Asianet Suvarna News Asianet Suvarna News

ಬಿಜೆಪಿಯಲ್ಲೀಗ ವಿಜಯೇಂದ್ರ ಸಿಎಂ ಕೂಗು, ಪ್ರಮುಖ ನಾಯಕರಿಂದ ಬ್ಯಾಟಿಂಗ್!

* ನಾರಾಯಣಗೌಡ ಬಳಿಕ ನಿರಾಣಿ ಬ್ಯಾಟಿಂಗ್‌, ಕಾರ‍್ಯಕರ್ತರಿಂದಲೂ ಘೋಷಣೆ

* ಬಿಜೆಪಿಯಲ್ಲೀಗ ವಿಜಯೇಂದ್ರ ಸಿಎಂ ಕೂಗು

Vijayendra will contest next assembly polls BS Yediyurappa pod
Author
Bangalore, First Published Jun 9, 2022, 8:52 AM IST

ಬೆಂಗಳೂರು(ಜೂ.09): ರಾಜ್ಯ ಬಿಜೆಪಿ ಉಪಾಧ್ಯಕ್ಷರಾಗಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಪುತ್ರ ಬಿ.ವೈ.ವಿಜಯೇಂದ್ರ ಮುಖ್ಯಮಂತ್ರಿ ಆಗಲಿ ಎಂಬ ಕೂಗು ಮಂಡ್ಯದ ಬಳಿಕ ಈಗ ಹಾಸನದಲ್ಲೂ ಪ್ರತಿಧ್ವನಿಸಿದೆ. ಮಾತ್ರವಲ್ಲದೆ ಸಚಿವ ನಾರಾಯಣ ಗೌಡ ಬಳಿಕ ಮುರುಗೇಶ್‌ ನಿರಾಣಿ ಸಹ ವಿಜಯೇಂದ್ರ ಅವರು ರಾಜ್ಯದ ಮುಂದಿನ ಮುಖ್ಯಮಂತ್ರಿ ಆದರೆ ತಪ್ಪೇನು ಎಂದು ಹೇಳಿಕೆ ನೀಡಿರುವುದು ರಾಜಕೀಯ ವಲಯದಲ್ಲಿ ಸಂಚಲನಕ್ಕೆ ಕಾರಣವಾಗಿದೆ. ಬಿ.ಎಸ್‌.ಯಡಿಯೂರಪ್ಪ ಅವರು ಸಹ ವಿಜಯೇಂದ್ರ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದು, ಈತನಿಗೆ ಉತ್ತಮ ಭವಿಷ್ಯವಿದೆ ಎಂದು ಹೇಳಿರುವುದು ಮತ್ತಷ್ಟುಚರ್ಚೆಗಳಿಗೆ ಹಾದಿ ಮಾಡಿಕೊಟ್ಟಿದೆ.

ಆದರೆ ವಿಜಯೇಂದ್ರ ಮಾತ್ರ ‘ನನಗೆ ಪಕ್ಷ ನೀಡಿದ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದೇನೆ. ತನ್ಮೂಲಕ ಪಕ್ಷ ಕಟ್ಟಲು ಶ್ರಮಿಸುತ್ತಿದ್ದು, ಮುಖ್ಯಮಂತ್ರಿ ಅಥವಾ ಇತರ ಯಾವುದೇ ಹುದ್ದೆಗಳ ಬಗ್ಗೆ ತಲೆಕೆಡಿಸಿಕೊಂಡಿಲ್ಲ’ ಎಂದು ತಿಳಿಸಿದ್ದಾರೆ.

ವಿಜಯೇಂದ್ರ ಅವರು ವಿಧಾನ ಪರಿಷತ್‌ ಚುನಾವಣೆ ಪ್ರಚಾರಾರ್ಥವಾಗಿ ಮಂಡ್ಯಕ್ಕೆ ಮಂಗಳವಾರ ಭೇಟಿ ನೀಡಿದ್ದ ವೇಳೆ ಕಾರ್ಯಕರ್ತರು ವಿಜಯೇಂದ್ರ ಮುಂದಿನ ಸಿಎಂ ಎಂದು ಘೋಷಣೆ ಕೂಗಿದ್ದರು. ಅಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ರೇಷ್ಮೆ ಸಚಿವ ಕೆ.ಸಿ.ನಾರಾಯಣಗೌಡ ಸಹ ವಿಜಯೇಂದ್ರ ಅವರಿಗೆ ಮುಂದಿನ ಮುಖ್ಯಮಂತ್ರಿಯಾಗುವ ಎಲ್ಲ ಲಕ್ಷಣಗಳಿವೆ ಎಂದು ಹೇಳಿದ್ದರು. ಬುಧವಾರ ಹಾಸನದಲ್ಲಿ ನಡೆದ ಸಭೆಯಲ್ಲೂ ಕಾರ್ಯಕರ್ತರು ವಿಜಯೇಂದ್ರ ಮುಂದಿನ ಸಿಎಂ ಎಂದು ಘೋಷಣೆ ಕೂಗಿದ್ದಾರೆ.

