* ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನಾಯಕತ್ವ ಬದಲಾವಣೆ ವಿಚಾರ* ಕುತೂಹಲ ಮೂಡಿಸಿದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ನಡೆ* ದಿಢೀರ್ ಬೆಂಳೂರಿಗೆ ಬಂದಿಳಿದ  ಪ್ರಲ್ಹಾದ್ ಜೋಶಿ 

ಬೆಂಗಳೂರು, (ಜು.25): ಕರ್ನಾಟಕ ರಾಜಕೀಯದಲ್ಲಾಗುತ್ತಿರುವ ಬೆಳವಣಿಗೆಗಳಿಗೆ ಇಂದು (ಭಾನುವಾರ) ರಾತ್ರಿಯ ಒಳಗೆ ಸ್ಪಷ್ಟ ಚಿತ್ರಣ ಸಿಗುವ ಸಾಧ್ಯತೆ ಇದ್ದು, ಹೈಕಮಾಂಡ್‌ ಸಂದೇಶಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಎದುರು ನೋಡುತ್ತಿದ್ದಾರೆ.

ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರೆಯಬೇಕೋ? ಬೇಡವೋ? ಎನ್ನುವ ವಿಚಾರವಾಗಿ ಹೈಕಮಾಂಡ್ ನಾಯಕರು ಸೂಚನೆ ನೀಡಲು ಸಿದ್ಧರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮುಂದಿನ ಮುಖ್ಯಮಂತ್ರಿ ಬಗ್ಗೆ ಸ್ಪಷ್ಟನೆ ಕೊಟ್ಟ ಪ್ರಹ್ಲಾದ್ ಜೋಶಿ

ಇದರ ಮಧ್ಯೆ ಮುಖ್ಯಮಂತ್ರಿ ರೇಸ್‌ನಲ್ಲಿ ಮುಂದಿರುವ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ದಿಢೀರ್ ಹುಬ್ಬಳ್ಳಿಯಿಂದ ಬೆಂಗಳೂರಿಗೆ ಆಗಮಿಸಿದ್ದು ತೀವ್ರ ಕುತೂಹಲ ಮೂಡಿಸಿದೆ. 

ಅಲ್ಲದೇ ಪ್ರಹ್ಲಾದ್ ಜೋಶಿ ಅವರು ಭಾನುವಾರ ಸಂಜೆ ಬೆಂಗಳೂರಿನಿಂದ ದೆಹಲಿ ತೆರಳಲಿದ್ದಾರೆ ಎಂದು ತಿಳಿದುಬಂದಿದೆ. ಈಗಾಗಲೇ ಮುರುಗೇಶ್ ನಿರಾಣಿ ಸಹ ದೆಹಲಿಗೆ ತೆರಳಿದ್ದು, ಇದೀಗ ಜೋಶಿ ಸಹ ದಿಲ್ಲಿಗೆ ಹೋಗುತ್ತಿರುವುದು ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ.

ಬಿಎಸ್ ಯಡಿಯೂರಪ್ಪ ಬದಲಾವಣೆಯಾದರೆ ಮುಂದಿನ ಸಿಎಂ ರೇಸ್‌ನಲ್ಲಿ ಮೊದಲಿಗೆ ಪ್ರಲ್ಹಾದ್ ಜೋಶಿ ಅವರ ಹೆಸರು ಬಲವಾಗಿ ಕೇಳಿಬರುತ್ತಿದೆ.

ಅಮಿತ್ ಶಾ, ಜೆಪಿ ನಡ್ಡಾ ಹಾಗೂ ಬಿಲ್ ಸಂತೋಷ್ ಈ ಮೂವರು ನಾಯಕರು ಬೇರೆ-ಬೇರೆ ರಾಜ್ಯಗಳ ಪ್ರವಾಸದಲ್ಲಿದ್ದು, ಸಂಜೆ ವೇಳೆ ಇವರು ದೆಹಲಿಗೆ ಬಂದು ಮಹತ್ವದ ಸಭೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಸಭೆಯಲ್ಲಿ ಕರ್ನಾಟಕದ ಸಿಎಂ ಬಗ್ಗೆ ಮಹತ್ವದ ತೀರ್ಮಾನ ಕೈಗೊಳ್ಳುವ ಎಲ್ಲಾ ಸಾಧ್ಯತೆಗಳಿವೆ.

ಇದೇ ವಿಚಾರವಾಗಿ ಬೆಳಗಾವಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಬಿ.ಎಸ್.ಯಡಿಯೂರಪ್ಪ, ಹೈಕಮಾಂಡ್‌ನಿಂದ ಸಂಜೆ ವೇಳೆಗೆ ಸಂದೇಶ ಬರುತ್ತದೆ. ಹೈಕಮಾಂಡ್‌ನಿಂದ ಸಂದೇಶ ಬಂದರೆ ನಿಮಗೂ ಗೊತ್ತಾಗುತ್ತದೆ. ಆ ಸಂದೇಶ ನೋಡಿಕೊಂಡು ಸೂಕ್ತ ತೀರ್ಮಾನ ಮಾಡುತ್ತೇನೆ ಎಂದು ಹೇಳಿದ್ದಾರೆ.