Asianet Suvarna News Asianet Suvarna News

ಭಾರತ, ಕರ್ನಾಟಕದ ಅಭಿವೃದ್ಧಿಗಾಗಿ ಬಿಜೆಪಿಗೆ ಮತ ನೀಡಿ: ಅಣ್ಣಾಮಲೈ

ಮುಂಬರುವ ವಿಧಾನಸಭಾ ಚುನಾವಣೆಗೆ ಭರ್ಜರಿ ಪ್ರಚಾರ ಕೈಗೊಂಡಿರುವ ಬಿಜೆಪಿ ಭಾನುವಾರ, ಮೈಸೂರು, ಕನಕಪುರ, ಕಲಬುರಗಿ, ಗೋಕಾಕಗಳಲ್ಲಿ ವಿಜಯ ಸಂಕಲ್ಪ ಯಾತ್ರೆ ನಡೆಸಿತು. 

Vote for BJP for the development of India and Karnataka Says K Annamalai gvd
Author
First Published Mar 6, 2023, 2:20 AM IST

ಬೆಂಗಳೂರು (ಮಾ.06): ಮುಂಬರುವ ವಿಧಾನಸಭಾ ಚುನಾವಣೆಗೆ ಭರ್ಜರಿ ಪ್ರಚಾರ ಕೈಗೊಂಡಿರುವ ಬಿಜೆಪಿ ಭಾನುವಾರ, ಮೈಸೂರು, ಕನಕಪುರ, ಕಲಬುರಗಿ, ಗೋಕಾಕಗಳಲ್ಲಿ ವಿಜಯ ಸಂಕಲ್ಪ ಯಾತ್ರೆ ನಡೆಸಿತು. ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದ ಯಾತ್ರೆ ಉದ್ಘಾಟಿಸಿ ಮಾತನಾಡಿದ ಬಿಜೆಪಿಯ ರಾಜ್ಯ ಚುನಾವಣಾ ಸಹ ಉಸ್ತುವಾರಿ ಅಣ್ಣಾಮಲೈ, ಕುಟುಂಬ ಮೊದಲು, ದೇಶ ನಂತರ ಎನ್ನುವವರಿಗೆ ಈ ಚುನಾವಣೆಯಲ್ಲಿ ಉತ್ತರ ಕೊಡಿ. ಭಾರತ, ಕರ್ನಾಟಕದ ಅಭಿವೃದ್ಧಿಗಾಗಿ ಬಿಜೆಪಿಗೆ ಮತ ನೀಡಿ. ನಿಮ್ಮ ಒಂದು ಮತದಿಂದ ಪ್ರಧಾನಿ ಅವರು ಚೀನಾ ಮತ್ತು ಪಾಕಿಸ್ತಾನಕ್ಕೆ ಉತ್ತರ ಕೊಡುತ್ತಾರೆ ಎಂದು ಹೇಳಿದರು. 

ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ, ಬಿ.ವೈ.ರಾಘವೇಂದ್ರ, ಸಂಸದ ಪ್ರತಾಪ ಸಿಂಹ ಹಾಗೂ ಇತರ ನಾಯಕರು ಉಪಸ್ಥಿತರಿದ್ದರು. ಇದಕ್ಕೂ ಮೊದಲು ಕಾಂಗ್ರೆಸ್‌ನ ಭದ್ರಕೋಟೆ ನರಸಿಂಹರಾಜ ವಿಧಾನಸಭಾ ಕ್ಷೇತ್ರವ್ಯಾಪ್ತಿಯ ನಾಯ್ಡು ನಗರದ ಪ್ರಸನ್ನ ಗಣಪತಿ ದೇವಸ್ಥಾನ ಆವರಣದಲ್ಲಿ ದೇವರಿಗೆ ಪೂಜೆ ಸಲ್ಲಿಸಿ, ಬೃಹತ್‌ ರೋಡ್‌ ಶೋ ನಡೆಸಿದರು. ಇದೇ ವೇಳೆ, ಕ​ಲ​ಬು​ರ​ಗಿ​ ಹಾಗೂ ಚಿಂಚೋಳಿಗಳಲ್ಲಿ ನಡೆದ ಯಾತ್ರೆಗಳಲ್ಲಿ ಪಾಲ್ಗೊಂಡು ಮಾತನಾಡಿದ ಮಾಜಿ ಸಿಎಂ ಜಗದೀಶ ಶೆಟ್ಟರ್‌, ರಾಜ್ಯದಲ್ಲಿ ಕಾಂಗ್ರೆಸ್‌ ಜಗಳದಲ್ಲಿ ಮುಳುಗಿದೆ. ಕೇಂದ್ರ, ರಾಜ್ಯದ ಸಾಧನೆಗಳು ಜನರನ್ನು ಸೆಳೆಯುತ್ತಿವೆ. ಹೀಗಾಗಿ, 2023ರಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದರು. 

