ವಕ್ಫ್ ಆಸ್ತಿ: ರೈತರ ಒಂದಿಂಚೂ ಭೂಮಿ ಕಸಿಯಲು ಬಿಡಲ್ಲ: ಬಿ.ವೈ.ವಿಜಯೇಂದ್ರ
ತಲೆತಲಾಂತರದಿಂದ ಉಳುಮೆ ಮಾಡಿಕೊಂಡು ಬಂದಿರುವ ನಮ್ಮ ರೈತರಿಂದ ಒಂದೇ ಒಂದು ಇಂಚು ಭೂಮಿ ಕಸಿಯಲು ಬಿಡುವುದಿಲ್ಲ ಎಂದು ಗುಡುಗಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಇದಕ್ಕಾಗಿ ಎಂಥ ಹೋರಾಟಕ್ಕೂ ಪಕ್ಷ ಕಟಿಬದ್ಧವಾಗಿದೆ ಎಂದು ತಿಳಿಸಿದ್ದಾರೆ.
ಬೆಂಗಳೂರು (ಅ.30): ತಲೆತಲಾಂತರದಿಂದ ಉಳುಮೆ ಮಾಡಿಕೊಂಡು ಬಂದಿರುವ ನಮ್ಮ ರೈತರಿಂದ ಒಂದೇ ಒಂದು ಇಂಚು ಭೂಮಿ ಕಸಿಯಲು ಬಿಡುವುದಿಲ್ಲ ಎಂದು ಗುಡುಗಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಇದಕ್ಕಾಗಿ ಎಂಥ ಹೋರಾಟಕ್ಕೂ ಪಕ್ಷ ಕಟಿಬದ್ಧವಾಗಿದೆ ಎಂದು ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಲೆತಲಾಂತರದಿಂದ ಇದ್ದ ಪಿತ್ರಾರ್ಜಿತ ಆಸ್ತಿಯನ್ನು ರಾತ್ರೋರಾತ್ರಿ ವಕ್ಫ್ ಆಸ್ತಿ ಎಂಬುದಾಗಿ ಘೋಷಿಸಿದರೆ ರೈತರು ಬೀದಿಗೆ ಬಂದು ಏನು ಮಾಡಬೇಕು ಎಂದು ಖಾರವಾಗಿ ಪ್ರಶ್ನಿಸಿದರು.
ಈ ರೀತಿ ಅಲ್ಪಸಂಖ್ಯಾತರನ್ನು ಎತ್ತಿಕಟ್ಟುವ, ಈ ದೇಶವನ್ನು ಜಾತಿ, ಧರ್ಮದ ಆಧಾರದಲ್ಲಿ ವಿಭಜಿಸುವ ಕೆಲಸವನ್ನು ಕಾಂಗ್ರೆಸ್ ಪಕ್ಷ ಹಿಂದಿನಿಂದಲೂ ಮಾಡುತ್ತಾ ಬರುತ್ತಿದೆ. ಅದೇ ನಿಟ್ಟಿನಲ್ಲಿ ಸಚಿವ ಜಮೀರ್ ಅಹಮದ್ ನೇತೃತ್ವದಲ್ಲಿ ಇವತ್ತು ರಾಜ್ಯದಲ್ಲಿ ಬೆಂಕಿ ಹಚ್ಚುವ ಕೆಲಸ ನಡೆದಿದೆ. ಅವರ ನೇತೃತ್ವದಲ್ಲೇ ರೈತರಿಗೆ ಅನ್ಯಾಯ ಮಾಡುವ ಕೆಲಸ ಆಗುತ್ತಿದೆ. ಜಮೀರ್ ಅಹಮದ್ ಮುಖ್ಯಮಂತ್ರಿಗಳ ಬಲಗೈ ಬಂಟ ಎಂದು ಬಿಂಬಿತವಾಗಿರುವುದರಿಂದ ಈ ವಕ್ಫ್ ಆಸ್ತಿ ವಿವಾದ ಸಿದ್ದರಾಮಯ್ಯನವರ ಮೂಗಿನಡಿಯಲ್ಲಿ ಸೃಷ್ಟಿಯಾಗುತ್ತಿದೆ ಎಂಬುದು ಮೇಲ್ನೋಟಕ್ಕೆ ಸ್ಪಷ್ಟವಾಗುತ್ತಿದೆ ಎಂದು ಹೇಳಿದರು.
ಸಚಿವರು 120 ಜನ ರೈತರಿಗೆ ನೋಟಿಸ್ ಕೊಟ್ಟಿದ್ದನ್ನು ಒಪ್ಪಿಕೊಂಡಿದ್ದಾರೆ. ಅದಕ್ಕೆ ಬಿಜೆಪಿ ಹೊಣೆಗಾರವೇ? ಅದಕ್ಕೆ ಬಿಜೆಪಿ ಕಾರಣವೇ? ಇದನ್ನು ಬಿಜೆಪಿ ಗಟ್ಟಿಯಾಗಿ ತೆಗೆದುಕೊಳ್ಳದೆ ಇದ್ದರೆ ರಾಜ್ಯ ಸರ್ಕಾರದ ಕ್ರಮದಿಂದ ನೂರಾರು ವರ್ಷಗಳಿಂದ ಉಳುಮೆ ಮಾಡುತ್ತಿದ್ದ ರೈತರು ಬೀದಿಗೆ ಬರಬೇಕಾಗುತ್ತಿತ್ತು ಎಂದು ವಿಜಯೇಂದ್ರ ವಿಶ್ಲೇಷಿಸಿದರು.
ದೇಶದಲ್ಲಿ ಒಂದೇ ವರ್ಷ 2 ಲಕ್ಷ ಕಿರಾಣಿ ಅಂಗಡಿ ಬಂದ್: ಅಧ್ಯಯನದಲ್ಲಿ ಬೆಳಕಿಗೆ!
ಬಿಜೆಪಿ ವಿಚಾರ ಸ್ಪಷ್ಟವಾಗಿದೆ. ರಾಜ್ಯ ಸರ್ಕಾರ ರೈತರಿಗೆ ತೊಂದರೆ ಕೊಡುವ ಕೆಲಸ ಮಾಡುತ್ತಿದ್ದು, ಬಿಜೆಪಿ ರೈತರ ಪರ ಇದೆ. ನಾವು ಅವರ ಜೊತೆಯಲ್ಲಿದ್ದೇವೆ. ರೈತರ ಈ ಸಮಸ್ಯೆ ಪರಿಹಾರಕ್ಕೆ ನಾವು ಸಂಪೂರ್ಣ ಸಹಕಾರ ನೀಡುತ್ತೇವೆ. ಕಾನೂನಿನ ಸಹಾಯ ಸೇರಿ ಯಾವುದೇ ರೀತಿಯ ಸಹಕಾರವನ್ನು ಬಿಜೆಪಿ ಕೊಡಲಿದ್ದು, ಅವರ ಜೊತೆ ಗಟ್ಟಿಯಾಗಿ ನಿಲ್ಲಲಿದೆ ಎಂದು ತಿಳಿಸಿದರು.