ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಮಾದಕ ದ್ರವ್ಯ ದಂಧೆ ಮಟ್ಟ ಹಾಕಲು ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದ್ದಾರೆ.

ಬೆಂಗಳೂರು (ಜೂ.01): ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಮಾದಕ ದ್ರವ್ಯ ದಂಧೆ ಮಟ್ಟ ಹಾಕಲು ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದ್ದಾರೆ. ವಿಧಾನಸೌಧದಲ್ಲಿ ಶನಿವಾರ ನಡೆದ ಎರಡನೇ ದಿನದ ರಾಜ್ಯದ ಪ್ರಗತಿ ಪರಿಶೀಲನಾ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಾವು ರಾಜ್ಯವನ್ನು ಮಾದಕ ದ್ರವ್ಯ ಮುಕ್ತ ಮಾಡುತ್ತೇವೆ ಎಂದು ಈಗಾಗಲೇ ಘೋಷಿಸಿದ್ದೇವೆ. ಈ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ಮುಂದುವರೆಸಿ. ರಾಜ್ಯದಲ್ಲಿ 2023ರಲ್ಲಿ 6767, 2024ರಲ್ಲಿ 41,88 ಮತ್ತು ಈ ವರ್ಷ ಈವರೆಗೆ 1,793 ಪ್ರಕರಣಗಳು ದಾಖಲಾಗಿವೆ.

ಈ ಪ್ರಕರಣಗಳ ತಡೆಗೆ ಅಗತ್ಯಬಿದ್ದರೆ ಇನ್ನಷ್ಟು ಕಠಿಣ ಕಾಯ್ದೆಗಳನ್ನು ಜಾರಿಗೆ ತರಲು ನಾವು ಬದ್ಧ. ಶಾಲಾ, ಕಾಲೇಜುಗಳಲ್ಲಿ ಮಾದಕ ದ್ರವ್ಯ ಚಟುವಟಿಕೆಗಳ ಮೇಲೆ ನಿರಂತರ ನಿಗಾ ವಹಿಸಿ ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು. ಜಿಲ್ಲಾಧಿಕಾರಿಗಳು ಅಪರಾಧ ಚಟುವಟಿಕೆಗಳನ್ನು ಹತ್ತಿಕ್ಕಲು ಪೊಲೀಸ್‌ ಇಲಾಖೆಗೆ ಎಲ್ಲಾ ಸಹಕಾರ ನೀಡಬೇಕು. ಗೂಂಡಾ ಕಾಯ್ದೆಯಡಿ ಬಾಕಿ ಇರುವ ಪ್ರಕರಣಗಳನ್ನು ತ್ವರಿತವಾಗಿ ವಿಲೇವಾರಿ ಮಾಡಬೇಕು. ಕ್ರಿಕೆಟ್‌ ಬೆಟ್ಟಿಂಗ್‌ ದಂಧೆಗೆ ಯುವ ಜನಾಂಗ ಬಲಿಯಾಗುತ್ತಿದೆ. ಇದರ ಮೇಲೆ ನಿಯಂತ್ರಣ ಹೇರಬೇಕು. ಜಿಲ್ಲೆಗಳಲ್ಲಿ ಇಸ್ಪೀಟ್‌, ಮಟ್ಕಾ, ಒಸಿ ದಂಧೆಗಳ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಿ ಎಂದು ಸೂಚಿಸಿದರು.

ಕೆರೆ ಒತ್ತುವರಿ ತೆರವು ಪೂರ್ಣ ಆಗದ್ದಕ್ಕೆ ಅಸಮಾಧಾನ: ರಾಜ್ಯದಲ್ಲಿ 10,931 ಕೆರೆಗಳು ಒತ್ತುವರಿಯಾಗಿವೆ. ಇದುವರೆಗೆ 6065 ಕೆರೆಗಳ ಒತ್ತುವರಿ ತೆರವು ಮಾಡಲಾಗಿದೆ. ಎಲ್ಲಾ ಕೆರೆಗಳ ಸಮೀಕ್ಷೆ ನಡೆಸಿ ಒತ್ತುವರಿ ತೆರವುಗೊಳಿಸಲು ಕಳೆದ ಸಭೆಯಲ್ಲಿ ತಿಳಿಸಿದ್ದರೂ ನಿರೀಕ್ಷಿತ ಪ್ರಗತಿಯಾಗಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಶುಕ್ರವಾರ ನಡೆದ ಸಭೆಯಲ್ಲಿ ಕೆರೆ ಒತ್ತುವರಿ ತೆರವಿಗೆ ಅಗತ್ಯ ಕ್ರಮಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಸಿಎಂ ಸಮಯ ಪಾಲನೆ ಕಂಡು ಸಚಿವರು, ಅಧಿಕಾರಿಗಳು ಕಕ್ಕಾಬಿಕ್ಕಿ; ಸಭೆ ವೇಳೆ ಮಧ್ಯಾಹ್ನ ಭೋಜನ ವಿರಾಮಕ್ಕೆ ಸರ್ಕಾರದ ಮುಖ್ಯಕಾರ್ಯದರ್ಶಿ ರಜನೀಶ್ ಗೋಯೆಲ್‌ ಅವರು 45 ನಿಮಿಷ ಸಮಯ ಪ್ರಕಟಿಸಿದಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 30 ನಿಮಿಷ ಸಾಕು ಎಂದು ಸ್ಪಷ್ಟಪಡಿಸಿದರು. ಭೋಜನ ವಿರಾಮ ಬಳಿಕ ಕರಾರುವಕ್ಕಾಗಿ 30 ನಿಮಿಷಕ್ಕೆ ಮತ್ತೆ ಸಿದ್ದರಾಮಯ್ಯ ಸಭೆಗೆ ವಾಪಸ್ಸಾದರು. 30 ನಿಮಿಷಕ್ಕೆ ಸರಿಯಾಗಿ ಆಗಮಿಸುತ್ತಾರೆ ಎಂಬ ಅಂದಾಜಿಲ್ಲದೆ ಆರಾಮವಾಗಿ ಊಟ ಮಾಡುತ್ತಿದ್ದ ಸಚಿವರು ಹಾಗೂ ಅಧಿಕಾರಿಗಳು ಊಟ ಅರ್ಧಕ್ಕೆ ಬಿಟ್ಟು ಸಭೆಗೆ ದೌಡಾಯಿಸಿದರು.