ಬೆಂಗಳೂರು (ನ.29):  ಸಂಪುಟ ಕಸರತ್ತಿಗೆ ಸಂಬಂಧಿಸಿದಂತೆ ಆಡಳಿತಾರೂಢ ಬಿಜೆಪಿಯಲ್ಲಿ ಮೂಲ ಮತ್ತು ವಲಸಿಗರ ನಡುವೆ ತಿಕ್ಕಾಟ ತೀವ್ರಗೊಂಡ ಬೆನ್ನಲ್ಲೇ ವಲಸಿಗ ಸಚಿವ, ಶಾಸಕರು ತಮ್ಮ ಒಗ್ಗಟ್ಟು ಪ್ರದರ್ಶಿಸಲು ಮುಂದಾಗಿದ್ದಾರೆ.

ಶುಕ್ರವಾರ ತಡರಾತ್ರಿ ಖಾಸಗಿ ಹೋಟೆಲ್‌ನಲ್ಲಿ ಸಭೆ ಸೇರಿದ ವಲಸಿಗ ಸಚಿವರು ಹಾಗೂ ಶಾಸಕರು, ‘ನಮ್ಮಲ್ಲಿ ಒಗ್ಗಟ್ಟು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಳಿಗಾಲವಿಲ್ಲ. ಶಾಸಕರಾದ ಎಂ.ಪಿ.ರೇಣುಕಾಚಾರ್ಯ, ರಾಜುಗೌಡ ಅವರು ಬಹಿರಂಗವಾಗಿ ತಮಗೆ ಮುಜುಗರವಾಗುವಂಥ ಹೇಳಿಕೆಗಳನ್ನು ನೀಡುತ್ತಿರುವ ಹಿನ್ನೆಲೆಯಲ್ಲಿ ನಾವೆಲ್ಲ ಒಗ್ಗಟ್ಟಿನಿಂದ ಮುನ್ನಡೆಯುವುದರಲ್ಲಿ ಬಲವಿದೆ’ ಎಂಬ ನಿಲುವಿಗೆ ಬಂದಿದ್ದಾರೆ ಎನ್ನಲಾಗಿದೆ.

ಜೊತೆಗೆ ಜಲಸಂಪನ್ಮೂಲ ಸಚಿವ ರಮೇಶ್‌ ಜಾರಕಿಹೊಳಿ ಅವರು, ತಮ್ಮ ಜೊತೆಗೆ ಬಂದ ವಲಸಿಗರ ಹಿತ ಕಾಪಾಡದೆ ಅಂತರ ಕಾಪಾಡಿಕೊಳ್ಳುತ್ತಿರುವ ಬಗ್ಗೆಯೂ ಸಭೆಯಲ್ಲಿ ಅಸಮಾಧಾನ ವ್ಯಕ್ತವಾಗಿದೆ ಎಂದು ಮೂಲಗಳು ತಿಳಿಸಿವೆ.

ಗೆದ್ದವರು v/s ಸೋತವರ ವಾರ್: ರಾಜ್ಯ ಬಿಜೆಪಿ ಶುರುವಾಯ್ತು ಬೇಗುದಿ...!

ಸಚಿವರಾದ ಆನಂದ ಸಿಂಗ್‌, ಬಿ.ಸಿ.ಪಾಟೀಲ್‌, ನಾರಾಯಣಗೌಡ, ವಿಧಾನಪರಿಷತ್‌ ಸದಸ್ಯರಾದ ಎಂ.ಟಿ.ಬಿ.ನಾಗರಾಜ್‌, ಆರ್‌.ಶಂಕರ್‌ ಸೇರಿದಂತೆ ಹಲವರು ಸಭೆಯಲ್ಲಿ ಪಾಲ್ಗೊಂಡಿದ್ದರು.

ಸಿಎಂ ಜತೆ ಒಟ್ಟಾಗಿ ಚರ್ಚೆ:

