'ಯಡಿಯೂರಪ್ಪನವರನ್ನು ಮೂಲೆಗುಂಪಾಗಿಸುವ ಯತ್ನ ನಡೆಯುತ್ತಿದೆ'
* ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಗೆ ವಾಟಾಳ್ ನಾಗರಾಜ್ ನಾಮಪತ್ರ ಸಲ್ಲಿಕೆ
* ಯಡಿಯೂರಪ್ಪರನ್ನು ದೂರ ಸರಿಸಿದರೆ ಬಿಜೆಪಿಗೆ ತಕ್ಕ ಪಾಠ
* ಬಿಜೆಪಿ ಸರ್ಕಾರ ಯಾವ ಮಟ್ಟಕ್ಕೆ ಹೋಗುತ್ತದೆಂದು ನೋಡುತ್ತೇನೆ
ಮೈಸೂರು(ಮೇ.26): ಬಿಜೆಪಿಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಮೂಲೆಗುಂಪಾಗಿಸುವ ಯತ್ನ ನಡೆಯುತ್ತಿದೆ. ಯಡಿಯೂರಪ್ಪ ಅವರನ್ನು ದೂರ ಸರಿಸಿದರೆ ಬಿಜೆಪಿಗೆ ತಕ್ಕ ಪಾಠವಾಗಲಿದೆ ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಎಚ್ಚರಿಸಿದರು.
ಮೈಸೂರಿನ ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಗೆ ಬುಧವಾರ ನಾಮಪತ್ರ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿನ್ನೆ- ಮೊನ್ನೆಯಿಂದಷ್ಟೇ ಬಿ.ಎಲ…. ಸಂತೋಷ್ ಕಾಣಿಸಿಕೊಂಡಿದ್ದಾರೆಯೇ ಹೊರತು ಮೊದಲು ಎಲ್ಲಿದ್ದರು ಎಂಬುದು ಗೊತ್ತಿಲ್ಲ. ಬಿ.ವೈ. ವಿಜಯೇಂದ್ರ ಅಪ್ಪ ಯಡಿಯೂರಪ್ಪ, ಬಿಜೆಪಿಗೆ ಯಡಿಯೂರಪ್ಪ ಅಪ್ಪ ಇದ್ದ ಹಾಗೆ. ನಾನೇನೂ ವಿಜಯೇಂದ್ರ, ಯಡಿಯೂರಪ್ಪ ಪರ ಬ್ಯಾಟಿಂಗ್ ಮಾಡುತ್ತಿಲ್ಲ. ನನಗೂ- ಅವರಿಗೂ ಮಾತು ನಿಂತು ಎರಡೂವರೆ ವರ್ಷಗಳು ಕಳೆದಿದೆ. ಆದರೆ, ಪರಿಷತ್ ಚುನಾವಣೆಯಲ್ಲಿ ವಿಜಯೇಂದ್ರಗೆ ಟಿಕೆಟ್ ಕೊಡಬೇಕಿತ್ತು ಎಂದರು.
MLC Election ವಿಜಯೇಂದ್ರಗೆ ಅವಕಾಶ ನೀಡೊದು ಮೋದಿ,ನಡ್ಡಾಗೆ ಬಿಟ್ಟ ವಿಚಾರ, ಯಡಿಯೂರಪ್ಪ!
ದೇವನೂರು ಮಹಾದೇವ ನಿರ್ಧಾರಕ್ಕೆ ಬೆಂಬಲ
ಪಠ್ಯಪುಸ್ತಕದ ವಿಚಾರಕ್ಕೆ ಸಂಬಂಧಿಸಿದಂತೆ ಸಾಹಿತಿ ದೇವನೂರು ಮಹಾದೇವ ಅವರ ನಿರ್ಧಾರಕ್ಕೆ ಬೆಂಬಲ ಸೂಚಿಸಿದ ವಾಟಾಳ್ ನಾಗರಾಜ್ ಅವರು, ಪಠ್ಯಪುಸ್ತಕದಲ್ಲಿ ಪಠ್ಯಗಳನ್ನು ಕೈಬಿಟ್ಟಿರುವ ಬಗ್ಗೆ ಸಾಕಷ್ಟುಜನರು ವಿರೋಧ ಮಾಡುತ್ತಿದ್ದಾರೆ. ಇದು ಗಂಭೀರವಾದ ವಿಚಾರ. ಸರ್ಕಾರ ಗಂಭೀರವಾಗಿ ಪರಿಗಣಿಸದಿದ್ದಲ್ಲಿ ವಿದ್ಯಾರ್ಥಿಗಳ ಮೇಲೆ ಗದಾಪ್ರಹಾರ ಮಾಡಿದಂತಾಗಲಿದೆ. ಅವರ ಮನಸ್ಸನ್ನು ಕಲುಷಿತಗೊಳಿಸಿದಂತೆ. ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಖಂಡಿಸಿದರು.
ಆರ್‌ಎಸ್‌ಎಸ್ ಬಿಜೆಪಿಯಲ್ಲಿ ಐದಾರು ಜನರು ಇದ್ದಾರೆ. ಅವರು ಏನು ಹೇಳುತ್ತಾರೋ ಅದು ಆಗಬೇಕು. ಹೀಗೆ ಮುಂದುವರಿದರೆ ಪುಸ್ತಕಕ್ಕೆ ಆರ್‌ಎಸ್‌ಎಸ್ ಅಂತಾನೆ ಹೆಸರಿಡುತ್ತಾರೆ. ದೇವನೂರು ಮಹಾದೇವ, ಬರಗೂರು ರಾಮಚಂದ್ರಪ್ಪ ಅವರ ಮಾತಿಗೆ ನಾನು ಧ್ವನಿಗೂಡಿಸುತ್ತೇನೆ. ಬಿಜೆಪಿ ಸರ್ಕಾರ ಯಾವ ಮಟ್ಟಕ್ಕೆ ಹೋಗುತ್ತದೆಂದು ನೋಡುತ್ತೇನೆ. ಈ ಪಠ್ಯಕ್ರಮದ ವಿರುದ್ಧ ತೀವ್ರ ಹೋರಾಟ ಮಾಡುತ್ತೇನೆ ಎಂದು ಅವರು ತಿಳಿಸಿದರು.
ನಾನು ಅಭ್ಯರ್ಥಿ
ದಕ್ಷಿಣ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡಿದ್ದೇನೆ. ಸೋಲು- ಗೆಲುವು ಸಹಜ. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಮತದಾರರು ಪ್ರಭುಗಳು. ಪದವೀಧರರ ಸಮಸ್ಯೆ ಅಗಾಧವಾಗಿದೆ. ನಾನು ಪರಿಷತ್‌ಗೆ ಆಯ್ಕೆಯಾದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಎದುರಾಗಿರುವ ಅನೇಕ ಸವಾಲು, ಸಮಸ್ಯೆಗಳ ಪರಿಹಾರಕ್ಕೆ ಹೋರಾಟ ಮಾಡುತ್ತೇನೆ ಎಂದರು.