ಸಾವಿಗೆ ಹೆದರದ ಕಾರ್ಯಕರ್ತರು ನಾವು, ಸೋಲಿಗೆ ಹೆದರುತ್ತೇವೆಯೇ? ಕೇಸರಿ ಹೆಗಲ ಮೇಲೆ ಮಾತ್ರವಲ್ಲ, ಹೃದಯದಲ್ಲಿಯೂ ಇರುತ್ತದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದರು. 

ಹೊನ್ನಾವರ (ಜೂ.24): ಸಾವಿಗೆ ಹೆದರದ ಕಾರ್ಯಕರ್ತರು ನಾವು, ಸೋಲಿಗೆ ಹೆದರುತ್ತೇವೆಯೇ? ಕೇಸರಿ ಹೆಗಲ ಮೇಲೆ ಮಾತ್ರವಲ್ಲ, ಹೃದಯದಲ್ಲಿಯೂ ಇರುತ್ತದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದರು. ಅವರು ಪಟ್ಟಣದ ಮೂಡಗಣಪತಿ ಸಭಾಭವನದಲ್ಲಿ ಬಿಜೆಪಿ ಜಿಲ್ಲಾ ಮಟ್ಟದ ಕಾರ್ಯಕರ್ತರ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿದರು. ಕಾಂಗ್ರೆಸ್‌ ಇದ್ದಾಗ ಸ್ಕಾ್ಯಮ್‌, ಬಿಜೆಪಿ ಇದ್ದಾಗ ಸ್ಕೀಂ, ಕೇಂದ್ರದಲ್ಲಿ ಕಾಂಗ್ರೆಸ್‌ ಅವಧಿಯಲ್ಲಿದ್ದ ಹಗರಣಗಳ ಸರಮಾಲೆ ಈಗ ಏಕಿಲ್ಲ ಎನ್ನುವುದು ಅರಿಯಬೇಕಿದೆ. ಬಿಜೆಪಿಯಿಂದ ಜನರ ಮನಸ್ಥಿತಿಯನ್ನು, ಪರಿಸ್ಥಿತಿಯನ್ನು ಬದಲಾಯಿಸಿದ್ದೇವೆ ಎಂದರು.

ಮೇಕ್‌ ಇನ್‌ ಇಂಡಿಯಾ ಯೋಜನೆ ಮೂಲಕ ಇಲ್ಲಿಯೇ ಮೊಬೈಲ್‌ ತಯಾರಿಸಿ ರಪ್ತು ಮಾಡುತ್ತಿದ್ದೇವೆ. ನಾವು ಮನೆಯಲ್ಲಿ ದೀಪಾವಳಿ ಆಚರಿಸಿದರೆ ಮೋದಿ ಅವರು ಸೈನಿಕರ ಜತೆ ಗಡಿಯಲ್ಲಿ ಹಬ್ಬ ಆಚರಿಸುತ್ತಾರೆ. ಇಂತಹ ಶ್ರೇಷ್ಠ ಚಿಂತನೆಗಳನ್ನು ಹೊಂದಿದ್ದಾರೆ. ಭಾರತ ವಿಶ್ವ ಗುರು ಆಗಲು ಮೋದಿ ಕಾರಣ. ಮೋದಿ ಅದಾನಿ, ಅಂಬಾನಿ ಪರ ಎಂದು ವಿರೋಧಿಗಳು ಅಪ್ರಚಾರ ಮಾಡುತ್ತಾರೆ. ಆದರೆ ಮೋದಿ ಅವರು ದೀನ ದಲಿತರು, ದುರ್ಬಲರ ಏಳ್ಗೆ ಬಯಸುತ್ತಿದ್ದಾರೆ. ಅಂಥವರನ್ನು ಗುರುತಿಸಿ ದೇಶದ ಗೌರವಾನ್ವಿತ ಹುದ್ದೆಗಳಿಗೆ ಅವಕಾಶ ನೀಡುತ್ತಾರೆ ಎಂದು ಹೇಳಿದರು.

