ರೈತರು ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸುತ್ತಿರುವ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ್ ಧರಣಿ ಸ್ಥಳಕ್ಕೆ ಭೇಟಿ ನೀಡಿ ಧರಣಿನಿರತರೊಂದಿಗೆ ಮಾತುಕತೆ ನಡೆಸಿ, ವಿವಾದ ಇತ್ಯರ್ಥಕ್ಕೆ ಪ್ರಯತ್ನಿಸಿದ್ದಾರೆ.
ವಿಜಯಪುರ (ನ.06): ಪ್ರತಿ ಟನ್‌ಗೆ ಕಬ್ಬಿಗೆ ₹3500 ಬೆಂಬಲ ಬೆಲೆ ಕೊಡಬೇಕು ಎಂದು ಆಗ್ರಹಿಸಿ ಸೋಮವಾರದಿಂದ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ರೈತರು ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸುತ್ತಿರುವ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ್ ಧರಣಿ ಸ್ಥಳಕ್ಕೆ ಭೇಟಿ ನೀಡಿ ಧರಣಿನಿರತರೊಂದಿಗೆ ಮಾತುಕತೆ ನಡೆಸಿ, ವಿವಾದ ಇತ್ಯರ್ಥಕ್ಕೆ ಪ್ರಯತ್ನಿಸಿದ್ದಾರೆ. ಆಗ ಧರಣಿ ವೇದಿಕೆಯಲ್ಲಿ ಮಾತನಾಡಿದ ಸಚಿವ ಎಂ.ಬಿ.ಪಾಟೀಲ, ರೈತರ ಪರವಾಗಿ ನಾನು, ಸಚಿವ ತಿಮ್ಮಾಪುರ ಹಾಗೂ ಸತೀಶ ಜಾರಕಿಹೊಳಿಯವರು ಸಿಎಂ ಜೊತೆ ಮಾತನಾಡುತ್ತೇವೆ. ಸಕ್ಕರೆ ಸಚಿವರು ನಮ್ಮ ಜಿಲ್ಲೆಯವರಿದ್ದಾರೆ.
ಅವರು ಕೂಡ ಮಾತನಾಡುತ್ತಾರೆ. ನಾನು ಜಿಲ್ಲಾ ಉಸ್ತುವಾರಿ ಸಚಿವನಾಗಿ ಇಲ್ಲಿಗೆ ಬಂದಿದ್ದು, ಸಿಎಂ ಅಧ್ಯಕ್ಷತೆಯಲ್ಲಿ, ಸಕ್ಕರೆ ಸಚಿವರ ಜೊತೆಯಲ್ಲಿ ಸಭೆ ನಡೆಯಲಿದೆ. ನಾವೆಲ್ಲರೂ ಸೇರಿ ರೈತರ ಭಾವನೆಗಳನ್ನು ಗೌರವಿಸುವ ಕೆಲಸ ಮಾಡುತ್ತೇವೆ ಎಂದರು. ಸಿಎಂ ಸಿದ್ದರಾಮಯ್ಯನವರು ಕೂಡ ಪ್ರಧಾನಿಗಳಿಗೆ ಹಾಗೂ ಸಂಬಂಧಪಟ್ಟ ಸಚಿವರನ್ನು ಭೇಟಿ ಮಾಡಲಿದ್ದಾರೆ. ನಾಳೆ ಕ್ಯಾಬಿನೆಟ್‌ನಲ್ಲಿ ಈ ಬಗ್ಗೆ ಚರ್ಚೆ ಮಾಡಲಾಗುವುದು. ಸಚಿವ ಸಂಪುಟ ಸಭೆಯಲ್ಲಿ ಕಬ್ಬು ಬೆಳೆಗಾರರ ಸಮಸ್ಯೆ ಇತ್ಯರ್ಥಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.