ಧರ್ಮದ ಹೆಸರಲ್ಲಿ ಹಿಂಸೆ, ಭಯೋತ್ಪಾದನೆ: ಸಿಎಂ ಬೊಮ್ಮಾಯಿ ಆತಂಕ

ಸಚಿವ ಶ್ರೀರಾಮುಲು, ಕೇಂದ್ರ ಸಚಿವ ಭಗವಂತ ಖುಬಾ, ಸಂಸದ ಡಾ. ಉಮೇಶ ಜಾಧವ್‌, ಮಾಜಿ ಸಚಿವ ಬಾಬುರಾವ ಚಿಂಚನಸೂರ, ಕೇಂದ್ರ ಸಚಿವೆ ಶೋಭಾ ಕರಂದಾಜ್ಲೆ ಹಾಗೂ ಇತರ ನಾಯಕರು ಪಾಲ್ಗೊಂಡಿದ್ದರು. ಇದೇ ವೇಳೆ, ಕನಕಪುರದಲ್ಲಿ ಸಚಿವ ಆರ್‌.ಅಶೋಕ್‌ ನೇತೃತ್ವದಲ್ಲಿ ಯಾತ್ರೆ ನಡೆಯಿತು. ಅಶೋಕ್‌ ಮಾತನಾಡಿ, ಮನಮೋಹನ್‌ ಸಿಂಗ್‌ ಪ್ರಧಾನಿಯಾಗಿದ್ದಾಗ ಪಾಕಿಸ್ತಾನದವರು ಹುಲಿಗಳ ತರಹ ಬರುತ್ತಿದ್ದರು. ಈಗ ಮೋದಿಯವರು ಪಾಕಿಸ್ತಾನವನ್ನು ಚೈನ್‌ ಹಾಕಿ ಕಟ್ಟಿಹಾಕಿದ್ದಾರೆ. ಮೋದಿ ಬಂದ ಮೇಲೆ ಪಾಕಿಸ್ತಾನದ ಸ್ಥಿತಿ ಏನಾಗಿದೆ ಎಂಬುದು ಎಲ್ಲರಿಗೂ ಗೊತ್ತು ಎಂದರು. ಇದೇ ವೇಳೆ, ಗೋಕಾಕದಲ್ಲಿ ಸಚಿವ ಕಾರಜೋಳ, ರಮೇಶ ಜಾರಕಿಹೊಳಿ ನೇತೃತ್ವದಲ್ಲಿ ಯಾತ್ರೆ ನಡೆಯಿತು.

ವಿಜಯ ಸಂಕಲ್ಪ ಯಾತ್ರೆಯಲ್ಲಿ ಅಣ್ಣಾಮೈಲೆ ಭಾಗಿ: ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಆಯೋಜಿಸಿರುವ ವಿಜಯ ಸಂಕಲ್ಪ ಯಾತ್ರೆ ಭಾನುವಾರ ಮೈಸೂರಿನಲ್ಲಿ ಮೊಳಗಿತು. ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ವಿಜಯ ಸಂಕಲ್ಪ ಯಾತ್ರೆ ಕಾರ್ಯಕ್ರಮದಲ್ಲಿ ಪಕ್ಷದ ನಾಯಕರು ತಮ್ಮ ಕಾರ್ಯಸಾಧನೆಯನ್ನು ಜನರಿಗೆ ಮನವರಿಕೆ ಮಾಡಿಕೊಟ್ಟರು. ಜೊತೆಗೆ ವಿಪಕ್ಷಗಳ ವಿರುದ್ಧ ಹರಿಹಾಯ್ದರು.

