Asianet Suvarna News Asianet Suvarna News

ಬಿಜೆಪಿ ಅಭ್ಯರ್ಥಿಗಳ ಆಯ್ಕೆಗೆ ಓಟಿಂಗ್‌: ಇಂದು 224 ಕ್ಷೇತ್ರಗಳಲ್ಲಿ ಮತದಾನ

ಪ್ರತಿ ವಿಧಾನಸಭಾ ಕ್ಷೇತ್ರದ ಶಕ್ತಿ ಕೇಂದ್ರಗಳ ಪ್ರಮುಖರು, ಮಂಡಲ ಪದಾಧಿಕಾರಿಗಳು, ವಿವಿಧ ಮೋರ್ಚಾಗಳ ಪ್ರಮುಖರು, ಆ ಕ್ಷೇತ್ರದಿಂದ ಜಿಲ್ಲಾ ಘಟಕಗಳಿಗೆ ನೇಮಕಗೊಂಡವರು ಅಭ್ಯರ್ಥಿಗಳ ಆಯ್ಕೆಗೆ ಮತ ಚಲಾಯಿಸಲಿದ್ದಾರೆ. ರಾಜ್ಯಾದ್ಯಂತ ಒಟ್ಟು 22 ಸಾವಿರ ಸ್ಥಳೀಯ ಮುಖಂಡರನ್ನು ಇದಕ್ಕಾಗಿ ಪಟ್ಟಿ ಮಾಡಲಾಗಿದೆ.

Voting for the Selection of BJP Candidates in Karnataka Assembly Elections 2023 grg
Author
First Published Mar 31, 2023, 5:38 AM IST

ವಿಜಯ್‌ ಮಲಗಿಹಾಳ

ಬೆಂಗಳೂರು(ಮಾ.31): ಪ್ರಸಕ್ತ ವಿಧಾನಸಭಾ ಚುನಾವಣೆಗೆ ತನ್ನ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಸಂಬಂಧ ಆಡಳಿತಾರೂಢ ಬಿಜೆಪಿಯು ವಿನೂತನ ವ್ಯವಸ್ಥೆ ಅಳವಡಿಸಿಕೊಂಡಿದ್ದು, ಶುಕ್ರವಾರ ರಾಜ್ಯದ 224 ಕ್ಷೇತ್ರಗಳಲ್ಲಿ ಪಕ್ಷದ ಸ್ಥಳೀಯ ಪದಾಧಿಕಾರಿಗಳು ಹಾಗೂ ಮುಖಂಡರು ಮತದಾನದ ಮೂಲಕ ಅಭ್ಯರ್ಥಿಗಳ ಹೆಸರುಗಳನ್ನು ಸೂಚಿಸಲಿದ್ದಾರೆ.

ಬಳಿಕ ಶನಿವಾರ ಮತ್ತು ಭಾನುವಾರ (ಏ.1 ಮತ್ತು 2) ಎರಡು ದಿನ ಎಲ್ಲ ಜಿಲ್ಲಾ ಘಟಕಗಳ ಕೋರ್‌ ಕಮಿಟಿಗಳ ಸದಸ್ಯರು ಬೆಂಗಳೂರಿಗೆ ಆಗಮಿಸಿ ರಾಜ್ಯ ಘಟಕದ ಪ್ರಮುಖರೊಂದಿಗೆ ಪ್ರತ್ಯೇಕವಾಗಿ ಮಾತುಕತೆ ನಡೆಸಿ ಅಭ್ಯರ್ಥಿಗಳ ಕುರಿತು ತಮ್ಮ ಅಭಿಪ್ರಾಯ ದಾಖಲಿಸಲಿದ್ದಾರೆ. ನಂತರ ಏ.3 ಅಥವಾ 4ರಂದು ರಾಜ್ಯ ಕೋರ್‌ ಕಮಿಟಿ ಸಭೆ ನಡೆದು ಅಭ್ಯರ್ಥಿಗಳ ಬಗ್ಗೆ ಚರ್ಚೆ ನಡೆಸಲಿದೆ. ಅಂತಿಮವಾಗಿ ಏ.4ರ ಬಳಿಕ ಬಿಜೆಪಿ ಕೇಂದ್ರ ಸಂಸದೀಯ ಮಂಡಳಿ ಸಭೆ ನಡೆಸಿ ಅಭ್ಯರ್ಥಿಗಳ ಪಟ್ಟಿಯನ್ನು ಅಖೈರುಗೊಳಿಸಲಿದೆ. ಹೀಗೆ ಒಟ್ಟು ನಾಲ್ಕು ಹಂತಗಳಲ್ಲಿ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಯಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಸಿದ್ದು ವಿರುದ್ಧ ವಿಜಯೇಂದ್ರ ಸ್ಪರ್ಧೆ ಬಗ್ಗೆ ಚರ್ಚೆ: ಯಡಿಯೂರಪ್ಪ

