ರಾಯಚೂರು: ವಿಜಯ ಯಾತ್ರೆ ವಿಶ್ವಾಸ ಮೂಡಿಸಿದ ಜನಸಂಕಲ್ಪ ಯಾತ್ರೆ

ಗಡಿಗ್ರಾಮಕ್ಕೆ ನೆರೆ ಜಿಲ್ಲೆಗಳಿಂದಲೂ ಜನ ಭಾಗಿ, ಜನದಟ್ಟಣೆ, ಟ್ರಾಫಿಕ್‌ ಜಾಮ್‌, ಕಾರ್ಯಕ್ರಮಕ್ಕೆ ಶಾಲೆ ಕಾಂಪೌಂಡ್‌ ಧ್ವಂಸ: ಆಕ್ರೋಶ

Vijay Yatra is Confidence Inspiring in Jana Sankalpa Yatra in Raichur grg

ರಾಮಕೃಷ್ಣ ದಾಸರಿ

ರಾಯಚೂರು(ಅ.12):  ಮುಂಬರುವ ವಿಧಾನಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಾಧನೆಗಳನ್ನು ಜನಸಾಮಾನ್ಯರಿಗೆ ತಿಳಿಸುವುದರ ಜೊತೆಗೆ ಪಕ್ಷದ ಸಂಘಟನೆಗಾಗಿ ಕೈಗೊಂಡಿರುವ ಬಿಜೆಪಿ ಜನಸಂಕಲ್ಪ ಯಾತ್ರೆಗೆ ಮಂಗಳವಾರ ಅಭೂತಪೂರ್ವ ಚಾಲನೆ ದೊರೆಯಿತು. ರಾಯಚೂರು ಜಿಲ್ಲೆಯಿಂದಲೇ ಆರಂಭಗೊಂಡ ಜನಸಂಕಲ್ಪ ಯಾತ್ರೆ ಎರಡು ತಂಡಗಳ ನೇತೃತ್ವದಲ್ಲಿ ಡಿಸೆಂಬರ್‌ವರೆಗೆ ರಾಜ್ಯದ 100ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ನಡೆಯಲಿದ್ದು, ಆ ವೇಳೆಗೆ ವಿಜಯದ ಯಾತ್ರೆಯಾಗಲಿದೆ ಎನ್ನುವ ವಿಶ್ವಾಸವನ್ನು ಕೊಟ್ಟಿದೆ. ಇದರ ಜೊತೆಗೆ ರಾಯಚೂರು ಜಿಲ್ಲೆಗೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಭರ್ಜರಿ ಘೋಷಣೆಗಳನ್ನು ಸಹ ನೀಡಿರುವುದು ವಿಶೇಷವಾಗಿತ್ತು.

ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಗಿಲ್ಲೆಸುಗೂರು ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಬಿಜೆಪಿ ಜನಸಂಕಲ್ಪ ಯಾತ್ರೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಅವರು ಮರದಿಂದ ಭತ್ತವನ್ನು ಸುರಿಯುವುದರ ಮುಖಾಂತರ ಚಾಲನೆ ನೀಡಿದರು. ನಂತರ ಸಮೀಪದ ಮಂತ್ರಾಲಯಕ್ಕೆ ತೆರಳಿ ರಾಯರ ದರ್ಶನ ಪಡೆದು ಮರಳಿ ಗಿಲ್ಲೆಸುಗೂರಿಗೆ ಆಗಮಿಸಿ ದಲಿತ ಮನೆಯಲ್ಲಿ ಚಹಾ ಕುಡಿದು ಹೆಲಿಕ್ಯಾಪ್ಟರ್‌ ಮುಖಾಂತರ ವಿಜಯನಗರಕ್ಕೆ ತೆರಳಿದರು.

ಗೆದ್ದ ಸ್ಥಾನ ಉಳ್ಸಿಕೊಳ್ಳಿ, ನಾವು ಬರ್ತಿದ್ದೀವಿ: ಸಿಎಂ ಬೊಮ್ಮಾಯಿ

ಎಲ್ಲೆಡೆ ಹಬ್ಬದ ಸಂಭ್ರಮ, ಜನವೋಜನ:

ಯಾತ್ರೆಯಲ್ಲಿ ರಾಯಚೂರು ನಗರ ಮತ್ತು ಗ್ರಾಮೀಣ ಸೇರಿದಂತೆ ಅಕ್ಕ-ಪಕ್ಕದ ಜಿಲ್ಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಜನರು ಭಾಗವಹಿಸಿದ್ದರು. ಗಡಿಗ್ರಾಮದಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದ ಹಿನ್ನೆಲೆಯಲ್ಲಿ ಪಕ್ಕದ ತೆಲಂಗಾಣ ಹಾಗೂ ಆಂಧ್ರಪ್ರದೇಶದಿಂದಲೂ ಸಹ ಬಿಜೆಪಿ ಅಭಿಮಾನಿಗಳು ಪಾಲ್ಗೊಂಡಿದ್ದರು. ಯಾತ್ರೆ ಹಿನ್ನೆಲೆಯಲ್ಲಿ ಎಲ್ಲೆಡೆ ಹಬ್ಬದ ವಾತಾವರಣ ನಿರ್ಮಾಣಗೊಂಡಿತ್ತು. ರಾಯಚೂರು-ಮಂತ್ರಾಲಯ ರಾಷ್ಟ್ರೀಯ ಹೆದ್ದಾರಿಯುದ್ದಕ್ಕು ದ್ವಿಚಕ್ರ, ನಾಲ್ಕು ಚಕ್ರ ವಾಹನಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರು ಆಗಮಿಸುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿದ್ದವು. ರಾಯಚೂರು ನಗರದಿಂದ ಬಿಜೆಪಿ ಯುವಕರು ಬೈಕ್‌ ರಾರ‍ಯಲಿಯನ್ನು ನಡೆಸಿದರು. ನಿರೀಕ್ಷಿತ ಪ್ರಮಾಣದಲ್ಲಿ ಜನರು ಸೇರದೇ ಇದ್ದರು ಮೈದಾನಕ್ಕೆ ತಕ್ಕಂತೆ ಜನರು ಭಾಗವಹಿಸಿದ್ದರಿಂದ ನೋಡಿದ ಕಡೆಯಲ್ಲ ಜನಸಾಗರದ ದೃಶ್ಯ ಕಾಣಿತು.

