ಬಿಜೆಪಿ, ಕಾಂಗ್ರೆಸ್ಸಿಗೆ ಬಂಡಾಯದ ಬಿಸಿ..!
* ರಂಗೇರಿದ ಪಾಲಿಕೆ ಚುನಾವಣೆ
* ಟಿಕೆಟ್ ವಂಚಿತರಿಂದ ಬಂಡಾಯದ ಬಾವುಟ
* ಬಂಡಾಯದ ಬೆಂಕಿಗೆ ಕೈ ಸುಡುತ್ತಿದೆ
ಹುಬ್ಬಳ್ಳಿ(ಆ.24): ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ಚುನಾವಣೆಯ ರಂಗೇರಿದೆ. ಎರಡು ರಾಷ್ಟೀಯ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್‌ನಲ್ಲಿನ ಟಿಕೆಟ್ ವಂಚಿತರು ಬಂಡಾಯದ ಬಾವುಟ ಹಾರಿಸಿದ್ದಾರೆ. ಕಾಂಗ್ರೆಸಿನಲ್ಲಿ ಬಂಡಾಯದ ಬೆಂಕಿ ಭುಗಿಲೆದ್ದಿದೆ. ಬಿಜೆಪಿಯಲ್ಲಿ ಕಮಲದ ಹೂವು ಮುದುಡುವಂತೆ ಬಂಡಾಯದ ಬಿಸಿಯೇರಿದೆ. ಇದು ಎರಡೂ ಪಕ್ಷಗಳಿಗೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ.
ಹಳಬರಿಂದಲೇ ಬಂಡಾಯ:
ಎರಡು ಪಕ್ಷಗಳಲ್ಲೂ ಹಳಬರೇ ಪಕ್ಷದ ವಿರುದ್ಧ ಸಿಡಿದೆದಿದ್ದಾರೆ. ಕಾಂಗ್ರೆಸ್‌ನಲ್ಲಂತೂ 20-30 ವರ್ಷ ಪಕ್ಷದಲ್ಲಿ ದುಡಿದವರಿಗೆ ಟಿಕೆಟ್ ಸಿಗದ ಕಾರಣ ಬಂಡಾಯ ಎದ್ದಿದ್ದಾರೆ. ಪಾಲಿಕೆ ಮಾಜಿ ಸದಸ್ಯ ಮೋಹನ ಅಸುಂಡಿ ಈ ಸಲ ತಮ್ಮ ಪತ್ನಿ ಅಕ್ಷತಾ ಅವರಿಗೆ 82ನೆಯ ವಾರ್ಡ್‌ನಿಂದ ಟಿಕೆಟ್ ಕೇಳಿದ್ದರು. ಆದರೆ, ಪಕ್ಷದ ವರಿಷ್ಠರು ಟಿಕೆಟ್ ನಿರಾಕರಿಸಿದ್ದಾರೆ. ಈ ಕಾರಣದಿಂದ ಅವರು ಪತ್ನಿ ಅಕ್ಷತಾ ಅವರನ್ನು ಪಕ್ಷೇತರ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿದ್ದಾರೆ. ಇನ್ನು 71ನೆಯ ವಾರ್ಡ್‌ನಿಂದ ಮಾಜಿ ಸದಸ್ಯ ಗಣೇಶ ಟಗರಗುಂಟಿಗೆ ಕೊನೆವರೆಗೂ ಟಿಕೆಟ್ ದೊರೆಯುತ್ತದೆ ಎಂಬ ವಿಶ್ವಾಸವಿತ್ತು. ಜಿಲ್ಲಾಧ್ಯಕ್ಷ ಅಲ್ತಾಫ್ ಹಳ್ಳೂರು ತಮ್ಮ ಪುತ್ರನಿಗೆ ಟಿಕೆಟ್ ದಕ್ಕಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಹೀಗಾಗಿ ಗಣೇಶ ಪಕ್ಷಕ್ಕೆ ಸೆಡ್ಡು ಹೊಡೆದು ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.
30 ವರ್ಷಗಳಿಂದ ಪಕ್ಷಕ್ಕಾಗಿ ದುಡಿದ ಬಾಬಾಜಾನ ಮುಧೋಳ ಕುಟುಂಬಕ್ಕೆ 2 ಟಿಕೆಟ್ ಕೇಳಲಾಗಿತ್ತು. ಇಬ್ಬರಿಗೂ ಪಕ್ಷ ಟಿಕೆಟ್ ಕೊಡದಕಾರಣ ಇಬ್ಬರೂ ಪಕ್ಷೇತರ ಅಭ್ಯರ್ಥಿಗಳಾಗಿ ಕಣಕ್ಕಿಳಿದಿದ್ದಾರೆ. ಬಾಬಾಜಾನ ಪತ್ನಿ ತಾಹೀರಾ ಮುಧೋಳ 79ನೆಯ ವಾರ್ಡ್‌ನಿಂದ ಕಣಕ್ಕಿಳಿದರೆ, ಮಹ್ಮದಲಿ ಮುಧೋಳ ಅವರ ಪುತ್ರ ಇಮ್ರಾನ್ 53ನೆಯ ವಾರ್ಡ್‌ನಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ.