ಈ ಹಿನ್ನೆಲೆಯಲ್ಲಿ ಶುಕ್ರವಾರ ಪಕ್ಷದ 39 ಸಂಘಟನಾತ್ಮಕ ಜಿಲ್ಲೆಗಳಲ್ಲಿ ಬೆಳಗ್ಗೆ 9ರಿಂದ ಸಂಜೆ 4ಗಂಟೆವರೆಗೆ ಮತದಾನ ನಡೆಯಲಿದೆ. ಇದಕ್ಕಾಗಿ ಒಂದೊಂದು ಜಿಲ್ಲೆಗೆ ತೆರಳಲು ಸಚಿವರು ಹಾಗೂ ಮಾಜಿ ಸಚಿವರನ್ನು ಒಳಗೊಂಡ ಹಿರಿಯ ನಾಯಕರ ನೇತೃತ್ವದ ಸಮಿತಿಗಳನ್ನು ರಚಿಸಿದ್ದು, ಆ ಎಲ್ಲ ಸಮಿತಿಗಳ ನಾಯಕರು ಜಿಲ್ಲಾ ವ್ಯಾಪ್ತಿಯ ಒಂದೊಂದು ವಿಧಾನಸಭಾ ಕ್ಷೇತ್ರದ ಮುಖಂಡರ ಪ್ರತ್ಯೇಕ ಸಭೆ ನಡೆಸಿ ಮತದಾನ ಪ್ರಕ್ರಿಯೆ ಸುಗಮವಾಗಿ ನಡೆಯುವಂತೆ ನೋಡಿಕೊಳ್ಳಲಿದ್ದಾರೆ.

ಪ್ರತಿ ವಿಧಾನಸಭಾ ಕ್ಷೇತ್ರದ ಶಕ್ತಿ ಕೇಂದ್ರಗಳ ಪ್ರಮುಖರು, ಮಂಡಲ ಪದಾಧಿಕಾರಿಗಳು, ವಿವಿಧ ಮೋರ್ಚಾಗಳ ಪ್ರಮುಖರು, ಆ ಕ್ಷೇತ್ರದಿಂದ ಜಿಲ್ಲಾ ಘಟಕಗಳಿಗೆ ನೇಮಕಗೊಂಡವರು ಅಭ್ಯರ್ಥಿಗಳ ಆಯ್ಕೆಗೆ ಮತ ಚಲಾಯಿಸಲಿದ್ದಾರೆ. ರಾಜ್ಯಾದ್ಯಂತ ಒಟ್ಟು 22 ಸಾವಿರ ಸ್ಥಳೀಯ ಮುಖಂಡರನ್ನು ಇದಕ್ಕಾಗಿ ಪಟ್ಟಿಮಾಡಲಾಗಿದೆ.

