Asianet Suvarna News Asianet Suvarna News

ಅಹಿಂದ ಎಂದವರು ಕುರಿಗಾಹಿಗಳಿಗೆ ಕುರಿ ಕೊಡಲಿಲ್ಲ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

ಕಂಬಳಿ ಹಾಕಿಕೊಂಡು ನಾಟಕ ಮಾಡಿದವರು, ಅಹಿಂದ ಎಂದು ಘೋಷಿಸಿಕೊಂಡವರು ಕುರಿಗಾಹಿಗಳಿಗೆ ಕುರಿ ಕೊಡಲಿಲ್ಲ. ಆದರೆ, ನಮ್ಮ ಬೊಮ್ಮಾಯಿ ಕುರಿಗಾಹಿಗಳಿಗೆ ಕುರಿಯನ್ನು ಕಾಣಿಕೆಯಾಗಿ ನೀಡಿದರು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

Union Minister Pralhad Joshi Slams On Congress At Haveri gvd
Author
First Published Dec 18, 2022, 3:00 AM IST

ಹಾವೇರಿ (ಡಿ.18): ಕಂಬಳಿ ಹಾಕಿಕೊಂಡು ನಾಟಕ ಮಾಡಿದವರು, ಅಹಿಂದ ಎಂದು ಘೋಷಿಸಿಕೊಂಡವರು ಕುರಿಗಾಹಿಗಳಿಗೆ ಕುರಿ ಕೊಡಲಿಲ್ಲ. ಆದರೆ, ನಮ್ಮ ಬೊಮ್ಮಾಯಿ ಕುರಿಗಾಹಿಗಳಿಗೆ ಕುರಿಯನ್ನು ಕಾಣಿಕೆಯಾಗಿ ನೀಡಿದರು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು. ಶಿಗ್ಗಾಂವಿ ತಾಲೂಕಿನ ಬಾಡ ಗ್ರಾಮದಲ್ಲಿ ಶನಿವಾರ ಆಯೋಜಿಸಿದ್ದ ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ನಾನು ಬೊಮ್ಮಾಯಿ ಅವರ ಜೊತೆ ಇತ್ತೀಚೆಗೆ ಪ್ರಯಾಣಿಸುತ್ತಿದ್ದಾಗ ಓರ್ವ ಬಂದು ‘ಕುರಿ ಸತ್ತವೆ, ಪರಿಹಾರ ಕೊಡ್ರಿ’ ಎಂದರು. 

ಅದಕ್ಕೆ ಸ್ಪಂದಿಸಿದ ಬೊಮ್ಮಾಯಿ, ‘ನಿಮಗೆ ಕುರಿ ಕೊಡ್ತೀವಿ ಹೋಗಪ್ಪ’ ಎಂದು ಕಳುಹಿಸಿದರು. ಅವರ ಇಚ್ಛಾಶಕ್ತಿಯಿಂದ ಇಂದು ಕುರಿಗಾರರಿಗೆ ಕುರಿ ಸಿಗುತ್ತಿದೆ. ಬೊಮ್ಮಾಯಿ ಮಾತು ಕೊಟ್ಟರೆ ಮುಗಿಯಿತು. ಅವರು ಮಾತಿಗೆ ತಪ್ಪಲ್ಲ ಎಂದರು. ಕನಕರ ಬಾಡ ಎಂಬುದೇ ಕೆಲವರಿಗೆ ಮರೆತು ಹೋಗಿತ್ತು. ಬೊಮ್ಮಾಯಿ ಅವರು 2008ರಲ್ಲಿ ಗೆದ್ದು ಜಲಸಂಪನ್ಮೂಲ ಸಚಿವರಾದರು. 2013ರಲ್ಲಿ ಗೆಲ್ಲಿಸಿದರೂ ಅನಿವಾರ್ಯವಾಗಿ ವಿರೋಧ ಪಕ್ಷದಲ್ಲಿ ಕೂರಬೇಕಾಯಿತು. ಮೂರನೇ ಸಲ ನೀವು ಜಬರದಸ್ತಾಗಿ ಬಟನ್‌ ಒತ್ತಿದ ಪರಿಣಾಮ ಗೃಹ ಸಚಿವರಾಗಿ, ಇಂದು ಮುಖ್ಯಮಂತ್ರಿಯಾಗಿದ್ದಾರೆ. ಕಳೆಗುಂದಿದ ಬಾಡವನ್ನು ಇಂದು ಕಳೆಗಟ್ಟುವಂತೆ ಬೊಮ್ಮಾಯಿ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಹಿಂದಿ ಹೇರಿಕೆ ಪ್ರಶ್ನೆಯೇ ಇಲ್ಲ, ಕರ್ನಾಟಕದಲ್ಲಿ ಪ್ರಥಮ ಆದ್ಯತೆ ಕನ್ನಡ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

