ಬೆಂಗಳೂರು [ಡಿ.10]:  ಉಪಚುನಾವಣೆಯಲ್ಲಿ ಸೋಲು ಅನುಭವಿಸಿರುವ ಹುಣಸೂರು ಕ್ಷೇತ್ರದ ಎಚ್‌.ವಿಶ್ವನಾಥ್‌ ಮತ್ತು ಹೊಸಕೋಟೆ ಕ್ಷೇತ್ರದ ಎಂ.ಟಿ.ಬಿ.ನಾಗರಾಜ್‌ ಅವರನ್ನು ಮುಂದಿನ ದಿನಗಳಲ್ಲಿ ಅವರನ್ನು ವಿಧಾನಪರಿಷತ್‌ ಸದಸ್ಯರನ್ನಾಗಿಸಿ ಸಚಿವ ಹುದ್ದೆ ನೀಡುವ ಸಾಧ್ಯತೆಯಿದೆ.

ವಿಶ್ವನಾಥ್‌ ಮತ್ತು ನಾಗರಾಜ್‌ ಅವರಿಬ್ಬರೂ ಹಿರಿಯರಾಗಿರುವುದರಿಂದ ಅವರಿಗೆ ಉನ್ನತ ಸ್ಥಾನ ನೀಡುವ ಬಗ್ಗೆ ಸ್ವತಃ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರೇ ಒಲವು ಹೊಂದಿದ್ದಾರೆ ಎಂದು ತಿಳಿದು ಬಂದಿದೆ.

ವಿಶ್ವನಾಥ್‌ ಅವರು ಜೆಡಿಎಸ್‌ನ ರಾಜ್ಯಾಧ್ಯಕ್ಷರಾಗಿದ್ದರು. ಆ ಸ್ಥಾನದ ಜೊತೆಗೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಲ್ಲದೆ ಇತರ ಕೆಲವು ಶಾಸಕರನ್ನು ಮನವೊಲಿಸುವಲ್ಲೂ ಪ್ರಮುಖ ಪಾತ್ರ ವಹಿಸಿದ್ದರು. ಇನ್ನು ಎಂ.ಟಿ.ಬಿ.ನಾಗರಾಜ್‌ ಅವರು ಸಚಿವ ಸ್ಥಾನ ತೊರೆದು ಹೊರಬಂದಿದ್ದರು.

ವಿಶ್ವನಾಥ್ ವರಿ ಮಾಡ್ಬೇಡ ಎಂದ್ರು ಸಿಎಂ, ಸೋಲಿನ ಬಗ್ಗೆ ಹಳ್ಳಿಹಕ್ಕಿ ಮಾತು..!

ಸುಪ್ರೀಂಕೋರ್ಟ್‌ ಅವರ ಅನರ್ಹತೆ ಕುರಿತ ವಿಧಾನಸಭೆಯ ಸ್ಪೀಕರ್‌ ತೀರ್ಪನ್ನು ಎತ್ತಿ ಹಿಡಿದಿರುವುದರಿಂದ ವಿಧಾನಮಂಡಲದ ಯಾವುದಾದರೊಂದು ಸದನಕ್ಕೆ ಆಯ್ಕೆಯಾಗದ ಹೊರತು ಅಧಿಕಾರಯುತ ಸ್ಥಾನ ಅಲಂಕರಿಸುವಂತಿಲ್ಲ. ಹೀಗಾಗಿ, ಮುಂದಿನ ದಿನಗಳಲ್ಲಿ ವಿಧಾನಪರಿಷತ್‌ ಸದಸ್ಯರನ್ನಾಗಿ ಚುನಾಯಿಸಿ ನಂತರ ಸಚಿವ ಸ್ಥಾನ ನೀಡುವ ಬಗ್ಗೆ ಯಡಿಯೂರಪ್ಪ ಅವರು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ಸೋಮವಾರ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಯಡಿಯೂರಪ್ಪ, ಸೋತವರಿಗೆ ಪ್ರಮುಖ ಸ್ಥಾನ ನೀಡುವ ಸಂಬಂಧ ಪಕ್ಷದ ವರಿಷ್ಠರೊಂದಿಗೆ ಚರ್ಚಿಸಿ ನಿರ್ಧರಿಸಲಾಗುವುದು ಎಂದು ತಿಳಿಸಿದರು.