Asianet Suvarna News Asianet Suvarna News

ವಾರಾಣಸಿಯಲ್ಲಿ ಅಂತಿಮ ಹಂತದ ಮತದಾನ: ಮೋದಿ ಗೆಲ್ಲೋ ಮತಗಳ ಅಂತರವೆಷ್ಟು?

2014ರಲ್ಲಿ. ನರೇಂದ್ರ ಮೋದಿಯವರಿಗೆ ರಾಷ್ಟ್ರ ರಾಜಕಾರಣಕ್ಕೆ ವೇದಿಕೆ ಕೊಟ್ಟ ಲೋಕಸಭಾ ಕ್ಷೇತ್ರ ವಾರಾಣಸಿ. ಗುಜರಾತ್‌ ಮುಖ್ಯಮಂತ್ರಿ ಆಗಿದ್ದ ನರೇಂದ್ರ ಮೋದಿ ೨೦೧೪ರಲ್ಲಿ ವಾರಾಣಸಿ ಲೋಕಸಭಾ ಕ್ಷೇತ್ರದಿಂದ ಚುನಾವಣಾ ಸ್ಪರ್ಧೆ ಘೋಷಿಸಿದ ನಂತರ ಇದು ಹೈ ವೋಲ್ಟೇಜ್‌ ಕ್ಷೇತ್ರವಾಗಿ ಬದಲಾಗಿದೆ.

Uttara pradesh Lok sabha election 2024 PM Modi hoping for a hattrick win in Varanasi constituency rav
Author
First Published May 31, 2024, 10:30 AM IST

ಪುರಾತನ ನಗರಿ ವಾರಾಣಸಿಯನ್ನ ಆಧ್ಯಾತ್ಮಿಕ ರಾಜಧಾನಿ ಎಂದೂ ಕರೆಯಲಾಗುತ್ತೆ. ಹಿಂದೂ ಧರ್ಮದಲ್ಲಿ ಕಾಶಿ ಅಥವಾ ಬನಾರಸ್‌ ಅನ್ನು ಆದಿ ಅಂತ್ಯವಿಲ್ಲದ ನಗರ ಎನ್ನುತ್ತಾರೆ. ಎಣಿಕೆಗೆ ನಿಲುಕದಷ್ಟು ವರ್ಷಗಳ ಇತಿಹಾಸವನ್ನ ಮಡಿಲಲ್ಲಿಟ್ಟುಕೊಂಡಿದೆ ವಾರಾಣಸಿ. ಕಾಶಿ ಹಸರನ್ನ ಈ ದೇಶದಲ್ಲಿ ಕೇಳದವರಿಲ್ಲ. ಆದ್ರೆ ರಾಜಕೀಯ ಮತ್ತು ಚುನಾವಣಾ ಕಾರಣಕ್ಕೆ ವಾರಾಣಸಿಯೆಂಬ ಊರು ಅತಿಹೆಚ್ಚು ಚರ್ಚೆಗೆ ಕಾರಣವಾಗಿದ್ದು 2014ರಲ್ಲಿ. ನರೇಂದ್ರ ಮೋದಿಯವರಿಗೆ ರಾಷ್ಟ್ರ ರಾಜಕಾರಣಕ್ಕೆ ವೇದಿಕೆ ಕೊಟ್ಟ ಲೋಕಸಭಾ ಕ್ಷೇತ್ರ ವಾರಾಣಸಿ. ಗುಜರಾತ್‌ ಸಿಎಂ ಆಗಿದ್ದ ನರೇಂದ್ರ ಮೋದಿ 2014ರಲ್ಲಿ ವಾರಾಣಸಿ ಲೋಕಸಭಾ ಕ್ಷೇತ್ರದಿಂದ ಚುನಾವಣಾ ಸ್ಪರ್ಧೆ ಘೋಷಿಸಿದ ನಂತರ ಇದು ಹೈವೋಲ್ಟೇಜ್‌ ಕ್ಷೇತ್ರವಾಗಿ ಬದಲಾಗಿದೆ. ತಾಯಿ ಗಂಗೆಯೇ ನನ್ನ ಇಲ್ಲಿಗೆ ಕರೆದಿದ್ದಾಳೆ ಎನ್ನುವ ಮೂಲಕ ಮೋದಿ 2014ರಲ್ಲಿ ನಾಮಪತ್ರ ಸಲ್ಲಿಸಿದ್ದರು. ಗುಜರಾತ್‌‌ನ ವಡೋದರದಲ್ಲೂ ಸ್ಪರ್ಧಿಸಿ ಗೆದ್ದರಾದರೂ ವಾರಾಣಸಿ ಕ್ಷೇತ್ರವನ್ನೇ ಉಳಿಸಿಕೊಂಡರು. ಉತ್ತರ ಪ್ರದೇಶದಂತ ದೊಡ್ಡ ರಾಜ್ಯದಲ್ಲಿ ಹೆಚ್ಚು ಸ್ಥಾನ ಗೆಲ್ಲಬೇಕು ಅನ್ನುವ ಕಾರಣಕ್ಕೆ ಮೋದಿ ವಾರಾಣಸಿಯನ್ನ ಆಯ್ಕೆ ಮಾಡಿಕೊಂಡಿದ್ದರು. ಇದೆಲ್ಲವೂ ಆಗಿ 10 ವರ್ಷಗಳಾಗಿವೆ. 2019ರಲ್ಲೂ ಮೋದಿ ಇಲ್ಲಿಂದಲೇ ಚುನಾವಣೆ ಎದುರಿಸಿ 2ನೇ ಬಾರಿಗೆ ಗೆದ್ದು ಮತ್ತೆ ಪ್ರಧಾನಿಯಾಗಿ ಮುಂದುವರಿದರು. ಮೋದಿಯವರಿಗೆ ವಾರಾಣಸಿಯಲ್ಲಿ ಇದು ಮೂರನೇ ಚುನಾವಣೆ.  