ಅಭಿವೃದ್ಧಿ ಮೂಲಕ ಮತಬ್ಯಾಂಕ್‌ ಒಡೆದ ಮೋದಿ: ಜಾತಿ ಮೂಲಕ ಮತ ಬ್ಯಾಂಕ್‌ ಗಟ್ಟಿಮಾಡಿಕೊಳ್ಳುವ ಪ್ರಯತ್ನ ಮಾಡಿದರು. ಅದನ್ನು ಅಭಿವೃದ್ಧಿ ಮೂಲಕ ಮೋದಿ ಒಡೆದು ಹಾಕಿದ್ದಾರೆ. ಆಸ್ಪತ್ರೆಗಾಗಿ ಜನರು ಖರ್ಚು ಮಾಡುವುದು ಹೆಚ್ಚಾಗಿತ್ತು. ಅದಕ್ಕಾಗಿ ಆಯುಷ್ಮಾನ್‌ ಯೋಜನೆ ಜಾರಿಗೊಳಿಸಿದರು. ಈ ಯೋಜನೆಯಡಿ 34 ಲಕ್ಷ ಜನ ಫಲಾನುಭವಿಗಳಿದ್ದಾರೆ. 2 ಕೋಟಿ ಎಲ್‌ಇಡಿ ಬಲ್ಬ, 54 ಲಕ್ಷ ಮಂದಿ ಕೃಷಿ ಯೋಜನೆ ಲಾಭ ಪಡೆದಿದ್ದಾರೆ. ಎಲ್ಲಾ ರಾಜ್ಯಗಳಲ್ಲಿ ಇಂದು ಬಿಜೆಪಿ ಬರುತ್ತಿದೆ. ಕರೋನಾ ನಂತರ ದೊಡ್ಡ ಚುನಾವಣೆ ಎದುರಾಗಿದೆ. 

ಏಪ್ರಿಲ್‌ ಅಥವಾ ಮೇನಲ್ಲಿ ಚುನಾವಣೆ ಆಗಬಹುದು. ತಾವು ಬಿಜೆಪಿಯನ್ನು ಬೆಂಬಲಿಸಿ ಎಂದು ಅವರು ಮನವಿ ಮಾಡಿದರು. ಕಾಂಗ್ರೆಸ್‌ ನಿಂದ ಸುಳ್ಳು ಪ್ರಚಾರ ಮಾಡಲಾಗುತ್ತಿದೆ. ಹೆಣ್ಣು ಮಕ್ಕಳಿಗೆ . 2 ಸಾವಿರ ಕೊಡುತ್ತೇವೆ ಎಂದರು. ಆದರೆ, ಯಾರಿಗೂ ಕೊಟ್ಟಿಲ್ಲ. ಡಿ.ಕೆ. ಶಿವಕುಮಾರ್‌ ಮತ್ತು ಸಿದ್ದರಾಮಯ್ಯ ಅವರ ಮನೆಯಲ್ಲಿ ನೋಟು ಪ್ರಿಂಟ್‌ ಮಾಡುತ್ತಾರಾ? ಇದೆಲ್ಲ ಮೋಸದ ಮಾತುಗಳು, ನಂಬಬೇಡಿ. ಅಧಿಕಾರಕ್ಕೆ ಬಂದರೆ ಹಳೇಯ ಪೆನ್ಷನ್‌ ಸ್ಕೀಮ್‌ ತರುತ್ತೇವೆ ಎಂದಿದ್ದಾರೆ. ಆದರೆ, ಆ ಕೆಲಸ ಅವರು ಮಾಡುವುದಿಲ್ಲ ಎಂದರು.

