ಪ್ರಧಾನಿ ಮೋದಿಗೆ ಬೈಯದಿದ್ದರೆ ಸಿದ್ದರಾಮಯ್ಯಗೆ ಊಟ ರುಚಿಸಲ್ಲ: ಪ್ರಲ್ಹಾದ್ ಜೋಶಿ
ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಬೈಯದಿದ್ದರೆ ಊಟ ರುಚಿಸುವುದಿಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.
ಹುಬ್ಬಳ್ಳಿ (ಡಿ.10): ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಬೈಯದಿದ್ದರೆ ಊಟ ರುಚಿಸುವುದಿಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿ, ಐಸಿಸ್ ಉಗ್ರರ ನಂಟು ಹೊಂದಿರುವ ಮೌಲ್ವಿಯೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ವೇದಿಕೆ ಹಂಚಿಕೊಂಡಿದ್ದಾರೆ ಎಂಬ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಆರೋಪಕ್ಕೆ ಸಂಬಂಧಿಸಿದಂತೆ ಸೂಕ್ತ ತನಿಖೆ ನಡೆಸುವುದರ ಹೊರತಾಗಿ ಸಿದ್ದರಾಮಯ್ಯ ಈ ರೀತಿಯ ಬಾಲಿಶ ಹೇಳಿಕೆ ನೀಡುತ್ತಿದ್ದಾರೆ. ಯತ್ನಾಳ ಅವರು ತನ್ವೀರ್ ಅವರ ಕುರಿತು ಯಾವ ಕಾರಣಕ್ಕೆ ಹೇಳಿದ್ದಾರೆ ಎಂಬುದು ಮುಖ್ಯ. ಈ ಕುರಿತು ಮುಖ್ಯಮಂತ್ರಿಗಳು ಮೊದಲು ಸ್ಪಷ್ಟನೆ ನೀಡಬೇಕು. ನೀವು ಅಲ್ಲಿಗೆ ಹೋಗಬಾರದು ಎಂದು ಮುಖ್ಯಮಂತ್ರಿಗೆ ಪೊಲೀಸರು ಹೇಳಿದ್ದಾಗಿ ಯತ್ನಾಳ ತಿಳಿಸಿದ್ದಾರೆ. ಮೊದಲು ಸಿದ್ದರಾಮಯ್ಯ ಜವಾಬ್ದಾರಿಯುತವಾಗಿ ಮಾತನಾಡುವುದನ್ನು ಕಲಿಯಲಿ ಎಂದು ವಾಗ್ದಾಳಿ ನಡೆಸಿದರು.
ಮಾಹಿತಿ ಹೊರಬರಲಿ: ಮೌಲ್ವಿ ತನ್ವೀರ ಹಾಶ್ಮಿ ಪೀರಾ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಇರುವ ಭಾವಚಿತ್ರವನ್ನು ಸಿದ್ದರಾಮಯ್ಯ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಆದರೆ, ಈ ಭೇಟಿಯ ಸಂದರ್ಭದಲ್ಲಿ ಹಶ್ಮಿ ಅವರಿಗಿರುವ ನಂಟಿನ ಕುರಿತು ಗುಪ್ತ ಮಾಹಿತಿ ಇತ್ತೋ? ಇಲ್ಲವೋ? ಎಂಬುದು ತಿಳಿದಿಲ್ಲ. ಈ ಎಲ್ಲ ವಿಷಯ ಕುರಿತು ಸೂಕ್ತ ತನಿಖೆಯಾಗಿ ಮಾಹಿತಿ ಹೊರಬರಬೇಕಿದೆ ಎಂದರು.