ಈ ಬಾರಿ ಮೋದಿ ಗೆಲುವಿನ ಅಂತರ ಎಷ್ಟು..?
ಜೂನ್‌ 1ನೇ ತಾರೀಕು ನಡೆಯುವ 7ನೇ ಮತ್ತು ಕೊನೇ ಹಂತದ ಚುನಾವಣೆ ಮುಗಿದರೆ ದೇಶಾದ್ಯಂತ ಮತದಾನ ಮುಕ್ತಾಯವಾಗುತ್ತೆ. ಕೊನೆಯ ಹಂತದ ಚುನಾವಣೆಯಲ್ಲಿನ ಹೈವೋಲ್ಟೇಜ್‌ ಕ್ಷೇತ್ರ ವಾರಾಣಸಿ. ವಾರಾಣಸಿ ಕ್ಷೇತ್ರದ ಫಲಿತಾಂಶದ ಮೇಲೆ ಅಷ್ಟೇನೂ ಕುತೂಹಲ ಇಲ್ಲವಾದರೂ ಮೋದಿಯವರ ಗೆಲುವಿನ ಅಂತರ ಎಷ್ಟಾಗಬಹುದು ಅನ್ನೋ ಚರ್ಚೆ ಜಾರಿಯಲ್ಲಿದೆ. 2014ರ ಚುನಾವಣೆಯಲ್ಲಿ ನರೇಂದ್ರ ಮೋದಿ 3.7 ಲಕ್ಷ ಮತಗಳ ಅಂತರದಿಂದ ಗೆದ್ದಿದ್ದರು. 2019ರಲ್ಲಿ ಗೆಲುವಿನ ಅಂತರ 4.79 ಲಕ್ಷಕ್ಕೆ ಏರಿಕೆಯಾಗಿದ್ದು. ಈ ಬಾರಿ ಬಿಜೆಪಿ ನಾಯಕರು ದಸ್‌ ಲಾಕ್‌ ಪಾರ್‌ ಅನ್ನುತ್ತಿದ್ದಾರೆ. ಅಂದ್ರೆ 10 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿಕೊಳ್ಳಬೇಕು ಅಂತ. ಇದೂ ಕೂಡ ಚಾರ್‌ ಸೌ ಪಾರ್ ರೀತಿಯ ಯುದ್ಧಘೋಷವಷ್ಟೇ. ಕನಿಷ್ಠ 7ಲಕ್ಷ ಮತಗಳಿಂದ ಗೆಲ್ಲಿಸಿಕೊಳ್ಳಲು ಬಿಜೆಪಿ ಗ್ರೌಂಡ್‌ ವರ್ಕ್‌ ಮಾಡಿದೆ. 

