇಂದ್ರ ಅವರು ಸುಧಾಕರ್‌ ಅವರನ್ನು ಕರೆದು ಮಾತನಾಡಬೇಕಿತ್ತು. ಹಾಗೆ ಮಾಡಿದ್ದರೆ ಸಮಸ್ಯೆಯಾಗುತ್ತಿರಲಿಲ್ಲ.

• ಯಡಿಯೂರಪ್ಪ ಅವರ ಕುಟುಂಬ ರಾಜ್ಯ ಬಿಜೆಪಿಗೆ ಅನಿವಾರ್ಯವಲ್ಲ. ಅವರನ್ನು ಬಿಟ್ಟೂ ಪಕ್ಷ ಗೆಲ್ಲುವ ಸಾಮರ್ಥ್ಯವಿದೆ ಎಂಬ ಮಾತನ್ನು ಯತ್ನಾಳ್ ಹೇಳುತ್ತಿದ್ದಾರೆ?

ನಮ್ಮದು ವ್ಯಕ್ತಿ ಆಧಾರಿತ ಪಕ್ಷವಲ್ಲ, ಹಿಂದುತ್ವದ ವಿಚಾರ ಆಧಾರಿತ ಪಕ್ಷ. ಅದೇ ವಿಚಾರ ಇಟ್ಟುಕೊಂಡು ಕೆಲಸ ಮಾಡಬೇಕು.