ವಿದ್ಯುತ್‌ ಶುಲ್ಕದ ಮೇಲಿನ ತೆರಿಗೆ ಇಳಿಕೆ ಬಗ್ಗೆ ಬಜೆಟ್‌ ಬಳಿಕ ಪರಿಶೀಲನೆ: ಸಿಎಂ ಸಿದ್ದರಾಮಯ್ಯ

ಗ್ಯಾರಂಟಿ ಜಾರಿಗೆ ತನ್ನಿ: ಮುಖ್ಯಮಂತ್ರಿ ಸಿದ್ದರಾಮಯ್ಯನವರೇ, ಘೋಷಣೆ ಮಾಡಿದ ಯೋಜನೆ ಯಥಾವತ್ತಾಗಿ ಜಾರಿಗೆ ತನ್ನಿ, ಇಲ್ಲವಾದರೆ ರಾಜಿನಾಮೆ ಕೊಟ್ಟು ಮನೆಗೆ ನಡೆಯಿರಿ ಎಂದು ಸಿ.ಟಿ. ರವಿ ಹೇಳಿದರು. ನಮ್ಮದು ರಾಷ್ಟ್ರವಾದ, ಅವರದ್ದು ಜಾತಿವಾದ, ಭ್ರಷ್ಟಾಚಾರ ವಾದ. ಮೊದಲೆಲ್ಲ ಎಲ್ಲೆಂದರಲ್ಲಿ ಬಾಂಬ್‌ ಸ್ಫೋಟಗಳೇ ಕೇಳಿ ಬರುತ್ತಿದ್ದವು. ಈಗ ಎಲ್ಲವೂ ಬಂದ್‌ ಆಗಿದೆ. ಇದಕ್ಕೆ ಮೋದಿ ಅವರ ಉತ್ತಮ ನಾಯಕತ್ವ ಕಾರಣ. ನಾವು ಸಿದ್ಧಾಂತಕ್ಕಾಗಿ ರಾಜಕಾರಣಕ್ಕೆ ಬಂದವರು. ನಮ್ಮನ್ನು ಹೆದರಿಸುವ ರಾಜಕಾರಣ ಬಿಟ್ಟುಬಿಡಿ ಎಂದರು.

ಮಾಜಿ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಸಿದ್ದರಾಮಯ್ಯ ಸರ್ಕಾರ ಸರ್ವಾಧಿಕಾರ ನಿರ್ಧಾರದಿಂದ ಶಿಕ್ಷಣ ಕ್ಷೇತ್ರ ಗೊಂದಲದ ಗೂಡಾಗಿದೆ. ಚುನಾವಣೆ ಪೂರ್ವ ನೀಡಿದ ಗ್ಯಾರಂಟಿ ಇದೀಗ ಷರತ್ತು ಹಾಕುವ ಮೂಲಕ ಜನತೆಯನ್ನು ಗೊಂದಲಕ್ಕೆ ಒಳಪಡಿಸಿದೆ. ಗ್ಯಾರಂಟಿ ಶಬ್ದದ ಮೌಲ್ಯವನ್ನೆ ಕಳೆದಿದೆ. ದೇಶದ ಹಿತ ರಾಜ್ಯದ ಹಿತದ ವಾತಾವರಣವನ್ನು ಹಿಂದಿನಿಂದಲೂ ಕಾಂಗ್ರೆಸ್‌ ಮಾಡದೇ ಜನತೆಯ ಮಧ್ಯೆ ದ್ವೇಷ ಭಾವನೆ ಮೂಡಿಸುತ್ತಲೇ ಬಂದಿದೆ. ಯಾರೂ ಹೇಳದ ಪಠ್ಯಪುಸ್ತಕ ಪರಿಷ್ಕರಣೆಗಳನ್ನು ಮಾಡಿ, ಶಿಕ್ಷಣ ಮಂತ್ರಿ ಪುಸ್ತಕ ನೋಡುವ ಮೊದಲೇ ಪಠ್ಯ ಕೈಬಿಡಲು ಮುಂದಾಗಿರುವುದು ದುರಂತ. ರಾಜ್ಯದ ಐದು ಗ್ಯಾರಂಟಿಯ ಯೋಜನೆ ಸಮರ್ಪಕ ಜಾರಿಯಾಗದೆ, ಮತಾಂತರ ನಿಷೇಧ, ಗೋಹತ್ಯೆ ನಿಷೇಧ ಕಾನೂನು ವಾಪಸ್‌ ಪಡೆಯಲು ಮುಂದಾದರೆ ಅಧಿವೇಶನದ ಒಳಗೂ ಹೊರಗೂ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು.