ಮೋದಿ ಗೆಲುವಿಗೆ ಅಮಿತ್ ಶಾ, ಯೋಗಿ ದುಡಿಮೆ!
ನರೇಂದ್ರ ಮೋದಿ ಇದೇ ತಿಂಗಳ 13ರಂದು ವಾರಾಣಸಿಯಲ್ಲಿ ದೊಡ್ಡ ರೋಡ್‌ ಶೋ ನಡೆಸಿದರು. 2014 ಮತ್ತು 2019ರಲ್ಲಿ ನಡೆದ ರೋಡ್‌ ಶೋಗಿಂತ ಈ ಬಾರಿಯ ರೋಡ್‌ ಶೋ ಭಿನ್ನವಾಗಿತ್ತು. ಕಾರಣ ಕಳೆದ ಎರಡೂ ಬಾರಿ ಮೋದಿ ಏಕಾಂಗಿಯಾಗಿ ರೋಡ್‌ ಶೋ ಮಾಡಿದ್ದರು. ಆದ್ರೆ ಈ ಬಾರಿ ಮೋದಿಯವರ ಜತೆ ಯೋಗಿ ಆದಿತ್ಯನಾಥ್‌ ಅವರೂ ಇದ್ದರು. ಕಾಶಿ ವಿಶ್ವನಾಥನ ದರ್ಶನ ಪಡೆಯುವಾಗಲೂ ಯೋಗಿ ಜತೆಯಲ್ಲೇ ಇದ್ದರು. ಯೋಗಿ ಆದಿತ್ಯನಾಥ್‌ ಗೆ ಉತ್ತರ ಪ್ರದೇಶದಲ್ಲಿ ತಮ್ಮದೇ ಬ್ರಾಂಡ್‌ ವ್ಯಾಲ್ಯೂ ಇದೆ. ತಮ್ಮ ಜನಪ್ರಿಯತೆ ಜತೆ ಯೋಗಿಯೂ ಇರಲಿ ಅನ್ನೋ ಲೆಕ್ಕಾಚಾರ ಹಾಕಿ ಮೋದಿಯವರದ್ದು. 

ವಾರಾಣಸಿಯಲ್ಲಿ ಹ್ಯಾಟ್ರಿಕ್‌ ಜಯದ ನಿರೀಕ್ಷೆಯಲ್ಲಿ ಪ್ರಧಾನಿ ಮೋದಿ

ವಾರಾಣಸಿಯಿಂದ ನರೇಂದ್ರ ಮೋದಿಯವರನ್ನ ಭಾರೀ ಮತಗಳ ಅಂತರದಿಂದ ಗೆಲ್ಲಿಸಿಕೊಳ್ಳಲು ಕೇಸರಿ ಪಡೆ ಇನ್ನಿಲ್ಲದಂತೆ ಪ್ರಯತ್ನಿಸುತ್ತಿದೆ. ವಾರಾಣಸಿ ಕ್ಷೇತ್ರದ ಚುನಾವಣಾ ಉಸ್ತುವಾರಿಯನ್ನ ಸ್ವತಃ ಅಮಿತ್‌ ಶಾ ಅವರೇ ಹೊತ್ತಿದ್ದಾರೆ. ಚುನಾವಣಾ ಪ್ರಚಾರ ಆರಂಭವಾದಾಗಿನಿಂದ ಅಮಿತ್‌ ಶಾ ವಾರಾಣಾಸಿಗೆ 10ಕ್ಕೂ ಹೆಚ್ಚುಬಾರಿ ಬಂದು ಹೋಗಿದ್ದಾರೆ. ಯೋಗಿ ಆದಿತ್ಯನಾಥ್‌ ಕೂಡ ವಾರಾಣಸಿ ಪ್ರಚಾರದ ಬಗ್ಗೆ ವಿಶೇಷ ಆಸ್ಥೆ ವಹಿಸಿದ್ದಾರೆ. ಜೆಪಿ ನಡ್ಡಾ ಈಗಾಗಲೇ ಹಲವು ಬಾರಿ ಕ್ಷೇತ್ರಕ್ಕೆ ಬಂದು ಹೋಗಿದ್ದಾರೆ. ಕೇಂದ್ರ ಸಚಿವರು, ಯೋಗಿ ಕ್ಯಾಬಿನೆಟ್‌ ಮಂತ್ರಿಗಳೂ ಕೂಡ ಮೋದಿಯವರ ವಾರಾಣಸಿಯಲ್ಲಿ ದುಡಿಯುತ್ತಿದ್ದಾರೆ.