ಸಿಎಂ ಆದರೆ ತಪ್ಪಿಲ್ಲ-ನಿರಾಣಿ:

ಈ ಘಟನೆಗಳ ಬೆನ್ನಲ್ಲೇ ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ ನಿರಾಣಿ ಸಹ ಈ ಬಗ್ಗೆ ಮಾತನಾಡಿದ್ದು, ವಿಜಯೇಂದ್ರಗೆ ನಾಯಕನಾಗುವ ಎಲ್ಲ ಅರ್ಹತೆಗಳಿವೆ. ಅವರು ಸಿಎಂ ಆದರೆ ಏನೂ ತಪ್ಪಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ವಿಜಯಪುರದಲ್ಲಿ ಬುಧವಾರ ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, ಸಿಎಂ ಮಗ ಸಿಎಂ ಆದರೆ ತಪ್ಪೇನಿಲ್ಲ. ವಿಜಯೇಂದ್ರನಿಗೆ ನಾಯಕನಾಗುವ ಎಲ್ಲ ಅರ್ಹತೆಗಳಿವೆ. ಯಾರು ಹಣೆಬರಹದಲ್ಲಿ ಏನು ಬರೆದಿದೆಯೋ ಗೊತ್ತಿಲ್ಲ. ನಮ್ಮ ರಾಜ್ಯದಲ್ಲಿ ಇದ್ದವರು ಪ್ರಧಾನಿಯಾದರು. ಮುಖ್ಯಮಂತ್ರಿ ಮಗ ಮುಖ್ಯಮಂತ್ರಿಯಾದರೆ ಏನೂ ತಪ್ಪಿಲ್ಲ. ಈ ಬಗ್ಗೆ ರಾಷ್ಟ್ರ, ರಾಜ್ಯ ನಾಯಕರು ನಿರ್ಧಾರ ಮಾಡುತ್ತಾರೆ. ಎಲ್ಲ ಅರ್ಹತೆಗಳು ವಿಜಯೇಂದ್ರನಲ್ಲಿವೆ ಎನ್ನುವುದರಲ್ಲಿ ಯಾವ ಅನುಮಾನವೂ ಬೇಡ. ಯಾವ ಜವಾಬ್ದಾರಿ ನೀಡಬೇಕು ಎಂಬುವುದು ಹೈಕಮಾಂಡ್‌ ನಿರ್ಧಾರ ಮಾಡುತ್ತದೆ ಎಂದರು.

ನಾರಾಯಣಗೌಡ, ನಿರಾಣಿಗೆ ಋುಣಿ- ವಿಜಯೇಂದ್ರ:

