ಯಾರನ್ನೋ ದ್ವೇಷ ಮಾಡುವುದಕ್ಕಾಗಿ ನಾವು ಪಾದಯಾತ್ರೆ ಮಾಡುತ್ತಿಲ್ಲ: ಎಚ್.ಡಿ.ಕುಮಾರಸ್ವಾಮಿ
ನಿಮ್ಮ ಇಂಡಿಯಾ ಮಿತ್ರ ಕೂಟದಲ್ಲಿರುವ ತಮಿಳುನಾಡು ಸರ್ಕಾರವನ್ನು ಒಪ್ಪಿಸುವ ಜವಾಬ್ದಾರಿ ನಿಮ್ಮದೇ ಎಂಬ ಮಾತನ್ನೂ ಹೇಳಿದ್ದೆ. ಇದನ್ನೂ ಪ್ರಸ್ತಾಪಿಸದೆ ಜನರ ದಿಕ್ಕು ತಪ್ಪಿಸುತ್ತಿದ್ದೀರಿ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದರು.
ಮಂಡ್ಯ (ಆ.08): ಅಧಿಕಾರಕ್ಕೆ ಬಂದಲ್ಲಿ ಐದೇ ನಿಮಿಷದಲ್ಲಿ ಮೇಕೆದಾಟು ಯೋಜನೆಗೆ ಅನುಮತಿ ಕೊಡಿಸುವುದಾಗಿ ಭರವಸೆ ನೀಡಿದ್ದು ನಿಜ. ಆದರೆ, ನಿಮ್ಮ ಇಂಡಿಯಾ ಮಿತ್ರ ಕೂಟದಲ್ಲಿರುವ ತಮಿಳುನಾಡು ಸರ್ಕಾರವನ್ನು ಒಪ್ಪಿಸುವ ಜವಾಬ್ದಾರಿ ನಿಮ್ಮದೇ ಎಂಬ ಮಾತನ್ನೂ ಹೇಳಿದ್ದೆ. ಇದನ್ನೂ ಪ್ರಸ್ತಾಪಿಸದೆ ಜನರ ದಿಕ್ಕು ತಪ್ಪಿಸುತ್ತಿದ್ದೀರಿ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದರು. ನಗರದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿ, ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಇಲ್ಲಿನ ಕಾಂಗ್ರೆಸ್ ಸರ್ಕಾರವೂ ಸಹಕಾರ ನೀಡಬೇಕು. ಕೇಂದ್ರವೇ ಎಲ್ಲವನ್ನೂ ಮಾಡಲಾಗದು. ತಮಿಳುನಾಡು ಮುಖ್ಯಮಂತ್ರಿಯೊಂದಿಗೆ ಮಾತುಕತೆ ನಡೆಸಿ ಒಪ್ಪಿಸಿದಲ್ಲಿ ನಾನು ಪ್ರಧಾನಿಯವರ ಬಳಿ ಮಾತನಾಡಿ ಒಪ್ಪಿಸುತ್ತೇನೆ ಎಂದಿದ್ದೆ. ಅದಕ್ಕೆ ಈಗಲೂ ಬದ್ಧನಾಗಿದ್ದೇನೆ ಎಂದು ಸ್ಪಷ್ಟಪಡಿಸಿದರು.