ರಂಗೇರಿದ ಪಾಲಿಕೆ ಚುನಾವಣೆ: ಅಭ್ಯರ್ಥಿಗಳ 3ನೇ ಪಟ್ಟಿ ಪ್ರಕಟಿಸಿದ ಬಿಜೆಪಿ
ಮಾಜಿ ಸದಸ್ಯರಾದ ಸುಧಾ ಮಣಿಕುಂಟ್ಲಾ, ಯಮನೂರು ಜಾಧವ ಕೂಡ ಟಿಕೆಟ್ ಸಿಕ್ಕಿಲ್ಲ. ಇವರು ಕೂಡ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಇದಲ್ಲದೇ, ರಬ್ಬಾನಿ ಪಟ್ಟವಾಲೆ, ಶಾಹೀನ ಹಾವೇರಿಪೇಟ, ಸಮೀರಖಾನ, ಸುಶೀಲ ಗುಡಿಹಾಳ, ವಿರೇಶ ಉಂಡಿ, ಚೇತನ ಹಿರೇಕೆರೂರು ಸ್ವತಂತ್ರ ಅಭ್ಯರ್ಥಿಗಳಾಗಿ ಕಣಕ್ಕಿಳಿದಿದ್ದಾರೆ. ಇನ್ನು ಕಾಂಗ್ರೆಸ್ ಟಿಕೆಟ್ ಸಿಗದ ಕಾರಣ ಮಂಜುಳಾ ಯಂಡಿಗೇರಿ ಜೆಡಿಎಸ್ ಬಿ ಫಾರಂ ಪಡೆದು ಕಣಕ್ಕಿಳಿದಿದ್ದಾರೆ. ಹೀಗೆ ಒಟ್ಟು 13 ಜನ ಕಾಂಗ್ರೆಸ್‌ನಿಂದ ಬಂಡಾಯ ಎದ್ದು ಕಣಕ್ಕಿಳಿದಿದ್ದಾರೆ.
ಬಿಜೆಪಿಯಲ್ಲಿ ನಾಲ್ವರು:
ಇನ್ನು ಬಿಜೆಪಿಯಲ್ಲೂ ಬಂಡಾಯದ ಬಿಸಿ ಕಂಡು ಬಂದಿದೆ. 2 ಬಾರಿ ಪಾಲಿಕೆ ಸದಸ್ಯೆಯಾಗಿದ ಲಕ್ಷ್ಮಿ ಉಪ್ಪಾರಗೆ ಈ ಸಲ ಟಿಕೆಟ್ ನಿರಾಕರಿಸಲಾಗಿದೆ. ಹೀಗಾಗಿ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದು ಪಕ್ಷಕ್ಕೆ ಸೆಡ್ಡು ಹೊಡೆದಿದ್ದರೆ, 2 ಬಾರಿ ಸದಸ್ಯರಾಗಿ ಲಕ್ಷ್ಮಣ ಗಂಡಗಾಳೇಕರ್ ಈ ಸಲ ತಮ್ಮ ಪತ್ನಿ ಯಶೋದಾಗೆ ಟಿಕೆಟ್ ಕೇಳಿದ್ದರು. ಆದರೆ, ಪಕ್ಷ ನಿರಾಕರಿಸಿತ್ತು. ಹೀಗಾಗಿ ರೊಚ್ಚಿಗೆದ್ದು 54ನೆಯ ವಾರ್ಡ್‌ನಿಂದ ಪಕ್ಷೇತರರಾಗಿ ಕಣಕ್ಕಿಳಿದಿದ್ದಾರೆ. ಇನ್ನು ಮಾಜಿ ಸಿಎಂ ಜಗದೀಶ ಶೆಟ್ಟರ್ ಆಪ್ತರಲ್ಲಿ ಗುರುತಿಸಿಕೊಂಡಿದ್ದ ರವಿ ನಾಯಕ ಕೂಡ 57ನೆಯ ವಾರ್ಡ್‌ಗೆ ತಮ್ಮ ಪತ್ನಿ ಕಲ್ಪನಾಗೆ ಟಿಕೆಟ್ ಬಯಸಿ ಅರ್ಜಿ ಸಲ್ಲಿಸಿದ್ದರು. ಕೊನೆಕ್ಷಣದ ವರೆಗೂ ಸಿಗುವ ಸಾಧ್ಯತೆ ಇತ್ತು. ಆದರೆ, ಟಿಕೆಟ್ ಸಿಗದ ಕಾರಣ ಅವರು ಸಹ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಧಾರವಾಡದ ಮಂಜುನಾಥ ಎಂಬುವವರು ಕೂಡ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.