ಕೇಂದ್ರ ಸರ್ಕಾರದ ಯೋಜನೆಗಳ ಅರಿವು ಮೂಡಿಸಲು ರಥಯಾತ್ರೆ: ಸಂಸದ ಮುನಿಸ್ವಾಮಿ
ಆಂತರಿಕ ಕಚ್ಚಾಟ ಇಲ್ಲ: ಬೆಳಗಾವಿ ಅಧಿವೇಶನದಲ್ಲಿ ವಿರೋಧ ಪಕ್ಷದ ನಾಯಕರ ನಡುವೆ ಹೊಂದಾಣಿಕೆ ಇಲ್ಲ ಎಂಬ ವಿಷಯಕ್ಕೆ ಪ್ರತಿಕ್ರಿಯಿಸಿದ ಅವರು, ಈಗಾಗಲೇ ವಿಪಕ್ಷ ನಾಯಕ ಆರ್. ಅಶೋಕ ಈ ಕುರಿತು ಸ್ಪಷ್ಟೀಕರಣ ನೀಡಿದ್ದಾರೆ. ಮಾಹಿತಿ ಕೊರತೆಯಿಂದ ಗೊಂದಲವಾಗಿರುವುದು ನಿಜ. ಈ ಬಗ್ಗೆ ಸಂಬಂಧಿಸಿದ ನಾಯಕರೊಂದಿಗೆ ಸಭೆ ನಡೆಸಿ, ಗೊಂದಲ ನಿವಾರಿಸುವುದಾಗಿ ತಿಳಿಸಿದರು.
ಬಹಿರಂಗ ಮಾತು ಬೇಡ: ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ ಅವರ ಬಕೆಟ್ ರಾಜಕಾರಣ ಹೇಳಿಕೆ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಜೋಶಿ, ವಿಶ್ವನಾಥ್ ಏನು ಹೇಳಿದ್ದಾರೆ ಎಂಬುದು ಗೊತ್ತಿಲ್ಲ. ಪಕ್ಷದ ಯಾವುದೇ ವಿಷಯವನ್ನು ಬಹಿರಂಗವಾಗಿ ಮಾತನಾಡಬಾರದು. ನಾನು ವಿಶ್ವನಾಥ್ ಅವರನ್ನು ಕರೆದು ಮಾತನಾಡುತ್ತೇನೆ. ಬಿಜೆಪಿ ಶಿಸ್ತಿನಿಂದ ನಡೆದುಕೊಂಡ ಪರಿಣಾಮ ರಾಜ್ಯದ ಅನೇಕ ರಾಜ್ಯಗಳಲ್ಲಿ ನಾವು ಅಧಿಕಾರಕ್ಕೆ ಬಂದಿದ್ದೇವೆ. ಸಂಸದ, ಶಾಸಕ ಸೇರಿ ದೇಶದಲ್ಲಿ ಸುಮಾರು 50 ಸಾವಿರ ಜನಪ್ರತಿನಿಧಿಗಳು ಬಿಜೆಪಿಯಲ್ಲಿದ್ದಾರೆ. ಸಮಸ್ಯೆಗಳಿದ್ದರೆ ಒಟ್ಟಿಗೆ ಕೂತು ಮಾತನಾಡುವಂತೆ ಅವರಿಗೆ ಸಲಹೆ ಮಾಡುವುದಾಗಿ ತಿಳಿಸಿದರು.
ಅನುದಾನ ಹಂಚಿಕೆ: ಜಾರ್ಖಂಡ್ ಕಾಂಗ್ರೆಸ್ ಸಂಸದ ಬುಲದೇವ ಸಾಹು ಅವರ ಮನೆಯಲ್ಲಿ ₹250 ಕೋಟಿಗೂ ಹೆಚ್ಚು ಹಣ ಸಿಕ್ಕಿದೆ. ಟಿಎಂಸಿ ನಾಯಕಿ ಮಹುವಾ 36ಕ್ಕೂ ಹೆಚ್ಚು ಬಾರಿ ವಿದೇಶ ಪ್ರಯಾಣ ಮಾಡಿದ್ದಾರೆ. ಜನರ ತೆರಿಗೆ ಹಣ ಪೋಲು ಮಾಡಲು ಬಿಡುವುದಿಲ್ಲ. ಒಂದೊಂದು ಪೈಸೆಯನ್ನು ವಾಪಸ್ ಪಡೆಯುವುದಾಗಿ ಪ್ರಧಾನಿ ಮೋದಿ ಹೇಳಿದ್ದಾರೆ. ಇದಕ್ಕೆ ಪಕ್ಷ ಬದ್ಧವಾಗಿದೆ. ರಾಹುಲ್ ಗಾಂಧಿ ಅವರು ಹೇಳುವ ಮೋಹಬ್ಬತ್ ಕೀ ದುಖಾನ್‌ದಲ್ಲಿ ಭ್ರಷ್ಟಾಚಾರದ ಅಂಗಡಿಯೇ ಮೊದಲು ಸಿಗಲಿದೆ ಎಂದು ಕುಟುಕಿದರು.