ಕೊನೆಯ ಭಾಗಕ್ಕೆ ನೀರು ತಲುಪಿಲ್ಲ: ಈ ಬಾರಿ ಪ್ರಕೃತಿಯ ಸಹಕಾರದಿಂದ ಸಮೃದ್ಧ ಮಳೆಯಾಗಿ ಜಲಾಶಯಗಳೆಲ್ಲಾ ಭರ್ತಿಯಾಗಿವೆ. ಕಾವೇರಿ ಸಮಸ್ಯೆ ಪರಿಹರಿಸಲು ತಾಯಿ ಚಾಮುಂಡೇಶ್ವರಿಯೇ ನನಗೆ ಸಮಯಾವಕಾಶ ನೀಡಿದ್ದಾಳೆ ಎಂದ ಕುಮಾರಸ್ವಾಮಿ, ಕಳೆದ ೧೫ ದಿನಗಳಲ್ಲಿ ತಮಿಳುನಾಡಿಗೆ ಸುಮಾರು ೧೪೦ ಟಿಎಂಸಿ ನೀರು ಹರಿದುಹೋಗಿದೆ. ಮೆಟ್ಟೂರು ಜಲಾಶಯದಲ್ಲೂ ನೀರನ್ನು ಸಂಗ್ರಹಿಸಿಡಲಾಗದೆ ಸಮುದ್ರಕ್ಕೆ ಹರಿಸಲಾಗುತ್ತಿದೆ. ಆದರೆ, ವಿಚಿತ್ರವೆಂದರೆ, ಮಂಡ್ಯ ಜಿಲ್ಲೆಯ ಮಳವಳ್ಳಿ, ಮದ್ದೂರು, ಕೊಪ್ಪ ಭಾಗಕ್ಕೆ ಇನ್ನೂ ನೀರು ತಲುಪೇ ಇಲ್ಲ. ಅಣೆಕಟ್ಟು ಭರ್ತಿಯಾಗಿದ್ದರೂ ೧೮ ದಿನಗಳಿಗೊಮ್ಮೆ ಕಟ್ಟುನೀರು ಪದ್ಧತಿಯಡಿ ನೀರು ಬಿಡುವುದಾಗಿ ಪ್ರಕಟಣೆ ಹೊರಡಿಸಿದ್ದಾರೆ. ನಿಮಗೆ ನಾಚಿಕೆಯಾಗುವುದಿಲ್ಲವೇ ಎಂದು ಖಾರವಾಗಿ ಪ್ರಶ್ನಿಸಿದರು. ತಮಿಳುನಾಡು ಹೆಚ್ಚುವರಿ ನೀರನ್ನು ಹಿಡಿದಿಟ್ಟುಕೊಳ್ಳುವ ಸಲುವಾಗಿ ಸೇಲಂ ಬಳಿ ೭೦೦ ಕೋಟಿ ರು. ಖರ್ಚು ಮಾಡಿ ಅಣೆಕಟ್ಟೆ ನಿರ್ಮಿಸಿ ನೂರಾರು ಕೆರೆಗಳನ್ನು ತುಂಬಿಸಿದ್ದಾರೆ. ಆದರೆ, ಇಲ್ಲಿ ಕೆರೆಕಟ್ಟೆಗಳನ್ನು ತುಂಬಿಸುವ ಕೆಲಸವನ್ನು ರಾಜ್ಯ ಸರ್ಕಾರ ಮಾಡುತ್ತಿಲ್ಲ ಎಂದು ಆರೋಪಿಸಿದರು.
ಭ್ರಷ್ಟಾಚಾರದಲ್ಲಿ ತೊಡಗಿ ರಾಜ್ಯದ ಸಂಪತ್ತನ್ನು ಲೂಟಿ ಮಾಡಿದ ಕಾಂಗ್ರೆಸ್ ಸರ್ಕಾರ: ನಿಖಿಲ್ ಕುಮಾರಸ್ವಾಮಿ
ಕಾವೇರಿ ಬಗ್ಗೆ ಮಾತನಾಡಿದರೆ ಡಿಎಂಕೆ ಗದ್ದಲ: ನರೇಂದ್ರ ಮೋದಿಯವರು ಸಂಸತ್ತಿನಲ್ಲಿ ಮಾತನಾಡಲು ನಿಂತರೆ ತಮಿಳುನಾಡಿನ ಸಂಸದರು ಅಡ್ಡಿಪಡಿಸುತ್ತಾರೆ. ೯೨ನೇ ವಯಸ್ಸಿನಲ್ಲಿ ದೇವೇಗೌಡರು ಕಾವೇರಿ ಬಗ್ಗೆ ಚರ್ಚೆ ಮಾಡಲು ಎದ್ದುನಿಂತರೆ ನಿಮ್ಮ ಡಿಎಂಕೆ ಪಕ್ಷದವರು ಗದ್ದಲ ಎಬ್ಬಿಸುತ್ತಾರೆ. ಖರ್ಗೆ ಮತ್ತು ಕಾಂಗ್ರೆಸ್‌ವರು ಯಾಕೆ ದೇವೇಗೌಡರ ಸಹಾಯಕ್ಕೆ ಬರುತ್ತಿಲ್ಲ. ನಮ್ಮ ಪರ್ಮಿಷನ್ ಕೇಳುವ ನೀವು ನಮ್ಮ ನೀರು ನಮ್ಮ ಹಕ್ಕು ಪಾದಯಾತ್ರೆ ಮಾಡಿದ್ದೇಕೆ ಎಂದೆಲ್ಲಾ ಪ್ರಶ್ನಿಸಿದರು.
