ಗೆದ್ದ ಸ್ಥಾನ ಉಳ್ಸಿಕೊಳ್ಳಿ, ನಾವು ಬರ್ತಿದ್ದೀವಿ: ಸಿಎಂ ಬೊಮ್ಮಾಯಿ
ಕಾಂಗ್ರೆಸ್ ಮುಳುಗುತ್ತಿರುವ ಹಡಗಾಗಿದೆ, ಸ್ವಲ್ಪ ದಿನಗಳಲ್ಲಿ ಅಲ್ಲಿರುವವರು ಈ ಕಡೆ ಬರುವವರಿದ್ದಾರೆ. ಅದರಲ್ಲಿಯೂ ರಾಯಚೂರು ಜಿಲ್ಲೆಯ ರಾಜಕೀಯ ಕ್ಷೇತ್ರದಲ್ಲಿ ಭಾರಿ ಬದಲಾವಣೆಯಾಗಲಿದೆ ಎಂದ ಸಿಎಂ ಬೊಮ್ಮಾಯಿ
ರಾಯಚೂರು(ಅ.12): ಇನ್ನೊಂದು ಸ್ಥಾನ ಗೆಲ್ಲುವ ಆಲೋಚನೆ ಬಿಡಿ, ಗೆದ್ದು ಬಂದ ಸ್ಥಾನ ಉಳಿಸಿಕೊಳ್ಳಿ, ನಾವು ಬರುತ್ತಾ ಇದ್ದೇವೆ, ರಾಯಚೂರಿನಿಂದ ಜನಸಂಕಲ್ಪ ಯಾತ್ರೆ ಆರಂಭಗೊಂಡಿದೆ. ರಾಜ್ಯದಲ್ಲಿ ಕಾಂಗ್ರೆಸ್ ಧೂಳಿಪಟವಾಗಲಿದೆ. ಇದು ನನ್ನ ನೇರವಾದ ಸವಾಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದರು. ತಾಲೂಕಿನ ಗಿಲ್ಲೇಸುಗೂರು ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಬಿಜೆಪಿ ಜನಸಂಕಲ್ಪ ಯಾತ್ರೆಗೆ ಮರದಿಂದ ಭತ್ತವನ್ನು ಸುರಿಯುವುದರ ಮುಖಾಂತರ ವಿನೂತನವಾಗಿ ಚಾಲನೆ ನೀಡಿ ಮಾತನಾಡಿದ ಅವರು, ಕಾಂಗ್ರೆಸ್ ಮುಳುಗುತ್ತಿರುವ ಹಡಗಾಗಿದೆ, ಸ್ವಲ್ಪ ದಿನಗಳಲ್ಲಿ ಅಲ್ಲಿರುವವರು ಈ ಕಡೆ ಬರುವವರಿದ್ದಾರೆ. ಅದರಲ್ಲಿಯೂ ರಾಯಚೂರು ಜಿಲ್ಲೆಯ ರಾಜಕೀಯ ಕ್ಷೇತ್ರದಲ್ಲಿ ಭಾರಿ ಬದಲಾವಣೆಯಾಗಲಿದೆ ಎಂದರು.
ಅಹಿಂದ ನಾಯಕನ ಹಿಂದೆ ಅಲ್ಪಸಂಖ್ಯಾತರು:
ಅಹಿಂದ ನಾಯಕ ಸಿದ್ದರಾಮಯ್ಯ ಅವರ ಹಿಂದೆ ಹಿಂದುಳಿದವರು ಇಲ್ಲ, ದಲಿತರು ಇಲ್ಲ, ಬರೀ ಅಲ್ಪಸಂಖ್ಯಾತರು ಮಾತ್ರ ಉಳಿದುಬಿಟ್ಟಿದ್ದಾರೆ. ಸಿದ್ದರಾಮಯ್ಯ ಅವರು ಸಮಾಜವಾದದಿಂದ ಬಂದಿರುವವರು. ಯಾವಾಗ ಕಾಂಗ್ರೆಸ್ ಸೇರಿದರೋ ಅಂದಿನಿಂದ ಸಮಾಜವಾದವನ್ನು ಮಡಿಚಿ ಮನೆಯಲ್ಲಿಟ್ಟು ಮರೆತುಬಿಟ್ಟಿದ್ದಾರೆ. ಇದು ದುಃಖದ ಸಂಗತಿಯಾಗಿದೆ. ಆ ಸಣ್ಣ ಹುಡುಗನ ಕೈಕೆಳಗೆ ಸೇವೆ ಮಾಡುತ್ತೀರಲ್ಲ. ಅಧಿಕಾರಕ್ಕಾಗಿ ಏನೆಲ್ಲವನ್ನೂ ಮಾಡಲು ಸಿದ್ಧರಾಗಿದ್ದಿರಿ. ಭಾರತ್ ಜೋಡೋ ಪಾದಯಾತ್ರೆಯು ಅಪ್ರಸ್ತುತವಾಗಿರುವ ರಾಹುಲ್ ಗಾಂಧಿ ಅವರ ರೀಲಾಂಚಿಂಗ್ ಕಾರ್ಯಕ್ರಮವೇ ಹೊರತು ದೇಶಕ್ಕಾಗಿ, ಜನರಿಗಾಗಿ, ದೀನದಲಿತರಿಗಾಗಿ ಅಲ್ಲ. ಅಂತಹ ಯಾತ್ರೆಗೆ ನೀವು ಸಾಥ್ ನೀಡುತ್ತಿದ್ದೀರಿ. ನಿಮ್ಮ ಸ್ಥಾನ ಎಲ್ಲಿತ್ತು. ಏನಾಗಿದೆ ಎಂದು ನೀವು ನೋಡಿಕೊಳ್ಳಿ. ನಿಮ್ಮಿಂದ ನಾವು ಪಾಠ ಕಲಿಯಬೇಕಿಲ್ಲ ಎಂದು ಟೀಕಿಸಿದರು.