ಸಚಿವ ಸ್ಥಾನ ಪಡೆಯುವ ಸಂಬಂಧ ಎರಡು ಹಂತದ ಪ್ರಯತ್ನದ ಬಗ್ಗೆ ಸಭೆಯಲ್ಲಿ ಸಮಾಲೋಚನೆ ನಡೆಸಲಾಗಿದೆ. ಸಚಿವ ಸ್ಥಾನ ಕುರಿತು ಮೊದಲ ಹಂತದಲ್ಲಿ ಎಲ್ಲ ವಲಸಿಗ ಶಾಸಕರು ಒಟ್ಟಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಜತೆ ಮಾತುಕತೆ ನಡೆಸಲು ತೀರ್ಮಾನಿಸಲಾಗಿದೆ. ಮುಖ್ಯಮಂತ್ರಿಗಳು ವರಿಷ್ಠರ ಜತೆ ಚರ್ಚೆ ನಡೆಸಿದ ಬಳಿಕವೂ ಸಂಪುಟ ವಿಸ್ತರಣೆ ವಿಳಂಬವಾದರೆ ಎರಡನೇ ಹಂತದಲ್ಲಿ ಹೈಕಮಾಂಡ್‌ ನಾಯಕರನ್ನು ಭೇಟಿ ಮಾಡುವ ಬಗ್ಗೆ ಸಭೆಯಲ್ಲಿ ಸಮಾಲೋಚನೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ.

ಸಚಿವ ಸ್ಥಾನ ನೀಡುವ ಸಂಬಂಧ ವಿಳಂಬ ಮಾಡಲಾಗುತ್ತಿದೆ. ಸರ್ಕಾರ ರಚನೆಯಲ್ಲಿ ತೋರಿದ ಆಸಕ್ತಿಯನ್ನು ಸಚಿವ ಸ್ಥಾನ ನೀಡುವಲ್ಲಿ ತೋರುತ್ತಿಲ್ಲ. ಬಿಜೆಪಿ ಹೈಕಮಾಂಡ್‌ ಸಹ ಸಕಾರಾತ್ಮಕವಾಗಿ ಸ್ಪಂದಿಸುತ್ತಿಲ್ಲ ಎಂಬ ಅಸಮಾಧಾನಗಳು ವ್ಯಕ್ತವಾಗಿವೆ. ರಾಜ್ಯ ಬಿಜೆಪಿ ವಲಯದಲ್ಲಿನ ಪ್ರಸಕ್ತ ಬೆಳವಣಿಗೆಗಳು ನೋವುಂಟು ಮಾಡುತ್ತಿವೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ ಎಂದು ಹೇಳಲಾಗಿದೆ. ತಮ್ಮ ವಿರುದ್ಧ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ನೀಡಿರುವ ಹೇಳಿಕೆಯನ್ನು ಸಹ ಸಭೆಯಲ್ಲಿ ತೀವ್ರವಾಗಿ ವಿರೋಧಿಸಲಾಯಿತು ಎನ್ನಲಾಗಿದೆ.

ಜಾರಕಿಹೊಳಿ ಬಗ್ಗೆ ಅತೃಪ್ತಿ:  ಬಿಜೆಪಿ ಸರ್ಕಾರ ರಚನೆ ವೇಳೆ ಸಚಿವ ರಮೇಶ್‌ ಜಾರಕಿಹೊಳಿ ಮುಂದಾಳತ್ವ ವಹಿಸಿದ್ದರು. ಆದರೆ, ಸಚಿವರಾದ ಬಳಿಕ ಇತರರ ಬಗ್ಗೆ ಹೆಚ್ಚಿನ ಚಿಂತನೆ ನಡೆಸುತ್ತಿಲ್ಲ. ಅವರನ್ನು ಗಂಭೀರವಾಗಿ ಪರಿಗಣಿಸದಿರಲು ಸಭೆಯಲ್ಲಿ ವಲಸೆ ಶಾಸಕರು ತೀರ್ಮಾನಿಸಿದ್ದಾರೆ. ಬಿಜೆಪಿ ಹೈಕಮಾಂಡ್‌ ಚಿಂತನೆ ಏನೇ ಇರಲಿ ನಂಬಿ ಬಂದವರಿಗೆ ಸಚಿವ ಸ್ಥಾನ ನೀಡಬೇಕು. ನಾಯಕತ್ವ ಬದಲಾವಣೆಯ ವಿಚಾರವನ್ನು ಮುಂದಿಟ್ಟುಕೊಂಡು ಸಂಪುಟ ವಿಸ್ತರಣೆ ವಿಳಂಬ ಮಾಡಲು ಬಿಜೆಪಿ ಹೈಕಮಾಂಡ್‌ ಆಲೋಚನೆ ಮಾಡಿದೆ. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ವಿಚಾರ ಪಕ್ಷಕ್ಕೆ ಬಿಟ್ಟು, ನಮ್ಮ ಅಭಿಪ್ರಾಯವನ್ನು ಕೇಳಿದರೆ ಯಡಿಯೂರಪ್ಪ ಪರ ನಿಲ್ಲಬೇಕು. ಸಚಿವ ಸ್ಥಾನ ತಪ್ಪದಂತೆ ನೋಡಿಕೊಳ್ಳಬೇಕು. ಇದಕ್ಕಾಗಿ ಎಲ್ಲರೂ ಒಟ್ಟಾಗಿ ಇರಬೇಕು ಎಂಬಂತಹ ಚರ್ಚೆಗಳು ನಡೆದಿವೆ ಎಂದು ತಿಳಿದುಬಂದಿದೆ.

