ಕಂದಾಯ ಸಚಿವರ ಕ್ಷೇತ್ರದಲ್ಲಿಯೇ ಇಬ್ಬರು ಸಚಿವರು ಜಮೀನು ನುಂಗೋ ಹುನ್ನಾರ ನಡೆಸಿದ್ದಾರೆ. ಬೆಂಗಳೂರಿನ ಹೃದಯ ಭಾಗದಲ್ಲಿನ ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಜಮೀನು ನುಂಗೋ ಹುನ್ನಾರ ನಡೆದಿದೆ 20 ಎಕರೆ ಜಮೀನನ್ನು ಬೇನಾಮಿಯಾಗಿ ಕಬಳಿಸಲು ನಕಲಿ ಕಾಗದ ಪತ್ರ ಮಾಡಿ ಕಬಳಿಸಲು ಮುಂದಾಗಿದ್ದಾರೆ ಎಂದು ಹೊಸ ಬಾಂಬ್ ಸಿಡಿಸಿದ ಯತ್ನಾಳ್‌ 

ವಿಜಯಪುರ(ಜೂ.21):  ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರು ಬೇಕಾದರೂ ಸ್ಪರ್ಧೆ ಮಾಡಬಹುದು. ಆದರೆ ಚುನಾವಣೆ ಸ್ಪರ್ಧೆಯ ವಿಚಾರದಲ್ಲಿ ಚುನಾವಣಾ ಆಯೋಗ ಕೆಲ ಕಾಯ್ದೆಗಳನ್ನ ಮಾರ್ಪಾಡು ಮಾಡಬೇಕು. ಒಂದು ಕ್ಷೇತ್ರದಲ್ಲಿ ಸಂಸದ ಶಾಸಕರಾಗಿದ್ದವರು ಮತ್ತೊಂದು ಕ್ಷೇತ್ರಕ್ಕೆ ಸ್ಪರ್ಧೆ ಮಾಡಲು ಅವಕಾಶ ನೀಡಬಾರದು. ಈ ಕುರಿತು ಹೊಸ ಕಾನೂನು ಜಾರಿ ಮಾಡಬೇಕೆಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಒತ್ತಾಯಿಸಿದ್ದಾರೆ.

ಚನ್ನಪಟ್ಟಣ ಉಪಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಡಿ.ಕೆ.ಶಿವಕುಮಾರ್‌ ಅಥವಾ ಡಿ.ಕೆ. ಸುರೇಶ್ ಸ್ಪರ್ಧೆ ಮಾಡುವ ಚರ್ಚೆಗೆ ಸಂಬಂಧಿಸಿದಂತೆ ಇಂದು(ಶುಕ್ರವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಬಸನಗೌಡ ಪಾಟೀಲ್‌ ಯತ್ನಾಳ್‌, ಕಳೆದ ಲೋಕಸಭಾ ಚುನಾವಣೆಯಲ್ಲಿ ನನಗೂ ಕೂಡ ಬಾಗಲಕೋಟೆ, ಬೆಳಗಾವಿಯಿಂದ ಸ್ಪರ್ಧೆ ಮಾಡುವಂತೆ ಹೇಳಲಾಗಿತ್ತು. ನಾನು ಸ್ಪರ್ಧೆ ಮಾಡಲಿಲ್ಲ. ಒಂದು ಕ್ಷೇತ್ರದಲ್ಲಿ ಶಾಸಕರಾಗಿದ್ದವರು ಸಚಿವರಾಗಿದ್ದರೂ ಕೂಡ ಉಪಚುನಾವಣೆಗಳಲ್ಲಿ ಸ್ಪರ್ಧೆ ಮಾಡುವಂತಾಗಬಾರದು. ಈ ನಿಟ್ಟಿನಲ್ಲಿಯೂ ಕೂಡ ಕಾನೂನು ಜಾರಿಯಾಗಬೇಕು. ಉಪಚುನಾವಣೆ ನಡೆಯುವುದರಿಂದ ನೀತಿ ಸಂಹಿತೆ ಎರಡು ತಿಂಗಳು ಜಾರಿಯಲ್ಲಿರುತ್ತದೆ. ಇದರಿಂದ ಅಭಿವೃದ್ಧಿ ಕೆಲಸ ಕಾಮಗಾರಿಗಳು ಆಗಲ್ಲ. ಈ ಮೂಲಕ ಚುನಾವಣಾ ವಿಚಾರದಲ್ಲಿ ಹೊಸ ಕಾನೂನು ಜಾರಿ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. 

ವಾಲ್ಮೀಕಿ ನಿಗಮದ ಬಹುಕೋಟಿ ಹಣ ಗುಳುಂ ಆರೋಪ; ಅಮಿತ್ ಶಾಗೆ ಪತ್ರ ಬರೆದ ಯತ್ನಾಳ್!

