ಜಾತಿಗಣತಿ ವಿವಾದ, ಆಡಳಿತ ವೈಫಲ್ಯ ಮರೆಮಾಚಲು ಕಾಂಗ್ರೆಸ್ ಸರ್ಕಾರ ಏನಾದರೊಂದು ವಿಷಯಾಂತರ ಮಾಡುತ್ತಲೇ ಇರುತ್ತದೆ, ವೇಮುಲ ಕಾಯ್ದೆ ಸಹ ಅದೇ ತರಹದ್ದು ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ.
ಹುಬ್ಬಳ್ಳಿ (ಏ.20): ಜಾತಿ ಗಣತಿ ವಿವಾದ, ಆಡಳಿತ ವೈಫಲ್ಯ ಮರೆಮಾಚಲು ಕಾಂಗ್ರೆಸ್ ಸರ್ಕಾರ ಏನಾದರೊಂದು ವಿಷಯಾಂತರ ಮಾಡುತ್ತಲೇ ಇರುತ್ತದೆ, ವೇಮುಲ ಕಾಯ್ದೆ ಸಹ ಅದೇ ತರಹದ್ದು ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ. ರೋಹಿತ್ ವೇಮುಲಾ ಕಾಯ್ದೆ ಜಾರಿ ಕುರಿತು ಪ್ರತಿಕ್ರಿಯಿಸಿ ಕಾಂಗ್ರೆಸ್ ವಿವಾದ ಮೈಮೇಲೆ ಎಳೆದುಕೊಂಡಾಗ ಹೀಗೆ ಜನರ ಗಮನ ಬೇರೆಡೆ ಸೆಳೆಯುವುದು ಹೊಸದೇನಲ್ಲ ಎಂದು ಹೇಳಿದರು. ರಾಹುಲ್ ಗಾಂಧಿ ದೇಶದೊಳಿತಿಗೆ ರಾಜಕೀಯ ಮಾಡುತ್ತಿಲ್ಲ.
ವೋಟ್ ಬ್ಯಾಂಕ್ ರಾಜಕೀಯದ ಮೇಲೆ ಮಾತ್ರ ಗಮನ ಹರಿಸಿದ್ದಾರೆ. ರಾಜ್ಯದಲ್ಲಿ 'ರೋಹಿತ್ ವೇಮುಲ ಕಾಯ್ದೆ ಜಾರಿಗೆ ತರುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವುದೂ ಇದರ ಒಂದು ಭಾಗ ಎಂದು ಟೀಕಿಸಿದರು. ರಾಹುಲ್ ಗಾಂಧಿ ಹೇಳಿದಂತೆ ನಡೆದರೆ ಜನ ನಗುವಂತಾಗುತ್ತದೆ. ಸಿದ್ಧರಾಮಯ್ಯ ಅವರಿಗೆ ರಾಜಕೀಯ ಅನುಭವ ಇದೆ. ರಾಹುಲ್ ಹೇಳಿದಂತೆ ಅಲ್ಲ, ತಮ್ಮ ಅನುಭವದಿಂದ ಆಡಳಿತ ನಡೆಸಬೇಕು ಎಂದರು.
