ದೇಶದ ಜನರಿಗೆ ಮೋದಿ ಮೇಲೆ ವಿಶ್ವಾಸ ಹೆಚ್ಚಿದೆ : ಮತ್ತೊಮ್ಮೆ ಪ್ರಧಾನಿ ಖಚಿತ: ಕೃಷ್ಣಪಾಲ್ ಗುರ್ಜರ್
ದೇಶ ಮಾತ್ರವಲ್ಲದೇ ವಿಶ್ವಾದ್ಯಂತ ಪ್ರಧಾನಿ ನರೇಂದ್ರ ಮೋದಿಯವರ ಮೇಲಿನ ವಿಶ್ವಾಸ ವೃದ್ಧಿಸುತ್ತಿದೆ. 2024ರಲ್ಲಿ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದ್ದು, ಪ್ರಧಾನಿಯಾಗಿ ಮೂರನೇ ಬಾರಿ ಮೋದಿ ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ಕೇಂದ್ರ ಸರ್ಕಾರದ ಇಂಧನ ಹಾಗೂ ಭಾರಿ ಕೈಗಾರಿಕೆ ರಾಜ್ಯ ಖಾತೆ ಸಚಿವ ಕೃಷ್ಣ ಪಾಲ್ ಗುರ್ಜರ್ ವಿಶ್ವಾಸ ವ್ಯಕ್ತಪಡಿಸಿದರು.
ಚನ್ನಪಟ್ಟಣ (ಡಿ.17) : ದೇಶ ಮಾತ್ರವಲ್ಲದೇ ವಿಶ್ವಾದ್ಯಂತ ಪ್ರಧಾನಿ ನರೇಂದ್ರ ಮೋದಿಯವರ ಮೇಲಿನ ವಿಶ್ವಾಸ ವೃದ್ಧಿಸುತ್ತಿದೆ. 2024ರಲ್ಲಿ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದ್ದು, ಪ್ರಧಾನಿಯಾಗಿ ಮೂರನೇ ಬಾರಿ ಮೋದಿ ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ಕೇಂದ್ರ ಸರ್ಕಾರದ ಇಂಧನ ಹಾಗೂ ಭಾರಿ ಕೈಗಾರಿಕೆ ರಾಜ್ಯ ಖಾತೆ ಸಚಿವ ಕೃಷ್ಣ ಪಾಲ್ ಗುರ್ಜರ್ ವಿಶ್ವಾಸ ವ್ಯಕ್ತಪಡಿಸಿದರು.
ವಿಕಸಿತ ಭಾರತ ಸಂಕಲ್ಪ ಯಾತ್ರೆಗೆ ಚಾಲನೆ ನೀಡಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ದೇಶ ಆರ್ಥಿಕವಾಗಿ ಸದೃಢವಾಗಿದ್ದು, ದೇಶವನ್ನು ಸಾಂಸ್ಕೃತಿಕ ನಲೆಗಟ್ಟಿನಲ್ಲೂ ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಸಾಕಷ್ಟು ಶ್ರಮಿಸಿದೆ ಎಂದು ತಿಳಿಸಿದರು.
ಚಿಕ್ಕಮಗಳೂರು: ಕೇಂದ್ರದ ವಿಕಸಿತ ಭಾರತ ಸಂಕಲ್ಪ ಯಾತ್ರೆ ಯಶಸ್ಸಿಗೆ ರಾಜ್ಯ ಸರ್ಕಾರದಿಂದ ತೊಡಕು
ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ಮೋದಿಯವರ ಮೇಲಿನ ಜನರ ವಿಶ್ವಾಸ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಮೂರನೇ ಬಾರಿಯೂ ದೇಶದ ಅಧಿಕಾರ ಚುಕ್ಕಾಣಿಯನ್ನು ಬಹುಮತದಿಂದ ಮೋದಿಯವರ ಕೈಗೆ ನೀಡಲು ದೇಶದ ಜನ ನಿರ್ಧರಿಸಿದ್ದಾರೆ. ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕಲ್ಲಿ ಹೊಸ ಇತಿಹಾಸ ನಿರ್ಮಾಣವಾಗಲಿದ್ದು, ರಾಜ್ಯದ ಎಲ್ಲ ಲೋಕಸಭೆ ಕ್ಷೇತ್ರಗಳು ಮೋದಿಯವರ ಜೋಳಿಗೆಗೆ ಬಂದು ಬೀಳಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬೆಂಗಳೂರು ಗ್ರಾಮಾಂತರದಲ್ಲಿ ಮೈತ್ರಿ ಪಕ್ಷದ ಅಭ್ಯರ್ಥಿ ಯಾರಾಗಲಿದ್ದಾರೆ ಎಂಬ ಪ್ರಶ್ನೆಗೆ, ಎಲ್ಲಿ ಯಾರ ಜತೆ ಮೈತ್ರಿ ಮಾಡಿಕೊಳ್ಳಬೇಕು, ಮಾಡಕೊಳ್ಳಬಾರದು. ಎಲ್ಲಿ ಮೈತ್ರಿ ಪಕ್ಷದ ಅಭ್ಯರ್ಥಿ ಸ್ಪರ್ಧಿಸಬೇಕು ನಮ್ಮ ಪಕ್ಷದ ಅಭ್ಯರ್ಥಿ ಸ್ಪರ್ಧಿಸಬೇಕು ಎಂಬುದರ ಕುರಿತು ಪಕ್ಷದ ಕೇಂದ್ರ ಚುನಾವಣಾ ಸಮಿತಿ ನಿರ್ಧರಿಸಲಿದೆ ಎಂದು ಉತ್ತರಿಸಿದರು.