ದ್ವೇಷಕ್ಕಾಗಿ ಪಾದಯಾತ್ರೆ ಮಾಡುತ್ತಿಲ್ಲ: ರಾಜ್ಯ ಸರ್ಕಾರದ ನಡವಳಿಕೆಗಳು ನಿತ್ಯವೂ ಅನಾವರಣವಾಗುತ್ತಿವೆ. ಆರಂಭದಲ್ಲಿ ಸ್ವಚ್ಛ ಆಡಳಿತ ಕೊಡುವುದಾಗಿ ಹೇಳಿ ಅಧಿಕಾರಕ್ಕೆ ಬಂದರು. ಅಧಿಕಾರಕ್ಕೆ ಬಂದ ದಿನದಿಂದ ಸಂಪೂರ್ಣ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಆರಂಭದಲ್ಲಿ ಆಡಳಿತ ಪಕ್ಷಕ್ಕೆ ಸುಧಾರಣೆಗಾಗಿ ಸ್ವಲ್ಪದಿನ ಕಾಲಾವಕಾಶ ನೀಡುವುದು ಸಹಜ. ಆದರೆ, ಪ್ರಸ್ತುತ ಜನರು ಸರ್ಕಾರಕ್ಕೆ ಛೀ. ಥೂ ಎಂದು ಉಗಿಯುತ್ತಿದ್ದಾರೆ. ಯಾರನ್ನೋ ದ್ವೇಷ ಮಾಡುವುದಕ್ಕಾಗಿ ನಾವು ಪಾದಯಾತ್ರೆ ಮಾಡುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.
ಎಂಡಿಎ, ವಾಲ್ಮೀಕಿ ಹಗರಣ ತಾರ್ಕಿಕ ಅಂತ್ಯಕ್ಕಾಗಿ ಪಾದಯಾತ್ರೆ: ನಿಖಿಲ್ ಕುಮಾರಸ್ವಾಮಿ
ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಮುಡಾದಲ್ಲಿ ನಡೆದಿರುವುದು ೧೮೭ ಕೋಟಿ ಅಕ್ರಮವಲ್ಲ. ೮೭ ಕೋಟಿ ರು ಎಂದು ವಿಧಾನ ಸಭೆಯಲ್ಲಿ ಒಪ್ಪಿಕೊಂಡಿದ್ದಾರೆ. ಮುಡಾದಲ್ಲಿ ಸೈಟ್ ತೆಗೆದುಕೊಳ್ಳುವುದಕ್ಕೂ ನಮ್ಮ ಅಭ್ಯಂತರವಿಲ್ಲ. ಇನ್ನೂ ೧೮ ಸೈಟ್ ತೆಗೆದುಕೊಳ್ಳಲಿ. ಅದು ಸಂವಿಧಾನದಡಿ ಕಾನೂನು ಬದ್ಧವಾಗಿರಬೇಕಷ್ಟೇ. ಆದರೆ, ಸಿದ್ದರಾಮಯ್ಯ ಸರ್ಕಾರ ಯಾವ ರೀತಿ ನಡೀತ್ತಿದೆ. ಅವರ ಕುಟುಂಬದವರಿಂದಲೇ ಅಕ್ರಮ ನಡೆದಿರುವುದು ಜಗಜ್ಜಾಹೀರಾಗಿದೆ. ಅದು ಸರ್ಕಾರದ ಜಾಗ. ಸರ್ಕಾರಿ ಜಮೀನನ್ನು ಕಾನೂನುಬಾಹಿರವಾಗಿ ಪಡೆದಿರುವುದರ ವಿರುದ್ಧ ನಮ್ಮ ಹೋರಾಟ ನಿರಂತರವಾಗಿರುತ್ತದೆ ಎಂದರು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಪಕ್ಷ ನಾಯಕ ಆರ್.ಅಶೋಕ್, ಮಾಜಿ ಸಚಿವರಾದ ಡಾ.ಸಿ.ಎನ್.ಅಶ್ವತ್ಥನಾರಾಯಣ, ಡಿ.ಗೋಪಾಲಯ್ಯ, ಸಿ.ಟಿ.ರವಿ, ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ಕುಮಾರಸ್ವಾಮಿ, ಮಾಜಿ ಶಾಸಕರಾದ ಸಿ.ಎಸ್.ಪುಟ್ಟರಾಜು, ಡಾ.ಕೆ.ಅನ್ನದಾನಿ, ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್ ಇದ್ದರು.