ಆರೋಪ ಸಲ್ಲದು: ಕೀನ್ಯಾಗೆ ಬೆಣ್ಣೆ ಕರ್ನಾಟಕಕ್ಕೆ ಸುಣ್ಣ ಎಂಬ ಸಿದ್ದರಾಮಯ್ಯ ಆರೋಪಕ್ಕೆ ಉತ್ತರಿಸಿದ ಜೋಶಿ, ವಿದೇಶಿ ಮಂತ್ರಾಲಯಕ್ಕೆ ಜಾಗತಿಕ ಮಟ್ಟದಲ್ಲಿ ಅನೇಕ ನೆರವು ನೀಡಬೇಕಾಗುತ್ತದೆ. ಬೇರೆ ಬೇರೆ ರಾಜ್ಯಗಳಿಗೆ ಎಸ್‌ಡಿಆರ್‌ಎಫ್ ಮತ್ತು ಎನ್‌ಡಿಆರ್‌ಎಫ್ ಮೂಲಕ ಹಣ ಕೊಡಲಾಗುತ್ತದೆ. ರಾಜ್ಯ ಸರ್ಕಾರ ಮೊದಲು ತನ್ನ ಖಾತೆಯಲ್ಲಿರುವ, ಕೇಂದ್ರ ಸರ್ಕಾರ ನೀಡಿರುವ ಹಣ ಖರ್ಚು ಮಾಡಲಿ. ಅದನ್ನು ಬಿಟ್ಟು ಈ ರೀತಿ ಆರೋಪ ಮಾಡುವುದು ಸರಿಯಲ್ಲ.
ರಾಜ್ಯ ಸರ್ಕಾರದ ಬಳಿ ಹಣ ಇಲ್ಲದೆ ಇರುವುದರಿಂದಲೇ ಬರ ಪರಿಹಾರ ಕಾಮಗಾರಿ ಕೈಗೊಳ್ಳುತ್ತಿಲ್ಲ. ಭ್ರಷ್ಟಾಚಾರ, ಬೇರೆ ಬೇರೆ ಗ್ಯಾರೆಂಟಿಗಳ ಹೆಸರಲ್ಲಿ ಹಣ ವ್ಯಯ ಮಾಡಲಾಗುತ್ತಿದೆ. ಕೆಎಸ್ಆರ್‌ಟಿಸಿ ಮತ್ತು ವಿದ್ಯುತ್ ನಿಗಮಗಳಿಗೆ ಹಣ ನೀಡಿಲ್ಲ. ಮೊದಲು ನೀವು ಬರ ಪರಿಹಾರ ಕಾಮಗಾರಿ ಆರಂಭಿಸಿ. ಭಾರತ ದೇಶ ದೊಡ್ಡದಿದ್ದು, ಅನೇಕ ರಾಜ್ಯಗಳು ಇರುವುದರಿಂದ ಹಣ ಬರುವುದು ಕೊಂಚ ತಡವಾಗಬಹುದು. ಮೋದಿ ಸರ್ಕಾರ ಬಂದ ನಂತರ ಕರ್ನಾಟಕಕ್ಕೆ ಎಷ್ಟು ಹಣ ಕೊಟ್ಟಿದ್ದೇವೆ ಎನ್ನುವುದನ್ನು ಶೀಘ್ರವೇ ನಿಮ್ಮ ಮುಂದೆ ಇಡುತ್ತೇನೆ ಎಂದರು.
