ರಾಜ್ಯ ರಾಜಕಾರಣಕ್ಕೆ ಬರ್ತಾರಾ ಬಿಜೆಪಿಯ ಆ ಸೈಲೆಂಟ್ ರಾಜಕಾರಣಿ..!
• ರಾಜ್ಯ ರಾಜಕಾರಣಕ್ಕೆ ಬರ್ತಾರಾ ಬಿಜೆಪಿಯ ಆ ಸೈಲೆಂಟ್ ರಾಜಕಾರಣಿ..!
• ಪ್ರಭಾವಿ ಸಚಿವರೊಬ್ಬರಿಗಾಗಿ 25 ವರ್ಷಗಳಿಂದ ರಾಜ್ಯ ರಾಜಕಾರಣದಿಂದ ದೂರ ಇದ್ರಂತೆ ಈ ಹಿರಿಯ ಸಂಸದ..!
• ಅಂದು ಸ್ಟೋರ್ ಕೀಪರ್ ಇದ್ದ ಇಂದಿನ ಪ್ರಭಾವಿ ಸಚಿವನನ್ನ ಮೊದಲು MLA ಮಾಡಿದ್ದು ಇವ್ರೆನಾ!?
ವರದಿ- ಷಡಕ್ಷರಿ ಕಂಪೂನವರ್, ಏಷ್ಯಾನೆಟ್ ಸುವರ್ಣ ನ್ಯೂಸ್
ವಿಜಯಪುರ (ಏ28.) : ರಾಜ್ಯ ಹಾಗೂ ಕೇಂದ್ರದ ರಾಜಕಾರಣದಲ್ಲಿ ಇವರು ಬಲು ಸೈಲೆಂಟ್ ರಾಜಕಾರಣಿ... ಮಾಜಿ ಕೇಂದ್ರ ಸಚಿವರು, ಹಾಲಿ ಹಿರಿಯ ಸಂಸದರು ಹೌದು. ಕೇಂದ್ರದಲ್ಲಿ ಸಚಿವರಾಗುವ ಮೂಲಕ, ಹಲವು ಬಾರಿ ಸಂಸದರಾಗುವ ಮೂಲಕ 25 ವರ್ಷಗಳಿಂದ ರಾಜ್ಯ ರಾಜಕಾರಣದಿಂದ ದೂರ ಉಳಿದಿರುವ ಈ ಸೋಲಿಲ್ಲದ ಸರದಾರ 2023ರಲ್ಲಿ ರಾಜ್ಯ ರಾಜಕಾರಣಕ್ಕೆ ಬರ್ತಾರೆ ಎನ್ನಲಾಗ್ತಿದೆ. ಹೀಗಾಗಿ ವಿಜಯಪುರ ಜಿಲ್ಲಾ ರಾಜಕೀಯದಲ್ಲಿ ಹಲವು ಕುತೂಹಲಗಳು ಗರಿಗೆದರಿವೆ..
ರಾಜ್ಯ ರಾಜಕಾರಣಕ್ಕೆ ಹಿರಿಯ ಸಂಸದ ರಮೇಶ ಜಿಗಜಿಣಗಿ..!
ವಿಜಯಪುರ ಜಿಲ್ಲೆಯ ಸೈಲೆಂಟ್ ರಾಜಕಾರಣಿ, ಹಿರಿಯ ಸಂಸದರು ಎಂದು ಕರೆಯಿಸಿಕೊಳ್ಳುವ ರಮೇಶ ಜಿಗಜಿಣಗಿ ಬಹುವರ್ಷಗಳಿಂದ ಕೇಂದ್ರದಲ್ಲೆ ರಾಜಕಾರಣ ಮಾಡ್ತಿದ್ದಾರೆ. ಈ ಹಿಂದೆ ಮೀಸಲು ಕ್ಷೇತ್ರವಾಗಿದ್ದ ಚಿಕ್ಕೋಡಿ ಲೋಕಸಭಾ ಸದಸ್ಯರಾಗಿ, ಬಳಿಕ ವಿಜಯಪುರ ಲೋಕಸಭಾ ಕ್ಷೇತ್ರದಿಂದ ಸತತ ಮೂರು ಬಾರಿ ಸಂಸದರಾಗಿ ಆಯ್ಕೆಯಾಗಿರೋ ರಮೇಶ ಜಿಗಜಿಣಗಿ ಈಗ ರಾಜ್ಯ ರಾಜಕಾರಣಕ್ಕೆ ಬರ್ತಾರೆ ಎನ್ನುವ ಮಾತುಗಳು ಕೇಳಿ ಬರ್ತಿವೆ. ಬರುವ ವಿಧಾನ ಚುನಾವಣೆಯಲ್ಲಿ ಬಿಜೆಪಿ ಹೈಕಮಾಂಡ್ ಟಿಕೇಟ್ ನೀಡಿದಲ್ಲಿ ಸ್ಪರ್ಧೆಗೆ ರೆಡಿಯಾಗಿದ್ದಾರಂತೆ..