ಕಾಂಗ್ರೆಸ್​ಗೆ ಈಬಾರಿಯೂ ಗೆಲ್ಲುವ ಉತ್ಸಾಹವಿಲ್ಲ
ವಾರಾಣಸಿ ಲೋಕಸಭಾ ಕ್ಷೇತ್ರದಲ್ಲಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್‌ ಮತ್ತು ಸಮಾಜವಾದಿ ಪಕ್ಷದ ಮೈತ್ರಿ ಅಭ್ಯರ್ಥಿಯಾಗಿ ಅಜಯ್‌ ರಾಯ್‌ ಸ್ಪರ್ಧಿಸಿದ್ದಾರೆ. ಬಿಎಸ್‌ಪಿ ಅಥರ್‌ ಜಮಾಲ್‌ ಲಾರಿ ಎಂಬ ಮುಸ್ಲಿಂ ವ್ಯಕ್ತಿಗೆ ಟಿಕೆಟ್‌ ಕೊಟ್ಟಿದೆ. ಉತ್ತರ ಪ್ರದೇಶ ಕಾಂಗ್ರೆಸ್‌ ಘಟಕದ ಅಧ್ಯಕ್ಷರಾಗಿರೋ ಅಜಯ್‌ ರಾಯ್‌ ಕಳೆದೆರಡೂ ಚುನಾವಣೆಯಲ್ಲಿ ಮೋದಿ ವಿರುದ್ಧ ಸ್ಪರ್ಧಿಸಿ ಸೋತಿದ್ದರು. ಮೂರನೇ ಬಾರಿಗೂ ಅವರನ್ನೇ ಕಾಂಗ್ರೆಸ್‌ ಕಣಕ್ಕಿಳಿಸಿದೆ. ವಾರಾಣಸಿಯವರೇ ಆದ ಅಜಯ್‌ ರಾಯ್‌ ನರೇಂದ್ರ ಮೋದಿಯವರು ಹೊರಗಿನವರು ಅನ್ನೋ ಅಸ್ತ್ರ ಪ್ರಯೋಗಿಸಿ ಎರಡೂ ಬಾರಿ ಸೋತಿದ್ದಾರೆ, ಈ ಬಾರಿಯೂ ಸೇರಿದರೆ ಮೂರನೆಯದ್ದಾಗುತ್ತೆ. ಬಿಎಸ್‌ಪಿ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್‌ ಕೊಟ್ಟಿರೋದ್ರಿಂದ ಸ್ವಲ್ಪಮಟ್ಟಿಗೆ ಮುಸ್ಲಿಂ ವೋಟ್‌ಗಳು ಛಿದ್ರವಾಗಬಹುದು. 

