Asianet Suvarna News Asianet Suvarna News

ಸಿದ್ದರಾಮಯ್ಯ ಹತ್ತು ಸಲ ರಾಜಕೀಯ ನಿವೃತ್ತಿ ಪಡಿಬೇಕಿತ್ತು: ಪ್ರಲ್ಹಾದ್‌ ಜೋಶಿ

ರಾಜ್ಯಕ್ಕೆ ಬರುವ ಅನುದಾನದ ವಿಚಾರದಲ್ಲಿ ನಾನು ಸುಳ್ಳು ಹೇಳಿದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಆದರೆ, ಅವರು ಹೇಳುವುದೆಲ್ಲವೂ ಬರೀ ಸುಳ್ಳೇ. ಹಾಗೆ ನೋಡಿದರೆ ಈಗಾಗಲೇ ಹೇಳಿರುವ ಸುಳ್ಳುಗಳಿಗೆ ಹತ್ತು ಬಾರಿ ನಿವೃತ್ತಿ ಪಡೆಯಬೇಕಾಗುತ್ತದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಲೇವಡಿ ಮಾಡಿದರು. 

Union Minister Pralhad Joshi Slams On CM Siddaramaiah At Hubballi gvd
Author
First Published Feb 15, 2024, 8:09 PM IST

ಹುಬ್ಬಳ್ಳಿ (ಫೆ.15): ರಾಜ್ಯಕ್ಕೆ ಬರುವ ಅನುದಾನದ ವಿಚಾರದಲ್ಲಿ ನಾನು ಸುಳ್ಳು ಹೇಳಿದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಆದರೆ, ಅವರು ಹೇಳುವುದೆಲ್ಲವೂ ಬರೀ ಸುಳ್ಳೇ. ಹಾಗೆ ನೋಡಿದರೆ ಈಗಾಗಲೇ ಹೇಳಿರುವ ಸುಳ್ಳುಗಳಿಗೆ ಹತ್ತು ಬಾರಿ ನಿವೃತ್ತಿ ಪಡೆಯಬೇಕಾಗುತ್ತದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಲೇವಡಿ ಮಾಡಿದರು. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅಲ್ಲ ಅವರು ಸುಳ್ಳುರಾಮಯ್ಯ. ಸುಳ್ಳು ಹೇಳುವುದೇ ಅವರ ಸ್ವಭಾವ. ರಾಜ್ಯವನ್ನು ಆರ್ಥಿಕ ದುಸ್ಥಿತಿಗೆ ತಂದಿದ್ದಾರೆ. ಸರ್ಕಾರವನ್ನು ಸರಿಯಾಗಿ ನಿರ್ವಹಿಸಲಾಗದೇ ಕೇಂದ್ರದ ಮೇಲೆ ಬೊಟ್ಟು ತೋರಿಸುತ್ತಿದ್ದಾರಷ್ಟೇ ಎಂದರು.

ಎನ್‌ಡಿಆರ್‌ಎಫ್‌ ಫಂಡ್‌ನಲ್ಲಿ ಯುಪಿಎ ಯಾವತ್ತು ಹೆಚ್ಚು ಹಣ ಕೊಟ್ಟಿರಲಿಲ್ಲ. ಆದರೆ, ಹೆಚ್ಚುವರಿ ಮಾತ್ರ ಅಲ್ಲ. ಅಡ್ವಾನ್ಸ್‌ ದುಡ್ಡನ್ನೇ ನಾವು ಕೊಟ್ಟಿದ್ದೇವೆ. ಇನ್ನು ಒಂದೇ ಒಂದು ರೂ. ಜಿಎಸ್‌ಟಿ ಹಣ ಬಾಕಿ ಇಟ್ಟುಕೊಂಡಿಲ್ಲ. 10 ವರ್ಷ ಮೋದಿ ಅವರ ಅವಧಿಯಲ್ಲಿ ಕೇಂದ್ರ ಪಾಲಿನ ಹಂಚಿಕೆಯಲ್ಲಿ 2.85 ಲಕ್ಷ ಕೋಟಿ ಕೊಟ್ಟಿದ್ದೇವೆ ಎಂದು ವಿವರಿಸಿದರು. ಕೇಂದ್ರದಿಂದ ಯಾವುದೇ ವಿಶೇಷ ಗ್ರ್ಯಾಂಟ್ ಕೊಟ್ಟಿಲ್ಲ ಅಂತಿದ್ದಾರೆ. ಆದರೆ ಕರ್ನಾಟಕ ಸರ್ಕಾರಕ್ಕೆ 50 ವರ್ಷ ಅವಧಿಗೆ ₹6279 ಕೋಟಿ ಬಡ್ಡಿ ರಹಿತ ಸಾಲ ಕೊಟ್ಟಿದ್ದೇವೆ ಎಂದು ಜೋಶಿ ಸ್ಪಷ್ಟಪಡಿಸಿದರು.

