ಬೆಂಗಳೂರು, (ಮೇ.06): ಪ್ರಸ್ತುತ ಕೊರೋನಾ ನಿಯಂತ್ರಿಸುವ ಬಗ್ಗೆ ಚಿಂತನೆಗಳು ನಡೆದಿವೆ. ಇದರ ಮಧ್ಯೆ ರೈತರಿಗೆ ನೆರವಾಗುವ ಕೃಷ್ಣ ಮೇಲ್ದಂಡೆ ಯೋಜನೆ ಕುರಿತಂತೆ ಅಧಿಕಾರಿಗಳ ಜತೆ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಮಹತ್ವದ ಸಭೆ ನಡೆಸಿದ್ದಾರೆ.

ವಿಧಾನಸೌಧದಲ್ಲಿ ಬುಧವಾರ ಈ ಸಂಬಂಧ ಇಂದು (ಬುಧವಾರ) ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೃಷ್ಣಾ ಮೇಲ್ದಂಡೆ ಯೋಜನೆಯ ಭೂ ಸ್ವಾಧೀನ ಪ್ರಕ್ರಿಯೆ ತುಂಬಾ ನಿಧಾನವಾಗುತ್ತಿದ್ದು, ಇದನ್ನು ಚುರುಕುಗೊಳಿಸಬೇಕಾಗಿದೆ. ಭೂಸ್ವಾಧೀನ ಕಾರ್ಯವನ್ನು ಚುರುಕುಗೊಳಿಸಲು ಚರ್ಚೆ ಮಾಡಿದ್ದೇವೆ. ಮುಖ್ಯಮಂತ್ರಿ ಜೊತೆಗೆ ಇನ್ನೊಂದು ಸುತ್ತಿನ ಸಭೆ ನಡೆಸುತ್ತೇವೆ ಹೇಳಿದರು.

ಕೃಷ್ಣಾ ಮೇಲ್ದಂಡೆಗೆ 10000 ಕೋಟಿ ರು. ಅನುದಾನ 

16 ಸಾವಿರ ಎಕರೆ ಈಗ ಭೂ ಸ್ವಾಧೀನ ಆಗಿದ್ದು, ಇನ್ನೂ 35 ಸಾವಿರ ಎಕರೆ ಬಾಕಿ ಇದೆ. ಪರಿಹಾರ ಹಣ ಒಂದೊಂದು ತಾಲ್ಲೂಕಿನಲ್ಲಿ ಒಂದೊಂದು ರೀತಿ ಇದೆ. ಇದೂ ಕೂಡ ಸಮಸ್ಯೆ ಆಗಿದೆ ಎಂದು ಒಪ್ಪಿಕೊಂಡರು.

'ಆಲಮಟ್ಟಿ ಜಲಾಶಯದ ಅಣೆಕಟ್ಟು ಎತ್ತರ 524ಕ್ಕೆ ಏರಿಕೆ ಆಗಿರುವುದರಿಂದ 75 ಸಾವಿರ ಎಕರೆ ಮುಳಗಡೆ ಆಗಿದೆ, ಪುನರ್ವಸತಿ ಈ ಭೂಸ್ವಾಧೀನ ಅಗತ್ಯವಾಗಿದೆ' ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಪ್ರತಿಕ್ರಿಯಿಸಿ, ಎತ್ತಿನಹೊಳೆ ಕಾಮಗಾರಿ ಭರದಿಂದ ಸಾಗಿದೆ.
ಅರಸೀಕೆರೆ ತನಕ ಕಾಲುವೆ ಕೆಲಸ ಆಗಿದೆ ಎಂದು ಸ್ಪಷ್ಟಪಡಿಸಿದರು.