18 ಹಾಲಿ ಬಿಜೆಪಿ ಶಾಸಕರಿಗೆ ಮುಂದಿನ ಚುನಾವಣೆಯಲ್ಲಿ ಟಿಕೆಟ್ ಇಲ್ಲ!?
ನಾಗಠಾಣ ಮೀಸಲು ಕ್ಷೇತ್ರದ ಮೇಲೆ ಕಣ್ಣು..!
ವಿಜಯಪುರ ಜಿಲ್ಲೆಯಲ್ಲಿ ನಾಗಠಾಣ ಎಸ್.ಸಿ ಮೀಸಲು ಕ್ಷೇತ್ರ, ಈ ಕ್ಷೇತ್ರದ ಮೇಲೆ ರಮೇಶ ಜಿಗಜಿಣಗಿ ಕಣ್ಣೀಟ್ಟಿದ್ದಾರೆ ಎನ್ನಲಾಗ್ತಿದೆ. ಕಳೆದ ಬಾರಿ ಈ ಕ್ಷೇತ್ರದಿಂದ ಸಚಿವ ಗೋವಿಂದ ಕಾರಜೋಳ ಹಿರಿಯ ಪುತ್ರ ಗೋಪಾಲ್ ಕಾರಜೋಳ ಸ್ಪರ್ಧಿಸಿ ಜೆಡಿಎಸ್ ಪಕ್ಷದ ದೇವಾನಂದ ಚವ್ಹಾಣ ಎದುರು ಹೀನಾಯವಾಗಿ ಸೋಲುಂಡಿದ್ದರು. ಬಳಿಕ ಕೋವಿಡ್ ಸಂದರ್ಭದಲ್ಲಿ ತೀವ್ರ ಅನಾರೋಗ್ಯಕ್ಕೆ ತುತ್ತಾಗಿ ಗೋಪಾಲ್ ಕಾರಜೋಳ ಈಗ ಮತ್ತೆ ರೆಡಿಯಾಗಿದ್ದಾರೆ. ಆದ್ರೆ ಈ ಬಾರಿ ಪಕ್ಷ ಅವಕಾಶ ಮಾಡಿ ಕೊಟ್ಟಲ್ಲಿ ಸಂಸದ ರಮೇಶ ಜಿಗಜಿಣಗಿ ನಾಗಠಾಣ ಕ್ಷೇತ್ರದಿಂದ ಸ್ಪರ್ಧೆಗಿಳಿಯಲಿದ್ದಾರೆ ಅನ್ನೊ ಮಾಹಿತಿ ಬಿಜೆಪಿ ವಲಯದಲ್ಲೇ ಕೇಳಿ ಬರ್ತಿದೆ..
ನಾಗಠಾಣ ಟಿಕೇಟ್ ಗಾಗಿ ಕಾರಜೋಳರ ಪುತ್ರರಲ್ಲೆ ಪೈಪೋಟಿ..!?
