ಮೈಸೂರು, (ಜುಲೈ.17): ರಾಜಸ್ಥಾನದಲ್ಲಿ ನಡೆದ ರಾಜಕೀಯ ಬೆಳವಣಿಗೆಗೆ ನಾವೇ ಕಾರಣ ಎಂದು ಮಾಜಿ ಸಚಿವ, ಬಿಜೆಪಿ ನಾಯಕ ಎ.ಎಚ್.ವಿಶ್ವನಾಥ್ ಹೇಳಿದ್ದಾರೆ.

ಮೈಸೂರಿನ ಜಲದರ್ಶಿನಿ ಅತಿಥಿಗೃಹದಲ್ಲಿ ಶುಕ್ರವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,   ರಾಜಸ್ಥಾನದಲ್ಲಿ ನಡೆದ ರಾಜಕೀಯ ಬೆಳವಣಿಗೆಗೆ ನಾವೇ ಕಾರಣ. ಅವರು ನಮ್ಮ ಮಾದರಿಯಲ್ಲಿ ಸರ್ಕಾರದ ವಿರುದ್ಧ ಸಿಡಿದೆದ್ದಿದ್ದಾರೆ ಎಂದು ಹೇಳಿದರು.

ಆಡಳಿತ ಪಕ್ಷದ ವಿರುದ್ದ ಸೆಡ್ಡು ಹೊಡೆದಿದ್ದು ಮೊದಲು ಕರ್ನಾಟಕದಲ್ಲಿ. ನಾವು ಹುಟ್ಟಿಹಾಕಿದ ಸಂಸ್ಕೃತಿಯಿಂದ ಈ ರೀತಿಯ ಬೆಳವಣಿಗೆಗಳು ನಡೆಯುತ್ತಿವೆ. ಐ ಫೀಲ್ ಪ್ರೌಡ್. ಅಲ್ಲದೆ ಪಕ್ಷಾಂತರ ನಿಷೇಧ ಕಾಯ್ದೆಯನ್ನು ಆಡಳಿತ ಪಕ್ಷದ ಮುಖ್ಯಮಂತ್ರಿಗಳು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇದು ಸರ್ವಾಧಿಕಾರಿ ಧೋರಣೆ. ಈ ಬಗ್ಗೆ ದೇಶದಾದ್ಯಂತ ಚರ್ಚೆ ಆಗಬೇಕು ಎಂದು ಆಗ್ರಹಿಸಿದರು.

ರಾಜಸ್ಥಾನ ರಾಜಕೀಯಕ್ಕೆ ದೊಡ್ಡ ಟ್ವಿಸ್ಟ್, ಕೈ ಬ್ರಹ್ಮಾಸ್ತ್ರಕ್ಕೆ ಪೈಲಟ್ ಪಡೆ ಕಕ್ಕಾಬಿಕ್ಕಿ

ಒಬ್ಬ ಜನಪ್ರತಿನಿಧಿಯನ್ನು ಕಡೆಗಣಿಸಬಾರದು. ಇತ್ತೀಚೆಗೆ ವಿರೋಧ ಪಕ್ಷದಿಂದ ಯಾರೂ ಆಡಳಿತ ಪಕ್ಷಕ್ಕೆ ಹೋಗುತ್ತಿಲ್ಲ. ಬದಲಾಗಿ ಆಡಳಿತ ಪಕ್ಷದಿಂದಲೇ ವಿರೋಧ ಪಕ್ಷದ ಕಡೆಗೆ ಹೋಗುತ್ತಿದ್ದಾರೆ. ಅದು ಪಕ್ಷಾಂತವರವೂ ಅಲ್ಲ, ಶಿಕ್ಷೆ ನೀಡುವಂತಹ ಅಪರಾಧವೂ ಅಲ್ಲ. ರಾಜಸ್ಥಾನದ ರಾಜಕೀಯ ಬೆಳವಣಿಗೆ ಬಗ್ಗೆ ಚರ್ಚೆ ಆಗಬೇಕು. ಸಂವಿಧಾನಕ್ಕೆ ಗೌರವ ನೀಡುವವರು ಈ ಬಗ್ಗೆ ಮಾತನಾಡಬೇಕು ಎಂದರು.

