ಬಿಜೆಪಿ, ಜೆಡಿಎಸ್ ಮೈತ್ರಿ: ಬಿಜೆಪಿ ಸಂಸದ ಜಿಗಜಿಣಗಿ ಹೇಳಿದ್ದಿಷ್ಟು
ಬಿಜೆಪಿ, ಜೆಡಿಎಸ್ ಮೈತ್ರಿಗೆ ಬಗ್ಗೆ ನನ್ನ ಒಪ್ಪಿಗೆ, ನಿರಾಕರಣೆಯ ಅಗತ್ಯವಿಲ್ಲ. ಪಕ್ಷದ ವರಿಷ್ಠರು ಬಿಜೆಪಿ, ಜೆಡಿಎಸ್ ಮೈತ್ರಿ ಮಾಡಿಕೊಂಡರೆ ಯಾವುದೇ ಅಭ್ಯಂತರವಿಲ್ಲ. ಪಕ್ಷದ ಅಣತಿಯಂತೆ ನಡೆದುಕೊಳ್ಳುತ್ತೇನೆ ಎಂದ ಸಂಸದ ರಮೇಶ ಜಿಗಜಿಣಗಿ
ವಿಜಯಪುರ(ಸೆ.10): ಕೇಂದ್ರದ ನಾಯಕರು ಬಿಜೆಪಿ, ಜೆಡಿಎಸ್ ಜೊತೆಗೆ ಮೈತ್ರಿ ಮಾಡಿಕೊಂಡರೆ ಯಾವುದೇ ಅಭ್ಯಂತರವಿಲ್ಲ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು. ಶನಿವಾರ ನಗರದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ, ಜೆಡಿಎಸ್ ಮೈತ್ರಿಗೆ ಬಗ್ಗೆ ನನ್ನ ಒಪ್ಪಿಗೆ, ನಿರಾಕರಣೆಯ ಅಗತ್ಯವಿಲ್ಲ. ಪಕ್ಷದ ವರಿಷ್ಠರು ಬಿಜೆಪಿ, ಜೆಡಿಎಸ್ ಮೈತ್ರಿ ಮಾಡಿಕೊಂಡರೆ ಯಾವುದೇ ಅಭ್ಯಂತರವಿಲ್ಲ. ಪಕ್ಷದ ಅಣತಿಯಂತೆ ನಡೆದುಕೊಳ್ಳುತ್ತೇನೆ ಎಂದರು.
ಈ ಹಿಂದೆ ದೇವೇಗೌಡರ ಜೊತೆಗೆ ನಾವಿದ್ದೆವು. ನಮ್ಮ ಜೊತೆಗೆ ದೇವೇಗೌಡರು ಇದ್ದರು. ದೇವೇಗೌಡ ಅವರು ಮುಖ್ಯಮಂತ್ರಿಗಳಿದ್ದಾಗ ನಾನು ಸಚಿವನಾಗಿ ಕೆಲಸ ಮಾಡಿದ್ದೇನೆ. ಪಕ್ಷದ ನಾಯಕರು ಬರುವ ಲೋಕಸಭೆಯಲ್ಲಿ ಚುನಾವಣೆ ಹೊಂದಾಣಿಕೆ ಮಾಡಿಕೊಂಡರೆ ನಾವು ಸ್ವಾಗತಿಸುತ್ತೇವೆ ಎಂದು ತಿಳಿಸಿದರು.
ಗ್ಯಾರಂಟಿಯಲ್ಲಿ ಹುಟ್ಟಿದ ಕಾಂಗ್ರೆಸ್ ಸರ್ಕಾರ ಗ್ಯಾರಂಟಿಯಲ್ಲಿಯೇ ಮುಳುಗಿ ಹೋಗಲಿದೆ: ರಮೇಶ ಭೂಸನೂರ
ಒಂದೇ ಹೆಸರು, ಒಂದೇ ದೇಶ ಇರಬೇಕು ಎಂಬ ಉದ್ದೇಶದಿಂದಾಗಿ ದೇಶದ ಹೆಸರು ಇಂಡಿಯಾ ಬದಲು ಭಾರತ ಮರು ನಾಮಕರಣ ಮಾಡುವ ವಿಚಾರ ಮುನ್ನೆಲೆಗೆ ಬಂದಿರುವುದು ಸ್ವಾಗತಾರ್ಹ. ವಿಶ್ವದಲ್ಲಿ ವಿವಿಧ ದೇಶಗಳು ಒಂದೇ ಹೆಸರು, ಒಂದೇ ದೇಶ ಇವೆ. ಆದ್ದರಿಂದ ನಮ್ಮ ದೇಶಕ್ಕೆ ಇಂಡಿಯಾ, ಭಾರತ ಎಂದು ಕರೆಯುವ ಬದಲು ಇಂಡಿಯಾ ತಗೆದು ಹಾಕಿ ಭಾರತ ಎಂದು ಹೆಸರು ಇಡುವುದು ಒಳ್ಳೆಯ ಬೆಳವಣಿಗೆಯಾಗಿದೆ ಎಂದರು.