ಎಷ್ಟು ಮನೆಗೆ ಭೇಟಿ ನೀಡಿದ್ದಾರೆ?: ಜಾತಿ ಜನಗಣತಿ ಹೆಸರಲ್ಲಿ ಜನರಲ್ಲಿ ಗೊಂದಲ ಮೂಡಿಸಲಾಗುತ್ತಿದೆ. ಸಿದ್ದರಾಮಯ್ಯ ಅವರೇ ಜಾತಿ ಗಣತಿ ಅಲ್ಲ ಅಂದಿದ್ದಾರೆ. ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆ ಅಂತ ಹೇಳಿದ್ದಾರೆ. ಸರ್ಕಾರದ ವಿರುದ್ಧ ಜನಕ್ರೋಶ ವ್ಯಕ್ತವಾದಾಗ ಈ ರೀತಿಯ ಸುಳ್ಳುಗಳನ್ನು ಹೇಳುತ್ತಾರೆ. ಜಾತಿ ಗಣತಿ ಎಂದು ಯಾರ ಮನೆಗೆ ಭೇಟಿ ನೀಡಿ ಸಮೀಕ್ಷೆ ಮಾಡಿದ್ದಾರೆ? ರಾಜ್ಯದಲ್ಲಿ ಒಬ್ಬರೇ ಒಬ್ಬರ ಮನೆಗೂ ತೆರಳಿಲ್ಲ. ವಿವಾದ, ವಿರೋಧ ವ್ಯಕ್ತವಾಗುತ್ತಲೇ 'ಇದು ಜಾತಿ ಗಣತಿಯಲ್ಲ ಆರ್ಥಿಕ ಸಮೀಕ್ಷೆ' ಎಂದರು. ಇದೆಂಥ ಹುಡುಗಾಟ ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
ಹಿಂದೂ ಧರ್ಮ ವಿರೋಧಿಸುವವರು ಬೇರೆ ಧರ್ಮ ವಿರೋಧಿಸುವುದಿಲ್ಲ ಏಕೆ?: ಪ್ರಲ್ಹಾದ್ ಜೋಶಿ
ಧರ್ಮಾಧಾರಿತ ಮೀಸಲಾತಿ ಕೊಡಲು ಬರಲ್ಲ ಅಂತ ಸುಪ್ರೀಂಕೋರ್ಟ್ ಹೇಳಿದೆ. ಆದರೆ, ಮುಸ್ಲಿಮರ ಓಲೈಕೆಗಾಗಿ ಮುಸ್ಲಿಮರಿಗೆ ಧರ್ಮಾಧಾರಿತ ಮೀಸಲಾತಿ ಕೊಡುತ್ತಿದೆ. ಈ ವಿಚಾರದಲ್ಲಿ ಮೋದಿ ಅವರನ್ನೇ ಬಾಯಿಗೆ ಬಂದಂತೆ ಬೈಯಲಾಗುತ್ತಿದೆ. ಜೆಡಿಎಸ್‌ನ್ನು ಅಧೋಗತಿಗೆ ಇಳಿಸಿ ಸಿದ್ದರಾಮಯ್ಯ ಈಗ ಕಾಂಗ್ರೆಸ್ ನಲ್ಲಿದ್ದಾರೆ. ನಿಮ್ಮ ಹಾಗೆ ನಾವು ತಂತಿ ಹಿಡಿಕೊಂಡು ಹೋಗಿಲ್ಲ. ವಿರೋಧ ಪಕ್ಷವಾಗಿ ಕೆಲಸ ಮಾಡುತ್ತಿದ್ದೇವೆ. ಇಲ್ಲಿ ಸೋತಿರಬಹುದು. ಆದರೆ, ಬೇರೆ ರಾಜ್ಯಗಳಲ್ಲಿ ಗೆದ್ದಿದ್ದೇವೆ. ಬೇರೆ ರಾಜ್ಯಗಳಲ್ಲಿ ನಿಮ್ಮ ಪಕ್ಷದ ಅಡ್ರೆಸ್ ಇಲ್ಲ ಎಂದು ಟೀಕಿಸಿದರು. ಪ್ರಿಯಾಂಕ ಖರ್ಗೆ ಬೆಂಬಲಿಗರು ನಮ್ಮ ಅಧ್ಯಕ್ಷರ ಮೇಲೆ ದಬ್ಬಾಳಿಕೆ ಮಾಡಲು ಹೋಗಿದ್ದಾರೆ. ಇದು ಸರಿಯಲ್ಲ. ಅವರು ರಿಪಬ್ಲಿಕ್ ಆಫ್ ಕಲಬುರಗಿ ಮಾಡುತ್ತಿದ್ದಾರೆ.
