ವಕ್ಫ್ ಆಸ್ತಿ ವಿವಾದ: ಸರ್ಕಾರದ ವಿರುದ್ಧ ಇಂದು ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ
ವಕ್ಫ್ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಪ್ರಮುಖ ಪ್ರತಿಪಕ್ಷ ಬಿಜೆಪಿಯು ಸೋಮವಾರ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಿದೆ. ವಕ್ಫ್ ಆಸ್ತಿ ಕುರಿತ ಗೆಜೆಟ್ ಅಧಿಸೂಚನೆ ಹಿಂಪಡೆಯಬೇಕು, ಅಧಿಕಾರ ದುರ್ಬಳಕೆಯ ಕುರಿತು ಸಿಬಿಐ ತನಿಖೆ ನಡೆಸಬೇಕು.
ಬೆಂಗಳೂರು (ನ.04): ವಕ್ಫ್ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಪ್ರಮುಖ ಪ್ರತಿಪಕ್ಷ ಬಿಜೆಪಿಯು ಸೋಮವಾರ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಿದೆ. ವಕ್ಫ್ ಆಸ್ತಿ ಕುರಿತ ಗೆಜೆಟ್ ಅಧಿಸೂಚನೆ ಹಿಂಪಡೆಯಬೇಕು, ಅಧಿಕಾರ ದುರ್ಬಳಕೆಯ ಕುರಿತು ಸಿಬಿಐ ತನಿಖೆ ನಡೆಸಬೇಕು ಹಾಗೂ ವಿವಾದಕ್ಕೆ ಕಾರಣವಾದ ವಕ್ಫ್ ಖಾತೆ ಸಚಿವ ಜಮೀರ್ ಅಹಮದ್ ಅವರನ್ನು ಸಂಪುಟದಿಂದ ವಜಾಗೊಳಿಸಬೇಕು ಎಂಬ ಬೇಡಿಕೆಗಳನ್ನು ಮುಂದಿಟ್ಟು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಮತ್ತು ಎಲ್ಲ ತಾಲೂಕುಗಳ ತಾಲೂಕು ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಪಕ್ಷದ ಎಲ್ಲ ಹಂತದ ಮುಖಂಡರು ಹಾಗೂ ಕಾರ್ಯಕರ್ತರು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಬಿಜೆಪಿ ತಿಳಿಸಿದೆ.
ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಟ: ರೈತರ ಫಲವತ್ತಾದ ಭೂಮಿ, ಮಠ ಮಂದಿರ, ಚರ್ಚ, ಮಸೀದಿ ಎಲ್ಲಾ ಸಮಾಜದ ಪ್ರಾರ್ಥನಾ ಸ್ಥಳ, ಬಡ ಜನರ ಆಸ್ತಿ ಹಾಗೂ ಸರ್ಕಾರಿ ಬೆಲೆ ಬಾಳುವ ಗೋಮಾಳ ಮತ್ತು ವಾಣಿಜ್ಯ ಉದ್ಯಮಕ್ಕೆ ಮೀಸಲಿಟ್ಟ ಭೂಮಿಯನ್ನು ಕಾನೂನು ಬಾಹಿರವಾಗಿ ಪಹಣಿಯಲ್ಲಿ ವಕ್ಫ್ ಮಂಡಳಿ ಹೆಸರನ್ನು ಸೇರಿಸಿ ರಾಜ್ಯದಲ್ಲಿ ತೊಗಲಕ್ ದರ್ಬಾರ್ ಆಡಳಿತವನ್ನು ಕಾಂಗ್ರೆಸ್ ನಡೆಸುತ್ತಿದೆ ಎಂದು ಆರೋಪಿಸಿ, ಇದೇ ನ.4ರಂದು ಬಿಜೆಪಿಯು ಹೋರಾಟ ಹಮ್ಮಿಕೊಂಡಿದೆ.
ಅನ್ನಭಾಗ್ಯ, ಗೃಹಜ್ಯೋತಿ, ಗೃಹಲಕ್ಷ್ಮಿ, ಯುವ ನಿಧಿ ಕಾರ್ಯಕ್ರಮ ಸ್ಥಗಿತ ಹುನ್ನಾರ: ಎಚ್‌ಡಿಕೆ ಆರೋಪ
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರ ಆದೇಶದ ಮೇರೆಗೆ ಬಿಜೆಪಿ ರಾಜ್ಯ ಕಾರ್ಯದರ್ಶಿ ಹಾಗೂ ಬೀದರ್ ದಕ್ಷಿಣ ಕ್ಷೇತ್ರದ ಶಾಸಕರಾದ ರಾಜ್ಯ ಕಾರ್ಯದರ್ಶಿ ಡಾ. ಶೈಲೇಂದ್ರ ಬೆಲ್ದಾಳೆ ಹಾಗೂ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ್ ಅವರ ನೇತೃತ್ವದಲ್ಲಿ ಸೋಮವಾರ ಬೆಳಿಗ್ಗೆ 10 ಗಂಟೆಗೆ ನಗರದ ಗಣೇಶ ಮೈದಾನದಿಂದ ಬೃಹಕ್ ಪ್ರತಿಭಟನೆ ನಡೆಸುವ ಮೂಲಕ ತಹಸೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಲಾಗುವದು. ಪ್ರತಿಭಟನೆಯಲ್ಲಿ ರೈತ ಸಂಘದ ಮುಖಂಡರು, ರೈತರು, ಬಿಜೆಪಿ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಸಾರ್ವಜನಿಕರು, ಎಲ್ಲಾ ಸಂಘಟನೆ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಗುರುನಾಥ ರಾಜಗೀರಾ, ಚಂದ್ರಯ್ಯ ಸ್ವಾಮಿ, ಸಂಜೀವಕುಮಾರ ಕೋಳಿ ಕೋರಿದ್ದಾರೆ.