ಬಿಜೆಪಿ ರಾಜ್ಯಾಧ್ಯಕ್ಷ ಸ್ನಾನಕ್ಕೆ ನಾನು ನಿಲ್ಲುತ್ತೀನೋ ಅಥವಾ ಯಾರು ಸ್ಪರ್ಧೆ ಮಾಡುತ್ತಾರೋ ನೋಡೋಣ. ಆದರೆ, ಕಲುಷಿತ ವ್ಯಕ್ತಿಗಳಿಂದ ಬಿಜೆಪಿಯನ್ನು ದೂರವಿಡಲು ನಮ್ಮ ತಂಡ ನಿರ್ಣಯಿಸಿದೆ ಎಂದು ಹೇಳಿದ ಶಾಸಕ ಬಸನಗೌಡ ಪಾಟೀಲ ಯತ್ನಾಳ್
ವಿಜಯಪುರ(ಜ.19): 'ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದರೆ ನಾವು ರೆಡಿ. ನಮ್ಮ ಗುಂಪಿನ ಪರ ಒಬ್ಬರನ್ನು ಅಭ್ಯರ್ಥಿ ಮಾಡಲು ಈಗಾಗಲೇ ನಿರ್ಣಯ ಮಾಡಿದ್ದೇವೆ' ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ವಿರುದ್ಧ ತೊಡೆ ತಟ್ಟಿರುವ ಬಂಡಾಯ ಗುಂಪಿನ ನಾಯಕ, ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೇಳಿದ್ದಾರೆ.
ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಲಾಗುವುದು ಎಂಬ ಸುದ್ದಿ ದೆಹಲಿಯಿಂದ ಹೊರಬಿದ್ದಿರುವ ಹಿನ್ನೆಲೆ ಯಲ್ಲಿನಗರದಲ್ಲಿ ಶನಿವಾರಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಬಿಜೆಪಿ ರಾಜ್ಯಾಧ್ಯಕ್ಷ ಸ್ನಾನಕ್ಕೆ ನಾನು ನಿಲ್ಲುತ್ತೀನೋ ಅಥವಾ ಯಾರು ಸ್ಪರ್ಧೆ ಮಾಡುತ್ತಾರೋ ನೋಡೋಣ. ಆದರೆ, ಕಲುಷಿತ ವ್ಯಕ್ತಿಗಳಿಂದ ಬಿಜೆಪಿಯನ್ನು ದೂರವಿಡಲು ನಮ್ಮ ತಂಡ ನಿರ್ಣಯಿಸಿದೆ' ಎಂದು ಹೇಳಿದರು.
ವಿಜಯೇಂದ್ರಗೆ ಕಿಡಿ:
ಶಾಸಕ ರಮೇಶ್ ಜಾರಕಿಹೊಳಿ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಎಚ್ಚರಿಕೆ ನೀಡಿರುವ ಕುರಿತಂತೆ ತೀಕ್ಷ್ಮವಾಗಿ ಪ್ರತಿಕ್ರಿಯಿಸಿದ ಯತ್ನಾಳ್, 'ರಮೇಶ್ ಜಾರಕಿಹೊಳಿ 17ಶಾಸಕರನ್ನು ಕರೆದುಕೊಂಡು ಬರದಿದ್ದರೆ ಯಡಿಯೂರಪ್ಪ ಮುಖ್ಯಮಂತ್ರಿ ಆಗುತ್ತಲೇ ಇರಲಿಲ್ಲ. ಯಡಿಯೂರಪ್ಪ ಸಿಎಂ ಆಗಲು ಮುಖ್ಯವಾದ ಕಾರಣವೇ ರಮೇಶ್ ಜಾರಕಿಹೊಳಿ' ಎಂದು ತಿರುಗೇಟು ನೀಡಿದರು.
