Asianet Suvarna News Asianet Suvarna News

ವಿಧಾನಪರಿಷತ್‌: ಪದವೀಧರ, ಶಿಕ್ಷಕರ ಕ್ಷೇತ್ರದ ಫಲಿತಾಂಶ ಇಂದು: ವಿಜಯಶಾಲಿಗಳು ಯಾರು?

ವಿಧಾನಪರಿಷತ್‌ನ ಮೂರು ಶಿಕ್ಷಕರ ಮತ್ತು ಮೂರು ಪದವೀಧರ ಕ್ಷೇತ್ರಗಳಿಗೆ ನಡೆದ ಚುನಾವಣೆಯ ಮತ ಎಣಿಕೆ ಗುರುವಾರ ನಡೆಯಲಿದೆ. ಚುನಾವಣಾ ಕಣದಲ್ಲಿ ಒಟ್ಟು 78 ಅಭ್ಯರ್ಥಿಗಳಿದ್ದು, ಅವರ ರಾಜಕೀಯ ಭವಿಷ್ಯ ಗುರುವಾರ ಗೊತ್ತಾಗಲಿದೆ. 

Vidhan Parishad Election Result for Graduate and Teacher Constituency today gvd
Author
First Published Jun 6, 2024, 8:48 AM IST

ಬೆಂಗಳೂರು (ಜೂ.06): ವಿಧಾನಪರಿಷತ್‌ನ ಮೂರು ಶಿಕ್ಷಕರ ಮತ್ತು ಮೂರು ಪದವೀಧರ ಕ್ಷೇತ್ರಗಳಿಗೆ ನಡೆದ ಚುನಾವಣೆಯ ಮತ ಎಣಿಕೆ ಗುರುವಾರ ನಡೆಯಲಿದೆ. ಚುನಾವಣಾ ಕಣದಲ್ಲಿ ಒಟ್ಟು 78 ಅಭ್ಯರ್ಥಿಗಳಿದ್ದು, ಅವರ ರಾಜಕೀಯ ಭವಿಷ್ಯ ಗುರುವಾರ ಗೊತ್ತಾಗಲಿದೆ. ಬೆಳಗ್ಗೆ ಮತ ಎಣಿಕೆ ಕಾರ್ಯ ಆರಂಭವಾಗಲಿದ್ದು, ಮತ ಎಣಿಕೆ ಕೇಂದ್ರಗಳ ಸುತ್ತ ಬಿಗಿ ಪೊಲೀಸ್‌ ಭದ್ರತೆ ಕಲ್ಪಿಸಲಾಗಿದೆ.  ಈಶಾನ್ಯ ಪದವೀಧರ, ಬೆಂಗಳೂರು ಪದವೀಧರ, ನೈಋತ್ಯ ಪದವೀಧರ ಮತ್ತು ಆಗ್ನೇಯ ಶಿಕ್ಷಕರ, ನೈಋತ್ಯ ಶಿಕ್ಷಕರ, ದಕ್ಷಿಣ ಶಿಕ್ಷಕರ ಕ್ಷೇತ್ರಗಳ ಮತ ಎಣಿಕೆ ನಡೆಯಲಿದೆ. ಪ್ರಾದೇಶಿಕವಾರು ಕೇಂದ್ರಗಳಲ್ಲಿ ಮತ ಎಣಿಕೆಗೆ ವ್ಯವಸ್ಥೆ ಮಾಡಲಾಗಿದೆ.

ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಮರಿತಿಬ್ಬೇಗೌಡ, ನೈಋತ್ಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಡಾ.ಧನಂಜಯ ಸರ್ಜಿ, ನೈಋತ್ಯ ಪದವೀಧರರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಆಯನೂರು ಮಂಜುನಾಥ್, ನೈಋತ್ಯ ಶಿಕ್ಷಕರ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಕೆ.ಕೆ.ಮಂಜುನಾಥ್, ನೈಋತ್ಯ ಪದವೀಧರ ಕ್ಷೇತ್ರದಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಕೆ.ರಘುಪತಿ ಭಟ್, ನೈಋತ್ಯ ಶಿಕ್ಷಕರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಎಸ್‌.ಎಲ್‌.ಭೋಜೇಗೌಡ, ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ವಿವೇಕಾನಂದ, ಆಗ್ನೇಯ ಶಿಕ್ಷಕರ ಕ್ಷೇತ್ರದಿಂದ ರುಪ್ಸಾ ಸಂಘಟನೆ ಅಧ್ಯಕ್ಷ ಲೋಕೇಶ್ ತಾಳಿಕೋಟೆ ಸೇರಿ ಒಟ್ಟು 78 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ.

