ಪುತ್ತಿಲ ಬಿಕ್ಕಟ್ಟು ಶಮನಕ್ಕೆ ಕೇಂದ್ರ ಸಚಿವ ಪ್ರಯತ್ನ?: ಪೇಜಾವರ ಶ್ರೀ ಜತೆಗೂ ಚರ್ಚೆ
ಅಸೆಂಬ್ಲಿ ಚುನಾವಣೆಗೆ ಪುತ್ತೂರಲ್ಲಿ ಪಕ್ಷೇತರನಾಗಿ ಸ್ಪರ್ಧಿಸಿ ಬಿಜೆಪಿಯನ್ನು ಮೂರನೇ ಸ್ಥಾನಕ್ಕೆ ತಳ್ಳಿ ರಾಷ್ಟ್ರೀಯ ನಾಯಕರನ್ನೇ ದಂಗುಬಡಿಸಿದ ಸಂಘಟಕ ಅರುಣ್ ಕುಮಾರ್ ಪುತ್ತಿಲ ಬಿಕ್ಕಟ್ಟನ್ನು ಪರಿಹರಿಸಲು ಬಿಜೆಪಿ ಕಡೆಯಿಂದ ಪ್ರಯತ್ನಗಳು ನಡೆಯುತ್ತಿವೆ.
ಆತ್ಮಭೂಷಣ್
ಮಂಗಳೂರು (ಜೂ.12): ಅಸೆಂಬ್ಲಿ ಚುನಾವಣೆಗೆ ಪುತ್ತೂರಲ್ಲಿ ಪಕ್ಷೇತರನಾಗಿ ಸ್ಪರ್ಧಿಸಿ ಬಿಜೆಪಿಯನ್ನು ಮೂರನೇ ಸ್ಥಾನಕ್ಕೆ ತಳ್ಳಿ ರಾಷ್ಟ್ರೀಯ ನಾಯಕರನ್ನೇ ದಂಗುಬಡಿಸಿದ ಸಂಘಟಕ ಅರುಣ್ ಕುಮಾರ್ ಪುತ್ತಿಲ ಬಿಕ್ಕಟ್ಟನ್ನು ಪರಿಹರಿಸಲು ಬಿಜೆಪಿ ಕಡೆಯಿಂದ ಪ್ರಯತ್ನಗಳು ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸಚಿವರೊಬ್ಬರ ಜೊತೆ ದೆಹಲಿಯಲ್ಲಿ ಅರುಣ್ ಕುಮಾರ್ ಪುತ್ತಿಲ ಮಾತುಕತೆ ಕೂಡ ನಡೆಸಿದ್ದಾರೆ. ಅಲ್ಲದೆ ಪೇಜಾವರಶ್ರೀ ಸೇರಿದಂತೆ ಇತರ ಮಠಾಧೀಶರೊಂದಿಗೂ ಮಾತುಕತೆ ನಡೆದಿದೆ. ಅಸೆಂಬ್ಲಿ ಚುನಾವಣೆ ಮುಕ್ತಾಯಗೊಂಡು ಹೊಸ ಸರ್ಕಾರ ರಚನೆಯಾದರೂ ಪುತ್ತೂರಿನಲ್ಲಿ ಪುತ್ತಿಲ ಬಿಕ್ಕಟ್ಟು ಶಮನವಾಗಿಲ್ಲ.
ಪುತ್ತಿಲ ಬಿಕ್ಕಟ್ಟು ಪರಿಹರಿಸುವುದು ಹೇಗೆ ಎಂಬುದೇ ದೊಡ್ಡ ಸವಾಲಾಗಿ ಕಾಡತೊಡಗಿದೆ. ಯಾಕೆಂದರೆ, ಈ ಮೊದಲು ಇಲ್ಲಿನ ಸಂಘಪರಿವಾರ ಹಾಗೂ ಬಿಜೆಪಿ ನಾಯಕರು ನಡೆಸಿದ ಮಾತುಕತೆಗಳೆಲ್ಲ ವ್ಯರ್ಥವಾಗಿದೆ. ಅಸೆಂಬ್ಲಿ ಚುನಾವಣೆ ಬಳಿಕ ಪ್ರಬಲ ಹಿಂದು ಸಂಘಟನೆಯಾಗಿ ಹಾಗೂ ಲೋಕಸಭೆಗೆ ಸ್ಪರ್ಧಿಸುವ ದೃಷ್ಟಿಯನ್ನು ಇರಿಸಿಕೊಂಡು ‘ಪುತ್ತಿಲ ಪರಿವಾರ’ ಹೆಸರಿನಲ್ಲಿ ಸಂಘಟನೆ ಅಸ್ತಿತ್ವಕ್ಕೆ ಬಂದಿದ್ದು, ಈಗ ಪುತ್ತೂರಿನಿಂದ ಹತ್ತೂರಿಗೆ ವಿಸ್ತರಿಸುತ್ತಿದೆ.
