ವಿಜಯೇಂದ್ರ ಚುನಾವಣೆಗೆ ನಿಲ್ಲುವ ಬಗ್ಗೆ ಅಚ್ಚರಿ ಹೇಳಿಕೆ ಕೊಟ್ಟ ಬಿಎಸ್‌ವೈ
* ವಿಜಯೇಂದ್ರ ಚುನಾವಣೆಗೆ ನಿಲ್ಲುವ ಬಗ್ಗೆ ಅಚ್ಚರಿ ಹೇಳಿಕೆ ಕೊಟ್ಟ ಬಿಎಸ್‌ವೈ
* ಮೈಸೂರಿನಲ್ಲಿ ಬಿಎಸ್ ಯಡಿಯೂರಪ್ಪ ಹೇಳಿಕೆ
* ವಿಜಯೇಂದ್ರನ ಚುನಾವಣೆಯ ಗೊಂದಲಕ್ಕೆ ತೆರೆ ಎಳೆದ ತಂದೆ
ಮೈಸೂರು, (ಸೆ.17): ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಪುತ್ರ ಬಿ. ವೈ. ವಿಜಯೇಂದ್ರ ಅವರು ವಿಧಾನಸಭಾ ಉಪಚುನಾವಣೆಗೆ ಸ್ಪರ್ಧೆ ಮಾಡ್ತಾರೆ. ಬಸವರಾಜ ಬೊಮ್ಮಾಯಿ ಕ್ಯಾಬಿನೆಟ್‌ನಲ್ಲಿ ಸಚಿವರಾಗ್ತಾರೆ ಎನ್ನುವ ಮಾತುಗಳು ರಾಜ್ಯ ರಾಜಕಾರಣದಲ್ಲಿ ಚರ್ಚೆಯಾಗುತ್ತಿವೆ.
ಅದರಲ್ಲೂ ಮುಖ್ಯವಾಗಿ ಹಾನಗಲ್ ಬೈ ಎಲೆಕ್ಷನ್‌ಗೆ ವಿಜಯೇಂದ್ರ ಸ್ಪರ್ಧೆ ಮಾಡ್ತಾರೆ ಎನ್ನುವ ಚರ್ಚೆ ಜೋರಾಗಿದೆ. ಇದರ ಮಧ್ಯೆ ಈ ಬಗ್ಗೆ ಸ್ವತಃ ಅವರ ತಂದೆ ಬಿಎಸ್ ಯಡಿಯೂರಪ್ಪ ಅವರು ಸ್ಪಷ್ಟನೆ ಕೊಟ್ಟಿದ್ದು, ಎಲ್ಲಾ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.
ಸಚಿವ ಸ್ಥಾನ, ಚುನಾವಣೆ ಸ್ಪರ್ಧೆ ಬಗ್ಗೆ ಬಿ. ವೈ. ವಿಜಯೇಂದ್ರ ಸ್ಪಷ್ಟನೆ
ಮೈಸೂರಿನಲ್ಲಿ ಇಂದು (ಸೆ.17) ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಬಿಎಸ್‌ವೈ, ಸದ್ಯಕ್ಕೆ ವಿಜಯೇಂದ್ರ ಯಾವುದೇ ಉಪ ಚುನಾವಣೆ ಸ್ಪರ್ಧೆ ಮಾಡುವುದಿಲ್ಲ. ಅವರು ಯಾವ ಕ್ಷೇತ್ರದಲ್ಲಿ ಮುಂದೆ ನಿಲ್ಲುತ್ತಾರೆ ಎನ್ನುವುದು ನಿರ್ಧಾರವಾಗಿಲ್ಲ ಎಂದು ಸ್ಪಷ್ಟಪಡಿಸಿದರು.
ಸದ್ಯ ಅವರು ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದಾರೆ. ನಾನು ಮತ್ತು ರಾಜ್ಯಾಧ್ಯಕ್ಷರು ಸೇರಿ ರಾಜ್ಯ ಪ್ರವಾಸ ಮಾಡುತ್ತೇವೆ. ಅಧಿವೇಶನ ಮುಗಿಯಲಿ, 15 ದಿನಗಳ ನಂತರ ಈ ಬಗ್ಗೆ ರೂಪುರೇಷೆ ಮಾಡುತ್ತೇವೆ ಎಂದು ಹೇಳಿದರು.
ಬೊಮ್ಮಾಯಿ ಉತ್ತಮ ಆಡಳಿತ ನೀಡುತ್ತಿದ್ದಾರೆ ಎನ್ನುವುದು ನನ್ನ ಅಭಿಪ್ರಾಯ. ರಾಜ್ಯದ ಜನರ ಅಭಿಪ್ರಾಯವೂ ಅದೇ ಇದೆ. ಮುಂದಿನ ದಿನದಲ್ಲಿ ಇನ್ನು ಉತ್ತಮ ಆಡಳಿತ ನೀಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.