ಮೋದಿ ಬಂದ ಮೇಲೆ ಬದಲಾಯ್ತಾ ವಾರಾಣಸಿ?
ನರೇಂದ್ರ ಮೋದಿ ವಾರಾಣಸಿ ಸಂಸದರಾದ ಮೇಲೆ ನಿಜಕ್ಕೂ ಬದಲಾಗಿದ್ಯಾ? ಅಭಿವೃದ್ಧಿಯಾಗಿದ್ಯಾ ಅನ್ನುವುದು ಸಹಜ ಪ್ರಶ್ನೆ. 2014ಕ್ಕೆ ಮುನ್ನ ಕಾಶಿ ಹೇಗಿತ್ತು..? ಈಗ ಹೇಗಿದೆ ಅನ್ನೋದರ ಹೋಲಿಸಿದರೆ ಕಣ್ಣಿಗೆ ಕಾಣುವಷ್ಟು ಬದಲಾವಣೆಗಳಾಗಿವೆ. ಬದಲಾಗಬೇಕಾದದ್ದೂ ಇನ್ನೂ ಇದೆ. ವಾರಾಣಸಿಯ ರಸ್ತೆಗಳು ಅಭಿವೃದ್ಧಿ ಕಂಡಿವೆ. ಕುಡಿಯುವ ನೀರು, ವಿದ್ಯುತ್ ಸಮಸ್ಯೆ ಈಗಿಲ್ಲ. ಗಂಗಾ ತೀರದ ಘಾಟ್​ಗಳನ್ನ ಅಭಿವೃದ್ಧಿಪಡಿಸಲಾಗಿದೆ, ಸ್ವಚ್ಚತೆಗೂ ಆದ್ಯತೆ ನೀಡಲಾಗಿದೆ. ಕಾಶಿ ವಿಶ್ವನಾಥ ಕಾರಿಡಾರ್ ನಿರ್ಮಾಣ ಮೋದಿಯವರ ಅತಿ ಮುಖ್ಯ ಸಾಧನೆ. ಕಾಶಿ ಕಾರಿಡಾರ್ ನಿರ್ಮಾಣವಾದ ಮೇಲೆ ಬರುವ ಪ್ರವಾಸಿಗರ ಸಂಖ್ಯೆಯೂ ಬಹಳಷ್ಟು ಹೆಚ್ಚಾಗಿದೆ. ಇದರ ಪರಿಣಾಮ ವಾರಾಣಸಿಯಲ್ಲಿ ವ್ಯಾಪಾರ-ವ್ಯವಹಾರ ದಿನೇ ದಿನೇ ಹೆಚ್ಚಾಗುತ್ತಿದೆ. ವಾರಾಣಸಿಯನ್ನು ಸಂಪರ್ಕಿಸುವ ರಸ್ತೆಗಳು ಅಭಿವೃದ್ಧಿಯಾಗಿವೆ. ಬನಾರಸ್​ ರೈಲ್ವೇ ನಿಲ್ದಾಣ ಅತ್ಯಾಧುನಿಕ ಸವಲತ್ತಿನೊಂದಿಗೆ ತಲೆಯೆತ್ತಿ ನಿಂತಿದೆ. ವಂದೇ ಭಾರತ್ ಎಕ್ಸ್​ಪ್ರೆಸ್ ಓಡಾಡುತ್ತಿದೆ. ವಾರಾಣಸಿಗೆ ರಿಂಗ್ ರೋಡ್, ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ, ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣದ ಕೆಲಸಗಳು ನಡೆಯುತ್ತಿವೆ. ಏರಿಯಲ್ ಡೆವಲಪ್​ಮೆಂಟ್ ಕಣ್ಣಿಗೆ ಕಾಣುತ್ತಿದ್ದರೂ ಸ್ವಚ್ಚತೆಯ ಸಮಸ್ಯೆ, ರಸ್ತೆಯಲ್ಲಿ ಹರಿಯುವ ಕೊಳಚೆ ನೀರು, ಪ್ರವಾಸಿಗರ ಹೆಚ್ಚಳದಿಂದ ಇಕ್ಕಟ್ಟಾಗುತ್ತಿರೋ ಹಳೇ ವಾರಾಣಸಿ ಪ್ರಮುಖ ಸಮಸ್ಯೆಗಳು. 

ವಾರಣಾಸಿ ಭೇಟಿ ನೀಡಿದಾಗ ಈ 7 ಅನುಭವ ಮಿಸ್ ಮಾಡ್ಕೋಬೇಡಿ..

