Asianet Suvarna News Asianet Suvarna News

ಸಣ್ಣ ಹುಡುಗ(ರಾಹುಲ್‌ ಗಾಂಧಿ) ಕರ್ಕೊಂಡು ಕಾಂಗ್ರೆಸ್‌ ಯಾತ್ರೆ: ಸಂಸದ ಜಿಗಜಿಣಗಿ ವ್ಯಂಗ್ಯ

70 ವರ್ಷ ದೇಶವನ್ನು ಲೂಟಿ ಮಾಡಿ ನಾಶ ಮಾಡಿದ ಕಾಂಗ್ರೆಸ್‌ ಈಗ ನಾಟಕವಾಡುತ್ತಿದೆ. ಆದರೂ ಮುಗ್ದ ದಲಿತ ಬಾಂಧವರು ಕಾಂಗ್ರೆಸ್‌ ಬೆನ್ನು ಹತ್ತಿದ್ದಾರೆ: ಸಂಸದ ರಮೇಶ ಜಿಗಜಿಣಗಿ 

Vijayapura BJP MP Ramesh Jigajinagi Slams Congress grg
Author
First Published Oct 2, 2022, 7:27 PM IST

ವಿಜಯಪುರ(ಅ.02): ದೇಶ ಒಡೆದವರು ಕಾಂಗ್ರೆಸ್‌. ಆದರೆ ಈಗ ಸಣ್ಣ ಹುಡುಗನನ್ನು ಕರೆದುಕೊಂಡು ಭಾರತ ಜೋಡೋ ಯಾತ್ರೆ ನಡೆಸುತ್ತಿದೆ ಎಂದು ಸಂಸದ ರಮೇಶ ಜಿಗಜಿಣಗಿ ವ್ಯಂಗ್ಯವಾಡಿದರು. ವಿಜಯಪುರದ ರುಕ್ಮಾಂಗದ ಪಂಡಿತರ ಸಮಾಧಿ ಸಭಾಂಗಣದಲ್ಲಿ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ನೇತೃತ್ವದಲ್ಲಿ ಶನಿವಾರ ಆಯೋಜಿಸಿದ್ದ ಜಿಲ್ಲಾ ಪ್ರಶಿಕ್ಷಣ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, 70 ವರ್ಷ ದೇಶವನ್ನು ಲೂಟಿ ಮಾಡಿ ನಾಶ ಮಾಡಿದ ಕಾಂಗ್ರೆಸ್‌ ಈಗ ನಾಟಕವಾಡುತ್ತಿದೆ. ಆದರೂ ಮುಗ್ದ ದಲಿತ ಬಾಂಧವರು ಕಾಂಗ್ರೆಸ್‌ ಬೆನ್ನು ಹತ್ತಿದ್ದಾರೆ. ಕೇವಲ ಚುನಾವಣೆ ಬಂದಾಗ ದಲಿತರನ್ನು ಕಾಂಗ್ರೆಸ್‌ ನೆನಪು ಮಾಡಿಕೊಳ್ಳುತ್ತದೆ. ಕಾಂಗ್ರಸ್‌ ಯಾವ ದಲಿತರಿಗೂ ಉಳುಮೆ ಮಾಡಲು ಒಂದು ಇಂಚು ಜಮೀನು ಸಹ ನೀಡಿಲ್ಲ. ಸಂವಿಧಾನ ಕರುಣಿಸಿದ ಡಾ. ಬಿ.ಆರ್‌. ಅಂಬೇಡ್ಕರ್‌ ಅವರ ಸಮಾಧಿಗೆ ಜಾಗ ಸಹ ನೀಡಲಿಲ್ಲ ಎಂದರು. ಡಾ. ಅಂಬೇಡ್ಕರ್‌ ಅವರ ಜೀವನ ಸಂಬಂಧಿಸಿದಂತೆ ಪಂಚಕ್ಷೇತ್ರಗಳನ್ನು ಪ್ರಗತಿಗೊಳಿಸಿದ್ದಾರೆ. ಇದನ್ನು ದಲಿತರು ಅರ್ಥ ಮಾಡಿಕೊಳ್ಳಬೇಕು. ಈ ವಿಷಯವಾಗಿ ಅವರಿಗೆ ಅರಿವು ಮೂಡಿಸುವ ಕಾರ್ಯವನ್ನು ಕಾರ್ಯಕರ್ತರು ಮಾಡಬೇಕು ಎಂದರು.

ದೇಶ ವಿರೋಧಿಗಳನ್ನು, ಬಾಂಬ್‌ ಹಾಕುವವರನ್ನು ಹದ್ದುಬಸ್ತಿನಲ್ಲಿ ಇಡಲು ಪಿಎಫ್‌ಐ ಬ್ಯಾನ್‌ ಮಾಡಲಾಗಿದೆ ಎಂದು ಅವರು ಹೇಳಿದರು.

