ಡಿಕೆಶಿ ರೀತಿ ಲೂಟಿ ಮಾಡಿದ್ರೆ ಒಂದೊಂದು ಊರಿಗೆ 10 ಎಕ್ರೆ ಕೊಡ್ತಿದ್ದೆ: ಎಚ್‌ಡಿಕೆ ತಿರುಗೇಟು
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ರಾಜ್ಯವನ್ನು ಲೂಟಿ ಹೊಡೆದಿರೋರು. ಅವರ ತರಹ ಲೂಟಿ ಹೊಡೆದಿದ್ದರೆ, ಸಂಪಾದನೆ ಮಾಡಿದ್ದರೆ ಒಂದೊಂದು ಊರಿನಲ್ಲಿ 10 ಎಕರೆ ಜಾಗವನ್ನು ನಾನು ದಾನವಾಗಿ ಕೊಡುತ್ತಿದ್ದೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಚನ್ನಪಟ್ಟಣ (ನ.09): ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ರಾಜ್ಯವನ್ನು ಲೂಟಿ ಹೊಡೆದಿರೋರು. ಅವರ ತರಹ ಲೂಟಿ ಹೊಡೆದಿದ್ದರೆ, ಸಂಪಾದನೆ ಮಾಡಿದ್ದರೆ ಒಂದೊಂದು ಊರಿನಲ್ಲಿ 10 ಎಕರೆ ಜಾಗವನ್ನು ನಾನು ದಾನವಾಗಿ ಕೊಡುತ್ತಿದ್ದೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಯಾವುದಾದರು ಜಾಗ ಇದ್ದರೆ ಲೂಟಿ ಮಾಡುವುದನ್ನು ಬಿಟ್ಟರೆ ಅವರಿಗೆ ಬೇರೇನೂ ಗೊತ್ತಿಲ್ಲ. ಈವರೆಗೆ ಎಲ್ಲಿ? ಯಾರಿಗೆ? ಎಷ್ಟು? ಎಕರೆ ಜಾಗ ಕೊಟ್ಟಿದ್ದೀರಾ? ಜಾಗ ದಾನ ಮಾಡುವಷ್ಟು ಹೃದಯ ವೈಶಾಲ್ಯತೆ ನಿಮಗಿದೆಯೇ? ಎಂದು ಪ್ರಶ್ನಿಸಿದರು.
ಕನಕಪುರದಲ್ಲಿ ಶಾಲೆಗಳಿಗೆ 25 ಎಕರೆ ಜಾಗ ದಾನ ಮಾಡಿದ್ದೇವೆ, ಎಚ್‌ಡಿಕೆ ಕುಟುಂಬ 1 ಗುಂಟೆ ಜಾಗವನ್ನಾದರೂ ದಾನ ಮಾಡಿದ್ದಾರಾ ಎಂಬ ಡಿ.ಕೆ.ಶಿವಕುಮಾರ್ ಹೇಳಿಕೆಗೆ ತಿರುಗೇಟು ನೀಡಿ, ಅವರ ತರಹ ಲೂಟಿ ಹೊಡೆದರೆ ಒಂದೊಂದು ಊರಿನಲ್ಲಿ 10 ಎಕರೆ ಜಾಗವನ್ನು ನಾನೂ ದಾನವಾಗಿ ಕೊಡುತ್ತಿದ್ದೆ ಎಂದರು. ರಾಜ್ಯದಲ್ಲಿ ಕೈಗಾರಿಗಳನ್ನು ಸ್ಥಾಪನೆ ಮಾಡುತ್ತೇವೆ ಎಂದು ಉದ್ದಿಮೆದಾರರು ಬಂದರೆ, ಇಲ್ಲಿ ನಮಗೂ ಪಾಲು ಕೊಡಿ ಎಂದು ಡಿಮ್ಯಾಂಡ್ ಮಾಡುತ್ತಿದ್ದಾರೆ. ನಾವು ಕೈಗಾರಿಕೆ ಮಾಡಲು ಜಮೀನು ನೀಡುತ್ತಿಲ್ಲ ಎಂದು ಆರೋಪಿಸಿದರು.
ಶಾಲೆಗೆ 25 ಎಕರೆ ಕೊಟ್ಟಿದ್ದೇನೆ, ಎಚ್‌ಡಿಕೆ 1 ಗುಂಟೆ ಏನಾದರೂ ದಾನ ಮಾಡಿದ್ದಾರಾ?: ಡಿಕೆಶಿ
ಕ್ಷೇತ್ರಕ್ಕೆ ನಾನು ಮಾಡಿರುವ ಕೆಲಸಗಳ ಬಗ್ಗೆ ಪ್ರಶ್ನೆ ಮಾಡುತ್ತಾರೆ. ಅವರಿಗೆ ಕಣ್ಣಿಲ್ಲವೇ? ಪ್ರತಿ ಹಳ್ಳಿಯಲ್ಲಿಯೂ 8 ರಿಂದ 10 ಕೋಟಿ ರು. ಮೌಲ್ಯದ ಅಭಿವೃದ್ದಿ ಕಾರ್ಯಗಳು ಆಗಿವೆ. ಇವೆಲ್ಲವೂ ನಿಮ್ಮ ಕಣ್ಣಿಗೆ ಕಾಣುತ್ತಿಲ್ಲವೇ? ಕಾಂಕ್ರೀಟ್ ರೋಡ್, ಹೈಮಾಸ್ಕ್ ಲೈಟ್ ಕೊಟ್ಟಿದ್ದೇನೆ. ಸಾಕಷ್ಟು ಮೂಲಸೌಕರ್ಯ ಕಲ್ಪಿಸಿದ್ದೇನೆ. ಬೆಂಗಳೂರಿನಲ್ಲೂ ಇಂತಹ ಉತ್ತಮ ರಸ್ತೆಗಳು ಇಲ್ಲ. ಇಡೀ ಕ್ಷೇತ್ರದಲ್ಲಿ ನನ್ನ ಅವಧಿಯಲ್ಲಿ ಅಭಿವೃದ್ಧಿ ಕೆಲಸ ಆಗಿದೆ. ಎಷ್ಟು ಕೊಳವೆ ಬಾವಿ ಕೊಟ್ಟಿದ್ದೇವೆ ಎನ್ನುವುದಕ್ಕೆ ಲೆಕ್ಕ ಇದೆ ಎಂದು ತಿರುಗೇಟು ನೀಡಿದರು.