'ರಮೇಶ್ ಜಾರಕಿಹೊಳಿ ಸಚಿವರಾಗಿ ಉತ್ತಮ ಕೆಲಸ ಮಾಡಿದ್ದರು. ಅವರನ್ನು ತೆಗುದುಹಾಕಿದ್ದು ಯಾರು, ಇದರಲ್ಲಿ ನಿಮ್ಮ (ವಿಜಯೇಂದ್ರ) ಪಾಲು ಎಷ್ಟಿದೆ ಎಂಬುದು ಗೊತ್ತು. ರಮೇಶ್ ಜಾರಕಿಹೊಳಿ ಪರಿಶಿಷ್ಟ ಜನಾಂಗದ ನಾಯಕರಾಗಿದ್ದು, ಅವರ ಬಗ್ಗೆ ಹಗುರವಾಗಿ ಮಾತನಾಡುವುದು ಸರಿಯಲ್ಲ' ಎಂಬ ಎಚ್ಚರಿಕೆಯನ್ನು ರವಾನಿಸಿದರು.
ದುಬೈ ಪ್ರವಾಸ ಸಿದ್ದು ಪ್ಲಾನ್:
ಇನ್ನು ಸಚಿವ ಸತೀಶ್ ಜಾರಕಿಹೊಳಿ ವಿದೇಶ ಪ್ರವಾಸದ ಬಗ್ಗೆ ಪ್ರತಿಕ್ರಿಯಿಸಿ, ಸಚಿವ ಸತೀಶ ಸಿಎಂ ಸಿದ್ದರಾಮಯ್ಯ ಪರ ವ್ಯಕ್ತಿ. ಇದರ ಹಿಂದೆ ಸಿದ್ದರಾಮಯ್ಯನವರೇ ಇರಬಹುದೆಂಬ ಶಂಕೆ ಇದೆ. ಕಳೆದ ವರ್ಷವೇ ಸತೀಶ ಮತ್ತು ಬೆಂಬಲಿಗರು ದುಬೈಗೆ ಹೋಗುವ ಪ್ಲಾನ್ ಇತ್ತು. ಅದೆಲ್ಲ ಸಿದ್ದರಾಮಯ್ಯ ನಿರ್ದೇಶನದಂತೆ ನಡೆಯುತ್ತದೆ. ಕಾಂಗ್ರೆಸ್‌ನಲ್ಲಿ ಗುಂಪು ರಾಜಕೀಯ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಎಚ್ಚರಿಕೆ ಕೊಟ್ಟರೂ ಕೇರ್ ಮಾಡುತ್ತಿಲ್ಲ ಎಂದು ತಿಳಿಸಿದರು.
ಕಾಂಗ್ರೆಸ್ ಸರ್ಕಾರ ಹಣವನ್ನೆಲ್ಲ ಗ್ಯಾರಂಟಿ ಯೋಜನೆಗಳಿಗೆ ಹಾಕಿದೆ. ಅಂಬೇಡ್ಕರ್‌ಬಗ್ಗೆ ಗೌರವ ತೋರಿಸುವ ಫೋಟೋ ಮತ್ತು ಸಂವಿಧಾನ ಪ್ರತಿ ಹಿಡಿಯುವ ಅವರಿಗೆ ನಾಚಿಕೆಯಾಗಬೇಕು. ಎಲ್ಲ ನಿಗಮ ಮಂಡಳಿಗಳಲ್ಲಿ ಅವ್ಯವಹಾರ ನಡೆದಿದೆ. ಕಾಂಗ್ರೆಸ್ ಪಕ್ಷ ಎಸ್ಸಿ, ಎಸ್ಟಿ ಸಮಾಜಗಳ ವಿರೋಧಿ ಎಂದು ಆಕ್ಷೇಪಿಸಿದರು.
ಎಲ್ಲರಿಗಿಂತ ಮೊದಲೇ ತಿಳಿವುದು ಇಲ್ಲೇ
'ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟಕ್ಕೆ ಬಸನಗೌಡ ಪಾಟೀಲ ಯತ್ನಾಳ ಸ್ಪರ್ಧೆ' ಎಂದು 'ಕನ್ನಡಪ್ರಭ' ಎಲ್ಲರಿಗಿಂತ ಮೊದಲೇ ನಿನ್ನೆ ಪ್ರಕಟಿಸಿತ್ತು.