ಈ ಸ್ಥಳೀಯ ಮುಖಂಡರಿಗೆ ಅಭ್ಯರ್ಥಿಗಳ ಆಯ್ಕೆ ಕುರಿತಂತೆ ನಿರ್ದಿಷ್ಟನಮೂನೆಯೊಂದನ್ನು ಜವಾಬ್ದಾರಿ ಹೊತ್ತಿರುವ ನಾಯಕರು ನೀಡಲಿದ್ದಾರೆ. ತಮ್ಮ ಕ್ಷೇತ್ರದಿಂದ ಇಂಥವರಿಗೆ ಟಿಕೆಟ್‌ ನೀಡುವುದು ಸೂಕ್ತ ಎಂಬುದನ್ನು ಸೂಚಿಸುವಂಥ ಗರಿಷ್ಠ ಮೂವರ ಹೆಸರುಗಳನ್ನು ಬರೆಯಬೇಕು. ಬೇಕಾದರೆ ಒಬ್ಬರ ಹೆಸರನ್ನೂ ಬರೆಯಬಹುದು. ಬಳಿಕ ಆ ನಮೂನೆಯನ್ನು ಸೀಲ್‌ ಮಾಡಿದ ಮತಪೆಟ್ಟಿಗೆಯಲ್ಲಿ ಹಾಕಬೇಕು.

ಹೀಗೆ ಸಂಗ್ರಹಗೊಂಡ ಒಂದೊಂದು ವಿಧಾನಸಭಾ ಕ್ಷೇತ್ರದ ಪೆಟ್ಟಿಗೆಗಳನ್ನು ಹೊತ್ತು ಆ ನಾಯಕರ ಸಮಿತಿಗಳು ಶುಕ್ರವಾರ ಸಂಜೆ ಅಥವಾ ಶನಿವಾರ ಬೆಳಗ್ಗೆ ಹೊತ್ತಿಗೆ ಬೆಂಗಳೂರಿನಲ್ಲಿರುವ ಬಿಜೆಪಿ ಕೇಂದ್ರ ಕಚೇರಿಗೆ ತಲುಪಿಸಬೇಕು. ಅಲ್ಲಿ ಅವುಗಳನ್ನು ನಿಗದಿಪಡಿಸಿದ ಸ್ಟ್ರಾಂಗ್‌ ರೂಂನಲ್ಲಿ ಭದ್ರವಾಗಿ ಇಡಲಾಗುತ್ತದೆ. ಬಳಿಕ ಅವುಗಳನ್ನು ರಾಜ್ಯ ಸಮಿತಿಯ ನಿಯೋಜಿತ ಪದಾಧಿಕಾರಿಗಳು ತೆರೆದು ಕ್ಷೇತ್ರವಾರು ಅಭ್ಯರ್ಥಿಗಳಾಗಲು ಸೂಚಿಸಿರುವವರ ಪಟ್ಟಿಸಿದ್ಧಪಡಿಸುತ್ತಾರೆ. ನಂತರ ಆ ಹೆಸರುಗಳ ಪಟ್ಟಿಯನ್ನು ಕೇಂದ್ರ ಘಟಕಕ್ಕೆ ರವಾನಿಸಲಾಗುತ್ತದೆ.

ಈ ಮಧ್ಯೆ ಶನಿವಾರ ಮತ್ತು ಭಾನುವಾರ ಎರಡು ದಿನ ಎಲ್ಲ ಜಿಲ್ಲೆಗಳ ಕೋರ್‌ ಕಮಿಟಿಗಳ ಸದಸ್ಯರು ಬೆಂಗಳೂರಿಗೆ ಆಗಮಿಸಲಿದ್ದಾರೆ. ಒಂದೊಂದು ಜಿಲ್ಲೆಯ ಕೋರ್‌ ಕಮಿಟಿ ಸದಸ್ಯರೊಂದಿಗೆ ಪ್ರತ್ಯೇಕವಾಗಿ ರಾಜ್ಯ ಘಟಕದ ಪ್ರಮುಖರು ಜಿಲ್ಲಾವಾರು ಸಮಾಲೋಚನೆ ನಡೆಸಿ ಅಭ್ಯರ್ಥಿಗಳ ಆಯ್ಕೆಗೆ ಸಂಬಂಧಿಸಿದಂತೆ ಸ್ಥಳೀಯ ಮುಖಂಡರು ಸೂಚಿಸಿದ ಹೆಸರುಗಳನ್ನೂ ಮುಂದಿಟ್ಟುಕೊಂಡು ಪರ ವಿರೋಧದ ಅಭಿಪ್ರಾಯ ಸಂಗ್ರಹಿಸಲಿದ್ದಾರೆ. ಆ ಮಾಹಿತಿಯೂ ಕೇಂದ್ರ ಘಟಕಕ್ಕೆ ರವಾನೆಯಾಗುತ್ತದೆ.