500 ಕೋಟಿ ನೀಡಿದ್ರೆ ವಿಜಯಪುರ ಲಂಡನ್‌ ಮಾಡುವೆ: ಶಾಸಕ ಬಸನಗೌಡ ಪಾಟೀಲ ಯತ್ನಾಳ

ನನ್ನ ತಂದೆ, ಅಜ್ಜ, ಎಂಎಲ್‌ಎ ಇರಲಿಲ್ಲ, ನನ್ನ ಕುಟುಂಬ ಒಂದು ರೀತಿ ಝಿರೋ ಇತ್ತು. ಆದರೆ ನಾನು ಕಂಬಳಿ ಹೊತ್ತು ಮಲಗಲಿಲ್ಲ. ಜಯಪ್ರಕಾಶ ನಾರಾಯಣ ತುರ್ತು ಪರಿಸ್ಥಿತಿ ವಿರೋಧಿಸುವಂತೆ ಯುವಕರಿಗೆ ಕರೆ ನೀಡಿದರು. ಅದರಿಂದ ಪ್ರೇರಣೆ ಪಡೆದು ಈ ಸ್ಥಾನಕ್ಕೆ ಬಂದೆ. ಪ್ರತಿಯೊಬ್ಬರಿಗೂ ಪ್ರೇರಣೆ ಅಗತ್ಯ. ಈಗ ಯುವಕರಿಗೆ ಮೋದಿ ಪ್ರೇರಣೆ ಆಗಿದ್ದಾರೆ. ಪ್ರತಿ ವ್ಯಕ್ತಿಗೂ ಪ್ರೇರಣೆ ಅಗತ್ಯ. ಮೋದಿಜಿ ಆಡಳಿತ ನಡೆಸಿದ 8 ವರ್ಷಗಳಲ್ಲಿಯೇ ಜಗತ್ತಿನ ನಾಯಕರಾಗಿ, ವಿಶ್ವದ ನಾಯಕರಿಗೆ ಪ್ರೇರಣೆಯಾಗಿದ್ದಾರೆ. ಪ್ರತಿನಿತ್ಯ ಬೇರೆ ಬೇರೆ ದೇಶದ ಪ್ರಧಾನಿಗಳು ಭಾರತಕ್ಕೆ ಬರುತ್ತಿದ್ದಾರೆ ಎಂದರು.

ಕಾಂಗ್ರೆಸ್‌ ನಾಯಕರು ಕೋವಿಡ್‌ ಕಾಲಘಟ್ಟದಲ್ಲಿ ಅಧಿಕಾರದಲ್ಲಿದ್ದರೆ ದೇಶದಲ್ಲಿ ಹೆಣಗಳು ಬೀಳುತ್ತಿದ್ದವು. ಆದರೆ ಮೋದಿ ಅವರು ದೇಶದ ಎಲ್ಲ ನಿವಾಸಿಗಳಿಗೂ ವ್ಯಾಕ್ಸಿನ್‌ ನೀಡುವ ಮೂಲಕ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಸಾಧ್ಯವಾಗದ ಕೋವಿಡ್‌ ಲಸಿಕಾ ಅಭಿಯಾನ ಭಾರತದಲ್ಲಿ ಯಶಸ್ವಿಗೊಳಿಸಿದ್ದಾರೆ ಇದಕ್ಕೆ ಮೋದಿ ಅವರ ಸಮರ್ಥ ನಾಯಕತ್ವವೇ ಕಾರಣ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಆರ್‌.ಎಸ್‌. ಪಾಟೀಲ ಕೂಚಬಾಳ ಮಾತನಾಡಿ, ಅಣು ಬಾಂಬ್‌ ದಾಳಿಗೆ ಸಿಲುಕಿ ಸಂಪೂರ್ಣ ಹಾಳಾಗಿದ್ದ ಜಪಾನ್‌ ಕೆಲವೇ ವರ್ಷಗಳಲ್ಲಿ ಜಗತ್ತಿನಲ್ಲಿ ಮಿಂಚಿತು. ಆದರೆ ಕಾಂಗ್ರೆಸ್‌ ಆಡಳಿತ ಕಾರಣದಿಂದಾಗಿ ಭಾರತ ಪ್ರಗತಿ ಕಾಣಲಿಲ್ಲ. ಸಂಪದ್ಭರಿತ ರಾಷ್ಟ್ರವಾಗಿದ್ದರೂ ಕಾಂಗ್ರೆಸ್‌ ಇಚ್ಛಾಶಕ್ತಿ ಕೊರತೆಯಿಂದ ಭಾರತೀಯರು ಬಡವರಾಗಿ ಉಳಿಯಬೇಕಾಯಿತು ಎಂದು ವಿಷಾದಿಸಿದರು.