ಕಾಶಿಯನ್ನೇ ಬದಲಿಸಿದ ವಿಶ್ವನಾಥ ಕಾರಿಡಾರ್ ಶತಮಾನಗಳ ಇತಿಹಾಸವಿರೋ ವಿಶ್ವನಾಥ ದೇಗುಲ ಕಾಶಿಯ ಗಲ್ಲಿಗಳಲ್ಲಿ ಕಳೆದುಹೋಗಿತ್ತು. ಗಂಗಾನದಿಯಲ್ಲಿ ಮಿಂದು ಗಲ್ಲಿಗಳಲ್ಲಿ ಸುತ್ತು ಹೊಡೆದರೆ ದುತ್ತನೆ ದೇವಸ್ಥಾನ ಎದುರಾಗಿಬಿಡುತ್ತಿತ್ತು. ಗಂಗಾ ನದಿಗೂ, ಕಾಶಿ ವಿಶ್ವನಾಥನ ದೇಗುಲಕ್ಕೂ ನೇರ ಸಂಪರ್ಕವೇ ಇರಲಿಲ್ಲ. ಕಿಶ್ಕಿಂದೆಯಲ್ಲಿ ಕಳೆದುಹೋಗಿದ್ದ ಕಾಶಿ ವಿಶ್ವನಾಥನ ದೇಗುಲ ಈಗ ಕಾಶಿ ಕಾರಿಡಾರ್ ಮೂಲಕ ಕಂಗೊಳಿಸುತ್ತಿದೆ. ವಾರಾಣಸಿಯಲ್ಲಿ ಮೋದಿ ಗೆದ್ದ ಮೇಲೆ ಮಾಡಿದ್ದೇನು ಅಂತ ಯಾರನ್ನಾದರೂ ಪ್ರಶ್ನಿಸಿದರೆ ತಕ್ಷಣ ಬರುವ ಉತ್ತರ ಕಾಶಿ ವಿಶ್ವನಾಥ ಕಾರಿಡಾರ್. 900 ಕೋಟಿ ವೆಚ್ಚದಲ್ಲಿ 2019ರ ಮಾರ್ಚ್​ನಲ್ಲಿ ಆರಂಭವಾದ ಕಾಮಗಾರಿ 2021ರ ಡಿಸೆಂಬರ್​ನಲ್ಲಿ ಪೂರ್ಣವಾಗಿ ಲೋಕಾರ್ಪಣೆಯಾಯ್ತು. ಮೊದಲು 3 ಸಾವಿರ ಚದುರಡಿಯಿದ್ದ ದೇವಸ್ಥಾನದ ಆವರಣ ಈಗ 5 ಲಕ್ಷ ಚದುರ ಅಡಿಯಷ್ಟು ವಿಸ್ತಾರಗೊಂಡಿದೆ. ಕಾಶಿ ವಿಶ್ವನಾಥ ಕಾರಿಡಾರ್ ಅನ್ನ ನಾಗರೀಕತೆಯ ಪುನರುತ್ಥಾನ ಎಂದು ಕರೆದಿದ್ದರು ನರೇಂದ್ರ ಮೋದಿ. 2019ರಲ್ಲಿ ಕಾಶಿ ವಿಶ್ವನಾಥನ ದೇಗುಲಕ್ಕೆ ಬಂದ ಪ್ರವಾಸಿಗರ ಸಂಖ್ಯೆ 69 ಲಕ್ಷವಾದ್ರೆ, ಕಾರಿಡಾರ್ ನಿರ್ಮಾಣದ ನಂತರದ ಎರಡು ವರ್ಷಗಳಲ್ಲಿ 13 ಕೋಟಿ ಭಕ್ತರು ಕಾಶಿ ವಿಶ್ವನಾಥನ ದರ್ಶನ ಪಡೆದಿದ್ದಾರೆ. ಕಾಶಿ ಕಾರಿಡಾರ್ ನಿರ್ಮಾಣದ ನಂತರ ವಾರಾಣಸಿಯಲ್ಲಿ ಶೇ.34ರಷ್ಟು ಉದ್ಯೋಗಾವಕಾಶಗಳು ಹೆಚ್ಚಾಗಿದೆ. ಪ್ರವಾಸೋದ್ಯಮ ವಲಯ ಶೇ.65ರಷ್ಟು ಬೆಳವಣಿಗೆಯಾಗಿದೆ.