ಅಧಿಕಾರ ಹಂಚಿಕೆ ಬಗ್ಗೆ ಹೈಕಮಾಂಡ್ ನಿರ್ಧಾರ
ಅಧಿಕಾರ ಹಂಚಿಕೆ ಕುರಿತು ಹೈಕಮಾಂಡ್ ನಿರ್ಧಾರವೇ ಅಂತಿಮ. ನಮ್ಮ ಪಕ್ಷದಲ್ಲಿ ಎಲ್ಲಾ ವಿಚಾರಗಳ ಬಗ್ಗೆ ಹೈಕಮಾಂಡ್ ಅಂತಿಮವಾಗಿ ನಿರ್ಧಾರ ಮಾಡುತ್ತದೆ ಎಂದು ಹೇಳಿದರು. ಕೆಪಿಸಿಸಿ ಅಧ್ಯಕ್ಷರೇ ಹೇಳಿದ್ದಾರೆ. ಅಧಿಕಾರ ಹಂಚಿಕೆ ಕುರಿತು ಮಾತನಾಡುವ ಅಧಿಕಾರ ಯಾರಿಗೂ ಇಲ್ಲ. ಎಲ್ಲ ನಿರ್ಧಾರಗಳು ಹೈಕಮಾಂಡ್ ಮಟ್ಟದಲ್ಲಿ ಆಗುತ್ತವೆ ಎಂದರು.ಮುಂದಿನ ಎರಡೂವರೆ ವರ್ಷ ನಾನೇ ಸಿಎಂ ಆಗಿರುವೆ, ಮುಂದಿನ ದಸರಾ ಆಚರಣೆ ನೇತೃತ್ವವನ್ನು ನಾನೇ ಮಾಡಬಹುದು ಎಂಬ ಸಿಎಂ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿ, ಅವರು ಸಿಎಂ ಇದ್ದಾರೆ.
ಜನರು ಕೇಳಿದಾಗ ಹಾಗೇ ಹೇಳಬೇಕಾಗುತ್ತದೆ. ಜನರು ಕೇಳಿದಾಗ ನಾನು ಬಿಡುತ್ತೇನೆ ಎಂದು ಹೇಳುತ್ತಾರೆಯೇ? ಅಕ್ಟೋಬರ್ ಕ್ರಾಂತಿ ಅಂದರು, ಈಗ ನವೆಂಬರ್ ಕ್ರಾಂತಿ ಎನ್ನುತ್ತಾರೆ. ಮುಂದೆ ಡಿಸೆಂಬರ್ ಬರುತ್ತದೆ. ಪವರ್ ಶೇರಿಂಗ್ ಬಗ್ಗೆ ನನಗೇನೂ ಗೊತ್ತಿಲ್ಲ. ಅದೇನಿದ್ದರೂ ಹೈಕಮಾಂಡ್‌ಗೆ ಗೊತ್ತು. ಒಂದು ವೇಳೆ ಪವರ್ ಶೇರಿಂಗ್ ಆಗಿದ್ದರೆ ಸಿಎಂ ಹಾಗೂ ಡಿಸಿಎಂ ಅವರಿಗೆ ಗೊತ್ತು. ನನಗೆ ಯಾವುದೇ ವಿಷಯ ಗೊತ್ತಿಲ್ಲ ಎಂದು ಹೇಳಿದರು.
ಬೆಂಬಲ ಬೆಲೆ ವಿಚಾರದಲ್ಲಿ ಕೇಂದ್ರದ ಪಾತ್ರವೂ ಮಹತ್ವದ್ದಾಗಿದೆ. ₹3350 ಕೇಂದ್ರ ಸರ್ಕಾರ ನಿರ್ಧಾರ ಮಾಡಿದೆ. ಆದರೆ ಸಕ್ಕರೆ ಕಾರ್ಖಾನೆ ಬೇರೆ ರೀತಿಯಲ್ಲಿವೆ. ಕೆಲವು ಖಾಸಗಿ ಇವೆ. ಕೆಲವು ಸಹಕಾರಿಗಳಿವೆ. ದರ ವಿಚಾರದಲ್ಲಿ ಕೆಲವೊಬ್ಬರಿಗೆ ಅಧಿಕಾರ ಇದೆ. ಕೆಲವು ಸಕ್ಕರೆ ಕಾರ್ಖಾನೆಗಳಿಗೆ ಇಲ್ಲ. ಹೀಗಾಗಿ ಪ್ರಧಾನಿ ಬಳಿ ನಿಯೋಗ ಹೋಗಿ ಮಾತನಾಡಬೇಕಿದೆ.
- ಎಂ.ಬಿ.ಪಾಟೀಲ, ಜಿಲ್ಲಾ ಉಸ್ತುವಾರಿ ಸಚಿವರು.
