ಟಿಪ್ಪು ಸುಲ್ತಾನ್‌ನ ವರ್ಣನೆ ಮಾಡಿದ್ದಕ್ಕೆ ಸ್ವಾಮೀಜಿಗೆ ಈ ಗತಿ: ಮುರುಘಾ ಶ್ರೀ ವಿರುದ್ಧ ಬಿಜೆಪಿ ಶಾಸಕ ಕಿಡಿ
ಪೋಕ್ಸೋ ಕಾಯ್ಡೆಯಡಿ ಬಂಧನವಾಗಿರುವ ಚಿತ್ರದುರ್ಗದ ಮುರುಘಾ ಶರಣರ ವಿರುದ್ಧ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಾಗ್ದಾಳಿ ನಡೆಸಿದ್ದಾರೆ.
ವಿಜಯಪುರ, (ಸೆಪ್ಟೆಂಬರ್.03): ಅಪ್ರಾಪ್ತೆಯರ ಮೇಲೆ ಅತ್ಯಾಚಾರ ನಡೆಸಿದ ಆರೋಪ ಹಿನ್ನೆಲೆಯಲ್ಲಿ ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಶಿವಾಚಾರ್ಯ ಶರಣರ ಬಂಧನವಾಗಿದೆ. ಮುರುಘಾ ಶ್ರೀ ಬಂಧನ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳು ಅಂತರ ಕಾಪಾಡಿಕೊಂಡಿವೆ.
ವೀರಶೈವ ಲಿಂಗಾಯತರ ಶ್ರದ್ಧಾಕೇಂದ್ರವಾಗಿರುವುದರಿಂದ ಈ ಪ್ರಕರಣ ಮುಂದಿನ ಚುನಾವಣಾ ದೃಷ್ಟಿಯಿಂದಲೂ ಮಹತ್ವ ಪಡೆದಿದೆ. ಆದ್ದರಿಂದ ಯಾವುದೇ ಪರ ವಿರೋಧ ಹೇಳಿಕೆ ನೀಡದೇ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಮೌನಕ್ಕೆ ಜಾರಿದ್ದಾರೆ.
ಮುರುಘಾ ಶ್ರೀ ಬಂಧನ: JDS, BJP, Congress ಎಚ್ಚರಿಕೆ ಹೆಜ್ಜೆ, ಮೌನ ಮುರಿದ ಸಿದ್ದು
ಈ ಬಗ್ಗೆ ಮಾಧ್ಯಮಗಳು ರಾಜಕೀಯ ನಾಯಕರ ಬಳಿ ಪ್ರತಿಕ್ರಿಯೆ ಕೇಳಿದಾಗ ಕಾನೂನು ಪ್ರಕಾರ ಕ್ರಮ ಅಂತ ಹೇಳಿ ಜಾರಿಕೊಳ್ಳುತ್ತಿದ್ದಾರೆ. ಅದರಲ್ಲೂ ಆಡಳಿತಾರೂಢ ಬಿಜೆಪಿ, ಮುರುಘಾ ಶ್ರೀ ಬಂಧನ ಪ್ರಕರಣದಲ್ಲಿ ಎಚ್ಚರಿಕೆ ಹೆಜ್ಜೆ ಇಟ್ಟಿದೆ. ಏನಾದರೂ ಹೇಳಿಕೆ ಕೊಟ್ರೆ ಇನ್ನೇನು ಆಗಬಹುದು ಎಂದು ಬಹಿರಂಗ ಹೇಳಿಕೆಯಿಂದ ದೂರ ಉಳಿದಿದ್ದು,ಸಾಧ್ಯವಾದಷ್ಟು ಅಂತರ ಕಾಪಾಡಿಕೊಂಡಿದೆ. ಆದ್ರೆ, ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಾತ್ರ ಮುರುಘಾ ಶ್ರೀಗಳ ವಿರುದ್ಧ ಕಿಡಿಕಾರಿದ್ದಾರೆ.
ಮುರಘಾ ಶ್ರೀ ವಿರುದ್ಧ ಯತ್ನಾಳ್ ವಾಗ್ದಾಳಿ
ವಿಜಯಪುರದಲ್ಲಿ ಇಂದು(ಶನಿವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಟಿಪ್ಪು ಸುಲ್ತಾನನನ್ನು ವರ್ಣನೆ ಮಾಡಿದಕ್ಕೆ ಸ್ವಾಮೀಜಿಗೆ ಈ ಗತಿ ಬಂದಿದೆ. ಟಿಪ್ಪು ಸುಲ್ತಾನ್ ಪರವಾಗಿದ್ದರ ಪರಸ್ಥಿತಿ ಏನಾಗಿದೆ ನೋಡಿ ಎಂದು ಮುರುಘಾ ಶ್ರೀಗಳ ವಿರುದ್ಧ ವಾಗ್ದಾಳಿ ನಡೆಸಿದರು.
ಟಿಪ್ಪು ಖಡ್ಗ ಪಡೆದ ವಿಜಯ ಮಲ್ಯ ಹಾಳಾದ, ಟಿಪ್ಪು ಸಿನಿಮಾ ಮಾಡಿ ಪ್ರೊಡ್ಯೂಸರ್ ಹಾಳಾದ. ಟಿಪ್ಪು ಜಯಂತಿ ಮಾಡಿ ಸಿದ್ದರಾಮಯ್ಯ ಸೋತರು. ಇದೀಗ ಸ್ವಾಮೀಜಿಗಳ ಸರದಿ ಎಂದು ವ್ಯಂಗ್ಯವಾಡಿದರು.
ಚಿತ್ರದುರ್ಗ ಮದಕರಿ ನಾಯಕರು, ಒನಕೆ ಓಬವ್ವರ ನಾಡು. ಅಂತಹ ನಾಯಕರ ನಾಡಿನಲ್ಲಿರುವ ಮಠದಲ್ಲಿ ಟಿಪ್ಪುವಿನ ಪುತ್ಥಳಿ ಮಾಡಿದ್ದು ತಪ್ಪು. ಮದಕರಿ ನಾಯಕರ ನೂರಾರು ಎಕರೆ ಜಮೀನು ಮಠಕ್ಕೆ ನೀಡಿದ್ದಾರೆ. ಮದಕರಿ ನಾಯಕರ ಪ್ರದೇಶದ ಮಠದಲ್ಲಿ ಟಿಪ್ಪುವಿನ ವರ್ಣನೆ ಮಾಡಬಾರದಿತ್ತು ಎಂದರು.
ಮುರುಘಾ ಮಠ ಲಿಂಗಾಯತ ಮಠ, ಹಿಂದೂಗಳ ಮಠ. ಆದರೆ ಅಲ್ಲಿನ ಸ್ವಾಮಿಗಳು ಕಮುನಿಷ್ಠರನ್ನು ನಂಬಿ ಹೀಗಾದರು. ಶ್ರೀಗಳನ್ನು ಬದಲಾಯಿಸಿ ಬೇರೆಯವರಿಗೆ ಮಠ ನೀಡಬೇಕು. ಉತ್ತಮ ಆಡಳಿತಗಾರರನ್ನು ನೇಮಕ ಮಾಡಬೇಕು. ಸಮಾಜದ ಹಿರಿಯರು ಈ ವಿಚಾರದಲ್ಲಿ ಗಮನ ಹರಿಸಬೇಕು ಎಂದು ಬಸನಗೌಡ ಪಾಟೀಲ್ ಯತ್ನಾಳ್ ಆಗ್ರಹಿಸಿದರು.