ನವದೆಹಲಿ(ಜ.06): ಸುಳ್ಳಿನ ರಾಜಕಾರಣವನ್ನು ಜನರು ತಳ್ಳಿ ಹಾಕುತ್ತಿದ್ದಾರೆ, ಇದರಿಂದ ಮತದಾರರು ದೂರ ಸರಿಯುತ್ತಿದ್ದಾರೆ. ಇದಕ್ಕೆ ಕರ್ನಾಟಕದಲ್ಲಿ ನಡೆದ ಚುನಾವಣೆಯೇ ಸೂಕ್ತ ಉದಾಹರಣೆ ಎಂದು ಬಿಜೆಪಿ ವಕ್ತಾರ ಹಾಗೂ ರಾಜ್ಯಸಭೆ ಸಂಸದ ರಾಜೀವ್ ಚಂದ್ರಶೇಖರ್ ತಿಳಿಸಿದ್ದಾರೆ.

ನವದೆಹಲಿಯ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ರಾಜೀವ್ ಚಂದ್ರಶೇಖರ್ 'ಸುಳ್ಳಿನ ರಾಜನೀತಿಯನ್ನು ಕರ್ನಾಟಕ ಮತದಾರರು ತಿಸ್ಕರಿಸಿದ್ದಾರೆ. ಕರ್ನಾಟಕ ಚುನಾವಣೆಗಳು ಇದಕ್ಕೆ ಸೂಕ್ತ ಉದಾಹರಣೆಯಾಗಿವೆ. 2019ರಲ್ಲಿ ಮೋದಿಯವರಿಗೆ ಶೇ 51.38, ಮತ ನೀಡಿದ್ದಾರೆ, 26 ಲೋಕಸಭಾ ಕ್ಷೇತ್ರಗಳನ್ನು ಗೆಲ್ಲಿಸಿದ್ದಾರೆ. ಹೀಗಿದ್ದರೂ ವಿಪಕ್ಷಗಳು ಮೋದಿ ಸರ್ಕಾರದ ಬಗ್ಗೆ ಇಲ್ಲಸಲ್ಲದ ಆರೋಪ ಗಳು ಮಾಡಿದ್ದವು. ಈಗ ಗ್ರಾಮ ಪಂಚಾಯ್ತಿ ಚುನಾವಣೆ ನಡೆದಿದೆ. ಅದು ಕೂಡ ಹೊಸ ಕೃಷಿ ಕಾಯ್ದೆಗಳು ಜಾರಿಗೆ ಬಂದಾಗ ನಡೆದ ಚುನಾವಣೆ ಇದು. ಇಷ್ಟಾದರೂ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಮೋದಿ ಮತ್ತು ಬಿಎಸ್ ವೈ ನಾಯಕತ್ವವನ್ನು ಒಪ್ಪಿದ್ದಾರೆ. ಶೇ 54% ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗೆಲವು ಸಾಧಿಸಿದ್ದಾರೆ. ಮತದಾರ ವಿಪಕ್ಷಗಳ ಸುಳ್ಳು ರಾಜನೀತಿಗೆ ಸೊಪ್ಪು ಹಾಕಿಲ್ಲ ಎಂದಿದ್ದಾರೆ. 

ಇದರೊಂದಿಗೆ ರೈತರ ಬೆಂಬಲದ ಕುರಿತಾಗಿಯೂ ಮಾತನಾಡಿದ ಆರ್‌ಸಿ 'ದೇಶದ ರೈತರು ಬಿಜೆಪಿಯನ್ನು ಬೆಂಬಲಿಸಿದ್ದಾರೆ. ಹೊಸ ಕೃಷಿ ಕಾಯ್ದೆಗಳು ಜಾರಿಗೆ ಬಂದಾಗ ನಡೆದ ಗ್ರಾಮ ಪಂಚಾಯತಿ ಚುನಾವಣೆಯಲ್ಲೂ ಬಿಜೆಪಿ ಗೆಲುವು ಸಾಧಿಸಿದೆ ಎಂದಿದ್ದಾರೆ. ಇನ್ನು ರಾಜ್ಯದ ಉಪ ಚುನಾವಣೆ ಗಳಲ್ಲೂ ಬಿಜೆಪಿ ಗೆಲುವು ಸಾಧಿಸಿದೆ. ಇವುಗಳು ಸಿಎಎ, ಕೋಮು ಗಲಭೆಯಂತಹ ಸನ್ನಿವೇಶಗಳಲ್ಲಿ ನಡೆದಿದೆ. ಜನರ ಈ ನಿರ್ಧಾರ ಮೋದಿ ಕಾರ್ಯಗಳನ್ನು ಜನರು ಮೆಚ್ಚಿಕೊಂಡಿರುವ ಸಂದೇಶ ರವಾನಿಸುತ್ತದೆ ಎಂದು ವಿಪಕ್ಷಗಳಿಗೆ ಛಾಟಿ ಏಟು ನೀಡಿದ್ದಾರೆ. 

ಅಲ್ಲದೇ ದೇಶದಲ್ಲಿ ಕಳೆದ ವರ್ಷ ಎರಡು ಸವಾಲುಗಳು ಎದುರಾಗಿದ್ದವು. ಇದರಲ್ಲಿ ಒಂದು ಕೊರೋನಾ ಮತ್ತೊಂದು ಸುಳ್ಳಿನ ರಾಜಕೀಯ ಹರಡುವುದು. ಸುಳ್ಳಿನ ರಾಜಕೀಯದ  ಮೂಲಕ ಜನರ ನಡುವೆ ಗುಂಪು ಸೃಷ್ಠಿಸಲಾಗುತ್ತಿದೆ. ಈಗ ಕೃಷಿ ಕಾನೂನುಗಳ ವಿಚಾರದಲ್ಲಿ  ಇದೇ ತತ್ವ ಪಾಲಿಸಲಾಗುತ್ತಿದೆ. ಆದರೆ ಈ ರಾಜಕೀಯಕ್ಕೆ ದೇಶದ ಜನರು ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದ್ದಾರೆ.