ಕರ್ನಾಟಕದ ಸರ್ಕಾರ ಇದೊಂದು ಗೋಲ್ಮಾಲ್ ಗೌರ್ನಮೆಂಟ್: ಶೋಭಾ ಕರಂದ್ಲಾಜೆ ವಾಗ್ದಾಳಿ
ಸಿದ್ದರಾಮಯ್ಯ ಅವರೇ ಮುಡಾದಲ್ಲಿ ಹಗರಣ ಮಾಡಿದ್ದಾರೆ. ಅಧಿಕಾರ ದುರುಪಯೋಗ ಮಾಡಿಕೊಂಡು. ಇವತ್ತು ಸಿದ್ದರಾಮಯ್ಯನವರು ಅವ್ಯವಹಾರ ಮಾಡಿದ್ದಾರೆ. ಅದಕ್ಕಾಗಿ ನಾವು ಅವರನ್ನ ರಾಜೀನಾಮೆ ಕೇಳುತ್ತಿದ್ದೇವೆ. ಇವತ್ತು ಮುಡಾದ ಎಲ್ಲಾ ಫೈಲ್ ಗಳು ಬೆಂಗಳೂರಿಗೆ ಶಿಫ್ಟ್ ಆಗಿವೆ. ಈ ಕೇಸ್ ಮುಚ್ಚಿ ಹಾಕ್ತಾರೆ. ದೇಸಾಯಿ ಕಮಿಟಿಯನ್ನ ಅದಕ್ಕಾಗಿಯೇ ಮಾಡಿದ್ದಾರೆ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ
ತುಮಕೂರು(ಜು.20): ಸೋಮವಾರದಿಂದ ಮೋದಿ ಮೂರನೇ ಸರ್ಕಾರದ ಮೊದಲ ಬಜೆಟ್ ಅಧಿವೇಶನ ಆರಂಭವಾಗ್ತಿದೆ. ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ದೇಶದ ಕೆಲಸ ಮಾಡುವ ಶಕ್ತಿ ಸಿಗಬೇಕು ಎಂಬ ಆಶಯದಿಂದ ಇವತ್ತು ಶ್ರೀಗಳ ಆಶಿರ್ವಾದ ಪಡೆದಿದ್ದೇನೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಶೋಭಾ ಕರಂದ್ಲಾಜೆ ಅವರು ಇಂದು(ಶನಿವಾರ) ತುಮಕೂರಿನ ಸಿದ್ದಗಂಗಾ ಮಠದಲ್ಲಿ ಪೂಜ್ಯ ಶ್ರೀಗಳ ಗದ್ದುಗೆಗೆ ಭೇಟಿ ಕೊಟ್ಟು ದರ್ಶನ ಪಡೆದಿದ್ದಾರೆ. ಇದೇ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶಿವಕುಮಾರ ಶ್ರೀಗಳು ಇದ್ದಾಗ ಮೋದಿ ಅವರು ಬರ್ತಿದ್ರು, ಆಶಿರ್ವಾದ ಪಡೆಯುತ್ತಿದ್ರು. ಸ್ವಾಮೀಜಿಗಳು ಬಹಳ ಖುಷಿಪಡ್ತಿದ್ರು. ದೇಶಕ್ಕಾಗಿ ದುಡಿಯುವಂತಹ ಒಬ್ಬ ಪ್ರಧಾನಿ ನಮಗೆ ಸಿಕ್ಕಿದ್ದಾರೆ ಅಂತ. ಇವತ್ತು ಅವರು ನಮ್ಮ ಮುಂದೆ ಇಲ್ಲ, ಆದರೆ ಅವರ ಆಶಿರ್ವಾದ ಅವರ ಪ್ರೇರಣೆ. ಅವರ ಶಕ್ತಿ ನಮ್ಮೆಲ್ಲರಿಗೂ ದೇಶದ ಕೆಲಸ ಮಾಡೋದಕ್ಕೆ ಪ್ರೇರಣೆ, ಶಕ್ತಿ ಕೊಡುತ್ತೆ ಎಂಬ ವಿಶ್ವಾಸ ನನಗಿದೆ. ಆ ರೀತಿಯಾಗಿ ನಾನು ಸ್ವಾಮೀಜಿಗಳ ಗದ್ದುಗೆ ಮುಂದೆ ಪ್ರಾರ್ಥನೆ ಮಾಡಿದ್ದೇನೆ ಎಂದು ಹೇಳಿದ್ದಾರೆ.
