ಸರ್ಕಾರಿ ಹಣದಲ್ಲಿ ಕಾಂಗ್ರೆಸ್ ಅಧಿವೇಶನ: ಯಾರದೋ ದುಡ್ಡು, ಯಲ್ಲಮ್ಮನ ಜಾತ್ರೆ ಎಂದ ಪ್ರಹ್ಲಾದ ಜೋಶಿ
ಮಹಾತ್ಮ ಗಾಂಧೀಜಿ ಕುಳಿತ ಕಾಂಗ್ರೆಸ್ ಸ್ಥಾನದಲ್ಲಿ ಮಲ್ಲಿಕಾರ್ಜುನ ಖರ್ಗೆ ಕುಳಿತಿದ್ದಕ್ಕೆ ಶತಮಾನೋತ್ಸವ ಮಾಡುವುದು ಬಾಲಿಶತನದಿಂದ ಕೂಡಿದೆ ಎಂದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ
ಧಾರವಾಡ(ಡಿ.27): ಸರ್ಕಾರದ ಹಣದಲ್ಲಿ ಬೆಳಗಾವಿ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಆಚರಣೆಗೆ ಚರಣೆಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆಕ್ಷೇಪ ವ್ಯಕ್ತಪಡಿಸಿದರು. ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಮಹಾತ್ಮ ಗಾಂಧೀಜಿ ಕುಳಿತ ಕಾಂಗ್ರೆಸ್ ಸ್ಥಾನದಲ್ಲಿ ಮಲ್ಲಿಕಾರ್ಜುನ ಖರ್ಗೆ ಕುಳಿತಿದ್ದಕ್ಕೆ ಶತಮಾನೋತ್ಸವ ಮಾಡುವುದು ಬಾಲಿಶತನದಿಂದ ಕೂಡಿದೆ ಎಂದರು.
ಬೆಳಗಾವಿ ನಗರವನ್ನು ಹೆಸ್ಕಾಂನಿಂದ ದೀಪಾಲಂಕಾರ ಮಾಡಿದ್ದಾರೆ. ಹೆಸ್ಕಾಂಗೂ ಮತ್ತು ಕಾಂಗ್ರೆಸ್ ಸಮಾವೇಶಕ್ಕೂ ಸಂಬಂಧ ಏನು? ಯಾರದೋ ದುಡ್ಡು, ಯಲ್ಲಮ್ಮನ ಜಾತ್ರೆ ಎಂಬಂತೆ ಕಾಂಗ್ರೆಸ್ ನಡೆದುಕೊಳ್ಳುತ್ತಿದೆ ಎಂದು ಕಿಡಿಕಾರಿದರು. ಹಿಂದಿನ ಮತ್ತು ಇಂದಿನ ಕಾಂಗ್ರೆಸ್‌ಗೆ ಸಂಬಂಧ ಏನು? ಅಂದು ಸ್ವತಃ ಗಾಂಧೀಜಿ ಕಾಂಗ್ರೆಸ್ ವಿಸರ್ಜಿಸಲು ಹೇಳಿದ್ದರು. ಆದರೆ, ಇಂದು ಗಾಂಧೀಜಿ ಹೆಸರಲ್ಲಿ ಸರ್ಕಾರಿ ಹಣದಲ್ಲಿ ಜಾತ್ರೆ ಮಾಡುತ್ತಿದ್ದಾರೆ ಎಂದು ದೂರಿದರು.
ಶತಮಾನೋತ್ಸವದಲ್ಲಿ ರಾಜ್ಯದ ಕಾಂಗ್ರೆಸ್ ಸರ್ಕಾರ, ಕಾಶ್ಮೀರ ಪಾಕಿಸ್ತಾನ್ ಭಾಗವೆಂದು ಬಿಂಬಿಸುವ ಭಾರತದ ನಕ್ಷೆ ವಿರೂಪಗೊಳಿಸಿದ್ದು ಅಕ್ಷಮ್ಯ. ಇದು ದೇಶದ್ರೋಹದ ಕೆಲಸ ಎಂದು ತೀವ್ರ ವಾಗ್ದಾಳಿ ನಡೆಸಿದರು.
