ಪ್ರಧಾನಿ ಮೋದಿ ಹಿಟ್ಲರ್‌ನಂತೆ ಪ್ರಚಾರ ನಡೆಸಿದ್ದಾರೆ: ಅಂಜಲಿ ನಿಂಬಾಳ್ಕರ್ ವಾಗ್ದಾಳಿ
ರಾಜ್ಯ ಸರಕಾರ ಐದು ಗ್ಯಾರಂಟಿಗಳನ್ನ ರಾಜ್ಯದಲ್ಲಿ ಕೊಡುವುದಾಗಿ ಹೇಳಿತ್ತು, ಕೊಟ್ಟಿದ್ದೇವೆ. ಈಗ ಕೇಂದ್ರದಲ್ಲಿ ಗ್ಯಾರಂಟಿ ಮುಂದೆ ಇಟ್ಟುಕೊಂಡು ಚುನಾವಣೆ ಎದುರಿಸುತ್ತಿದ್ದೇವೆ. ಕೇಂದ್ರ ಸರಕಾರದಿಂದ ಜನರಿಗೆ 15 ಲಕ್ಷ ಬಿಡಿ ಹದಿನೈದು ಪೈಸೆನೂ ಬಂದಿಲ್ಲ. ಎರಡು ಕೋಟಿ ಉದ್ಯೋಗ ಸೃಷ್ಠಿಸುತ್ತೇವೆಂದು ಭರವಸೆ ನೀಡಿದ್ರು ಅದೂ ಮಾಡಿಲ್ಲ. ಬಿಜೆಪಿ ಸರಕಾರದ ಅವಧಿಯಲ್ಲಿ ಭ್ರಷ್ಟಾಚಾರ ಹೆಚ್ಚಿದ್ದು, ಚಿಲ್ಲರೆ ರಾಜಕಾರಣ ಮಾಡುತ್ತಿದ್ದಾರೆ: ಅಂಜಲಿ ನಿಂಬಾಳ್ಕರ್
ಕಾರವಾರ(ಮೇ.02): ಕೇಂದ್ರ ಸರಕಾರ ಹತ್ತು ವರ್ಷ ಯಾವುದೇ ಹೊಸ ಯೋಜನೆಗಳನ್ನ ತಂದಿಲ್ಲ. ಮಹಿಳೆಯರ ಮೇಲೆ ಹಲ್ಲೆ ಆಗಬೇಕಾದರೆ ಪ್ರಧಾನಿ ಮಾತನಾಡಿಲ್ಲ. ಮನ್ ಕಿ ಬಾತ್ ಕೇವಲ ರೇಡಿಯೋಗೆ ಮಾತ್ರ ಸೀಮಿತವಾಗಿತ್ತು. ಬರ, ಬೆಲೆ ಏರಿಕೆ ಮುಂತಾದ ಯಾವುದೇ ವಿಚಾರದಲ್ಲೂ ಪ್ರಧಾನಿ ಮಾತನಾಡಿಲ್ಲ. ಮೋದಿಯವರು ಹಿಟ್ಲರ್‌ನಂತೆ ಪ್ರಚಾರ ನಡೆಸಿದ್ದಾರೆ. ಅಭಿವೃದ್ಧಿ ಕುರಿತು ಚರ್ಚೆ ನಡೆಸುತ್ತಿಲ್ಲ ಎಂದು ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ನಿಂಬಾಳ್ಕರ್ ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.
ಇಂದು(ಗುರುವಾರ) ಕಾರವಾರ ನಗರ ವ್ಯಾಪ್ತಿಯ ವಿವಿಧೆಡೆ ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ನಿಂಬಾಳ್ಕರ್ ಭರ್ಜರಿ ಪ್ರಚಾರ ಮಾಡಿದ್ದಾರೆ. ಕೋಡಿಭಾಗ್, ಕೋಡಿಬೀರ ರಸ್ತೆ, ಪಾದ್ರಿಭಾಗ್, ಬಿಣಗಾ, ನಂದನಗದ್ದಾ ಮುಂತಾದೆಡೆ ಅಂಜಲಿ ನಿಂಬಾಳ್ಕರ್ ಪ್ರಚಾರ ಮಾಡಿದ್ದಾರೆ. ಅಂಜಲಿ ನಿಂಬಾಳ್ಕರ್‌ಗೆ ಸ್ಥಳೀಯ ಶಾಸಕ ಸತೀಶ್ ಸೈಲ್, ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಸಾಥ್ ನೀಡಿದ್ದಾರೆ.