ರಾಜ್ಯ ಸರ್ಕಾರದಿಂದ ಬೆಲೆ ಏರಿಕೆ ವಿಚಾರದ ಬಗ್ಗೆ ಮಾತನಾಡಿದ ಯತ್ನಾಳ್‌, ಈಗಾಗಲೇ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡಲಾಗಿದೆ. ಈಗ ಬಸ್ ಪ್ರಯಾಣ ದರವನ್ನು ಏರಿಕೆ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರ ದಿವಾಳಿಯಾಗಿದೆ. ಗ್ಯಾರಂಟಿ ಯೋಜನೆಗಳು ಜೀವಂತವಾಗಿರಲು ಸರ್ಕಾರ ಬೆಲೆ ಏರಿಕೆ ಮಾಡುತ್ತಿದೆ. ಬೆಲೆ ಏರಿಕೆ ಮಾಡದಿದ್ದರೆ ಸರ್ಕಾರಿ ನೌಕರರ ಸಂಬಳ‌ ನೀಡಲು ಸರ್ಕಾರದ ಬಳಿ ಹಣವಿಲ್ಲದಂತಾಗಿದೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 

ಕಾಂಗ್ರೆಸ್ ಸಚಿವರು‌ ಶಾಸಕರು ಅಭಿವೃದ್ಧಿಗೆ ಅನುದಾನ‌ ನೀಡುತ್ತಿಲ್ಲ ಎನ್ನುತ್ತಿದ್ದಾರೆ. ಗ್ಯಾರಂಟಿ ಯೋಜನೆಗಳು ಬೇಡವೆಂದು ಸಚಿವ ಚೆಲುವರಾಯಸ್ವಾಮಿ ಹೇಳಿದ್ದಾರೆ. ಗ್ಯಾರಂಟಿ ಯೋಜನೆಗಳನ್ನು ಬಂದ್ ಮಾಡಿದರೆ ಮತ್ತಷ್ಟು ಕಾಂಗ್ರೆಸ್‌ಗೆ ಪರಿಣಾಮ ಬೀರಲಿದೆ ಎಂದು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಗ್ಯಾರಂಟಿ ಯೋಜನೆಗಳಿಗಾಗಿ ಬೆಲೆ ಏರಿಕೆ ಮಾಡಲಾಗುತ್ತಿದೆ. ಮದ್ಯದ ದರವನ್ನು ಏರಿಕೆ‌ ಮಾಡುತ್ತಿದ್ದಾರೆ. ಮದ್ಯದ ದರ ಏರಿಕೆ‌ ಮಾಡಿದರೆ ಮಾಡಲಿ ಎಂದು ಹೇಳಿದ್ದಾರೆ. 

ಸರ್ಕಾರ ತನ್ನ ವೈಫಲ್ಯ ಮುಚ್ಚಿಕೊಳ್ಳಲು ಪೊಲೀಸರ ಅಮಾನತು: ಶಾಸಕ ಬಸನಗೌಡ ಯತ್ನಾಳ

ಸರ್ಕಾರ ವ್ಯಾಪಕ‌ ಭ್ರಷ್ಟಾಚಾರದಲ್ಲಿ ಭಾಗಿಯಾಗಿದೆ. ಎಲ್ಲ ಮಂತ್ರಿಗಳು‌ ಲೂಟಿ ಮಾಡುತ್ತಿದ್ದಾರೆ. ಕಂದಾಯ ಸಚಿವರ ಕ್ಷೇತ್ರದಲ್ಲಿಯೇ ಇಬ್ಬರು ಸಚಿವರು ಜಮೀನು ನುಂಗೋ ಹುನ್ನಾರ ನಡೆಸಿದ್ದಾರೆ. ಬೆಂಗಳೂರಿನ ಹೃದಯ ಭಾಗದಲ್ಲಿನ ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಜಮೀನು ನುಂಗೋ ಹುನ್ನಾರ ನಡೆದಿದೆ 20 ಎಕರೆ ಜಮೀನನ್ನು ಬೇನಾಮಿಯಾಗಿ ಕಬಳಿಸಲು ನಕಲಿ ಕಾಗದ ಪತ್ರ ಮಾಡಿ ಕಬಳಿಸಲು ಮುಂದಾಗಿದ್ದಾರೆ ಎಂದು ಯತ್ನಾಳ್‌ ಹೊಸ ಬಾಂಬ್ ಸಿಡಿಸಿದ್ದಾರೆ.

ಸಕ್ಕರೆ ಸಚಿವ ಶಿವಾನಂದ‌ ಪಾಟೀಲರ ಹಗರಣ ಶೀಘ್ರವೇ ಬಯಲಿಗೆ ಬರಲಿದೆ ಎಂದು ಯತ್ನಾಳ್‌ ಸ್ಫೋಟಕ ಹೇಳಿಕೆ ನೀಡಿದ್ದಾರೆ.