ಬಡವರ ಪರವಾಗಿ ಯೋಜನೆ ಜಾರಿ: ಬಿಜೆಪಿ ಸರ್ಕಾರ ಬಡವರಿಗೆ ಸಮರ್ಪಿತವಾದ ಸರ್ಕಾರ ಎಂದು ಮೋದಿ ಹೇಳಿದ್ದರು. ಅದರ ಫಲವಾಗಿ ಬಡವರ ಪರವಾಗಿ ಯೋಜನೆಗಳು ಜಾರಿಯಾಗುತ್ತಿವೆ. ಅನೇಕ ರಾಜ್ಯಗಳಲ್ಲಿ ಅನೇಕ ಯೋಜನೆಗಳು ಜಾರಿಯಾಗುತ್ತಿವೆ. ರಸ್ತೆ, ಸೇತುವೆ, ಮಸೀದಿ, ಮಂದಿರ ಸೇರಿದಂತೆ ಎಲ್ಲವನ್ನೂ ಅಭಿವೃದ್ಧಿಪಡಿಸಿದ್ದಾರೆ ಎಂದರು. 13ನೇ ಹಣಕಾಸು ಯೋಜನೆಯಲ್ಲಿ ಮನಮೋಹನ್‌ಸಿಂಗ್‌ ಕಾಲದಲ್ಲಿ ಕರ್ನಾಟಕಕ್ಕೆ 90 ಸಾವಿರ ಕೋಟಿ ರು.ಬರುತ್ತಿತ್ತು. ಮೋದಿ ಕಾಲದಲ್ಲಿ 2.20 ಲಕ್ಷ ಕೋಟಿ ರು. ಬಂದಿದೆ. ಪ್ರಧಾನಮಂತ್ರಿ ಆವಾಸ್‌ ಯೋಜನೆಯಡಿ ಬಡವರಿಗೆ ಮನೆಗಳನ್ನು ಕೊಡುತ್ತಿದ್ದೇವೆ. 

ಮುಂದುವರಿದ ರಾಷ್ಟ್ರಗಳಲ್ಲಿ ಕೋವಿಡ್‌ ಸಮಸ್ಯೆಯಾಗಿ ಇಂದಿಗೂ ಕಾಡುತ್ತಿದೆ. ಮೋದಿ ಅವರ ಮುನ್ನೆಚ್ಚರಿಕಾ ಕ್ರಮಗಳಿಂದಾಗಿ ನಮ್ಮ ದೇಶದಲ್ಲಿ ಕೋವಿಡ್‌ ನಿಯಂತ್ರಣದಲ್ಲಿದೆ. 200 ಕೋಟಿ ಕೋವಿಡ್‌ ಲಸಿಕೆಯನ್ನು ಉಚಿತವಾಗಿ ನೀಡಿದ್ದೇವೆ. ಅಮೆರಿಕ ಕೊಟ್ಟದಿನದಂದೇ ನಮ್ಮ ದೇಶದಲ್ಲೂ ಲಸಿಕೆಯನ್ನು ಕೊಟ್ಟೆವು. ಕೋವಿಡ್‌ ನಿಯಂತ್ರಣದಲ್ಲಿ ಜಗತ್ತಿಗೆ ಭಾರತ ಮಾದರಿಯಾಗಿದೆ ಎಂದರು. ಯುದ್ಧದ ಸಂದರ್ಭದಲ್ಲಿ ಉಕ್ರೇನ್‌ನಿಂದ ವಿದ್ಯಾರ್ಥಿಗಳನ್ನು ಕರೆ ತಂದ ಏಕೈಕ ದೇಶ ಭಾರತ. ಸರ್ಕಾರಿ ಶಾಲೆಗಳಿಗೆ ಕೊಠಡಿಗಳನ್ನು ನಿರ್ಮಿಸಿಕೊಡಲಾಗುತ್ತಿದೆ. ಡಬಲ್‌ ಇಂಜಿನ್‌ ಸರ್ಕಾರದ ಲಾಭ ರಾಜ್ಯಕ್ಕೆ ಸಿಕ್ಕಿದೆ ಎಂದು ಹೇಳಿದರು.