ಈವರೆಗೂ ದೇಶದ ನಕಾಶ ಸರಿ ಮಾಡಿಲ್ಲ. ಇವರು ದೇಶ ಸರಿ ಮಾಡುತ್ತಾರೇ? ಎಂದು ಪ್ರಶ್ನಿಸಿದ ಜೋಶಿ, ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವಕ್ಕೆ ಸೋನಿಯಾ ಗಾಂಧಿ ಬರದ ಬಗ್ಗೆ ತಮಗೆ ಮಾಹಿತಿ ಇಲ್ಲ ಎಂದರು.
ಮುನಿರತ್ನ ಮೇಲೆ ಮೊಟ್ಟೆ ಎಸೆತದಲ್ಲಿ ಕಾಂಗ್ರೆಸ್ ಕೈವಾಡ ಇಲ್ಲ ಎಂದಾದರೆ, ಪೊಲೀಸರು ಏನು ಮಾಡುತ್ತಿದ್ದರು. ಕಾಂಗ್ರೆಸ್ ಮುನಿರತ್ನ ಅವರಿಗೆ ಆಗಾಗ್ಗೆ ತೊಂದರೆ ಕೊಡುತ್ತಿದೆ. ಮುನಿರತ್ನ ಮೇಲೆ ಬಂದ ಆರೋಪಕ್ಕೆ ಕೋರ್ಟ್ ಜಾಮೀನು ನೀಡಿದೆ. ಆದರೆ, ಕ್ಷೇತ್ರಕ್ಕೆ ಹೋಗದಂತೆ ಯಾವುದೇ ಷರತ್ತು ವಿಧಿಸಿಲ್ಲ. ಅವರ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಧಮ್ಮಿ ಹಾಕುವುದು ಒಳ್ಳೆಯ ನಡೆಯಲ್ಲ ಎಂದು ಜೋಶಿ ಹೇಳಿದರು.
ಬೀದರ್‌ನಲ್ಲಿ ಗುತ್ತಿಗೆದಾರ ಆತ್ಮಹತ್ಯೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವ ಜೋತಿ, ಬೆಳಗಾವಿಯ ಸಚಿವರ ಆಪ್ತರ ಮೇಲೆ ಗಂಭೀರ ಆರೋಪ ಬಂದಿತ್ತು. ಇದನ್ನು ಮುಚ್ಚಿ ಹಾಕಿದರು. ಈಗ ಬೀದರ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಚಿವರ ಆಪ್ತನ ಹೆಸರು ಬರೆದಿಟ್ಟು ಆತ್ಮಹತ್ಯೆ ಆಗಿದೆ. ಇದರಿಂದ ಸರ್ಕಾರ ಯಾವ ದಿಕ್ಕಿನತ್ತ ಹೊರಟಿದೆ ಎಂಬುದು ತಿಳಿಯಲಿದೆ ಎಂದು ಜೋಶಿ, ಭ್ರಷ್ಟಾಚಾರದ ಬಗ್ಗೆ ಮಾತನಾಡಿ ಅಧಿಕಾರಕ್ಕೆ ಬಂದವರು, ಇದೀಗ ಸಂಪೂರ್ಣ ಭ್ರಷ್ಟಮಯವಾಗಿದ್ದಾರೆ ಎಂದು ದೂರಿದರು.
ಹಿಂದಿನ ಮತ್ತು ಇಂದಿನ ಕಾಂಗ್ರೆಸ್ ಗೆ ಸಂಬಂಧ ಏನು? ಅಂದು ಸ್ವತಃ ಗಾಂಧೀಜಿ ಕಾಂಗ್ರೆಸ್ ವಿಸರ್ಜಿಸಲು ಹೇಳಿದ್ದರು. ಆದರೆ, ಇಂದು ಗಾಂಧೀಜಿ ಹೆಸರಲ್ಲಿ ಸರ್ಕಾರಿ ಹಣದಲ್ಲಿ ಜಾತ್ರೆ ಮಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ತಿಳಿಸಿದ್ದಾರೆ.