Asianet Suvarna News Asianet Suvarna News

ಕಾಂಗ್ರೆಸ್ ಕಲಾಪಕ್ಕೆ ಅಡ್ಡಿಪಡಿಸುತ್ತಾ ಸಂಸದರ ಹಕ್ಕು ಕಸಿಯುತ್ತಿದೆ : ಪ್ರಹ್ಲಾದ್‌ ಜೋಶಿ ಆಕ್ರೋಶ

ಲೋಕಸಭೆಯಲ್ಲಿ ಐದನೇ ದಿನವೂ ಕಾಂಗ್ರೆಸ್ ಗದ್ದಲ ಮುಂದುವರಿದಿದ್ದು,  ಕಲಾಪಕ್ಕೆ ಅವಕಾಶ ನೀಡದ ಕಾಂಗ್ರೆಸ್ ಹಾಗೂ  ಪ್ರತಿಪಕ್ಷಗಳ ವರ್ತನೆಯನ್ನು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ  ಪ್ರಹ್ಲಾದ್‌ ಜೋಶಿ  ಖಂಡಿಸಿದ್ದಾರೆ.

Union Minister prahlad joshi slams congress for  distracting session akb
Author
Bangalore, First Published Jul 22, 2022, 2:42 PM IST

ಲೋಕಸಭೆಯಲ್ಲಿ ಐದನೇ ದಿನವೂ ಕಾಂಗ್ರೆಸ್ ಗದ್ದಲ ಮುಂದುವರಿದಿದ್ದು,  ಕಲಾಪಕ್ಕೆ ಅವಕಾಶ ನೀಡದ ಕಾಂಗ್ರೆಸ್ ಹಾಗೂ  ಪ್ರತಿಪಕ್ಷಗಳ ವರ್ತನೆಯನ್ನು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ  ಪ್ರಹ್ಲಾದ್‌ ಜೋಶಿ  ಖಂಡಿಸಿದ್ದಾರೆ. ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳು ನಿರಂತರವಾಗಿ ಸದನದ ಕಲಾಪಕ್ಕೆ ಅಡ್ಡಿಪಡಿಸುತ್ತಿರುವ ಹಿನ್ನಲೆಯಲ್ಲಿ ಮಾತಾಡಿದ ಅವರು, ಸದನದಲ್ಲಿ ಸಮಸ್ಯೆಗಳ ಕುರಿತು ಚರ್ಚಿಸಬೇಕಾದ ಪ್ರತಿಪಕ್ಷಗಳು ಈ ರೀತಿ ವರ್ತಿಸುತ್ತಾ ಸದನದ ಕಲಾಪಕ್ಕೆ ಅಡ್ಡಿಪಡಿಸುತ್ತಿರುವುದು ನಿಜಕ್ಕೂ ಖಂಡನೀಯ. ಪ್ರತಿಪಕ್ಷಗಳು ತಮ್ಮ ವರ್ತನೆ ಮೂಲಕ ಸಂಸದರ ಸಂಸದೀಯ ಹಕ್ಕುಗಳನ್ನು ಕಸಿಯುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ವಾಗ್ದಾಳಿ ನಡೆಸಿದ್ದಾರೆ.

ಬಹುತೇಕ ಸಂಸದರು ಸದನದಲ್ಲಿ ಚರ್ಚೆ ನಡೆಯೋದನ್ನ ಬಯಸುತ್ತಿದ್ದಾರೆ. ವಿಶೇಷವಾಗಿ ಪ್ರಶ್ನೋತ್ತರ ಅವಧಿ ನಡೆಯಬೇಕು ಎಂಬ ಇಚ್ಛೆ ಹೊಂದಿದ್ದಾರೆ. ಆದರೆ, ಕಾಂಗ್ರೆಸ್ ಮಾತ್ರ ಉದ್ದೇಶಪೂರ್ವಕವಾಗಿ ಸದನದಲ್ಲಿ ಕಲಾಪ ನಡೆಯಲು ಬಿಡುತ್ತಿಲ್ಲ. ಆಹಾರ ಪದಾರ್ಥಗಳ ಮೇಲಿನ ಜಿ.ಎಸ್.ಟಿ ದರ ಹೆಚ್ಚಳ ಕುರಿತು ಚರ್ಚೆಗೆ ಸರ್ಕಾರ ತಯಾರಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೋವಿಡ್ ಸೋಂಕಿನಿಂದ ಮುಕ್ತರಾದ ಕೂಡಲೇ ಸದನಕ್ಕೆ ಆಗಮಿಸಿ ಉತ್ತರಿಸಲಿದ್ದಾರೆ. ಕಲಾಪ ಸಲಹಾ ಸಮಿತಿ ಸಭೆಯಲ್ಲಿ ನೀವು ಚರ್ಚೆಗೆ ಸಮಯ ನಿಗದಿ ಮಾಡಿ. ಅದು ಬಿಟ್ಟು ಸದನದಲ್ಲಿ ಅನವಶ್ಯಕ ಗದ್ದಲ ಉಂಟುಮಾಡುವುದೇಕೆ..?