ಆಹಾರ ಭದ್ರತಾ ಯೋಜನೆಯಡಿ 80 ಕೋಟಿ ಜನರಿಗೆ ಆಹಾರ ನೀಡುತ್ತಿದ್ದೇವೆ. ದಿನಕ್ಕೆ 37 ಕಿಮೀ. ಹೆದ್ದಾರಿ ನಿರ್ಮಿಸುತ್ತಿದ್ದೇವೆ. ‘ಒನ್‌ ನೇಷನ್‌ ಒನ್‌ ರೇಷನ್‌’ ಯೋಜನೆಯಡಿ ಎಲ್ಲಿ ಬೇಕಾದರೂ ಜನರು ದಿನಸಿ ಕೊಳ್ಳಲು ಅವಕಾಶ ಕಲ್ಪಿಸಿದ್ದೇವೆ. ಮೊದಲು ಜನರಿಗೆ ಯೋಜನೆಗಳು ತಲುಪುತ್ತಿರಲಿಲ್ಲ. ಚೆಕ್‌ಗಳು ಅನರ್ಹರಿಗೆ ಸಿಗುತ್ತಿದ್ದವು. ಈಗ ಫಲಾನುಭವಿಗಳ ಬ್ಯಾಂಕ್‌ ಖಾತೆಗೆ ನೇರವಾಗಿ ಹಣ ಹಾಕುತ್ತಿರುವ ಕಾರಣ 2.50 ಲಕ್ಷ ಕೋಟಿ ಉಳಿತಾಯವಾಗಿದೆ ಎಂದರು. ಬೊಮ್ಮಾಯಿ ಅವರ ಕ್ಷೇತ್ರದಲ್ಲಿ ಯಾವ ರಸ್ತೆ ದುರಸ್ತಿಯೂ ಉಳಿದಿಲ್ಲ. ಯಾವ ಮಸೀದಿ, ಚಚ್‌ರ್‍, ದೇಗುಲಗಳ ಅಭಿವೃದ್ಧಿಯೂ ಬಾಕಿ ಇಲ್ಲ. ಎಲ್ಲವನ್ನೂ ಮಾಡಿ ಮುಗಿಸಿದ್ದಾರೆ ಎಂದರು.

ಚುನಾವಣೆ ಬಂದಾಗಲೆಲ್ಲಾ ಸಿದ್ದು ಅಬ್ಬೇಪಾರಿ: ಪ್ರಹ್ಲಾದ್‌ ಜೋಶಿ ಲೇವಡಿ

ರಾತ್ರಿ 10 ಗಂಟೆಗೆ ಅಶೋಕ ಅವರು ನನಗೆ ಪೋನ್‌ ಮಾಡಿ ಕರೆದರು. ನಾನು ಬೊಮ್ಮಾಯಿ ಅವರ ಸೂಚನೆಯ ಮೇರೆಗೆ ಇಲ್ಲಿಗೆ ಬಂದಿದ್ದೇನೆ ಎಂದು ಪ್ರಹ್ಲಾದ ಜೋಶಿ ಹೇಳಿದರು. ಮುಂಬರುವ ದಿನಗಳಲ್ಲಿ ರಾಜ್ಯದಲ್ಲಿ ಬೊಮ್ಮಾಯಿ ನೇತೃತ್ವದಲ್ಲಿ ಮತ್ತು ಕೇಂದ್ರದಲ್ಲಿ ಮೋದಿ ನೇತೃತ್ವದಲ್ಲಿ ನಮಗೆ ಆಶೀರ್ವಾದ ಮಾಡಿ ಎಂದು ಜನರಲ್ಲಿ ಮನವಿ ಮಾಡಿದರು. ಸಿಎಂ ಬಸವರಾಜ ಬೊಮ್ಮಾಯಿ, ಕಂದಾಯ ಸಚಿವ ಆರ್‌. ಅಶೋಕ, ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ್‌ ಹೆಬ್ಬಾರ, ಶಾಸಕರಾದ ವಿರೂಪಾಕ್ಷಪ್ಪ ಬಳ್ಳಾರಿ, ಅರುಣಕುಮಾರ ಪೂಜಾರ, ಮಾಜಿ ಶಾಸಕ ಶಿವರಾಜ ಸಜ್ಜನರ, ಜಿಲ್ಲಾಧಿಕಾರಿ ರಘುನಂದನ ಮೂರ್ತಿ, ಜಿಪಂ ಸಿಇಓ ಮಹಮ್ಮದ್‌ ರೋಷನ್‌ ಇತರರು ಇದ್ದರು.

Follow Us:
Download App:
  • android
  • ios