ಪಾಶ್ಚಿಮಾತ್ಯರು ಇಂಡಿಯಾ ಎಂದು ಕರೆಯುವುದನ್ನು ಕೈಬಿಟ್ಟು ಭಾರತ ಹೆಸರಿಡಬೇಕು. ಭಾರತ ಸಂಸ್ಕೃತ ಪದವಾಗಿದೆ. ಭಾರತ ಭಾರತೀಯರ ಅಭಿಮಾನದ ಪದವಾಗಿದೆ. ಆದ್ದರಿಂದ ನಮ್ಮ ದೇಶಕ್ಕೆ ಭಾರತ ಎಂದು ಹೆಸರು ನಾಮಕರಣ ಮಾಡಬೇಕು ಎಂದು ಹೇಳಿದರು.
ಸಚಿವರೇ ನಿಮಗೆ 10 ಕೋಟಿ ರೂ. ಕೋಡ್ತೀವಿ, ನೇಣು ಹಾಕಿಕೊಳ್ಳಿ: ಮಾಜಿ ಸಚಿವ ಬೆಳ್ಳುಬ್ಬಿ ಸವಾಲು
ಸನಾತನ ಹಿಂದೂ ಧರ್ಮದ ಬಗ್ಗೆ ಉದಯನಿಧಿ ಸ್ಟಾಲಿನ್ ಅವಮಾನಕರ ಹೇಳಿಕೆ ನೀಡಿರುವುದು ಸರಿಯಲ್ಲ. ಸಣ್ಣ ಹುಡುಗರು ಈ ರೀತಿ ಹೇಳಿಕೆ ನೀಡಿದ್ದಾರೆ. ಅಂಥವರು ಇಂದು ನಿನ್ನೆ ಮಂತ್ರಿಯಾಗಿದ್ದಾರೆ. ಇಂದಿರಾಗಾಂಧಿ, ರಾಜೀವ ಗಾಂಧಿ, ಸಂಜಯ ಗಾಂಧಿ ಕಾಲದಲ್ಲಿ ನೋಡಿದ್ದೇವೆ ಎಂದರು. ಧರ್ಮದ ವಿಷಯದಲ್ಲಿ ಯಾರು ಕೈ ಹಾಕುತ್ತಾರೆಯೋ ಅಂಥವರು ಉಳಿಯಲ್ಲ. ಅವರು ಯಾವ ಪಕ್ಷಕ್ಕೆ ಅಂಟಿಕೊಂಡಿರುತ್ತಾರೆಯೋ ಅಂಥ ಪಕ್ಷ ಉಳಿಯಲ್ಲ ಎಂದು ಜಿಗಜಿಣಗಿ ತಿಳಿಸಿದರು.
ಎಂಪಿ ಟಿಕೆಟ್ ನನಗೆ ಖಚಿತ
ಬರುವ ಲೋಕಸಭೆ ಚುನಾವಣೆಯಲ್ಲಿ ನೂರಕ್ಕೆ ನೂರರಷ್ಟು ಟಿಕೆಟ್ ನನಗೆ ಖಚಿತವಾಗಿ ಸಿಗುತ್ತದೆ ಎಂದು ಜಿಗಜಿಣಗಿ ಹೇಳಿದರು. ಹಲವಾರು ಮಂದಿ ಟಿಕೆಟ್ ಆಕಾಂಕ್ಷಿಗಳಿದ್ದಾರೆ. ಅವರು ಟಿಕೆಟ್ ಕೇಳುವುದರಲ್ಲಿ ತಪ್ಪೇನಿಲ್ಲ. ಆದರೆ, ಟಿಕೆಟ್ ಗಾಗಿ ನನ್ನ ತೇಜೋವಧೆಗೆ ಯತ್ನಿಸುತ್ತಿರುವುದು ಸರಿಯಲ್ಲ. ನನ್ನ ವ್ಯಕ್ತಿತ್ವದ ಬಗ್ಗೆ ತೇಜೋವಧೆ ಮಾಡುತ್ತಿರುವವರ ವಿರುದ್ಧ ಪಕ್ಷದ ವರಿಷ್ಠರ ಗಮನಕ್ಕೆ ತರಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.