ಬೆಂಗಳೂರು, (ಮೇ.22): ಟೀಕೆಗಳು ಜೋರಾದ ಪರಿಣಾಮ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ. ವಿ. ಸದಾನಂದಗೌಡ ಅವರು ಕೊರೋನಾ ಟೆಸ್ಟ್‌ ಮಾಡಿಸಿಕೊಂಡಿದ್ದಾರೆ.

ಇಂದು (ಮಂಗಳವಾರ) ಪರೀಕ್ಷೆಯ ವರದಿ ನೆಗೆಟಿವ್ ಬಂದಿದ್ದು, ಅದನ್ನು ಸದಾನಂದಗೌಡ್ರು ಟ್ವಿಟ್ಟರ್ ಮೂಲಕ ಬಹಿರಂಗಪಡಿಸಿದ್ದಾರೆ. 

ದಿಲ್ಲಿಯಿಂದ ಬೆಂಗಳೂರಿಗೆ ಆಗಮಿಸಿದ ಸದಾನಂದ ಗೌಡರು ಕ್ವಾರಂಟೈನ್ ಆಗ್ತಾರಾ?

 ದೆಹಲಿಯಿಂದ ವಿಮಾನವೊಂದರಲ್ಲಿ ಸೋಮವಾರ ಬೆಂಗಳೂರಿಗೆ ಆಗಮಿಸಿದ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ. ವಿ. ಸದಾನಂದಗೌಡ ಕ್ವಾರಂಟೈನ್ ನಿಂದ ತಪ್ಪಿಸಿಕೊಂಡು ನೇರವಾಗಿ ವಿಧಾನಸೌಧಕ್ಕೆ ತೆರಳಿ ಸಚಿವರೊಂದಿಗೆ ಸಭೆ ನಡೆಸಿದ್ದರು. 

ಸದಾನಂದಗೌಡ ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಗಾಗದೇ ಇರುವುದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿತ್ತು

ದೆಹಲಿ ಸೇರಿದಂತೆ ಇನ್ನಿತರೆ ರಾಜ್ಯ ಮತ್ತು ದೇಶಗಳಿಂದ ರಾಜ್ಯಕ್ಕೆ ಬರುವ ಎಲ್ಲಾ ಜನರು ಕ್ವಾರಂಟೈನ್ ನಲ್ಲಿರಬೇಕು ಎಂದು ರಾಜ್ಯಸರ್ಕಾರ ಮಾರ್ಗಸೂಚಿ ಹೊರಡಿಸಿದೆ. 

ಆದರೆ, ದೆಹಲಿಯಿಂದ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯುತ್ತಿದ್ದಂತೆ ಡಿ. ವಿ. ಸದಾನಂದಗೌಡ ಸಾಂಸ್ಥಿಕ ಕ್ವಾರಂಟೈನ್ ಗೆ ಒಳಪಡದೆ ಕಾರಿನಲ್ಲಿ ತೆರಳಿದ್ದರು.

ಸಚಿವರ ಈ ನಡೆ ವಿವಾದಕ್ಕೆ ಕಾರಣವಾಗಿದ್ದು, ಸಾಮಾಜಿಕ ಜಾಲತಾಣ ಬಳಕೆದಾರರು ಸದಾನಂದಗೌಡರು ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದರು. ನಿಯಮಗಳು ಸಾಮಾನ್ಯ ಜನರಿಗೆ ಮಾತ್ರ ಅನ್ವಯವಾಗಲಿವೆ. ಸಚಿವರು ಸೇರಿದಂತೆ ಇನ್ನಿತರ ವಿವಿಐಪಿಗಳಿಗೆ ನಿಯಮಗಳು ಅನ್ವಯವಾಗುವುದಿಲ್ಲವೇ ಎಂದು ಕೆಲವರು ಪ್ರಶ್ನಿಸಿದ್ದರು.

ಕೊನೆಗೆ ಎಚ್ಚೆತ್ತ ಸದಾನಂದಗೌಡ್ರು ಏಕೆ ಕಿರಿಕ್ ಮಾಡಿಕೊಳ್ಳುವುದು ಎಂದು  ಕೊನೆಗೆ ಸೋಮವಾರ ಕೊರೋನಾ ಪರೀಕ್ಷೆ ಮಾಡಿಸಿಕೊಂಡಿದ್ದರು.

ಇಂದು (ಮಂಗಳವಾರ) ಪರೀಕ್ಷೆ ವರದಿಯಲ್ಲಿ ನೆಗೆಟಿವ್ ಬಂದಿದೆ. ಇದನ್ನು ಸದಾನಂದಗೌಡ ತಮ್ಮ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ಮೂಲಕ ಟೀಕೆ ಮಾಡುವವರ ಬಾಯಿ ಮುಚ್ಚಿಸಿದರು.