ಚಾರಿತ್ರ್ಯಹರಣ ಶಾಸಕ ಯತ್ನಾಳ್‌ಗೆ ಶೋಭೆ ತರಲ್ಲ: ಸಚಿವ ಎಂ.ಬಿ.ಪಾಟೀಲ್
ಬೈಕ್ ರ್‍ಯಾಲಿ ಸ್ಥಗಿತ: ಚಿತ್ರನಟಿ ಲೀಲಾವತಿ ನಿಧನದ ಹಿನ್ನೆಲೆಯಲ್ಲಿ ಪ್ರಹ್ಲಾದ ಜೋಶಿ ಅವರನ್ನು ಸ್ವಾಗತಿಸಿಲು ಬಿಜೆಪಿ ಕಾರ್ಯಕರ್ತರು ಹಮ್ಮಿಕೊಂಡಿದ್ದ ಬೈಕ್ ರ್‍ಯಾಲಿಯನ್ನು ಸ್ಥಗಿತಗೊಳಿಸಲಾಯಿತು. ರಾಜಸ್ಥಾನದಲ್ಲಿ ಇತ್ತೀಚಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬಹುಮತ ಪಡೆದಿದೆ. ಆ ರಾಜ್ಯದ ಚುನಾವಣಾ ಉಸ್ತುವಾರಿ ಜೋಶಿ ವಹಿಸಿದ್ದರು. ಈ ಹಿನ್ನೆಲೆಯಲ್ಲಿ ಅಲ್ಲಿನ ಗೆಲುವಿಗೆ ರೂವಾರಿ ಜೋಶಿ ಆಗಿದ್ದಾರೆ. ಆದಕಾರಣ ಅವರನ್ನು ಹುಬ್ಬಳ್ಳಿಯಲ್ಲಿ ಭವ್ಯವಾಗಿ ಸ್ವಾಗತಿಸಲು ನಿರ್ಧರಿಸಲಾಗಿತ್ತು. ಕನ್ನಡ ಚಿತ್ರರಂಗಕ್ಕೆ ಅಮೂಲ್ಯ ಸೇವೆ ಸಲ್ಲಿಸಿದ ಲೀಲಾವತಿ ಅವರು ಚಿರಸ್ಮರಣೀಯರು, ಅವರ ನಿಧನದಿಂದಾಗಿ ಬೈಕ್ ರ್‍ಯಾಲಿ ಸ್ಥಗಿತಗೊಳಿಸಿದ್ದೇವೆ. ಅವರ ಭಾವಚಿತ್ರಕ್ಕೆ ನಮನ ಸಲ್ಲಿಸಿ ಶ್ರದ್ಧಾಂಜಲಿ ಅರ್ಪಿಸುವುದಾಗಿ ಪ್ರಹ್ಲಾದ ಜೋಶಿ ತಿಳಿಸಿದರು. ಈ ವೇಳೆ ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಪಾಲ್ಗೊಂಡಿದ್ದರು. ವಿಮಾನ ನಿಲ್ದಾಣದಲ್ಲಿ ಸಚಿವರಿಗೆ ಮಾಲಾರ್ಪಣೆ ಮಾಡಿ ಶಾಸಕರಾದ ಮಹೇಶ ಟೆಂಗಿನಕಾಯಿ, ಎಂ.ಆರ್. ಪಾಟೀಲ, ಹು-ಧಾ ಮಹಾನಗರ ಪಾಲಿಕೆ ಮೇಯರ್ ವೀಣಾ ಬರದ್ವಾಡ ಮತ್ತಿತರರು ಸ್ವಾಗತಿಸಿದರು.