ಸುಳ್ಳೇ ಬಿಜೆಪಿಯ ಮನೆ ದೇವರು: ಬಿ.ಕೆ.ಹರಿಪ್ರಸಾದ್‌ ವಾಗ್ದಾಳಿ

ಸದ್ಯದಲ್ಲೇ ಬೃಹತ್‌ ಮೈಸೂರು ನಗರ: ಸಂಸದ ಪ್ರತಾಪ ಸಿಂಹ ಮಾತನಾಡಿ, ಮೈಸೂರು ನಗರವು ಸದ್ಯದಲ್ಲೇ ಬೃಹತ್‌ ಮೈಸೂರು ನಗರಪಾಲಿಕೆ ಆಗಲಿದೆ. ನಾಲ್ಕು ಪಟ್ಟಣ ಪಂಚಾಯಿತಿ ಮತ್ತು ಒಂದು ನಗರಸಭೆ ನಿರ್ಮಿಸಲಾಗಿದೆ ಎಂದರು. ನಮ್ಮ ಸರ್ಕಾರ ಮಾಡಿದ ಕೆಲಸಗಳ ಬಗ್ಗೆ ಮನೆ ಮನೆಗೆ ಹೋಗಿ ಮನವರಿಕೆ ಮಾಡಿಕೊಡಿ. ಕೆ.ಆರ್‌. ಕ್ಷೇತ್ರ, ಚಾಮರಾಜ ಜೊತೆ ಎನ್‌.ಆರ್‌. ಕ್ಷೇತ್ರ ಕೂಡ ನಮ್ಮದಾಗಬೇಕು. ಎರಡು ನದಿಗಳಿಂದ ಕುಡಿಯುವ ನೀರು ಬರುತ್ತಿದ್ದರೆ ಅದಕ್ಕೆ ಪ್ರಧಾನ ಮಂತ್ರಿ ಅವರ ಅಮೃತ ಯೋಜನೆ ಕಾರಣ. ಸ್ವಚ್ಛ ಭಾರತ ಮಿಷನ್‌ನಿಂದ ಮೈಸೂರು ಸ್ವಚ್ಛಗೊಂಡಿದೆ. ಮೈಸೂರು- ಬೆಂಗಳೂರು ಹೆದ್ದಾರಿ ಮಾಡಿರುವುದು ನಮ್ಮ ಸರ್ಕಾರವೇ ಎಂದು ಅವರು ಹೇಳಿದರು.

ಮಂಡ್ಯದಲ್ಲಿ ಬಿಜೆಪಿ ಬಾವುಟ ಹಾರಿಸಬೇಕು. ಅದಕ್ಕಾಗಿ ಪ್ರಧಾನಿ ಬರುತ್ತಿದ್ದಾರೆ. ಮೈಸೂರಿನಲ್ಲಿ ರಿಂಗ್‌ ರಸ್ತೆ ಅಭಿವೃದ್ಧಿಪಡಿಸಿದ್ದು ನಮ್ಮ ಸರ್ಕಾರ. ಹಳೆ ಉಂಡುವಾಡಿ ಯೋಜನೆಗೆ ಕಾರಣ ಪ್ರಧಾನ ಮಂತ್ರಿ ಅವರ ಜಲಜೀವನ ಮಿಷನ್‌ ಹಾಗೂ ಬೊಮ್ಮಾಯಿ ಅವರು ನೀಡಿದ ಆರ್ಥಿಕ ನೆರವು ಕಾರಣ ಎಂದರು. ಶಾಸಕರಾದ ಎಸ್‌.ಎ. ರಾಮದಾಸ್‌ ಹಾಗೂ ಎಲ್‌. ನಾಗೇಂದ್ರ ಅವರ ಕ್ಷೇತ್ರದಲ್ಲಿ ಅಭಿವೃದ್ಧಿ ನಡೆಯುತ್ತಿದೆ. ಸ್ವನಿಧಿ ಯೋಜನೆ ರಾಮದಾಸ್‌ ಅವರ ಕ್ಷೇತ್ರದಲ್ಲಿ 18,000 ಜನರಿಗೆ ದೊರಕಿದೆ ಎಂದು ಅವರು ಹೇಳಿದರು.

Follow Us:
Download App:
  • android
  • ios