ಸಿಎಂ ಭರ್ಜರಿ ಘೋಷಣೆ:

ಜನಸಂಕಲ್ಪ ಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ರಾಯಚೂರು ಜಿಲ್ಲೆ ಜನರು ಬಹುದಿನಗಳ ಬೇಡಿಕೆಯಾದ ಏಮ್ಸ್‌ ಸ್ಥಾಪನೆಗೆ ಕ್ರಮ ವಹಿಸುವುದಾಗಿ ತಿಳಿಸಿದರು. ಇದರ ಜೊತೆಗೆ ಗ್ರಾಮೀಣ ಭಾಗದ ವ್ಯಾಪ್ತಿಗೆ ಬರುವ 23 ಕೆರೆಗಳ ಭರ್ತಿ, ತುಂಗಭದ್ರಾ ಸೇತುವೆಗೆ ಬಿಎಸ್‌ವೈ ಅವರ ಹೆಸರನ್ನು ನಾಮಕರಣ ಮಾಡುವುದು, ವಿಶೇಷ ಕೈಗಾರಿಕಾ ಯೋಜನೆ ಸ್ಥಾಪನೆ ಮಾಡುವುದಾಗಿ ಭರವಸೆ ನೀಡಿದರು.

ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ 150 ಸ್ಥಾನ ಖಚಿತ: ಯಡಿಯೂರಪ್ಪ

ಟ್ರಾಫಿಕ್‌ ಜಾಮ್‌, ಜನದಟ್ಟಣೆ ನಿಯಂತ್ರಣಕ್ಕೆ ಹರಸಾಹಸ

ಬಿಜೆಪಿ ಕಾರ್ಯಕ್ರಮದಿಂದಾಗಿ ಗಿಲ್ಲೆಸುಗೂರು ಸೇರಿದಂತೆ ಸುತ್ತಮುತ್ತಲಿನ ಪ್ರದೇಶ. ಮುಖ್ಯರಸ್ತೆಯಲ್ಲಿ ಇಡೀ ದಿನ ಟ್ರಾಫಿಕ್‌ ಜಾಮ್‌ ಸಮಸ್ಯೆ ಉಂಟಾಯಿತು. ಖಾಸಗಿ ವಾಹನಗಳ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ಎಲ್ಲೆಡೆ ವಾಹನಗಳ ಪಾರ್ಕಿಂಗ್‌, ಜನರ ಸಂಚಾರ, ವಾಹನಗಳ ಓಡಾಟವು ಸಾಮಾನ್ಯವಾಗಿತ್ತು. ಜನದಟ್ಟಣೆ, ಟ್ರಾಫಿಕ್‌ ನಿಯಂತ್ರಣಕ್ಕೆ ಪೊಲೀಸರು ಹರಸಾಹಸಪಟ್ಟರು.

ಕಾರ್ಯಕ್ರಮಕ್ಕಾಗಿ ಶಾಲೆ ಕಾಂಪೌಂಡ್‌ ಧ್ವಂಸ

ಗಿಲ್ಲೆಸುಗೂರು ಗ್ರಾಮದ ಸರ್ಕಾರಿ ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜಿನ ಮೈದಾನದಲ್ಲಿಯೇ ಬಿಜೆಪಿ ಜನಸಂಕಲ್ಪ ಯಾತ್ರೆ ಹಮ್ಮಿಕೊಳ್ಳಲಾಗಿತ್ತು. ಕಾಲೇಜಿನ ಮೈದಾನದಲ್ಲಿ ವೇದಿಕೆ ಕಾರ್ಯಕ್ರಮ ಪಕ್ಕದ ಶಾಲಾ ಮೈದಾನದಲ್ಲಿ ಊಟದ ವ್ಯವಸ್ಥೆ ಮಾಡಲಾಗಿತ್ತು. ಜನರ ಓಡಾಟ ಸಲೀಸಾಗಲು ಹಾಗೂ ಕಾರ್ಯಕ್ರಮಕ್ಕೆ ಯಾವುದೇ ಸಮಸ್ಯೆ ಉಂಟಾಗಬಾರದು ಎಂದು ಶಾಲಾ ಕಾಂಪೌಂಡನ್ನು ಧ್ವಂಸಗೊಳಿಸಲಾಗಿದೆ. ಪಕ್ಷದ ಕಾರ್ಯಕ್ರಮಕ್ಕಾಗಿ ಈ ರೀತಿಯಾಗಿ ಮಾಡಿರುವುದಕ್ಕೆ ಜನರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
 

Latest Videos
Follow Us:
Download App:
  • android
  • ios