ಬಿಜೆಪಿಯ 150 ವೇಗಕ್ಕೆ 100 ಜೋಡೋ ಯಾತ್ರೆ ಮಾಡಿದರೂ ಆಗಲ್ಲ: ಶ್ರೀರಾಮುಲು
ರಾಜ್ಯಕ್ಕೆ ಕಾಂಗ್ರೆಸ್ ದೌರ್ಭಾಗ್ಯದ ಕೊಡುಗೆ ನೀಡಿದೆ:
ಬಿಜೆಪಿ ದಿಟ್ಟನಿಲುವು, ನಮ್ಮ ನಾಯಕ ಬಿ.ಎಸ್.ಯಡಿಯೂರಪ್ಪ ಅವರ ಆಶೀರ್ವಾದದಿಂದ ರಾಜ್ಯದಲ್ಲಿ ಎಸ್ಸಿ, ಎಸ್ಟಿಮೀಸಲಾತಿ ಹೆಚ್ಚಿಸಿದ್ದು, ಅದನ್ನು ಕಾಂಗ್ರೆಸ್ ಕೊಡುಗೆ ಎನ್ನುತ್ತಿದ್ದಾರೆ. ಹತ್ತು ಹಲವಾರು ಭಾಗ್ಯ ಕೊಡುತ್ತೇವೆ ಎಂದು ಆಡಳಿತ ನಡೆಸಿದ ಕಾಂಗ್ರೆಸ್ ಕೊನೆಗೆ ರಾಜ್ಯಕ್ಕೆ ದೌರ್ಭಾಗ್ಯವನ್ನು ಕೊಡುಗೆಯಾಗಿ ಕೊಟ್ಟಿದ್ದಾರೆ. ಕಾಂಗ್ರೆಸ್ ರಾಜ್ಯದ ಪರಿಶಿಷ್ಟಜಾತಿ ಮತ್ತು ಪಂಗಡದವರಿಗೆ ದೌರ್ಭಾಗ್ಯ ನೀಡಿದ್ದಾರೆ ಎಂದರು.
ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಹಿಂದುಳಿದ ವರ್ಗದವರು, ದೀನದಲಿತರು ನೆನಪಾಗಲಿಲ್ಲ. ಅವರ ರಾಜಕುಮಾರ ಪಾದಯಾತ್ರೆ ಮಾಡುವರೆಂದು ರಾಯಚೂರಿಗೆ ತಯಾರಿಗೆ ಬಂದಿದ್ದಾರೆ. ಅವರಿಗೆ ರಾಯಚೂರಿನಲ್ಲಿ ಜನ ಸೇರುತ್ತಾರೋ ಇಲ್ಲವೋ ಎಂಬ ಭಯ ಇದೆ. ಅದಕ್ಕೆ ಬಂದಿದ್ದಾರೆ. ಎಸ್ಸಿ, ಎಸ್ಟಿಮೀಸಲಾತಿ ಕಾಂಗ್ರೆಸ್ ಕೊಡುಗೆ ಎನ್ನುತ್ತಾರೆ. ನೀವು ಅಧಿಕಾರದಲ್ಲಿದ್ದಾಗ ದೀನದಲಿತರ ಜನಸಂಖ್ಯೆ ಹೆಚ್ಚಾಗಿದೆ. ಅವುಗಳಿಗೆ ಹೆಚ್ಚು ಜಾತಿಗಳು ಸೇರ್ಪಡೆಯಾಗಿವೆ. ಅವರ ಮೀಸಲಾತಿ ಹೆಚ್ಚಿಸಬೇಕು. ಅವಮಾನ, ತುಳಿತಕ್ಕೆ ಒಳಗಾಗಿದ್ದಾರೆ, ಸಮಾಜದ ಮುಖ್ಯವಾಹಿನಿಯಿಂದ ದೂರವಿದ್ದಾರೆ. ಪರಿಶಿಷ್ಟಜಾತಿ ಮತ್ತು ಪಂಗಡದವರಿಗೆ ಶಿಕ್ಷಣ ಇಲ್ಲ, ಉದ್ಯೋಗವಿಲ್ಲದೆ ಹಿಂದುಳಿದಿದ್ದಾರೆ, ಅವರನ್ನು ಕೈಯೆತ್ತಿ ಹಿಡಿಯಬೇಕೆಂಬ ಜ್ಞಾನವೂ ಇಲ್ಲದೇ ಇದ್ದರು.
ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ 150 ಸ್ಥಾನ ಖಚಿತ: ಯಡಿಯೂರಪ್ಪ
ಭ್ರಷ್ಟಚಾರದ ಭಾಗ್ಯ ಕಾಂಗ್ರೆಸ್ ಪಕ್ಷದ್ದಾಗಿದೆ. ದಿಂಬು, ಹಾಸಿಗೆಯಲ್ಲೂ ಭ್ರಷ್ಟಾಚಾರ ಎಸಗಿದೆ. ನೀರಾವರಿ ಸೇರಿ ಪ್ರತಿ ಇಲಾಖೆಯಲ್ಲೂ ಕಾಂಗ್ರೆಸ್‌ನವರು ಅನೇಕ ಹಗರಣ ಮಾಡಿದ್ದಾರೆ. ತನಿಖೆ ಮಾಡಿ ಎಂದು ಹೇಳುತ್ತಿದ್ದಾರೆ. ಸ್ವಲ್ಪ ದಿನಗಳಲ್ಲಿ ಖಂಡಿತ ತನಿಖೆ ಮಾಡಿಸುತ್ತೇವೆ. ನಾವು ಸುಮ್ಮನೆ ಬಿಟ್ಟರೂ ಜನರು ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ ಎಂದು ಎಚ್ಚರಿಸಿದರು.
ಆರ್‌ಎಸ್‌ಎಸ್ ಕೈಗೊಂಬೆ ಆರೋಪಕ್ಕೆ ದಿಟ್ಟ ಉತ್ತರ:
ನಾನು ಆರ್‌ಎಸ್‌ಎಸ್ ಕೈಗೊಂಬೆ ಎಂದು ಕಾಂಗ್ರೆಸ್ ಆರೋಪಿಸುತ್ತದೆ. ಆರ್‌ಎಸ್‌ಎಸ್ ಒಂದು ದೇಶಭಕ್ತಿಯ ಸಂಸ್ಥೆ. ದೇಶವನ್ನು ಒಗ್ಗೂಡಿಸಿ, ಕಟ್ಟಲು ಶ್ರಮಿಸಿದ, ದೀನದಲಿತರ ಸೇವೆ, ಅನಾಥರ ಸೇವೆ ಮಾಡಿ, ತಳಸಮುದಾಯಕ್ಕೆ ಧ್ವನಿಕೊಟ್ಟು ಮುಖ್ಯವಾಹಿನಿಗೆ ತಂದ ಶ್ರೇಷ್ಠ ಸಂಸ್ಥೆ ಆರ್‌ಎಸ್‌ಎಸ್. ಅವರ ಬಗ್ಗೆ ಮಾತನಾಡುವ ನೈತಿಕ ಹಕ್ಕು ಕಾಂಗ್ರೆಸ್ಸಿಗಿಲ್ಲ ಎಂದು ಆರೋಪಕ್ಕೆ ದಿಟ್ಟಉತ್ತರ ನೀಡಿದರು.
ರಾಯಚೂರಿಗೆ ಏಮ್; ದೆಹಲಿಗೆ ಭೇಟಿ:
ರಾಯಚೂರಿನಲ್ಲಿ ಏಮ್ಸ್ ಸ್ಥಾಪಿಸುವ ಕುರಿತು ಈಗಾಗಲೇ ಕೇಂದ್ರ ವೈದ್ಯಕೀಯ ಸಚಿವರೊಂದಿಗೆ ಸಮಾಲೋಚನೆ ನಡೆಸಲಾಗಿದೆ. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಸಹ ಜಿಲ್ಲೆಯ ಜನರ ಬೇಡಿಕೆ ಬೆಂಬಲಿಸಿದ್ದಾರೆ. ಹೀಗಾಗಿ ಮುಂದಿನ ವಾರ ದೆಹಲಿಗೆ ತೆರಳಿ ಪ್ರಧಾನಮಂತ್ರಿ ಅವರೊಂದಿಗೆ ಸಮಾಲೋಚನೆ ನಡೆಸಲಾಗುವುದು. ಇದೇ ಭಾಗದಲ್ಲಿ ಏಮ್ಸ್ ಸ್ಥಾಪಿಸುವುದಕ್ಕೆ ಪ್ರಾಮಾಣಿಕ ಪ್ರಯತ್ನವನ್ನು ಮಾಡಲಾಗುವುದು ಎಂದು ಸಿಎಂ ಬೊಮ್ಮಾಯಿ ಭರವಸೆ ನೀಡಿದರು.