ಸರ್ಕಾರಿ ಭೂಮಿ ಅರ್ಹರಿಗೆ ಸಿಗಬೇಕು: ಸಚಿವ ದಿನೇಶ್ ಗುಂಡೂರಾವ್
ದ.ಕ.ಲೋಕಸಭೆಯ ಎಲ್ಲ ಅಸೆಂಬ್ಲಿ ಕ್ಷೇತ್ರಗಳಲ್ಲಿ ಪುತ್ತಿಲ ಪರಿವಾರ ತಲೆಎತ್ತುತ್ತಿದ್ದು, ನೆರೆಯ ಕಾಸರಗೋಡು ಹಾಗೂ ರಾಜ್ಯದ ರಾಜಧಾನಿಯನ್ನೂ ತಲುಪುತ್ತಿದೆ. ಬಿಜೆಪಿ ಹಾಗೂ ಸಂಘಪರಿವಾರದ ಅತೃಪ್ತ, ಅಸಮಾಧಾನಿತರ ಗುಂಪುಗಳು ಪುತ್ತಿಲ ಪರಿವಾರವನ್ನು ಸೇರಿಕೊಳ್ಳುತ್ತಿವೆ. ಈ ಮಧ್ಯೆ ಮುಂದಿನ ತಾಲೂಕು ಪಂಚಾಯ್ತಿ, ಜಿಲ್ಲಾ ಪಂಚಾಯ್ತಿ ಮತ್ತು ಲೋಕಸಭಾ ಚುನಾವಣೆಗೆ ಬಿಜೆಪಿ ಸಿದ್ಧತೆ ಆರಂಭಿಸಿದೆ. ಆದರೆ ಬಿಜೆಪಿ ಪಾಲಿಗೆ ಪುತ್ತೂರು ಮಾತ್ರವಲ್ಲ ದ.ಕ. ಜಿಲ್ಲೆಯಲ್ಲೂ ‘ಪುತ್ತಿಲ ಪರಿವಾರ’ ಪಕ್ಷದೊಳಗೆ ಬಿಕ್ಕಟ್ಟು ಸೃಷ್ಟಿಗೆ ಕಾರಣವಾಗಿದೆ.
ಮೋದಿ ಆಪ್ತ ಸಚಿವರ ಪ್ರವೇಶ: ಪ್ರಧಾನಿ ನರೇಂದ್ರ ಮೋದಿ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ಕನ್ನಡಿಗ, ಕೇಂದ್ರ ಸಚಿವರೊಬ್ಬರು ದೆಹಲಿಯಲ್ಲಿ ಅರುಣ್ ಕುಮಾರ್ ಪುತ್ತಿಲ ಜತೆ ಇತ್ತೀಚೆಗೆ ಮಾತುಕತೆ ನಡೆಸಿದ್ದಾರೆ. ಈ ವೇಳೆ ಹಿಂದುತ್ವ ಹಾಗೂ ಪಕ್ಷಕ್ಕೆ ಅನುಕೂಲವಾಗುವ ರೀತಿಯಲ್ಲಿ ಸೂಕ್ತ ಪ್ರಾತಿನಿಧ್ಯ ನೀಡುವಂತೆ ಬೇಡಿಕೆ ವ್ಯಕ್ತವಾಗಿದೆ. ಇದನ್ನು ಕೇಂದ್ರ ವರಿಷ್ಠರ ಗಮನಕ್ಕೆ ತಂದು ಶೀಘ್ರವೇ ಸಮಸ್ಯೆ ಇತ್ಯರ್ಥಪಡಿಸುವ ಭರವಸೆ ಸಿಕ್ಕಿದೆ ಎಂದು ಹೇಳಲಾಗಿದೆ. ಇದಕ್ಕೂ ಮೊದಲು ಪುತ್ತೂರಿಗೆ ಭೇಟಿ ನೀಡಿದ್ದ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕೂಡ ಇದೇ ರೀತಿಯ ಭರವಸೆ ನೀಡಿ ತೆರಳಿದ್ದರು.