ವಿಕಸಿತ ಭಾರತ ಸಂಕಲ್ಪ ಯಾತ್ರೆ:
ಬುಡಕಟ್ಟು ಜನಾಂಗದ ನಾಯಕ ಬಿರ್ಸಾ ಮುಂಡ ಜನ್ಮದಿನದ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ವಿಕಸಿತ ಭಾರತ ಸಂಕಲ್ಪ ಯಾತ್ರೆ ಚಾಲನೆ ನೀಡಿದ್ದು, ಮೋದಿ ಗ್ಯಾರಂಟಿ ವಾಹನ ಜ.25ರವರೆಗೆ ದೇಶಾದ್ಯಂತ ಸಂಚರಿಸಲಿದೆ. ಮೋದಿ ಸರ್ಕಾರದ ಜನಕಲ್ಯಾಣ ಯೋಜನೆಗಳು ಅರ್ಹ ಫಲಾನುಭವಿಗಳೀಗೆ ಶೇ.100ರಷ್ಟು ತಲುಪಿಸಬೇಕು ಎಂಬ ಉದ್ದೇಶದಿಂದ ವಿಕಸಿತ ಭಾರತ ಸಂಕಲ್ಪ ಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಈ ಯಾತ್ರೆ ಪ್ರತಿ ಗ್ರಾಮ ಹಾಗೂ ನಗರ ಪ್ರದೇಶದಲ್ಲಿ ಸಂಚರಿಸಲಿದ್ದು, ಮಳಿಗೆಗಳನ್ನು ಹಾಕಿ ಜನರಿಗೆ ಯೋಜನೆಗಳು ಅರಿವು ಮೂಡಿಸಲಾಗುವುದು. ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳದ ಅರ್ಹ ಫಲಾನುಭವಿಗಳಿಗೆ ಸ್ಥಳದಲ್ಲೇ ಯೋಜನೆ ತಲುಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ದೇಶದ ಕಟ್ಟಕಡೆಯ ವ್ಯಕ್ತಿಯನ್ನು ಸಶಕ್ತನಾಗಿ, ಸದೃಢನಾಗಿ ಸಮಾಜದ ಮುಖ್ಯವಾಹಿನಿಗೆ ತರಬೇಕೆಂಬುದು ಪ್ರಧಾನಿ ನರೇಂದ್ರ ಮೋದಿಯವರ ಆಶಯವಾಗಿದೆ. ಕೇಂದ್ರ ಸರ್ಕಾರದ ಈ ಯೋಜನೆಯನ್ನು ಸಮರ್ಪಕವಾಗಿ ಬಳಸಿಕೊಂಡು ವಿಕಸಿತ ಭಾರತ ನಿರ್ಮಾಣಕ್ಕೆ ದೇಶದ ಪ್ರತಿ ಪ್ರಜೆಯೂ ತನ್ನ ಕೊಡುಗೆ ನೀಡಲಿ ಎಂಬುದು ಅವರ ಧ್ಯೇಯೋದ್ದೇಶವಾಗಿದೆ ಎಂದು ವಿವರಿಸಿದರು.
