ರೈತರಿಗೆ ನೀಡಿದ ವಕ್ಫ್ ನೋಟಿಸ್ ವಾಪಸ್: ಸಿಎಂ ಸಿದ್ದರಾಮಯ್ಯ
ವಕ್ಫ್ ಆಸ್ತಿ ವಿವಾದ ಸಂಬಂಧ ವಿಜಯಪುರದ ಯಾವುದೇ ರೈತರನ್ನು ಅವರ ಜಮೀನಿನಿಂದ ಒಕ್ಕಲೆಬ್ಬಿಸುವುದಿಲ್ಲ, ಈ ಕುರಿತು ನೋಟಿಸ್ ನೀಡಿದ್ದರೆ ಅದನ್ನು ವಾಪಸ್ ಪಡೆಯಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಬೆಂಗಳೂರು (ಅ.30): ವಕ್ಫ್ ಆಸ್ತಿ ವಿವಾದ ಸಂಬಂಧ ವಿಜಯಪುರದ ಯಾವುದೇ ರೈತರನ್ನು ಅವರ ಜಮೀನಿನಿಂದ ಒಕ್ಕಲೆಬ್ಬಿಸುವುದಿಲ್ಲ, ಈ ಕುರಿತು ನೋಟಿಸ್ ನೀಡಿದ್ದರೆ ಅದನ್ನು ವಾಪಸ್ ಪಡೆಯಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ವಿಜಯಪುರದ ವಕ್ಫ್ ಆಸ್ತಿ ಕುರಿತು ಹೊರಡಿಸಿದ ನೋಟಿಸ್ ಸಂಬಂಧ ಕಂದಾಯ ಸಚಿವ ಕೃಷ್ಣ ಬೈರೇಗೌಡ, ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ್ ಹಾಗೂ ವಕ್ಫ್ ಸಚಿವ ಜಮೀರ್ ಅಹಮದ್ ಅವರು ಸ್ಪಷ್ಟನೆ ನೀಡಿದ್ದಾರೆ. ಯಾದಗಿರಿ ಹಾಗೂ ಧಾರವಾಡ ಜಿಲ್ಲೆಯಲ್ಲಿಯೂ ರೈತರಿಗೆ ವಕ್ಫ್ ಆಸ್ತಿ ಎಂದು ನೋಟಿಸ್ ನೀಡಿರುವ ಬಗ್ಗೆ ಕಂದಾಯ ಸಚಿವರ ಜೊತೆ ಚರ್ಚಿಸಲಾಗುವುದು. ನೋಟಿಸ್ ನೀಡಿದ್ದರೆ ವಾಪಸ್ ಪಡೆಯಲಾಗುವುದು ಎಂದರು.
ಒಳಮೀಸಲಾತಿ: ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿ ಕಲ್ಪಿಸಲು ಸರ್ಕಾರ ತೀರ್ಮಾನಿಸಿದೆ. ಆದರೆ ಒಳಮೀಸಲಾತಿ ನೀಡಲು ಖಚಿತ ದತ್ತಾಂಶ ಇಲ್ಲ ಎಂದು ಕೆಲವರ ಅಭಿಪ್ರಾಯ ಇರುವುದರಿಂದ ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿ ನೇತೃತ್ವದಲ್ಲಿ ಏಕ ಸದಸ್ಯ ಆಯೋಗ ರಚಿಸಲು ನಿರ್ಧರಿಸಲಾಗಿದೆ. ಮೂರು ತಿಂಗಳೊಳಗೆ ವರದಿ ನೀಡಲು ಅವಧಿ ನೀಡಲಾಗುವುದು. ಅಲ್ಲಿವರೆಗೆ ಈಗಾಗಲೇ ಅಧಿಸೂಚನೆ ಹೊರಡಿಸಿ ನೇಮಕಾತಿ ಪ್ರಕ್ರಿಯೆ ಆರಂಭವಾಗಿರುವುದನ್ನು ಹೊರತುಪಡಿಸಿ ಹೊಸದಾಗಿ ನೇಮಕಾತಿಗೆ ಅಧಿಸೂಚನೆ ಹೊರಡಿಸುವುದಿಲ್ಲ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ರಕ್ತ ಹರಿದರೂ ವಕ್ಫ್‌ಗೆ ರೈತರ ಜಮೀನು ಬಿಡಲ್ಲ: ವಿಜಯಪುರ ಮತ್ತಿತರ ಪ್ರದೇಶಗಳಲ್ಲಿನ ವಕ್ಫ್ ಬೋರ್ಡ್ ನೋಟಿಸ್ ಬಿಸಿ ಬಿಸಿಯಾಗಿ ಚರ್ಚೆಯಲ್ಲಿರುವಾಗಲೇ ವಕ್ಫ್ ಆಸ್ತಿ ಪ್ರಕರಣವು ಬಾಗಲಕೋಟೆ ಜಿಲ್ಲೆ ತೇರದಾಳ ಕ್ಷೇತ್ರದಲ್ಲಿ ೨೦೧೯ರಿಂದಲೇ ಸದ್ದು ಮಾಡುತ್ತಿದ್ದು, ಈಗಲೂ ನೂರಾರು ರೈತರು ನ್ಯಾಯಾಲಯಕ್ಕೆ ಅಲೆದಾಡುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ಬನಹಟ್ಟಿಯ ವಿಶ್ರಾಂತಿ ಧಾಮದಲ್ಲಿ ತೇರದಾಳ ಶಾಸಕ ಸಿದ್ದು ಸವದಿ ನೇತೃತ್ವದಲ್ಲಿ ರೈತರು ತಮಗೆ ನ್ಯಾಯಾಲಯದಿಂದ ಈಗಲೂ ಬರುತ್ತಿರುವ ನೋಟಿಸ್ ಹಿಡಿದು ಪ್ರತಿಭಟಿಸಿದ ಪ್ರಸಂಗ ಮಂಗಳವಾರ ನಡೆಯಿತು.
ಸಿ.ಪಿ.ಯೋಗೇಶ್ವರ್ ಕಾಂಗ್ರೆಸ್ ಹರಕೆಯ ಕುರಿ: ಆರ್.ಅಶೋಕ್
ಈ ವೇಳೆ ಮಾತನಾಡಿದ ಶಾಸಕ ಸಿದ್ದು ಸವದಿ, ೨೦೧೯-೨೦ರಲ್ಲಿ ೪೨೦ ಎಕರೆಯಷ್ಟು ಭೂಮಿಗೆ ೧೧೦ ರೈತರಿಗೆ ವಕ್ಫ್ ಮಂಡಳಿಯಿಂದ ನೋಟಿಸ್ ಬರುತ್ತಿದೆ. ಈ ಆಸ್ತಿ ವಕ್ಫ್‌ಗೆ ಸಂಬಂಧಿಸಿದೆಯೆಂಬ ತಗಾದೆ ನಡೆಯುತ್ತಿದೆ. ಸ್ವಂತ ಭೂಮಿಯಲ್ಲಿ ಹತ್ತಾರು ತಲೆಮಾರುಗಳಿಂದ ಕೃಷಿ ಮಾಡುತ್ತಾ ಬಂದ ಕುಟುಂಬಗಳು ಆಸ್ತಿ ವಿಭಜನೆ ಬಳಿಕ ಇದೀಗ ತುಂಡು ಭೂಮಿ ಹೊಂದಿದ ರೈತರ ಮೇಲೆಯೂ ಕಾಂಗ್ರೆಸ್ ಸರ್ಕಾರ ಗದಾಪ್ರಹಾರ ನಡೆಸುತ್ತಿರುವುದು ನಾಚಿಕೇಗೇಡಿತನದ ಸಂಗತಿ. ರೈತರ ಬೆನ್ನೆಲುಬಾಗಿ ಯಾವುದೇ ಕಾರಣಕ್ಕೂ ಇಲ್ಲಿನ ರೈತರ ಜಮೀನನ್ನು ವಕ್ಫ್‌ಗೆ ನೀಡುವ ಅವಕಾಶ ನೀಡುವುದಿಲ್ಲ. ರಕ್ತ ಹರಿದರೂ ಚಿಂತೆಯಿಲ್ಲ ಈ ಹೋರಾಟದಿಂದ ಹಿಂದೆ ಸರಿಯುವ ಪ್ರಮೇಯವೇ ಇಲ್ಲವೆಂದು ಸವದಿ ಆಕ್ರೋಶ ವ್ಯಕ್ತಪಡಿಸಿದರು.