ಎಲ್ಲಿಗೆ ಬಂತು ನಮಾಮಿ ಗಂಗೆ ಯೋಜನೆ?
2014ರಲ್ಲಿ ಮೋದಿ ಅಧಿಕಾರಕ್ಕೆ ಬಂದ ಬೆನ್ನಿಗೇ ಆರಂಭವಾಗಿದ್ದು ನಮಾಮಿ ಗಂಗೆ ಯೋಜನೆ. ಶತಮಾನಗಳಿಂದ ಮಾಲಿನ್ಯದ ಕಳಂಕ ಹೊತ್ತಿದ್ದ ಗಂಗೆಯನ್ನ ಶುದ್ದೀಕರಿಸುವ ಮಹತ್ವಾಕಾಂಕ್ಷಿಯ ಯೋಜನೆ. ಆರಂಭದಲ್ಲಿ 22 ಸಾವಿರ ಕೋಟಿ ಬಜೆಟ್​ನಲ್ಲಿ ಆರಂಭವಾದ ಈ ಯೋಜನೆ ಈಗ 40 ಸಾವಿರ ಕೋಟಿಯನ್ನ ಮೀರಿದೆ. ಗಂಗೆಯನ್ನ ಸ್ವಚ್ಚಗೊಳಿಸುವ ಒಟ್ಟು 457 ಯೋಜನೆಗಳಲ್ಲಿ 10 ವರ್ಷದಲ್ಲಿ 280 ಯೋಜನೆಗಳು ಪೂರ್ಣವಾಗಿವೆ. ಮೊದಲಿನಂತೆ ಗಂಗೆಯ ನೀರಿನ ವಾಸನೆ ಮೂಗಿಗೆ ಬಡಿಯುವುದಿಲ್ಲ, ಗಂಗೆಯಲ್ಲಿ ಹೆಣಗಳು ತೇಲುವುದಿಲ್ಲ. ಪ್ರತಿನಿತ್ಯ ಜರ್ಮನಿಯಿಂದ ತರಿಸೋ ಅತ್ಯಾಧುನಿಕ ಯಂತ್ರಗಳಲ್ಲಿ ನದಿಯ ಸ್ವಚ್ಚಗೊಳಿಸೋ ಕೆಲಸ ನಡೆಯುತ್ತಲೇ ಇರುತ್ತದೆ. ಹಾಗಂತ ಗಂಗೆ ಪರಿಶುದ್ಧಳಾಗಿದ್ದಾಳೆ ಅಂತಲೂ ಅಲ್ಲ. ಗಂಗೆಯ ನೀರು ಈಗಲೂ ಕುಡಿಯಲು ಯೋಗ್ಯವಲ್ಲ. ಹಲವು ನಗರಗಳನ್ನ ದಾಟಿಕೊಂಡು ವಾರಾಣಸಿಗೆ ಬರುವ ಗಂಗೆಗೆ ಕೈಗಾರಿಕಾ ತ್ಯಾಜ್ಯ, ಕೊಳಚೆ ನೀರು ಈಗಲೂ ನದಿ ಸೇರುತ್ತಿದೆ. ಗಂಗಾ ನದಿಯ ಸ್ವಚ್ಚತೆ ಅಂದ್ರೆ ಅದು ಕಾಶಿಯಲ್ಲಷ್ಟೇ ನಡೀತಿಲ್ಲ. ಉತ್ತರ ಪ್ರದೇಶದಲ್ಲೇ ಗಂಗೆ 1,140 ಕಿಲೋ ಮೀಟರ್ ಹರಿಯುತ್ತಾಳೆ. ಅಷ್ಟುದ್ದಕ್ಕೂ ಸ್ವಚ್ಚತೆಯಿಂದಿಡುವ ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ.

ವಾರಾಣಸಿ ಚುನಾವಣಾ ಇತಿಹಾಸ
- ಒಟ್ಟು 17 ಚುನಾವಣೆಗಳಲ್ಲಿ ಕಾಂಗ್ರೆಸ್ 7, ಬಿಜೆಪಿ 7 ಬಾರಿ ಗೆಲುವು.
-  3 ಬಾರಿ ಇತರೆ ಪಕ್ಷಗಳ ಅಭ್ಯರ್ಥಿಗಳ ಗೆಲುವು
- ವಾರಾಣಸಿಯಲ್ಲಿ ಕಾಂಗ್ರೆಸ್ ಕೊನೆಯ ಬಾರಿ ಗೆದ್ದಿದ್ದು 2004ರಲ್ಲಿ
- ಕಳೆದ 7 ಚುನಾವಣೆಗಳಲ್ಲಿ 6 ಚುನಾವಣೆ ಗೆದ್ದಿರೋ ಬಿಜೆಪಿ

ಪಿಎಂ ಮೋದಿ ವಿರುದ್ಧ ಸ್ಪರ್ಧೆ ಮಾಡಿರೋ ಅಭ್ಯರ್ಥಿಗಳು ಯಾರು? ಇಲ್ಲಿದೆ ಮಾಹಿತಿ

ವಾರಾಣಸಿಯಲ್ಲಿ ನರೇಂದ್ರ ಮೋದಿ
ಲೋಕಸಭಾ ಚುನಾವಣೆ-2014
ನರೇಂದ್ರ ಮೋದಿ (ಬಿಜೆಪಿ) 581,02256 
ಅರವಿಂದ ಕೇಜ್ರಿವಾಲ್ (ಆಪ್) 2,09,23820
ಅಜಯ್ ರಾಯ್ (ಕಾಂಗ್ರೆಸ್) 75,6147
ಗೆಲುವಿನ ಅಂತರ 3,71,784

ಲೋಕಸಭಾ ಚುನಾವಣೆ-2019
ನರೇಂದ್ರ ಮೋದಿ (ಬಿಜೆಪಿ) 6,74,664
ಶಾಲಿನಿ ಯಾದವ್ (ಎಸ್​ಪಿ) 1,95,159
ಅಜಯ್ ರಾಯ್ (ಕಾಂಗ್ರೆಸ್) 1,52,548
ಗೆಲುವಿನ ಅಂತರ 4,79,505