ಎಲ್ಲೆಡೆ ಸಂಚಾರ:
ಕೇಂದ್ರ ಸರ್ಕಾರದ ಮುದ್ರಾಯೋಜನೆ, ಜನಧನ್ ಯೋಜನೆ, ಪಿಎಂ ವಿಶ್ವಕರ್ಮ ಯೋಜನೆ, ಉಜ್ವಲ ಯೋಜನೆ, ಪಿಎಂ ಅವಾಸ್, ಕೃಷಿ ಸನ್ಮಾನ್ ಯೋಜನೆ, ಸೋಲಾರ್ ಪಂಪ್, ಜಲಜೀವನ್, ಸ್ವಚ್ಛ ಭಾರತ್ ಯೋಜನೆ ಸೇರಿದಂತೆ ವಿವಿಧ ಯೋಜನೆಗಳು ಗ್ರಾಮಗಳಲ್ಲಿನ ಪ್ರತಿಯೊಬ್ಬರಿಗೂ ತಲುಪಿಸಬೇಕೆಂಬ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಎಲ್‌ಇಡಿ ಪರದೆಯ ವಾಹನಗಳ ಮೂಲಕ ಗ್ರಾಪಂ ಹಾಗೂ ನಗರ ಪ್ರದೇಶದಲ್ಲಿ ಸಂಚರಿಸಿ ಜನಜಾಗೃತಿ ಮೂಡಿಸಲಾಗುವುದು ಎಂದರು.
ಯೋಜನೆಯಲ್ಲಿ ಯಾವುದೇ ಗ್ಯಾರಂಟಿ ಇಲ್ಲದೇ ಅರ್ಹರಿಗೆ ಬ್ಯಾಂಕ್ ಲೋನ್ ಸಿಗುವ ವ್ಯವಸ್ಥೆ ಮಾಡಲಾಗಿದೆ. ವಿಶ್ವಕರ್ಮ ಯೋಜನೆಯ ಮುಖಾಂತರ ವಿಶ್ವಕಮ ಸಮುದಾಯದವರಿಗೆ 3 ಲಕ್ಷದವರೆಗೆ ಶೂರಿಟಿ ಇಲ್ಲದೆ ಬ್ಯಾಂಕ್ ಲೋನ್ ಕಲ್ಪಿಸುವ ಯೋಜನೆ ರೂಪಿಸಿದ್ದು, ಎಲ್ಲ ವರ್ಗದ ಜನರಿಗೆ ಸರ್ಕಾರದ ಸವಲತ್ತು ತಲುಪಿಸುವುದು ಕೇಂದ್ರ ಸರ್ಕಾರದ ಉದ್ದೇಶವಾಗಿದೆ ಎಂದರು.
ವಿಕಸಿತ ಭಾರತ ಸಾಕಾರಕ್ಕೆ 24 ತಾಸೂ ಕೆಲಸ ಮಾಡಿ: ಮೋದಿ; ನೀವೂ ಸಲಹೆ ಕೊಡಲು ಹೀಗೆ ಮಾಡಿ
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವತ್ಥ ನಾರಾಯಣಗೌಡ ಮಾತನಾಡಿ, ಕೇಂದ್ರ ಸರ್ಕಾರದಿಂದ ಜನ ಕಲ್ಯಾಣ ಉದ್ದೇಶದಿಂದ ಸುಮಾರು 69 ಯೋಜನೆಗಳನ್ನು ಜಾರಿಗೆ ತಂದಿದ್ದು, ಅವುಗಳನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಯಾತ್ರೆ ಹಮ್ಮಿಕೊಳ್ಳಲಾಗಿದೆ. ಅಧಿಕಾರಿಗಳೊಂದಿಗೆ ಸಮನ್ವಯತೆ ಸಾಧಿಸಿ ಅರ್ಹ ಫಲಾನುಭಾವಿಗಳಿಗೆ ಯೋಜನೆಯನ್ನು ತಲುಪಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಮಾತನಾಡಿ, ಬೆಂಗಳೂರು ಗ್ರಾಮಾಂತರ, ಹಾಸನ ಹಾಗೂ ಮಂಡ್ಯ ಲೋಕಸಭಾ ಕ್ಷೇತ್ರಗಳ ಉಸ್ತುವಾರಿಯನ್ನು ಕೇಂದ್ರ ಸಚಿವರಾದ ಕೃಷ್ಣ ಪಾಲ್ ಗುರ್ಜರ್ ಅವರಿಗೆ ವಹಿಸಲಾಗಿದೆ. ಮುಂದಿನ ಲೋಕಸಭಾ ಚುನಾವಣೆವರೆಗೆ ಅವರು ಉಸ್ತುವಾರಿ ವಹಿಸಲಿದ್ದಾರೆ ಎಂದು ತಿಳಿಸಿದರು.
ಈ ವೇಳೆ ಬಿಜೆಪಿ ಮುಖಂಡರಾದ ಗೌತಮ್ ಗೌಡ, ಪ್ರಸಾದ್ ಗೌಡ ಇತರರಿದ್ದರು.