ಕಳೆದ ಬಾರಿ ಚುನಾವಣೆಯಲ್ಲಿ ನಾಗಠಾಣ ಕ್ಷೇತ್ರದಲ್ಲಿ ಬಿಜೆಪಿಗೆ ಗೆಲವು ಬಿಡಿ, ಕನಿಷ್ಟ ಎರಡನೇ ಸ್ಥಾನವು ಸಿಗಲಿಲ್ಲ. ಬಿಜೆಪಿಯಿಂದ ಟಿಕೇಟ್ ವಂಚಿತರಾಗಿ ಬಂಡಾಯ ಎದ್ದ ವಿಠ್ಠಲ್ ಕಟಕದೊಂಡ ಕಾಂಗ್ರೆಸ್ ಸೇರ್ಪಡೆಯಾಗಿ ಸ್ಪರ್ಧೆ ನಡೆಸಿದ್ದರು.. ತಾವು ಗೆಲ್ಲದೆ ಹೋದ್ರು ಬಿಜೆಪಿ ಅಭ್ಯರ್ಥಿಯನ್ನ ಹೀನಾಯವಾಗಿ ಸೋಲುವಂತೆ ಮಾಡಿದ್ರು ಕಟಕದೊಂಡ.. ಈ ಬಾರಿ ಮತ್ತೆ ಗೋಪಾಲ್ ಕಾರಜೋಳಗೆ ಟಿಕೆಟ್ ಪಿಕ್ಸ್ ಎನ್ನುವಾಗಲೇ ಅವರ ಆರೋಗ್ಯ ತೀರ ಹದಗೆಟ್ಟು ಈಗ ಚೇತರಿಸಿಕೊಂಡಿದ್ದಾರೆ. ಈ ಗ್ಯಾಪ್ ನಲ್ಲಿ ಗೋಪಾಲ ಕಾರಜೋಳ ಸಹೋದರ ಉಮೇಶ ಕಾರಜೋಳ ನಾಗಠಾಣ ಕ್ಷೇತ್ರದ ತುಂಬ ಓಡಾಡುವ ಮೂಲಕ ಕ್ಷೇತ್ರದ ಜನರ ಜೊತೆಗೆ ಉತ್ತಮ ನಂಟು ಬೆಳೆಸಿಕೊಂಡಿದ್ದಾರೆ. ಪಕ್ಷ ಟಿಕೇಟ್ ಕೊಟ್ಟರೇ ಈ ಬಾರಿ ನಾಗಠಾಣದಲ್ಲಿ ಬಿಜೆಪಿ ಗೆಲುವು ಪಕ್ಕಾ ಎನ್ನುವ ಹುಮ್ಮಸ್ಸಿನಲ್ಲು ಉಮೇಶ್ ಕಾರಜೋಳ ಇದ್ದಾರಂತೆ.. ಹೀಗಾಗಿ ಕಾರಜೋಳ ಸಹೋದರರ ನಡುವೆಯೇ ಟಿಕೇಟ್ ಗಾಗಿ ಪೈಪೋಟಿ ಇದೆ ಎನ್ತಿವೆ ಬಿಜೆಪಿ ಮೂಲಗಳು..!
ಸ್ಟೋರ್ ಕೀಪರ್ ರನ್ನ ಎಂಎಲ್‌ಎ ಮಾಡಿದ್ರಾ ಜಿಗಜಿಣಗಿ?!
ತಮ್ಮದೆ ಸಮಾಜದ ಹಾಲಿ ಸಚಿವರಾದ ಗೋವಿಂದ ಕಾರಜೋಳರನ್ನ ಬೆಳೆಸೋದಕ್ಕಾಗಿಯೇ ರಮೇಶ್ ಜಿಗಜಿಣಗಿ ರಾಜ್ಯ ರಾಜಕಾರಣದಿಂದ ದೂರವಿದ್ರಂತೆ. ಹಾಗಂತ ಇದು ನಾವು ಹೇಳ್ತಿರೋದಲ್ಲ, ತಾವೇ ಕರೆದ ಸುದ್ದಿಗೋಷ್ಟಿಯಲ್ಲಿ ಮಾಧ್ಯಮದವರ ಮುಂದೆ ಜಿಗಜಿಣಗಿಯವ್ರು ಹೇಳಿಕೊಂಡಿದ್ದು ಇದು. ಸ್ಟೋರ್ ಕೀಪರ್ ಆಗಿದ್ದ ಗೋವಿಂದ ಕಾರಜೋಳರನ್ನ ಕೆಲಸಕ್ಕೆ ರಾಜೀನಾಮೆ ಕೊಡಿಸಿ ತಮ್ಮ ಬಳಿ ಇಟ್ಟುಕೊಂಡು