ಸಿದ್ದರಾಮಯ್ಯ ಒಂದು ತಪ್ಪು ಮುಚ್ಚಲು ಹೋಗಿ ನೂರಾರು ತಪ್ಪು ಮಾಡುತ್ತಿದ್ದಾರೆ: ವಿ.ಸೋಮಣ್ಣ
ಇನ್ನು ಎರಡು ಮೂರು ತಿಂಗಳಿನಲ್ಲಿ ಹಲವಾರು ಯೋಜನೆ ತರುವ ಭರವಸೆಯನ್ನು ಕೇಂದ್ರ ರೈಲ್ವೆ ಸಚಿವ ವಿ. ಸೋಮಣ್ಣ ನೀಡಿದ್ದಾರೆ. ಅವರು ತುಮಕೂರಿನಲ್ಲಿ ಮೆಮು ರೈಲಿಗೆ ಚಾಲನೆ ನೀಡಿ ಮಾತನಾಡಿದರು.
ತುಮಕೂರು (ಸೆ.28): ಇನ್ನು ಎರಡು ಮೂರು ತಿಂಗಳಿನಲ್ಲಿ ಹಲವಾರು ಯೋಜನೆ ತರುವ ಭರವಸೆಯನ್ನು ಕೇಂದ್ರ ರೈಲ್ವೆ ಸಚಿವ ವಿ. ಸೋಮಣ್ಣ ನೀಡಿದ್ದಾರೆ. ಅವರು ತುಮಕೂರಿನಲ್ಲಿ ಮೆಮು ರೈಲಿಗೆ ಚಾಲನೆ ನೀಡಿ ಮಾತನಾಡಿದರು. ಅನಿರೀಕ್ಷಿತವಾಗಿ ಬಂದ ನನ್ನನ್ನು ತುಮಕೂರು ಜಿಲ್ಲೆಯ ಜನತೆ ಲಕ್ಷಾಂತರ ಮತಗಳಿಂದ ಗೆಲ್ಲಿಸಿದರು. ಹಾಗಾಗಿ ಅದರ ಋಣ ತೀರಿಸುವುದಾಗಿ ತಿಳಿಸಿದರು. ಶಿವಮೊಗ್ಗದ ಜನ ಬಿವೈ ರಾಘವೇಂದ್ರ ಅವರನ್ನು ನಾಲ್ಕು ಬಾರಿ ಗೆಲ್ಲಿಸಿದ್ದಾರೆ. ಅವರ ಕ್ಷೇತ್ರದ ಚಿತ್ರಣ ನೋಡಿದರೆ ಎಲ್ಲಾ ಸಂಸದರು ಕೇಂದ್ರದ ಜೊತೆ ಕೈಜೊಡಿಸಿದರೆ ಏನು ಬೇಕಾದರೂ ಮಾಡಬಹುದು. ಎನ್ನುವ ಮೂಲಕ ರಾಘವೇಂದ್ರ ಅವರನ್ನು ಹೊಗಳಿದರು.
ಸಿಬಿಐ ತನಿಖೆಗೆ ರಾಜ್ಯ ಸರ್ಕಾರದ ಒಪ್ಪಿಗೆ ಪಡೆಯುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಸೋಮಣ್ಣ ಅವರು ಸಿದ್ದರಾಮಯ್ಯನವರು ಅವರ ಕಾಲ ಮೇಲೆ ಅವರೇ ಕಲ್ಲು ಹಾಕಿಕೊಳ್ಳುತ್ತಿದ್ದಾರೆ ಎಂದರು. ರಾಜ್ಯ ಸರ್ಕಾರದ ಅಧಿಕಾರವನ್ನು ಅವರೇ ಬೇಡ ಅಂದಾಗ ನ್ಯಾಯಾಂಗವಿದೆ. ಅದರ ಮೇಲುಗಡೆ ಇನ್ನೊಂದು ಇದೆ. ಇದು ಹೀಗೆ ಆಗಬಾರದಿತ್ತು. ಅದ್ಯಾಕೆ ಹೀಗೆ ಮಾಡುತ್ತಿದ್ದಾರೋ ಗೊತ್ತಿಲ್ಲ ಎಂದರು. ಒಂದು ತಪ್ಪು ಮುಚ್ಚಲು ಹೋಗಿ ನೂರಾರು ತಪ್ಪು ಮಾಡುತ್ತಿದ್ದಾರೆ. ಇದು ಒಳ್ಳೆಯದಲ್ಲ. ಸಿದ್ದರಾಮಯ್ಯನಂತಹ ನುರಿತ ರಾಜಕಾರಣಿ ಕೂಡ ಹಠಕ್ಕೆ ಬೀಳುತ್ತಾರೆ ಅಂದರೆ ಸ್ವಲ್ಪ ಕಷ್ಟವಾಗುತ್ತದೆ. ಅವರು ಅರ್ಥ ಮಾಡಿಕೊಂಡರೆ ಒಳ್ಳೆಯದು ಅನ್ನುವುದು ನನ್ನ ಭಾವನೆ ಎಂದರು.