ಸಿದ್ದು ವಿರುದ್ಧ ಗುಡುಗಿದ ವಿಶ್ವನಾಥ್
ಸಿದ್ದರಾಮಯ್ಯ ನಾಲ್ಕು ಬಾರಿ ಪಕ್ಷಾಂತರ ಮಾಡಿದ್ದಾರೆ, ರಮೇಶ್ ಕುಮಾರ್ ಹತ್ತು ಬಾರಿ ಪಕ್ಷಾಂತರ ಮಾಡಿದ್ದಾರೆ, ಕುಮಾರಸ್ವಾಮಿ ಪಕ್ಷವನ್ನೇ ಪಕ್ಷಾಂತರ ಮಾಡಿದ್ದಾರೆ. ಇಂತಹವರೆಲ್ಲ ನಮ್ಮನ್ನು ಪಕ್ಷಾಂತರಿಗಳು ಎಂದು ಕರೆಯುತ್ತಾರೆ. ಜೆಡಿಎಸ್ ಹಾಗೂ ಕಾಂಗ್ರೆಸ್‌ನಲ್ಲಿ ಇನ್ನೂ ರಾಜಪ್ರಭುತ್ವವಿದೆ. ಜೆಡಿಎಸ್ ನಲ್ಲಿ ಅಪ್ಪನೇ ರಾಷ್ಟ್ರಾಧ್ಯಕ್ಷ, ಮಗನೇ ರಾಜ್ಯಾಧ್ಯಕ್ಷ. ಎರಡೂ ಪಕ್ಷಗಳ ರಾಜಪ್ರಭುತ್ವದ ವಿರುದ್ಧ ನಾವು ಸಿಡಿದೆದ್ದೆವು. ಈಗ ನಮ್ಮ ನಡೆಯನ್ನು ಮಧ್ಯಪ್ರದೇಶ ಹಾಗೂ ರಾಜಸ್ಥಾನದಲ್ಲಿ ಅನುಸರಿಸಿದ್ದಾರೆ ಎಂದು ಹೇಳಿದರು.

ಸಿದ್ದರಾಮಯ್ಯ ಅವರಿಗೆ ಸಹಕಾರ ಕೇಳುವುದು ಮಾತ್ರ ಗೊತ್ತು. ಕೊಡುವುದು ಗೊತ್ತಿಲ್ಲ. ವಿರೋಧ ಪಕ್ಷವಾಗಿ ಆಡಳಿತ ಪಕ್ಷಕ್ಕೆ ಸಹಕಾರ ನೀಡಿ. ಹಾಸಿಗೆ ಇಲ್ಲ, ದಿಂಬಿಲ್ಲ ಎಂದು ದೂರುವುದನ್ನು ಬಿಟ್ಟು ಕಾಂಗ್ರೆಸ್ ಕೋವಿಡ್ ಆಸ್ಪತ್ರೆ ಆರಂಭಿಸಿ ಸರ್ಕಾರಕ್ಕೆ ಸಹಕಾರ ನೀಡಿ ಎಂದು ವಿಶ್ವನಾಥ್ ವ್ಯಂಗ್ಯವಾಡಿದರು.

 ಸಿದ್ದರಾಮಯ್ಯನವರೇ, ಇದು ಲೆಕ್ಕ ಕೇಳುವ ಸಮಯವಲ್ಲ. ಲೆಕ್ಕ ಎಲ್ಲಿಯೂ ಹೋಗುವುದಿಲ್ಲ. ಈಗ ಜನರ ರಕ್ಷಣೆ ಸರ್ಕಾರದ ಆದ್ಯತೆ. ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷ ಎರಡೂ ಸೇರಿ ಈ ಪರಿಸ್ಥಿತಿಯನ್ನು ನಿಭಾಯಿಸಬೇಕು. ನೀವು ಜವಾಬ್ದಾರಿಯಿಂದ ವರ್ತಿಸುವುದನ್ನು ಕಲಿಯಿರಿ. ಲೆಕ್ಕ ಕೇಳುವುದು ತಪ್ಪಲ್ಲ, ಆದರೆ ಈಗ ಅದಕ್ಕೆ ಸಮಯವಲ್ಲ ಎಂದರು.