ವಂಚನೆಯ ಕಾರ್ಡ್‌: ಮಾಜಿ ಸಚಿವ ಆರಗ ಜ್ಞಾನೇಂದ್ರ ಮಾತನಾಡಿ, ಕೇಂದ್ರದ ಮೋದಿ ನಾಯಕತ್ವದ ಆಡಳಿತ ಸುವರ್ಣಾಕ್ಷರದಲ್ಲಿ ಬರೆದಿಡುವಂತೆ ಆಗಿದೆ. ರಾಜ್ಯದ ಕಾಂಗ್ರೆಸ್‌ ಗೆದ್ದಿಲ್ಲ, ವಂಚನೆಯ ಕಾರ್ಡ್‌ ಗೆದ್ದಿದೆ. ಕಾರ್ಡ್‌ ಪ್ರಿಂಟ್‌ ಮಾಡುವಾಗ ಅಧಿಕಾರಕ್ಕೆ ಬರುವ ಗ್ಯಾರಂಟಿ ಇರಲಿಲ್ಲ ಎಂದು ವ್ಯಂಗ್ಯವಾಡಿದರು. ದಿಕ್ಕು ತೋಚದೆ ಜನತೆಯ ತಲೆ ಮೇಲೆ ಹೆಚ್ಚುವರಿ ಬೆಲೆಏರಿಕೆ ಹೊರೆ ಹಾಕುವುದಲ್ಲದೇ ಅಕ್ಕಿ ವಿಷಯದಲ್ಲಿ ಕೆಂದ್ರದ ಮೇಲೆ ಆರೋಪ ಮಾಡುತ್ತಿದೆ ಎಂದರು.

ಅಕ್ಕಿಯನ್ನು ಮೋದಿಯವರಿಗೆ ಕೇಳಿ ಕೊಡುತ್ತೇನೆ ಎಂದು ಸಿದ್ದು ಹೇಳಿದ್ದರಾ?: ನಳಿನ್‌ ಕುಮಾರ್‌ ಕಟೀಲ್‌

ಪಶ್ಚಿಮಘಟ್ಟಕಾರ್ಯಪಡೆಯ ನಿಕಟಪೂರ್ವ ಅಧ್ಯಕ್ಷ ಗೋವಿಂದ ನಾಯ್ಕ ಸ್ವಾಗತಿಸಿದರು. ಬಿಜೆಪಿ ಜಿಲ್ಲಾಧ್ಯಕ್ಷ ವೆಂಕಟೇಶ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾಜಿ ಸಚಿವ ಪ್ರಮೋದ ಮಧ್ವರಾಜ, ವಿಧಾನಪರಿಷತ್‌ ಸದಸ್ಯರಾದ ಕೇಶವ ಪ್ರಸಾದ ಮಾತನಾಡಿದರು. ಮಾಜಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಗಿರೀಶ ಪಾಟೀಲ, ಶಾಸಕ ದಿನಕರ ಶೆಟ್ಟಿ, ಮಾಜಿ ಶಾಸಕಿ ರೂಪಾಲಿ ನಾಯ್ಕ, ಸುನೀಲ ನಾಯ್ಕ, ಸುನೀಲ ಹೆಗಡೆ, ಹೊನ್ನಾವರ ಮಂಡಲಾಧ್ಯಕ್ಷ ರಾಜೇಶ ಭಂಡಾರಿ, ಎನ್‌.ಎಸ್‌. ಹೆಗಡೆ, ಪ್ರಸನ್ನ ಕೆರಕೈ, ಶಿವಾನಿ ಶಾಂತಾರಾಮ ಉಪಸ್ಥಿತರಿದ್ದರು.