ಬೆಂಗಳೂರು, [ನ.22]:  ಮನೆಗೆ ಮೂವರು ಹೊಸ ಸೊಸೆಯಂದಿರು ಬರ್ತಾರೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಹೇಳಿದ್ದಾರೆ.

ಇಂದು [ಶುಕ್ರವಾರ] ಯಶವಂತಪುರ ಉಪಚುನಾವಣೆಯ ಬಿಜೆಪಿ ಅಭ್ಯರ್ಥಿ ಎಸ್.ಟಿ ಸೋಮಶೇಖರ್ ಪರ ಸದಾನಂದಗೌಡ್ರು ಪ್ರಚಾರ ವೇಳೆ ಈ ಹೇಳಿಕೆ ನೀಡಿದರು. ಅಷ್ಟಕ್ಕೂ ಸದಾನಂದಗೌಡ್ರಿಗೆ ಇರುವುದು ಒಬ್ಬರೇ ಗಂಡು ಮಗ ಅಲ್ವಾ..? ಇನ್ನು ಮೂವರು ಸೊಸೆಯಂದಿರು ಹೇಗೆ ಬರಲು ಸಾಧ್ಯ ಅಂತ ಆಶ್ಚರ್ಯವಾಗಿರಬೇಕಲ್ವಾ.? ಇದರ ತಾತ್ಪರ್ಯವೇ ಬೇರೆ ಇದೆ.

'ಡಿ.9ರ ನಂತರ ಯಡಿಯೂರಪ್ಪ ಕುರ್ಚಿಗೆ ಕಂಟಕ ಶತಸಿದ್ಧ'

ಮಹಾಲಕ್ಷ್ಮಿ ಲೇಔಟ್,  ಯಶವಂತಪುರ ಹಾಗೂ ಕೆ.ಆರ್.ಪುರಂ‌ ಈ ಮೂರು ಕ್ಷೇತ್ರಗಳು ಡಿ.ವಿ.ಸದಾನಂದಗೌಡ್ರ ಲೋಕಸಭಾ ಕ್ಷೇತ್ರವಾದ ಬೆಂಗಳೂರು ಉತ್ತರಕ್ಕೆ ಒಳಪಡುತ್ತವೆ. ಹೀಗಾಗಿ ತಮ್ಮ ದಾಟಿಯಲ್ಲಿ ಹೀಗೆ ವ್ಯಾಖ್ಯಾನ ಮಾಡಿ ಸ್ಮೈಲ್ ಗೌಡ್ರು ಹಾಸ್ಯ ಚಟಾಕೆ ಹಾರಿಸಿದರು.

ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದಿಂದ ಗೋಪಾಲಯ್ಯ ಕಣಕ್ಕಿಳಿದಿದ್ರೆ, ಯಶವಂತಪುರ ಅಖಾಡದಲ್ಲಿ ಎಸ್,ಟಿ.ಸೋಮವಶೇಖರ್ ಇದ್ದಾರೆ. ಇನ್ನು ಕೆ.ಆರ್.ಪುರಂ ನಿಂದ ಬೈರತಿ ಬಸವರಾಜ್ ಸ್ಪರ್ಧೆ ಮಾಡಿದ್ದಾರೆ.

 ತಮ್ಮ ಹಾಸ್ಯ ಚಟಾಕೆ ಮಾತುಗಳನ್ನು ಮುಂದುವರಿಸಿದ ಡಿವಿಎಸ್, ಇವತ್ತು ನನಗೆ ಬಹಳ ಸಂತೋಷದ ದಿನ. ನನ್ನ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ಒಬ್ಬನೇ ಶಾಸಕ ಇದ್ದಾರೆ ಅಂತ ನನ್ನ ಮೇಲೆ ಆರೋಪವೊಂದಿತ್ತು, ಆದ್ರೆ ಇನ್ಮುಂದೆ ಕೇವಲ ಒಬ್ಬ ಶಾಸಕ ಮಾತ್ರವಲ್ಲ, ಮೂರು ಸಚಿವರು ನನ್ನ ಕ್ಷೇತ್ರದಲ್ಲಿ ಇರ್ತಾರೆ ಎಂದು ಭವಿಷ್ಯ ನುಡಿದರು. 

ರಿಸಲ್ಟ್ ಬಂದ ಬಳಿಕ ನನ್ನ ಲೋಕಸಭಾ ಕ್ಷೇತ್ರದಲ್ಲಿ 4 ಮಂದಿ ಸಚಿವರು ಇರ್ತಾರೆ. ನನ್ನನ್ನು ಸೇರಿಸಿ ನಾಲ್ಕು  ಮಂದಿ ಗೂಟದ ಕಾರಲ್ಲಿ ಓಡಾಡ್ತೀವಿ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮಿನಿಸ್ಟರ್ ಆದ್ಮೇಲೆ ನೀವು ನನಗೆ ಸೈಡ್ ಕೊಡಬೇಕು. ಸೈಡ್ ಕೊಡದೇ ಹೋದರೆ ನಾನು ಓವರ್ ಟೇಕ್ ಮಾಡಿಕೊಂಡು ಹೋಗ್ತೀನಿ ಎಂದು  ವೇದಿಕೆಯಲ್ಲಿದ್ದ ತಮ್ಮ ಅಭ್ಯರ್ಥಿ ಸೋಮಶೇಖರ್ ಕಿಚಾಯಿಸಿದರು.