11 ನಾಮಪತ್ರ ಮಾನ್ಯ: ವಿಧಾನಸಭೆಯಿಂದ ವಿಧಾನಪರಿಷತ್‌ನ 11 ಸ್ಥಾನಗಳಿಗೆ ನಡೆಯುವ ದ್ವೈವಾರ್ಷಿಕ ಚುನಾವಣೆಗೆ ಸಲ್ಲಿಕೆಯಾಗಿದ್ದ ನಾಮಪತ್ರಗಳ ಪರಿಶೀಲನೆ ನಡೆದಿದ್ದು, 11 ನಾಮಪತ್ರಗಳು ಮಾನ್ಯಗೊಂಡಿವೆ. ಇನ್ನುಳಿದ ಒಂದು ನಾಮಪತ್ರವನ್ನು ತಿರಸ್ಕರಿಸಲಾಗಿದೆ. ಕಾಂಗ್ರೆಸ್‌, ಜೆಡಿಎಸ್‌‍ ಹಾಗೂ ಬಿಜೆಪಿ ಅಭ್ಯರ್ಥಿಗಳ ನಾಮಪತ್ರಗಳು ಮಾನ್ಯವಾಗಿರುವುದರಿಂದ ಅವಿರೋಧ ಆಯ್ಕೆಯಾಗುವುದು ಖಚಿತವಾಗಿದೆ. ಕಾಂಗ್ರೆಸ್‌ ಅಭ್ಯರ್ಥಿಗಳಾದ ಸಚಿವ ಎನ್‌.ಎಸ್‌‍.ಬೋಸರಾಜು, ಐವಾನ್‌ ಡಿಸೋಜಾ, ಕೆ.ಗೋವಿಂದರಾಜ್‌, ಜಗದೇವ ಗುತ್ತೇದಾರ್‌, ಬಲ್ಕೀಸ್‌‍ ಬಾನು, ಡಾ। ಯತೀಂದ್ರ ಸಿದ್ದರಾಮಯ್ಯ ಹಾಗೂ ಎ.ವಸಂತಕುಮಾರ್‌ ಅವರ ನಾಮಪತ್ರಗಳು ಕ್ರಮಬದ್ಧವಾಗಿವೆ.

ನಾಡಿದ್ದು ಮೋದಿ 3.0 ಪ್ರಮಾಣ?: ಬಿಜೆಪಿಗೆ ಟಿಡಿಪಿ, ಜೆಡಿಯು ಬೆಂಬಲ ಘೋಷಣೆ

ಬಿಜೆಪಿ ಅಭ್ಯರ್ಥಿಗಳಾದ ಸಿ.ಟಿ.ರವಿ, ಮೂಳೆ ಮಾರುತಿರಾವ್‌ ಹಾಗೂ ರವಿಕುಮಾರ್‌ ಅವರ ನಾಮಪತ್ರಗಳು ಪುರಸ್ಕೃತವಾಗಿವೆ. ಜೆಡಿಎಸ್‌‍ನ ಅಭ್ಯರ್ಥಿ ಟಿ.ಎನ್‌.ಜವರಾಯಿಗೌಡ ಅವರ ನಾಮಪತ್ರವೂ ಮಾನ್ಯವಾಗಿದೆ. ಆದರೆ, ಪಕ್ಷೇತರ ಅಭ್ಯರ್ಥಿ ಆಸಿಫ್‌ ಪಾಷಾ ಅವರಿಗೆ ಸೂಚಕರು ಇಲ್ಲದ ಕಾರಣ ಅವರ ನಾಮಪತ್ರ ತಿರಸ್ಕೃತವಾಗಿದೆ. ನಾಮಪತ್ರ ವಾಪಸ್‌‍ ಪಡೆಯಲು ಗುರುವಾರ ಕೊನೆಯ ದಿನವಾಗಿದ್ದು, ಅಂದು ಸಂಜೆ ಅವಿರೋಧವಾಗಿ ಆಯ್ಕೆ ಬಗ್ಗೆ ಚುನಾವಣಾಧಿಕಾರಿಗಳು ಅಧಿಕೃತ ಘೋಷಣೆ ಮಾಡಲಿದ್ದಾರೆ.

Latest Videos
Follow Us:
Download App:
  • android
  • ios