‘ರಮೇಶ್‌ ಜಾರಕಿಹೊಳಿ ಅವರು ವಲಸೆ ಶಾಸಕರ ಹೆಸರನ್ನು ಬಳಸಿಕೊಳ್ಳುತ್ತಿದ್ದಾರೆ. ಅವರು ನಮ್ಮ ನಾಯಕರಲ್ಲ. ನಮ್ಮ ತಂಡದ ನಾಯಕ ಎನ್ನುವ ರೀತಿಯಲ್ಲಿ ದೆಹಲಿಗೆ ಹೋಗಿ ಗುರುತಿಸಿಕೊಳ್ಳುತ್ತಿದ್ದಾರೆ. ಇದು ನಮ್ಮ ವೈಯಕ್ತಿಕ ವರ್ಚಿಸಿಗೂ ಧಕ್ಕೆಯಾಗಲಿದೆ ಎಂಬ ಅನಿಸಿಕೆಗಳು ಹೊರಹೊಮ್ಮಿವೆ. ವಿಧಾನಪರಿಷತ್‌ ಸದಸ್ಯ ಸಿ.ಪಿ.ಯೋಗೇಶ್ವರ್‌ ಸೇರಿದಂತೆ ಮೂಲ ಬಿಜೆಪಿ ಶಾಸಕರಿಗೆ ಸ್ಥಾನ ಕಲ್ಪಿಸುವುದು, ಬಿಡುವುದು ಪಕ್ಷಕ್ಕೆ ಬಿಟ್ಟವಿಚಾರ. ಪಕ್ಷದ ನಾಯಕರು ನಮಗೆ ನೀಡಿರುವ ಭರವಸೆಯನ್ನು ಈಡೇರಿಸಿ’ ಎಂಬ ಬೇಡಿಕೆಯನ್ನು ಪಕ್ಷದ ಪ್ರಮುಖರ ಮುಂದಿಡಲು ಸಭೆಯಲ್ಲಿ ನಿರ್ಧರಿಸಲಾಯಿತು.

ತಮ್ಮ ನಂಬಿ ಪಕ್ಷಕ್ಕೆ ಬಂದವರಿಗೆ ನಿಗಮ ಮಂಡಳಿಯಾಗಲಿ ಅಥವಾ ಬೇರಾವುದೇ ಸ್ಥಾನಮಾನವಾಗಲಿ ಸಿಗದಿರುವ ಬಗ್ಗೆಯೂ ಸಭೆಯಲ್ಲಿ ವಲಸೆ ಶಾಸಕರು ಬೇಸರ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

5 ತಿಂಗಳಿನಿಂದ ಕಾಯುತ್ತಿದ್ದೇನೆ

ಮಂತ್ರಿ ಆಗಿದ್ದ ನಾನು ಮಾಜಿ ಆಗಿದ್ದೇನೆ. ಎಂಎಲ್ಸಿ ಆಗಿ 5 ತಿಂಗಳಾಯ್ತು. ಇನ್ನೂ ಮಂತ್ರಿ ಆಗುವ ಅದೃಷ್ಟಕೂಡಿ ಬಂದಿಲ್ಲ. ತಡವಾಗುತ್ತಿರುವ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದೇನೆ. ಅವರೂ ಮಂತ್ರಿ ಮಾಡುವ ಭರವಸೆ ನೀಡುತ್ತಲೇ ಇದ್ದಾರೆ. ಈ ವಿಚಾರದಲ್ಲಿ ನಿಧಾನ ಧೋರಣೆ ಅನುಸರಿಸಲಾಗುತ್ತಿದೆ. ಒಟ್ಟಾರೆ, ನನ್ನ ಹಣೆಬರಹ ಸರಿಯಿಲ್ಲ. ಹಾಗಾಗಿ, ಇನ್ನೂ ಮಂತ್ರಿ ಆಗಿಲ್ಲ.

- ಎಂಟಿಬಿ ನಾಗರಾಜ್‌, ಬಿಜೆಪಿ ಎಂಎಲ್ಸಿ