ಪ್ರಜ್ವಲ್ ರೇವಣ್ಣನಿಂದ 400 ಮಹಿಳೆಯರ ಮೇಲೆ ಅತ್ಯಾಚಾರ: ರಾಹುಲ್ ಗಾಂಧಿ ಆರೋಪ
ಸ್ಥಳೀಯ ವಿವಿಧ ದೇವಸ್ಥಾನಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ದೇವರ ಆಶೀರ್ವಾದ ಪಡೆದ ಅಂಜಲಿ ನಿಂಬಾಳ್ಕರ್ ಅವರು, ಪ್ರಚಾರದಲ್ಲಿ ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಆರು ಬಾರಿ ಶಾಸಕರಾಗಿದ್ದರು, ಸ್ಪೀಕರ್ ಕೂಡಾ ಆಗಿದ್ದರು. ಆದರೆ, ಜನಪರ ಯಾವುದೇ ಕೆಲಸಗಳನ್ನು ಈವರೆಗೂ ಮಾಡಿಲ್ಲ. ಪ್ರಚಾರದ ಕಡೆ ಹೋದಲ್ಲಿ ಬಂದಲ್ಲಿ ಜನರು ಹೇಳುತ್ತಿದ್ದಾರೆ ಒಂದೇ ಒಂದು ಕೆಲಸ ಮಾಡಿಲ್ಲ ಅಂತಾ. ಅಧಿಕಾರ ಸಿಕ್ಕಾಗ, ಅವಕಾಶ ಸಿಕ್ಕಾಗ ಜನರ ಕೆಲಸ ಮಾಡಬೇಕು. ಶಾಸಕಿಯಾಗಿದ್ದಾಗ ಸ್ತ್ರೀ ರೋಗ ತಜ್ಞೆಯಾಗಿ ಹೆರಿಗೆ ಆಸ್ಪತ್ರೆ ಕಟ್ಟಿಸಿದೆ. ಬಿಜೆಪಿ ಅಭ್ಯರ್ಥಿ ಕಾಗೇರಿ ತಮ್ಮ ಅಧಿಕಾರವಧಿಯಲ್ಲಿ ಏನೂ ಮಾಡಿಲ್ಲ ಎಂದು ಕಿಡಿ ಕಾರಿದ್ದಾರೆ.
ರಾಜ್ಯ ಸರಕಾರ ಐದು ಗ್ಯಾರಂಟಿಗಳನ್ನ ರಾಜ್ಯದಲ್ಲಿ ಕೊಡುವುದಾಗಿ ಹೇಳಿತ್ತು, ಕೊಟ್ಟಿದ್ದೇವೆ. ಈಗ ಕೇಂದ್ರದಲ್ಲಿ ಗ್ಯಾರಂಟಿ ಮುಂದೆ ಇಟ್ಟುಕೊಂಡು ಚುನಾವಣೆ ಎದುರಿಸುತ್ತಿದ್ದೇವೆ. ಕೇಂದ್ರ ಸರಕಾರದಿಂದ ಜನರಿಗೆ 15 ಲಕ್ಷ ಬಿಡಿ ಹದಿನೈದು ಪೈಸೆನೂ ಬಂದಿಲ್ಲ. ಎರಡು ಕೋಟಿ ಉದ್ಯೋಗ ಸೃಷ್ಠಿಸುತ್ತೇವೆಂದು ಭರವಸೆ ನೀಡಿದ್ರು ಅದೂ ಮಾಡಿಲ್ಲ. ಬಿಜೆಪಿ ಸರಕಾರದ ಅವಧಿಯಲ್ಲಿ ಭ್ರಷ್ಟಾಚಾರ ಹೆಚ್ಚಿದ್ದು, ಚಿಲ್ಲರೆ ರಾಜಕಾರಣ ಮಾಡುತ್ತಿದ್ದಾರೆ. ರಾಮ- ಹನುಮ ಎಂದು ರಾಜಕೀಯ ಮಾಡಿ, ಧರ್ಮ ಧರ್ಮಗಳ ನಡುವೆ ದ್ವೇಷ ಮೂಡಿಸುತ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ಅಂಜಲಿ ನಿಂಬಾಳ್ಕರ್ ಹರಿಹಾಯ್ದಿದ್ದಾರೆ.