ರಾಜಕಾರಣದಲ್ಲಿ ಬೆಳೆಸಿದ್ದರಂತೆ. ತಮಗೆ ಮುಧೋಳ ಕ್ಷೇತ್ರದಿಂದ ಶಾಸಕ ಸ್ಥಾನಕ್ಕೆ ಸ್ಪರ್ಧೆಗೆ ರೆಡ್ಡಿ ಗೌಡರಿಂದ ಒತ್ತಡ ಬಂದರು, ತಾವು ಆ ಕ್ಷೇತ್ರದಿಂದ ಗೋವಿಂದ ಕಾರಜೋಳರಿಗೆ ಟಿಕೇಟ್ ಕೊಡಿಸಿದ್ರಂತೆ. ರಾಜ್ಯದಲ್ಲಿ ಗೋವಿಂದ ಕಾರಜೋಳರು ಬೆಳೆಯಲಿ ಎಂದೆ 1998ರಿಂದ 25 ವರ್ಷಗಳ ಕಾಲ ಕೇಂದ್ರ ರಾಜಕಾರಣದಲ್ಲೆ ಉಳಿದಿದ್ದಾರಂತೆ. ಇದು ಸ್ವತಃ ಜಿಗಜಿಣಗಿಯವ್ರೆ ಮಾಧ್ಯಮಗಳ ಎದುರು ಹೇಳಿಕೊಂಡಿದ್ದು..! ನಾನು ಆಗ ರಾಜ್ಯ ರಾಜಕಾರಣದಲ್ಲಿ ಉಳಿಯುತ್ತೇನೆ ಎಂದಿದ್ದರೇ ಗೋವಿಂದ ಕಾರಜೋಳರಿಗೆ ಸಮಸ್ಯೆ ಆಗ್ತಿತ್ತು ಎನ್ನುವ ಔದಾರ್ಯದ ಮಾತನ್ನು ಸಹ ಜಿಗಜಿಣಗಿ ಆಡಿದ್ದಾರೆ..
ಜಿಗಜಿಣಗಿ ರಾಜ್ಯ ರಾಜಕಾರಣ ಪ್ರವೇಶ ಪಕ್ಕಾನಾ?!
ನಾಗಠಾಣ ಎಸ್.ಸಿ ಮೀಸಲು ಕ್ಷೇತ್ರ ಅಲ್ಲಿ ಬಿಜೆಪಿ ಪರಿಸ್ಥಿತಿ ಸಧ್ಯದ ಮಟ್ಟಿಗೆ ಮೂರನೇ ಸ್ಥಾನದಲ್ಲಿದೆ. ಇತ್ತ ಕಾರಜೋಳರ ಪುತ್ರರಲ್ಲಿ ಟಿಕೇಟ್ ಗಾಗಿ ಒಳಗೊಳಗೆ ಪೈಪೋಟಿಯು ಇದೆ. ಹೀಗಾಗಿ ನಾಗಠಾಣ ಕ್ಷೇತ್ರದಿಂದ ಹಿರಿಯ ರಾಜಕಾರಣಿ ರಮೇಶ ಜಿಗಜಿಣಗಿ ರಾಜ್ಯ ರಾಜಕಾರಣಕ್ಕೆ ಏಂಟ್ರಿಗೆ ಇದು ಸಕಾಲ ಎನ್ನಲಾಗ್ತಿದೆ. ಇನ್ನು ಜಿಗಜಿಣಗಿ ನಾಗಠಾಣ ಕ್ಷೇತ್ರಕ್ಕೆ ಬರ್ತಾರೆ ಅಂದ್ರೆ ಗೋವಿಂದ ಕಾರಜೋಳರಾಗಲಿ ಅಥವಾ ಅವರ ಪುತ್ರರಾಗಲಿ ತಕರಾರು ಎತ್ತೊದೆ ಇಲ್ಲ. ಮೇಲಾಗಿ ಹೈಕಮಾಂಡ್ ನಾಗಠಾಣ ಟಿಕೇಟ್ ಕೊಡ್ತೀವಿ ಅಂದ್ರೆ ಜಿಗಜಿಣಗಿವ್ರು ಮಾತ್ರ ಒಲ್ಲೆ ಎನ್ನೋಲ್ಲ.. ಹೀಗಾಗಿ ರಾಜ್ಯರಾಜಕಾರಣಕ್ಕೆ ರಮೇಶ ಜಿಗಜಿಣಗಿ ಏಂಟ್ರಿ ನಾಗಠಾಣದ ಮೂಲಕವೇ ಎನ್ನುವ ಮಾತುಗಳು ಕೇಳಿಬರ್ತಿವೆ..!