ಭ್ರಷ್ಟಾಚಾರ ಪಿತಾಮಹ ಕಾಂಗ್ರೆಸ್‌ ಜನತೆಗೆ ಭ್ರಷ್ಟಾಚಾರ, ಭಯೋತ್ಪಾದನೆ ಬಳುವಳಿ ಮಾತ್ರ ನೀಡಿದೆ. ಈ ಎಂಟು ವರ್ಷಗಳ ಹಿಂದೆ ಎಲ್ಲಿ ನೋಡಿದರೂ ಬಾಂಬ್‌ ಬೀಳುತ್ತಿದ್ದವು. ಆದರೆ ಭಾರತ ಬದಲಾಗಿದೆ. ನಾವು ಕಾಶ್ಮೀರ ಪ್ರವಾಸ ಮಾಡಿದರೆ ಮೋದಿ ಸರ್ಕಾರದ ದಿಟ್ಟತನದ ಅರಿವಾಗಲು ಸಾಧ್ಯ, ಈಗ ಅಲ್ಲಿ ಯಾವ ಭಯದ ವಾತಾವರಣವೂ ಇಲ್ಲ, ದೇಶದ ಸ್ವರ್ಗ ಕಾಶ್ಮೀರದಲ್ಲಿ ಪ್ರಗತಿಯ ಪರ್ವ ಆರಂಭವಾಗಿದೆ ಎಂದರು.

ಒಡೆದಾಳುವ ನೀತಿ, ತುಷ್ಟೀಕರಣದಿಂದ ದೇಶ ಆಳುವ ಕಾಂಗ್ರೆಸ್‌ ಪಕ್ಷಕ್ಕೆ ಪ್ರಧಾನಿ ಮೋದಿ ಅವರು ಸಬ್‌ ಕಾ ಸಾಥ್‌, ಸಬ್‌ ಕಾ ವಿಕಾಸ್‌ ಎನ್ನುವ ಧ್ಯೇಯದೊಂದಿಗೆ ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸಿದ್ದಾರೆ ಎಂದರು.

ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ವಿವೇಕಾನಂದ ಡಬ್ಬಿ ಮಾತನಾಡಿ, ಪ್ರಸ್ತುತ ಕೇಂದ್ರ ಸರ್ಕಾರದಲ್ಲಿ ಹಿಂದುಳಿದ ವರ್ಗಗಳ ನಾಯಕರಿಗೆ ಅತೀ ಹೆಚ್ಚು ಸಚಿವ ಸ್ಥಾನ ನೀಡಿದ್ದು ಬಿಜೆಪಿ. ಬಿಜೆಪಿ ಹಿಂದುಳಿದ ವರ್ಗಗಳ ನೈಜ ಕಲ್ಯಾಣವನ್ನು ಬಯಸುವ ಏಕೈಕ ಪಕ್ಷವಾಗಿದೆ ಎಂದರು.

PFI, SDPI ಬೆಳೆಯಲು ಸಿದ್ದರಾಮಯ್ಯ ಕಾರಣ; ನಳಿನ್ ಕುಮಾರ ಕಟೀಲ್ ಗಂಭೀರ ಆರೋಪ

ಕಲಬುರಗಿಯಲ್ಲಿ ಬಿಜೆಪಿ ಹಿಂದುಳಿದ ವರ್ಗಗಳ ಬೃಹತ್‌ ಸಮಾವೇಶ ಸಂಘಟಿಸಲಾಗುತ್ತಿದ್ದು, 10 ಲಕ್ಷ ಜನರು ಸೇರಲಿರುವ ಈ ಸಮಾವೇಶ ರಾಜ್ಯ ರಾಜಕಾರಣಕ್ಕೆ ದಿಕ್ಸೂಚಿಯಾಗಲಿದೆ. ವಿಜಯಪುರ ಜಿಲ್ಲೆಯಿಂದ 50 ಸಾವಿರ ಕಾರ್ಯಕರ್ತರು ಭಾಗವಹಿಸುವ ನಿರೀಕ್ಷೆ ಇದೆ ಎಂದರು.

ಬಿಜೆಪಿ ವಿಭಾಗ ಪ್ರಭಾರಿ ಚಂದ್ರಶೇಖರ ಕವಟಗಿ, ರಾಜ್ಯ ಕಾರ್ಯಕಾರಣಿ ಸದಸ್ಯ ಶೀಲವಂತ ಉಮರಾಣಿ, ಪ್ರಮುಖರಾದ ಉಮೇಶ ಕೋಳಕೂರ, ಮಳುಗೌಡ ಪಾಟೀಲ, ಸಂಜಯ ಪಾಟೀಲ ಕನಮಡಿ, ವಿಜಯ ಜೋಶಿ, ಶಂಕರ ಕುಂಬಾರ, ಭರತ ಕೋಳಿ ಇತರರು ಉಪಸ್ಥಿತರಿದ್ದರು. ಹಿಂದುಳಿದ ವರ್ಗಗಳ ಮೋರ್ಚಾ ಜಿಲ್ಲಾಧ್ಯಕ್ಷ, ಜಿಪಂ ಮಾಜಿ ಸದಸ್ಯ ಸಾಬು ಮಾಶ್ಯಾಳ ಪ್ರಾಸ್ತಾವಿಕ ಮಾತನಾಡಿದರು. ಪ್ರಮೋದ ಬಡಿಗೇರ ಸ್ವಾಗತಿಸಿದರು. ರವಿ ಬಿರಾದಾರ ನಿರೂಪಿಸಿದರು.
 

Follow Us:
Download App:
  • android
  • ios