ದಸರಾ ನೆಪದಲ್ಲಿ ಅಭಿವೃದ್ಧಿ ಕಾರ್ಯಗಳು ಕುಂಠಿತ ಆಗಬಾರದು: ಸಿಎಂ ಸಿದ್ದರಾಮಯ್ಯ ಎಚ್ಚರಿಕೆ
ರೈಲ್ವೆ ಕ್ರಾಂತಿ ಮಾಡಲು ಬದ್ಧ: ರಾಜ್ಯದಲ್ಲಿ ರೈಲ್ವೆ ಇಲಾಖೆಗೆ ಸಂಬಂಧಪಟ್ಟ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ರೈಲ್ವೆ ಕ್ರಾಂತಿ ಮಾಡಲು ಬದ್ಧವಾಗಿರುವುದಾಗಿ ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ರಾಜ್ಯ ಖಾತೆ ಸಚಿವ ವಿ. ಸೋಮಣ್ಣ ಇಂದಿಲ್ಲಿ ತಿಳಿಸಿದರು. ನಗರದ ರೈಲ್ವೆ ನಿಲ್ದಾಣದಲ್ಲಿ ತುಮಕೂರು-ಯಶವಂತಪುರ ಹೊಸ ಮೆಮು ರೈಲು ಲೋಕಾರ್ಪಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ನಾನಿನ್ನು ಇಲಾಖೆಯ ಬಗ್ಗೆ ಬಹಳ ತಿಳಿದುಕೊಳ್ಳಬೇಕಾಗಿದೆ. ಆ ನಿಟ್ಟಿನಲ್ಲಿ ಕಾರ್ಯೋನ್ಮುಖನಾಗಿದ್ದೇನೆ. ನನ್ನ ಅವಧಿಯಲ್ಲಿ ರಾಜ್ಯದಲ್ಲಿ ಬಾಕಿ ಉಳಿದಿರುವ, ನೆನೆಗುದಿಗೆ ಬಿದ್ದಿರುವ ರೈಲ್ವೆ ಯೋಜನೆಗಳನ್ನು ಸಂಪೂರ್ಣಗೊಳಿಸುವ ಮೂಲಕ ರೈಲ್ವೆ ಕ್ರಾಂತಿ ಮಾಡುವುದಾಗಿ ಹೇಳಿದರು.
2027 ರ ಮಾರ್ಚ್ ಒಳಗೆ ರಾಯದುರ್ಗ-ತುಮಕೂರು, ದಾವಣಗೆರೆ-ತುಮಕೂರು ರೈಲ್ವೆ ಮಾರ್ಗಗಳ ಕಾಮಗಾರಿಯನ್ನು ಪೂರ್ಣಗೊಳಿಸಿ ಪ್ರಧಾನಿ ನರೇಂದ್ರ ಮೋದಿ ಹಾಗೂ ರೈಲ್ವೆ ಸಚಿವ ಅಶ್ವಿನಿವೈಷ್ಣವ್‌ರವರಿಂದ ಲೋಕಾರ್ಪಣೆ ಮಾಡಿಸಲಾಗುವುದು ಎಂದರು. ಬೆಂಗಳೂರಿಗೆ ಸಬ್‌ಅರ್ಬನ್ ರೈಲು ಸೇವೆ ಒದಗಿಸಲು ಈಗಾಗಲೇ ಸಚಿವರಾದ ಅಶ್ವಿನಿ ವೈಷ್ಣವ್‌ರವರೊಂದಿಗೆ ಚರ್ಚೆ ಮಾಡಿದ್ದು, 2025 ರೊಳಗೆ ೨ ಹಂತದ ಸಬ್‌ಅರ್ಬನ್ ರೈಲುಗಳನ್ನು ಲೋಕಾರ್ಪಣೆ ಮಾಡಲಾಗುವುದು ಎಂದು ಅವರು ಹೇಳಿದರು. ತುಮಕೂರು-ಅರಸೀಕೆರೆ ಮಾರ್ಗದಲ್ಲಿ 220 ಕೋಟಿ ರೂ. ವೆಚ್ಚದಲ್ಲಿ ಸ್ವಯಂಪ್ರೇರಿತ ಸಿಗ್ನಲ್‌ಗಳನ್ನು ಸಹ ಅಳವಡಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.
ಪ್ರವಾಸಿ ತಾಣಗಳ ಅಭಿವೃದ್ಧಿಗೆ ವಿಶೇಷ ಒತ್ತು: ಸಚಿವ ಎನ್.ಎಸ್.ಬೋಸರಾಜು
ತುಮಕೂರನ್ನು ಮತ್ತೊಂದು ಬೆಂಗಳೂರನ್ನಾಗಿ ಮಾಡಬೇಕು ಎಂಬ ಆಸೆ ತಮಗಿದೆ. ಹಾಗಾಗಿ ತುಮಕೂರು-ಬೆಂಗಳೂರು ಮಾರ್ಗದಲ್ಲಿರುವ 2 ಪಥದ ರೈಲ್ವೆ ಹಳಿಗಳನ್ನು ೪ ಲೈನ್‌ಗಳನ್ನಾಗಿ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದರು. ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಒಂದೇ ನಾಣ್ಯದ ಎರಡು ಮುಖಗಳಂತೆ ಕೆಲಸ ಮಾಡಿದರೆ ರಾಜ್ಯದಲ್ಲಿ ನೆನೆಗುದಿಗೆ ಬಿದ್ದಿರುವ ರೈಲ್ವೆ ಇಲಾಖೆ ಸೇರಿದಂತೆ ಇನ್ನಿತರೆ ಇಲಾಖೆಗಳ ಅಭಿವೃದ್ಧಿ ಕಾಮಗಾರಿಗಳು ವೇಗ ಪಡೆದುಕೊಳ್ಳುವುದರ ಜತೆಗೆ ಅಭಿವೃದ್ಧಿ ಯೋಜನೆಗಳು ಪ್ರಗತಿ ಕಾಣಲಿವೆ. ಈ ನಿಟ್ಟಿನಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ಅಧಿಕಾರಿಗಳು ಕಾರ್ಯೋನ್ಮುಖರಾದರೆ ಯಾವುದೇ ಒಂದು ಸಮಸ್ಯೆಯೂ ಜನಪ್ರತಿನಿಧಿಗಳ ಬಳಿಗೆ ಬರುವುದೇ ಇಲ್ಲ ಎಂದರು.