ವಿಜಯ ಸಂಕಲ್ಪ ಯಾತ್ರೆಗೆ ಸಿಕ್ಕ ಬೆಂಬಲ ನೋಡಿ ಕಾಂಗ್ರೆಸ್‌ ದಿಗ್ಭ್ರಾಂತ: ಬಿ.ಎಸ್‌.ಯಡಿಯೂರಪ್ಪ

ಇದಾದ ಬಳಿಕ ಏ.3 ಅಥವಾ 4ರಂದು ರಾಜ್ಯ ಘಟಕದ ಹಿರಿಯ ನಾಯಕರನ್ನು ಒಳಗೊಂಡ ಕೋರ್‌ ಕಮಿಟಿ ಸಭೆ ನಡೆದು ವಿಸ್ತೃತವಾಗಿ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಚರ್ಚೆಯ ಎಲ್ಲ ಅಂಶಗಳನ್ನು ಪಟ್ಟಿಮಾಡಿ ಕೇಂದ್ರ ಘಟಕಕ್ಕೆ ಕಳುಹಿಸಿಕೊಡಲಾಗುತ್ತದೆ. ಅಂತಿಮ ಹಂತವಾಗಿ ಈ ಎಲ್ಲ ಮಾಹಿತಿಯ ವಿವರಗಳನ್ನು ಮುಂದಿಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಒಳಗೊಂಡಂತೆ ರಾಷ್ಟ್ರೀಯ ಘಟಕದ ಹಿರಿಯ ನಾಯಕರನ್ನು ಒಳಗೊಂಡ ಕೇಂದ್ರ ಸಂಸದೀಯ ಮಂಡಳಿ ಸಭೆ ಸೇರಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಿದೆ ಎಂದು ತಿಳಿದು ಬಂದಿದೆ.

4 ಹಂತಗಳು ಏನು?

1. ರಾಜ್ಯದ ಎಲ್ಲ 224 ಕ್ಷೇತ್ರಗಳಲ್ಲಿ ಸ್ಥಳೀಯ ಪದಾಧಿಕಾರಿಗಳು, ಮುಖಂಡರಿಂದ ತಲಾ 3 ಅಭ್ಯರ್ಥಿಗಳಿಗೆ ಮತದಾನ
2. ಬಳಿಕ ಎರಡು ದಿನ ಬೆಂಗಳೂರಿನಲ್ಲಿ ಜಿಲ್ಲಾ ಕೋರ್‌ ಕಮಿಟಿ ಸದಸ್ಯರಿಂದ ರಾಜ್ಯ ಪ್ರಮುಖರಿಗೆ ಅಭಿಪ್ರಾಯ ಸಲ್ಲಿಕೆ
3. ನಂತರ ಬೆಂಗಳೂರಿನಲ್ಲಿ ರಾಜ್ಯ ಕೋರ್‌ ಕಮಿಟಿ ಸಭೆ ನಡೆಸಿ ಅಭ್ಯರ್ಥಿಗಳ ಬಗ್ಗೆ ಬಹುತೇಕ ಅಂತಿಮ ನಿರ್ಧಾರ
4. ಕೊನೆಗೆ ದೆಹಲಿಯಲ್ಲಿ ಬಿಜೆಪಿ ಕೇಂದ್ರ ಸಂಸದೀಯ ಮಂಡಳಿ ಸಭೆಯಲ್ಲಿ ಚರ್ಚಿಸಿ ಅಭ್ಯರ್ಥಿಗಳ ಪಟ್ಟಿ ಅಂತಿಮ

ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

Follow Us:
Download App:
  • android
  • ios