ವಾಲ್ಮೀಕಿ ನಿಗಮ ಹಗರಣ: ಸಮಗ್ರ ತನಿಖೆ ನಡೆಸುವಂತೆ ಅಮಿತ್ ಶಾಗೆ ಶೋಭಾ ಕರಂದ್ಲಾಜೆ ಪತ್ರ
ನಮ್ಮ ಸರ್ಕಾರದಲ್ಲಿ ಗುಡಿ ಕೈಗಾರಿಕೆ, ಸಣ್ಣ ಕೈಗಾರಿಕೆಗಳಿಗೆ ಹೆಚ್ಚಿನ ಒತ್ತು ಕೊಡಲಾಗ್ತಿದೆ. ಗ್ರಾಮೀಣ ಭಾಗದ ಜನರಿಗೆ ಹೆಚ್ಚಿನ ಉದ್ಯೋಗ ಸೃಷ್ಟಿ ಮಾಡುವ ಯೋಚನೆ ನಡಿತಿದೆ. ಕೇವಲ ಒಂದು ಇಲಾಖೆ ಅಲ್ಲ, ಎಲ್ಲಾ ಇಲಾಖೆಯಲ್ಲಿ ಯುವಕರಿಗೆ ಉದ್ಯೋಗ ಕೊಡುವ ಪ್ರಯತ್ನ ಆಗ್ತಿದೆ ಎಂದು ತಿಳಿಸಿದ್ದಾರೆ.
ಕರ್ನಾಟಕದ ಸರ್ಕಾರ ಇದೊಂದು ಗೋಲ್ಮಾಲ್ ಸರ್ಕಾರ ಆಗಿದೆ. ಯಾವುದೇ ಇಲಾಖೆ, ಯಾವುದೇ ನಿಗಮದಲ್ಲಾಗಲಿ ಬಹಳ ದೊಡ್ಡ ಪ್ರಮಾಣದ ಅವ್ಯವಹಾರ ನಡೆದಿದೆ. ಪ್ರತಿದಿನ ಒಂದೊಂದು ಇಲಾಖೆಯ ಅವ್ಯವಹಾರಗಳು ಆಚೆ ಬರ್ತಿವೆ. ವಾಲ್ಮೀಕಿ ನಿಗಮ ಕೇಸ್ ಚಂದ್ರಶೇಖರ್ ಆತ್ಮಹತ್ಯೆ ಮಾಡಿಕೊಳ್ಳುವವರೆಗೂ ಪ್ರಕರಣ ಆಚೆ ಬಂದಿರಲಿಲ್ಲ. ಇವತ್ತು ಇ.ಡಿ, ಸಿಬಿಐ ತನಿಖೆ ನಡೆಸುತ್ತಿದೆ. ಇದರಲ್ಲಿ ಗೊತ್ತಾಗಿರುವ ಸತ್ಯ ಅಂದ್ರೆ, 187 ಕೋಟಿ ಹಣ ಪರಿಶಿಷ್ಟ ವರ್ಗದ ಜನರ ಅಭಿವೃದ್ಧಿಗೆ ಆ ಹಣ ಬಳಕೆ ಆಗಬೇಕಿತ್ತು. ಆದರೆ ಹೈದರಾಬಾದ್ ನಲ್ಲಿರುವ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಿ ಚುನಾವಣೆಗೆ ಬಳಕೆ ಮಾಡಿದ್ದಾರೆ. ಹೀಗೆ ವೈನ್ ಶಾಪ್, ಜ್ಯೂವೇಲರಿ ಶಾಪ್ ಗಳಿಗೆ ಹಣ ವರ್ಗಾವಣೆ ಆಗಿದೆ. ರಾಜ್ಯದ ಬಡವರ ಹಣವನ್ನ ಚುನಾವಣಾ ಅವ್ಯವಹಾರ ಹಣವನ್ನಾಗಿ ಮಾಡಿದ್ದಾರೆ ಎಂದು ರಾಜ್ಯ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.
ಈಗ ಸಿದ್ದರಾಮಯ್ಯ ಅವರೇ ಮುಡಾದಲ್ಲಿ ಹಗರಣ ಮಾಡಿದ್ದಾರೆ. ಅಧಿಕಾರ ದುರುಪಯೋಗ ಮಾಡಿಕೊಂಡು. ಇವತ್ತು ಸಿದ್ದರಾಮಯ್ಯನವರು ಅವ್ಯವಹಾರ ಮಾಡಿದ್ದಾರೆ. ಅದಕ್ಕಾಗಿ ನಾವು ಅವರನ್ನ ರಾಜೀನಾಮೆ ಕೇಳುತ್ತಿದ್ದೇವೆ. ಇವತ್ತು ಮುಡಾದ ಎಲ್ಲಾ ಫೈಲ್ ಗಳು ಬೆಂಗಳೂರಿಗೆ ಶಿಫ್ಟ್ ಆಗಿವೆ. ಈ ಕೇಸ್ ಮುಚ್ಚಿ ಹಾಕ್ತಾರೆ. ದೇಸಾಯಿ ಕಮಿಟಿಯನ್ನ ಅದಕ್ಕಾಗಿಯೇ ಮಾಡಿದ್ದಾರೆ. ಕೆಂಪಣ್ಣ ಕಮಿಟಿ ಮಾಡಿದ್ರು ಅದು ಏನಾಯ್ತು?. ಆ ಕಮಿಟಿಯ ರಿಪೋರ್ಟ್ ಆಚೆನೆ ಬರಲಿಲ್ಲ. ಅದಕ್ಕಾಗಿಯೇ ಈ ಪ್ರಕರಣವನ್ನ ಸಿಬಿಐ ತನಿಖೆಗೆ ಕೊಡಬೇಕು ಮತ್ತು ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕು ಎಂದು ಒತ್ತಾಯ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.