ಚರ್ಚೆಯಿಂದ ಪಲಾಯನ ಮಾಡುವುದು ಮತ್ತು ಸದನದ ಸಮಯವನ್ನು ಹಾಳು ಮಾಡುವ ಧೋರಣೆಯನ್ನು ಕಾಂಗ್ರೆಸ್ ತೋರುತ್ತಿದೆ. ಇದನ್ನ ನಾನು ಖಂಡಿಸುತ್ತೇನೆ ಎಂದು ಪ್ರಹ್ಲಾದ್‌  ಜೋಶಿ ಹೇಳಿದರು‌.

ಹಣಕಾಸು ಸಚಿವರ ಆರೋಗ್ಯದ ಬಗ್ಗೆ ಕನಿಷ್ಠ ಸೌಜನ್ಯ ಬೇಡವೇ?

ಗದ್ದಲದ ನಡುವೆ ಸದನ ಮುಂದೂಡಿದ್ದನ್ನು ಟೀಕಿಸಿ ಜೈರಾಮ್ ರಮೇಶ್ ಟ್ಬೀಟ್ ಮಾಡಿದ್ದಕ್ಕೆ ಟ್ವಿಟ್ಟರ್ ನಲ್ಲೇ ಟಕ್ಕರ್ ಕೊಟ್ಟಿರುವ  ಕೇಂದ್ರ ಸಚಿವ ಪ್ರಹ್ಲಾದ್‌  ಜೋಶಿ, ಸದನದಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮ್ ಅವರ ಉಪಸ್ಥಿತಿ ಬಹಳ ಮುಖ್ಯ. ಅವರು ಕೋವಿಡ್ ಸೋಂಕಿಗೆ ತುತ್ತಾಗಿದ್ದಾರೆ. ಅವರು ಸೋಂಕಿನಿಂದ ಮುಕ್ತರಾದ ಬಳಿಕ ಸದನದ ಕಲಾಪಕ್ಕೆ ಹಾಜರಾಗ್ತಾರೆ. ಆ ಬಳಿಕ ಎಲ್ಲ ಸದಸ್ಯರ ಅಭಿಪ್ರಾಯಗಳನ್ನು ಆಲಿಸಿ ಹಣಕಾಸು ಸಚಿವರು ಪ್ರತಿಕ್ರಿಯೆ ನೀಡಲಿದ್ದಾರೆ. ಕೊನೆ ಪಕ್ಷ ಅವರು ಕೋವಿಡ್ ನಿಂದ ಚೇತರಿಸಿಕೊಳ್ಳುವವರೆಗೂ ಕಾಂಗ್ರೆಸ್ ಸದಸ್ಯರು ಕಾಯಲು ಸಾಧ್ಯವಿಲ್ಲವೇ? ಇಷ್ಟು ಮಾತ್ರದ ಕನಿಷ್ಠ ಸೌಜನ್ಯ ತೋರಬೇಕಲ್ಲವೇ? ಎಂದು ಕೇಂದ್ರ ಸಚಿವರು ಕಾಂಗ್ರೆಸ್ ನಾಯಕರನ್ನು ಪ್ರಶ್ನಿಸಿದ್ದಾರೆ.

ಕಾಂಗ್ರೆಸ್ ನಾಯಕರ ಈ ನಡೆಯನ್ನು ಟೀಕಿಸಿದ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿಯವರು, ಕಾಂಗ್ರೆಸ್ ಪಕ್ಷದ ಮುಖಂಡರಿಗೆ ಸುಳ್ಳು ಹೇಳುವುದು ಒಂದು ಹವ್ಯಾಸ. ಅಷ್ಟು ಸಾಲದು ಅಂತ, ಜನರಿಗೆ ತಪ್ಪು ಮಾಹಿತಿ ನೀಡುವ ಕೆಲಸವನ್ನೂ ಕಾಂಗ್ರೆಸ್ ಮಾಡ್ತಿದೆ. ಜೈರಾಮ್ ರಮೇಶ್ ಅವರು ಕಾಂಗ್ರೆಸ್ ನ  ಸುಳ್ಳು ಹೇಳುವ ಪರಂಪರೆಯನ್ನ  ಮುಂದುವರೆಸುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್‌  ಜೋಶಿಯವರು ಟ್ವಿಟ್ಟರ್‌ನಲ್ಲಿ ತಿರುಗೇಟು ನೀಡಿದ್ದಾರೆ.
 

Follow Us:
Download App:
  • android
  • ios