ಬೆಂಗಳೂರು(ಜೂ.19): ವಿಧಾನಪರಿಷತ್‌ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಆರ್‌.ಶಂಕರ್‌ ಒಟ್ಟು ಆಸ್ತಿಯ ಮೌಲ್ಯ 301.38 ಕೋಟಿ ರು.ಗಳಿಗಿಂತ ಹೆಚ್ಚಿದೆ. 2018ರಲ್ಲಿ ಇವರು ಸುಮಾರು 265 ಕೋಟಿ ಆಸ್ತಿ ಹೊಂದಿದ್ದರು.

ಶಂಕರ್‌ ಹೆಸರಲ್ಲಿ 195 ಕೋಟಿ ರು. ಮೌಲ್ಯದ ಆಸ್ತಿ ಮತ್ತು ಪತ್ನಿ ಧನಲಕ್ಷ್ಮಿ ಹೆಸರಲ್ಲಿ 106 ಕೋಟಿ ರು. ಮೌಲ್ಯದ ಆಸ್ತಿಯನ್ನು ಹೊಂದಲಾಗಿದೆ. ಶಂಕರ್‌ ಬಳಿ 35.10 ಲಕ್ಷ ರು. ನಗದು ಹೊಂದಿದ್ದು, ಪತ್ನಿ ಧನಲಕ್ಷ್ಮಿ ಬಳಿ 27.77 ಲಕ್ಷ ರು. ನಗದು ಇದೆ ಎಂದು ಚುನಾವಣಾಧಿಕಾರಿಗೆ ಸಲ್ಲಿಕೆ ಮಾಡಿರುವ ಆಸ್ತಿ ವಿವರದಲ್ಲಿ ಮಾಹಿತಿ ನೀಡಿದ್ದಾರೆ.

ಶಂಕರ್‌ ಹೆಸರಲ್ಲಿ 28.90 ಕೋಟಿ ರು. ಮೌಲ್ಯದ ಚರಾಸ್ತಿ ಮತ್ತು 166.30 ಕೋಟಿ ರು. ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ಅಂತೆಯೇ ಪತ್ನಿಯ ಹೆಸರಲ್ಲಿ 13.90 ಕೋಟಿ ರು. ಮೌಲ್ಯದ ಚರಾಸ್ತಿ ಮತ್ತು 92.25 ಕೋಟಿ ರು. ಮೌಲ್ಯದ ಸ್ಥಿರಾಸ್ತಿ ಇದೆ. ಶಂಕರ್‌ ಹೆಸರಲ್ಲಿ 44.63 ಕೋಟಿ ರು. ಸಾಲ ಮತ್ತು ಪತ್ನಿ ಹೆಸರಲ್ಲಿ 21.93 ಕೋಟಿ ರು. ಸಾಲ ಇದೆ.

ಪರಿಷತ್‌ ಎಲೆಕ್ಷನ್‌: ಬಿ.ಕೆ. ಹರಿಪ್ರಸಾದ್‌ ಬಳಿ ಇದೆ 14.62 ಕೋಟಿ ರು. ಮೌಲ್ಯದ ಆಸ್ತಿ

ಶಂಕರ್‌ ಹೆಸರಲ್ಲಿ 1.27 ಕೋಟಿ ರು. ಮೌಲ್ಯದ ಮೂರು ಇನೋವಾ ಕಾರ್‌, ಸ್ಕಾರ್ಪಿಯೋ ಮತ್ತು ಬಿಎಂಡಬ್ಲೂ ಕಾರ್‌ ಇದೆ. ಪತ್ನಿ ಹೆಸರಲ್ಲಿ 81.91 ಲಕ್ಷ ರು. ಮೌಲ್ಯದ ಇನ್ನೋವಾ, ಮಹೀಂದ್ರಾ ಕಾರ್‌, ಫೋರ್ಡ್‌ ಮತ್ತು ಬಿಎಂಡಬ್ಯೂ ಕಾರ್‌ ಇದೆ ಎಂದು ಆಸ್ತಿ ವಿವರದಲ್ಲಿ ಉಲ್ಲೇಖ ಮಾಡಲಾಗಿದೆ.

ವಿವಿಧ ಬ್ಯಾಂಕ್‌ನ ಖಾತೆಯಲ್ಲಿ 3.57 ಲಕ್ಷ ರು. ಮತ್ತು ಪತ್ನಿಯ ಹೆಸರಲ್ಲಿನ ವಿವಿಧ ಬ್ಯಾಂಕ್‌ನಲ್ಲಿ 94, 619 ರು. ಇದೆ. 73.72 ಲಕ್ಷ ರು. ಮೌಲ್ಯದ 2 ಕೆಜಿ ಚಿನ್ನ, 11,775 ಸಾವಿರ ರು. ಮೌಲ್ಯದ ಬೆಳ್ಳಿ ಇದೆ. ಪತ್ನಿಯ ಬಳಿ 61.72 ಲಕ್ಷ ರು. ಮೌಲ್ಯದ 2 ಕೆಜಿ ಚಿನ್ನ, 4.32 ಲಕ್ಷ ರು. ಮೌಲ್ಯದ 8 ಕೆಜಿ ಬೆಳ್ಳಿ ಮತ್ತು 10 ಲಕ್ಷ ರು. ಮೌಲ್ಯದ ಡೈಮಂಡ್‌ ನೆಕ್ಲೇಸ್‌ ಇದೆ ಎಂದು ಮಾಹಿತಿ ನೀಡಿದ್ದಾರೆ.