ಈ ಬೆಳವಣಿಗೆ ಬಗ್ಗೆ ಹಾಸನದಲ್ಲಿ ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ವಿಜಯೇಂದ್ರ, ನನಗೆ ಪಕ್ಷ ನೀಡಿದ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುವ ಮೂಲಕ ಉತ್ತಮ ಕೆಲಸ ಮಾಡುತ್ತಿದ್ದೇನೆ. ಮುಂದಿನ ಮುಖ್ಯಮಂತ್ರಿ ಹಾಗೂ ಇತರ ಯಾವುದೇ ಹುದ್ದೆಗಳ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಪಕ್ಷ ಕಟ್ಟುವ ಕೆಲಸ ಮಾಡಲು ಶ್ರಮಿಸುತ್ತಿದ್ದೇನೆ. ನಿರಾಣಿ ಹಾಗೂ ನಾರಾಯಣಗೌಡ ಅವರು ಹಿರಿಯರಿದ್ದಾರೆ. ಅವರ ಪ್ರೀತಿ ವಿಶ್ವಾಸಕ್ಕೆ ನಾನು ಋುಣಿಯಾಗಿದ್ದೇನೆ. ಆದರೆ ನಾನು ಇನ್ನೂ ರಾಜಕೀಯದಲ್ಲಿ ಅಂಬೆಗಾಲಿಡುತ್ತಿದ್ದೇನೆ. ಇನ್ನೂ ಸಹ ನಾನು ಶಾಸಕನಲ್ಲ, ಆದ್ದರಿಂದ ಇಂತಹ ಹೇಳಿಕೆಗಳನ್ನು ಒಪ್ಪುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಇನ್ನು ವಿಜಯಪುರದಲ್ಲಿ ಮಾತನಾಡಿರುವ ಯಡಿಯೂರಪ್ಪ ಅವರು, ‘ನಾವು ಆ ಥರಾ ಮಾತನಾಡಿಲ್ಲ. ಯಾರೋ ಅವರ ಸ್ನೇಹಿತರು, ಆತ್ಮೀಯರು ಹೇಳಿದ್ದಾರೆ. ಇದಕ್ಕೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ವಿಜಯೇಂದ್ರಗೆ ಒಳ್ಳೆಯ ಭವಿಷ್ಯವಿದೆ. ಒಳ್ಳೆಯ ಕೆಲಸ ಮಾಡಿ ಮುಂದೆ ಬರಲಿ ಎಂದು ಆಶಿಸುತ್ತೇನೆ’ ಎಂದು ಹೇಳಿದರು.

ಮುಖ್ಯಮಂತ್ರಿ ಮಗ ಮುಖ್ಯಮಂತ್ರಿಯಾದರೆ ಏನು ತಪ್ಪಿಲ್ಲ. ಈ ಬಗ್ಗೆ ರಾಷ್ಟ್ರ, ರಾಜ್ಯ ನಾಯಕರು ನಿರ್ಧಾರ ಮಾಡುತ್ತಾರೆ. ಎಲ್ಲ ಅರ್ಹತೆಗಳು ವಿಜಯೇಂದ್ರನಲ್ಲಿವೆ ಎನ್ನುವುದರಲ್ಲಿ ಯಾವ ಅನುಮಾನವೂ ಬೇಡ.

-ಮುರುಗೇಶ ನಿರಾಣಿ, ಗಣಿ ಮತ್ತು ಭೂ ವಿಜ್ಞಾನ ಖಾತೆ

ಇಂಥ ಹೇಳಿಕೆ ಒಪ್ಪಲ್ಲ

ಪಕ್ಷ ನೀಡಿದ ಜವಾಬ್ದಾರಿ ನಿಭಾಯಿಸುತ್ತಿದ್ದೇನೆ. ಸಿಎಂ ಅಥವಾ ಯಾವುದೇ ಹುದ್ದೆ ಬಗ್ಗೆ ಯೋಚಿಸಿಲ್ಲ. ನಿರಾಣಿ ಮತ್ತು ನಾರಾಯಣಗೌಡರ ಪ್ರೀತಿಗೆ ಋುಣಿ. ನಾನಿನ್ನೂ ರಾಜಕೀಯದಲ್ಲಿ ಅಂಬೆಗಾಲಿಡುತ್ತಿದ್ದೇನೆ. ನಾನು ಶಾಸಕ ಕೂಡ ಅಲ್ಲ. ಆದ್ದರಿಂದ ಇಂತಹ ಹೇಳಿಕೆ ಒಪ್ಪುವುದಿಲ್ಲ.

ಬಿ.ವೈ.ವಿಜಯೇಂದ್ರ, ಬಿಜೆಪಿ ರಾಜ್ಯ ಉಪಾಧ್ಯಕ್ಷ

ಒಳ್ಳೆಯ ಭವಿಷ್ಯವಿದೆ

ಯಾರೋ ಅವರ ಸ್ನೇಹಿತರು, ಆತ್ಮೀಯರು ಹೇಳಿದ್ದಾರೆ. ವಿಜಯೇಂದ್ರಗೆ ಒಳ್ಳೆಯ ಭವಿಷ್ಯವಿದೆ. ಒಳ್ಳೆಯ ಕೆಲಸ ಮಾಡಿ ಮುಂದೆ ಬರಲಿ ಎಂದು ಆಶಿಸುತ್ತೇನೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಅವರು ಸ್ಪರ್ಧಿಸುತ್ತಾರೆ. ಎಲ್ಲಿ ಸ್ಪರ್ಧಿಸಿದರೂ ಗೆದ್ದು ಬರುತ್ತಾರೆ.

- ಬಿ.ಎಸ್‌.ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ

Follow Us:
Download App:
  • android
  • ios