ಆಕ್ರೋಶ:
ವರ್ಷಗಟ್ಟಲೇ ದುಡಿದ ಕಾರ್ಯಕರ್ತರನ್ನು ನಿರಾಕರಿಸಿದ್ದಕ್ಕೆ ಬಂಡಾಯ ಅಭ್ಯರ್ಥಿಗಳಾಗಿ ಕಣಕ್ಕಿಳಿಯುವುದು ಅನಿವಾರ್ಯವಾಗಿತ್ತು. ಈಗ ನಮ್ಮ ಶಕ್ತಿ ಏನೆಂಬುದನ್ನು ಪಕ್ಷದ ಮುಖಂಡರಿಗೆ ತೋರಿಸುತ್ತೇವೆ ಎಂದು ಬಂಡಾಯ ಎದ್ದಿರುವ ಅಭ್ಯರ್ಥಿಗಳೆಲ್ಲ ಎಚ್ಚರಿಕೆ ಸಂದೇಶವನ್ನು ಮುಖಂಡರಿಗೆ ರವಾನಿಸುತ್ತಿದ್ದರೆ, ಅತ್ತ ಮುಖಂಡರು, ಬಂಡಾಯ ಎದ್ದಿರುವ ಅಭ್ಯರ್ಥಿಗಳ ಸಮಾಧಾನ ಪಡಿಸಲು ಶ್ರಮಿಸುತ್ತಿದ್ದಾರೆ. ಇನ್ನೆರಡು ದಿನಗಳಲ್ಲಿ ಎಲ್ಲ ಬಂಡಾಯವನ್ನು ಶಮನಗೊಳಿಸುತ್ತೇವೆ ಎಂಬ ವಿಶ್ವಾಸದಲ್ಲಿ ಪ್ರಯತ್ನ ನಡೆಸುತ್ತಿದ್ದಾರೆ. ಎಷ್ಟರ ಮಟ್ಟಿಗೆ ಇದರಲ್ಲಿ ಯಶಸ್ವಿಯಾಗುತ್ತದೆ ಎಂಬುದನ್ನು ಕಾಯ್ದು ನೋಡಬೇಕಷ್ಟೇ!
ಕೊಟ್ಟು ಕಸಿದುಕೊಂಡರು!
ಇನ್ನು ಈ ಮೊದಲು ಬಿಜೆಪಿಯಲ್ಲಿ ಗುರುತಿಸಿಕೊಂಡು ಮೇಯರ್ ಕೂಡ ಆಗಿದ್ದ ವೆಂಕಟೇಶ ಮೇಸ್ತ್ರಿ ಇತ್ತೀಚಿಗೆ ಕಾಂಗ್ರೆಸ್ ಸೇರಿದ್ದರು. ಈ ಸಲ 56ನೆಯ ವಾರ್ಡ್‌ಗೆ ಅವರ ಪತ್ನಿ ಚಂದ್ರಿಕಾ ಮೇಸ್ತ್ರಿಗೆ ಟಿಕೆಟ್ ಕೇಳಿದ್ದರು. ಕಾಂಗ್ರೆಸ್ ಕೂಡ ಅವರಿಗೆ ಬಿ ಫಾರಂ ಕೊಟ್ಟಿತ್ತು. ಆದರೆ, ಅಷ್ಟರೊಳಗೆ ಈ ವಾರ್ಡ್‌ನ ಸಿ ಫಾರಂನ್ನು ಕಾಂಗ್ರೆಸ್ ಪಕ್ಷದ ಮೂಲ ಕಾರ್ಯಕರ್ತ ಸಂತೋಷ ಜಕ್ಕಪ್ಪನವರ ಪತ್ನಿ ಡಾ. ಅಂಬ್ರಪಾಲಿ ಅವರಿಗೆ ನೀಡಿದೆ. ಹೀಗಾಗಿ ಬಿ ಫಾರಂನಿಂದ ಚಂದ್ರಿಕಾ ಮೇಸ್ತ್ರಿ ನಾಮಪತ್ರ ಸಲ್ಲಿಸಿದರೆ, ಸಿ ಫಾರಂನಿಂದ ಡಾ. ಅಂಬ್ರಪಾಲಿ ಉಮೇದುವಾರಿಕೆ ಸಲ್ಲಿಸಿದ್ದಾರೆ. ಹೀಗಾಗಿ ಚಂದ್ರಿಕಾ ಮೇಸ್ತ್ರಿ ಪಕ್ಷೇತರ ಅಭ್ಯರ್ಥಿಯಾಗಿ ಕಣದಲ್ಲಿ ಉಳಿದಂತಾಗಿದೆ.
ಕಾಂಗ್ರೆಸ್:
ಅಕ್ಷತಾ ಅಸುಂಡಿ
ಗಣೇಶ ಟಗರಗುಂಟಿ
ಚಂದ್ರಿಕಾ ಮೇಸ್ತ್ರಿ
ಚೇತನ ಹಿರೇಕೆರೂರು
ಯಮನೂರು ಜಾಧವ
ಬಿಜೆಪಿ:
ಲಕ್ಷ್ಮಿ ಉಪ್ಪಾರ
ಯಶೋಧಾ ಗಂಡಗಾಳೇಕರ್
ಕಲ್ಪನಾ ರವಿನಾಯಕ