ಎಸ್ಸಿ ಎಸ್ಟಿ ಸಮುದಾಯಕ್ಕೆ ಕಾಂಗ್ರೆಸ್ಸಿನಿಂದ ಮೋಸ: ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ

ಕೇಂದ್ರ ಸರ್ಕಾರ ವಿವಿಧ ಯೋಜನೆಗಳಲ್ಲಿ ನೀಡಿದ ಅನುದಾನ ಸಂಪೂರ್ಣ ಬಳಕೆಯೇ ಆಗಿಲ್ಲ. ಫೆಬ್ರವರಿ ಅಂತ್ಯ ಬಂದರೂ ಶೇ. 30ರಿಂದ 38ರಷ್ಟು ಅನುದಾನ ಖರ್ಚು ಆಗದೇ ಉಳಿದಿದೆ. ಅನುದಾನ ವಿಚಾರವಾಗಿ ರಾಜ್ಯ ಸರ್ಕಾರದ ಡ್ಯಾಶ್‌ಬೋರ್ಡ್‌ನಲ್ಲಿ ಎಲ್ಲ ಮಾಹಿತಿ ಹಾಕಿದ್ದರು. ಅದನ್ನು ಡೌನ್ಲೋಡ್‌ ಮಾಡಲು ಬಿಜೆಪಿ ನಾಯಕರಿಗೆ ಸೂಚಿಸಿದ್ದೆ. ಅಷ್ಟರಲ್ಲೇ ಅಂಕಿ ಅಂಶವನ್ನೇ ಡಿಲಿಟ್‌ ಮಾಡಲಾಗಿದೆ. ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಇಲ್ಲ-ಸಲ್ಲದ ಆರೋಪ ಮಾಡುತ್ತಿದ್ದಾರೆ ಅಷ್ಟೇ ಎಂದರು.

ಸೀಟು ಹಂಚಿಕೆಯಾಗಿಲ್ಲ: ಲೋಕಸಭೆ ಚುನಾವಣೆಗೆ ಬಿಜೆಪಿ- ಜೆಡಿಎಸ್‌ ಮೈತ್ರಿಯಲ್ಲಿ ಸೀಟು ಹಂಚಿಕೆಯ ಬಗ್ಗೆ ಇನ್ನೂ ಫೈನಲ್‌ ಆಗಿಲ್ಲ ಎಂದು ನುಡಿದರು. ಜೆಡಿಎಸ್, ಬಿಜೆಪಿ ಸೀಟು ಹಂಚಿಕೆ ಬಗ್ಗೆ ಇನ್ನೂ ಯಾವುದೇ ಚರ್ಚೆಯಾಗಿಲ್ಲ. ಒಂದು ಹಂತದಲ್ಲಿ ಎರಡೂ ಪಕ್ಷಗಳ ನಾಯಕರ ನಡುವೆ ಚರ್ಚೆ ನಡೆಯುತ್ತಿದೆ. ಆದರೆ, ಅದೆಲ್ಲವೂ ಅಪೂರ್ಣ ಆಗಿದೆ. ಫೆ.17, 18ರ ನಂತರ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ಬಳಿಕ ಎಲ್ಲವೂ ಅಂತಿಮವಾಗಲಿದೆ ಎಂದು ತಿಳಿಸಿದರು. ಮಂಡ್ಯ ಸೇರಿದಂತೆ ಯಾವುದೇ ಕ್ಷೇತ್ರದ ಸೀಟು ಹಂಚಿಕೆ ಬಗ್ಗೆ ಇನ್ನೂ ತೀರ್ಮಾನ ಆಗಿಲ್ಲ. ರಾಷ್ಟ್ರೀಯ ನಾಯಕರು ರಾಜ್ಯ ಬಿಜೆಪಿ ಘಟಕದ ಜತೆ ಚರ್ಚಿಸಲಿದ್ದಾರೆ. ಆನಂತರವೇ ಸೀಟು ಹಂಚಿಕೆ ನಿರ್ಧಾರವಾಗಲಿದೆ. ಈಗ ಚರ್ಚೆಯಾಗುತ್ತಿರುವುದೆಲ್ಲ ಊಹಾಪೋಹ ಅಷ್ಟೇ ಎಂದರು.

ಬೋಗಸ್‌ ಗ್ಯಾರಂಟಿ ಹೆಸರಿನಲ್ಲಿ ಕಾಂಗ್ರೆಸ್ ಭ್ರಷ್ಟಾಚಾರ: ಪ್ರಲ್ಹಾದ್ ಜೋಶಿ

ಭರ್ಜರಿ ಗೆಲುವು ಸಾಧಿಸುವೆ; ಈ ಬಾರಿ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ತಯಾರಿ ನಡೆಸಿದ್ದೇನೆ. ನಾನು ಮತ್ತೆ ಭರ್ಜರಿ ಮತಗಳೊಂದಿಗೆ ಗೆಲ್ಲುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ಧಾರವಾಡ ಜಿಲ್ಲೆಯಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಲು ತುದಿಗಾಲಲ್ಲಿ ಇರುವ ಮುಖಂಡರು ಮತ್ತು ಕಾರ್ಯಕರ್ತರ ಸೇರ್ಪಡೆ ಬಗ್ಗೆ ಪಕ್ಷದ ಜಿಲ್ಲಾಧ್ಯಕ್ಷರು ನೋಡಿಕೊಳ್ಳುತ್ತಾರೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

Follow Us:
Download App:
  • android
  • ios