ಪೇಜಾವರ ಶ್ರೀ ಸಂಧಾನ: ಉಡುಪಿ ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಜತೆ ಅರುಣ್ ಕುಮಾರ್ ಪುತ್ತಿಲ ಮಾತುಕತೆ ನಡೆಸಿದ್ದಾರೆ. ಅಲ್ಲದೆ ನಾಡಿನ ಕೆಲವು ಮಠಾಧೀಶರೊಂದಿಗೂ ಅರುಣ್ ಕುಮಾರ್ ಪುತ್ತಿಲ ಭೇಟಿ ನಡೆದಿದೆ. ಪೇಜಾವರ ಶ್ರೀಗಳು ಇತ್ತೀಚೆಗೆ ಪುತ್ತಿಲರ ಮನೆಗೆ ದಿಢೀರ್ ಭೇಟಿ ನೀಡಿ ರಾತ್ರಿ ವಾಸ್ತವ್ಯವನ್ನೂ ಹೂಡಿದ್ದು ಭಾರಿ ಕುತೂಹಲಕ್ಕೆ ಕಾರಣವಾಗಿದೆ. ಈ ವೇಳೆ ಆದಷ್ಟುತ್ವರಿತವಾಗಿ ಬಿಕ್ಕಟ್ಟು ಪರಿಹಾರಗೊಳ್ಳುವ ವಿಶ್ವಾಸವನ್ನು ಪೇಜಾವರಶ್ರೀ ವ್ಯಕ್ತಪಡಿಸಿದರು ಎಂದು ಪುತ್ತಿಲರ ಆಪ್ತ ಮೂಲಗಳು ಹೇಳುತ್ತಿವೆ.
ಮಾತು ತಪ್ಪದೇ ಎಲ್ಲ 5 ಗ್ಯಾರಂಟಿ ಈಡೇರಿಕೆ: ಡಿ.ಕೆ.ಶಿವಕುಮಾರ್
ಮುಂದಿನ ಚುನಾವಣೆಗೆ ಪುತ್ತಿಲ ಎಫೆಕ್ಟ್?: ಈಗ ಪುತ್ತಿಲ ಹವಾ ಎಲ್ಲೆಡೆ ಪಸರಿಸುತ್ತಿರುವುದು ಬಿಜೆಪಿ ಹಾಗೂ ಸಂಘಪರಿವಾರ ವಿಚಲಿತಗೊಳ್ಳುವಂತೆ ಮಾಡಿದೆ. ಇದನ್ನು ಬಿಜೆಪಿ ಹಾಗೂ ಸಂಘಪರಿವಾರದ ಹಿರಿಯ ನಾಯಕರು ಗಂಭೀರವಾಗಿ ಪರಿಗಣಿಸಿದ್ದು, ಪುತ್ತಿಲ ಬಿಕ್ಕಟ್ಟು ಶಮನಗೊಳಿಸಲು ಅಖಾಡಕ್ಕೆ ಇಳಿದಿದ್ದಾರೆ. ಮುಂದಿನ ಜಿ.ಪಂ, ತಾ.ಪಂ. ಹಾಗೂ ಲೋಕಸಭಾ ಚುನಾವಣೆಗೆ ಜಿಲ್ಲೆಯಲ್ಲೂ ಪಕ್ಷ ಸಿದ್ಧತೆ ಆರಂಭಿಸಿದೆ. ಪುತ್ತಿಲ ಬಿಕ್ಕಟ್ಟು ಪರಿಹರಿಸುವ ಜವಾಬ್ದಾರಿಯನ್ನು ಜಿಲ್ಲೆಯ ಬಿಜೆಪಿಗರು ಕೇಂದ್ರ ನಾಯಕತ್ವ ಹಾಗೂ ಸಂಘಪರಿವಾರದ ಹಿರಿಯರಿಗೆ ಬಿಟ್ಟುಬಿಟ್ಟಿದ್ದಾರೆ. ಸದ್ಯಕ್ಕೆ ಪುತ್ತಿಲರ ವಿಚಾರದಲ್ಲಿ ಇಲ್ಲಿನ ಬಿಜೆಪಿ ತಟಸ್ಥ ಧೋರಣೆಯಲ್ಲಿದ್ದರೆ, ಪುತ್ತಿಲ ಪರಿವಾರ ದಾಪುಗಾಲು ಇಡುತ್ತಿದೆ.