ಲೋಕಸಭಾ ಚುನಾವಣೆ-2024
ನರೇಂದ್ರ ಮೋದಿ- ಬಿಜೆಪಿ
ಅಜಯ್ ರಾಯ್ - ಕಾಂಗ್ರೆಸ್+ಎಸ್​ಪಿ
ಅಥರ್ ಜಮಾಲ್ ಲಾರಿ-ಬಿಎಸ್​ಪಿ 

ಮೋದಿ ವಿರುದ್ಧ ಕಣಕ್ಕಿಳಿದ ಶ್ಯಾಮ್ ರಂಗೀಲ್ ನಾಮಪತ್ರ ರಿಜೆಕ್ಟ್, ಕೆರಳಿದ ಕಾಮಿಡಿಯನ್!

ವಾರಾಣಸಿಯ ಜನ ಹೇಳೋದೇನು..?

.ನರೇಂದ್ರ ಮೋದಿ ಇಲ್ಲಿಗೆ ಬಂದ ಮೇಲೆ ದೇವಸ್ಥಾನ, ಘಾಟ್​ಗಳು ಅಭಿವೃದ್ಧಿಯಾಗಿವೆ. ಗಂಗಾನದಿ ಸ್ವಚ್ಚವಾಗ್ತಿದೆ. ಹೆಚ್ಚು ಪ್ರವಾಸಿಗರು ಬರುತ್ತಿರೋದ್ರಿಂದ ನಮಗೂ ಚೆನ್ನಾಗಿ ವ್ಯಾಪಾರ ನಡೆಯುತ್ತಿದೆ. ಮೋದಿಗೆ ಬಿಟ್ಟು ಬೇರೆಯವರಿಗೆ ಮತ ಹಾಕಲ್ಲ.
- ಜಿತೇಂದ್ರ, ಗಂಗಾ ನದಿಯಲ್ಲಿ ದೋಣಿ ನಡೆಸುವವರು

ಮೋದಿಯವರ ಕಾರಣದಿಂದ ಕಾಶಿ ಅಭಿವೃದ್ಧಿಯಾಗುತ್ತಿದೆ. ಮೋದಿ ಬಂದ ಮೇಲೆ ಇಲ್ಲಿ ಅಭಿವೃದ್ಧಿ ಕೆಲಸಗಳು ಆರಂಭ ಆಗಿವೆ. 10 ವರ್ಷದಲ್ಲಿ ಇಲ್ಲಿ ಏನೆಲ್ಲಾ ಆಗಿದೆಯೋ ಅದಕ್ಕೆ ಅವರೇ ಕಾರಣ. ಇನ್ನೂ ಅಭಿವೃದ್ಧಿಯಾಗಬೇಕಿದೆ, ಎಲ್ಲೀವರೆಗೆ ಮೋದಿ ಇಲ್ಲಿ ಇರುತ್ತಾರೋ ಅಲ್ಲೀವರೆಗೆ ಅಭಿವೃದ್ಧಿ ಕೆಲಸಗಳು ನಡೆಯುತ್ತವೆ.
- ರಾಜೇಶ್ ತ್ರಿಪಾಠಿ, ವ್ಯಾಪಾರಿ

ಮೋದಿ ಬಂದ ಮೇಲೆ ಹಿಂದೂ-ಮುಸ್ಲಿಮರ ಮಧ್ಯದ ಅಂತರ ಹೆಚ್ಚುತ್ತಿದೆ. ದೇವಸ್ಥಾನಗಳನ್ನ ಅಭಿವೃದ್ಧಿ ಮಾಡಿದ್ದು ಬಿಟ್ಟರೆ ಬೇರೆ ಏನೂ ಆಗಿಲ್ಲ. ಕಾಂಗ್ರೆಸ್ ಅಭ್ಯರ್ಥಿ ಅಜಯ್ ರಾಯ್ ಇಲ್ಲಿನವರೇ. ಅವರಿಗೆ ಕಾಶಿಯ ಬಗ್ಗೆ ಗೊತ್ತಿದೆ ನಮ್ಮ ಮತ ಇಂಡಿಯಾ ಮೈತ್ರಿಗೆ.
- ಮೊಹಮದ್ ಸಾಜಿದ್, ವ್ಯಾಪಾರಿ

Latest Videos
Follow Us:
Download App:
  • android
  • ios